ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ.
ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳ 6 ರಿಂದ 12 ವರೆಗಿನ ವಿದ್ಯಾರ್ಥಿನಿಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್‌ಗಳು ಲಭ್ಯವಾಗುವಂತೆ ನೋಡಿಕೊಳ್ಳಲು ಕೋರ್ಟ್ ನಿರ್ದೇಶಿಸಿದೆ.
ನವೆಂಬರ್ 2022ರಲ್ಲಿ ಡಾ. ಜಯಾ ಠಾಕೂರ್ ಎಂಬವರು 6 ರಿಂದ 12 ವರೆಗಿನ ಬಾಲಕಿಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್‌ಗಳನ್ನು ವಿತರಿಸಬೇಕು, ಎಲ್ಲಾ ಶಾಲೆಗಳಲ್ಲಿ ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ಸೌಲಭ್ಯ ಕಲ್ಪಿಸಬೇಕು ಎಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಜೆ. ಬಿ. ಪಾರ್ದಿವಾಲಾ ಮತ್ತು ಆರ್. ಮಹಾದೇವನ್ ಅವರ ಪೀಠ ತೀರ್ಪು ಪ್ರಕಟಿಸಿದೆ.
ಇದೇ ಅರ್ಜಿಗೆ ಸಂಬಂಧಿಸಿದಂತೆ ಈ ಹಿಂದೆ, ಅಂದರೆ 2023ರ ಏಪ್ರಿಲ್ 10ರಂದು ರಾಷ್ಟ್ರೀಯ ನೀತಿ ರೂಪಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು. ನಂತರದಲ್ಲಿ ನೀತಿಯ ಅನುಷ್ಠಾನದ ಬಗ್ಗೆ ಮಾಹಿತಿ ಕೋರಿತ್ತು. 2024ರ ನವೆಂಬರ್‌ನಲ್ಲಿ ಕೇಂದ್ರ ಸರ್ಕಾರ “Menstrual Hygiene Policy for School Going Girls”ಅನ್ನು ಅನುಮೋದಿಸಿ ಕೋರ್ಟ್‌ಗೆ ಮಾಹಿತಿ ನೀಡಿತ್ತು.
ಇಂದಿನ ಅಂತಿಮ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಈ ಕೆಳಗಿನ ನಿರ್ದೇಶನಗಳನ್ನು ನೀಡಿದೆ
1. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ (ಉಭಯ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ) ತರಗತಿ 6 ರಿಂದ 12 ವರೆಗಿನ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಬಯೋಡಿಗ್ರೇಡಬಲ್ (ಜೈವಿಕ ವಿಘಟನೀಯ) ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಒದಗಿಸಬೇಕು.
2. ಈ ಪ್ಯಾಡ್‌ಗಳು ASTM D-694 ಮಾನದಂಡಗಳನ್ನು ಪಾಲಿಸಬೇಕು ಮತ್ತು ಶೌಚಾಲಯದೊಳಗೆ ಅಥವಾ ಸುಲಭವಾಗಿ ಲಭ್ಯವಿರುವ ಸ್ಥಳದಲ್ಲಿ (ವೆಂಡಿಂಗ್ ಮೆಷಿನ್‌ಗಳ ಮೂಲಕ ಅಥವಾ ನಿಯೋಜಿತ ಅಧಿಕಾರಿಯ ಬಳಿ) ಲಭ್ಯವಿರಬೇಕು.
3. ಎಲ್ಲಾ ಶಾಲೆಗಳಲ್ಲಿ ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯಗಳು, ನೀರು ಸಂಪರ್ಕ, ಸೋಪು ಸಹಿತ ಕೈ ತೊಳೆಯುವ ವ್ಯವಸ್ಥೆ ಇರಬೇಕು.
4. ಅಂಗವಿಕಲರಿಗೆ ಸೂಕ್ತವಾದ ಶೌಚಾಲಯಗಳನ್ನು ಒದಗಿಸಬೇಕು.
ಖಾಸಗಿ ಶಾಲೆಗಳು ಈ ನಿಯಮಗಳನ್ನು ಪಾಲಿಸದಿದ್ದರೆ ಶಾಲೆಗಳ ಪರವಾನಗಿ ಅಥವಾ ಅಂಗೀಕಾರ ರದ್ದುಗೊಳಿಸಲಾಗುವುದು. ಸರ್ಕಾರಗಳು ಸ್ಯಾನಿಟರಿ ನ್ಯಾಪ್ಕಿನ್ ಒದಗಿಸದಿದ್ದರೆ ಅವರನ್ನು ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಕೋರ್ಟ್ ಎಚ್ಚರಿಸಿದೆ. ಕೇಂದ್ರದ ‘Menstrual Hygiene Policy for School-going Girls’ ಅನ್ನು ಪ್ಯಾನ್-ಇಂಡಿಯಾ (ದೇಶದಾದ್ಯಂತ) ಅನುಷ್ಠಾನಗೊಳಿಸುವಂತೆ ನಿರ್ದೇಶನ ನೀಡಿದೆ.


