‘ನಮ್ಮ ಮೆಟ್ರೋ’ ಪ್ರಯಾಣ ದರ ಅಸಹಜ ಏರಿಕೆಯಾದ ಕಡೆಗಳಲ್ಲಿ ಪ್ರಯಾಣ ದರ ಇಳಿಸುವಂತೆ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ತಿಳಿಸಿ, ಪ್ರಯಾಣಿಕರ ಹಿತ ಕಾಪಾಡಬೇಕು ಎಂದು ಸೂಚಿಸಿದ್ದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಹೇಳಿದ್ದಾರೆ. ಮೆಟ್ರೋ ದರ ಅಸಹಜ ಏರಿಕೆ
ಈ ಬಗ್ಗೆ ಎಕ್ಸ್‌ನಲ್ಲಿ ಮಾಹಿತಿ ನೀಡಿರುವ ಸಿದ್ದರಾಮಯ್ಯ ಅವರು, “ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ ಬೆಂಗಳೂರು ಮೆಟ್ರೋ ಪ್ರಯಾಣ ದರ ಪರಿಷ್ಕರಣೆ ಜಾರಿಯಲ್ಲಿ ಕೆಲವು ಸ್ಟೇಜ್‌ಗಳಲ್ಲಿ ದರಗಳು ದ್ವಿಗುಣಗೊಂಡಿವೆ. ಇದು ವೈಪರೀತ್ಯಗಳಿಗೆ ಕಾರಣವಾಗಿದೆ” ಎಂದು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ಈ ಅಸಹಜ ಏರಿಕೆ ವಿರುದ್ಧ ವ್ಯಕ್ತವಾದ ಸಾರ್ವಜನಿಕರ ವಿರೋಧವನ್ನು ಪರಿಗಣಿಸಿ ಎಲ್ಲೆಲ್ಲಿ ಅಸಹಜ ರೀತಿಯಲ್ಲಿ ದರ ಏರಿಕೆಯಾಗಿದೆಯೋ ಅಂತಹ ಕಡೆಗಳಲ್ಲಿ ಪ್ರಯಾಣ ದರ ಇಳಿಸುವಂತೆ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ತಿಳಿಸಿ, ಪ್ರಯಾಣಿಕರ ಹಿತ ಕಾಪಾಡಬೇಕು ಎಂದು ಸೂಚಿಸಿದ್ದೇನೆ” ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
“ಬೆಂಗಳೂರು ಮೆಟ್ರೊ ರೈಲು ನಿಗಮ ಇತ್ತೀಚೆಗೆ ಪರಿಷ್ಕರಿಸಿರುವ ಪ್ರಯಾಣ ದರ ಏರಿಕೆ ಕೆಲವು ಕಡೆಗಳಲ್ಲಿ ದುಪ್ಪಟ್ಟಾಗಿರುವುದನ್ನು ಗಮನಿಸಿದ್ದೇನೆ. ಮೆಟ್ರೋ ರೈಲು ವ್ಯವಸ್ಥೆ ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡಬೇಕಾಗಿರುವ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾಗಿರುವ ಕಾರಣ ಪ್ರಯಾಣ ದರ ಪರಿಷ್ಕರಣೆ ಅನಿವಾರ್ಯವಾಗಿತ್ತು ಎನ್ನುವುದು ನಿಜವಾದರೂ ಅಂತಿಮವಾಗಿ ಪ್ರಯಾಣಿಕರ ಹಿತರಕ್ಷಣೆ ಮಾಡಬೇಕಾಗಿರುವುದು ನಮ್ಮ ಕರ್ತವ್ಯ ಎನ್ನುವುದನ್ನು ಬಿಎಂಆರ್‌ಸಿಎಲ್ ಗಮನಕ್ಕೆ ತಂದಿದ್ದೇನೆ” ಎಂದು ಅವರು ಹೇಳಿದ್ದಾರೆ.
ಪ್ರಯಾಣ ದರ ಏರಿಕೆ ಹೆಸರಲ್ಲಿ ಬೆಂಗಳೂರು ಮೆಟ್ರೋ (ನಮ್ಮ ಮೆಟ್ರೋ) ಅಕ್ಷರಶಃ ಹಗಲು ದರೋಡೆಗೆ ಇಳಿದಿದ್ದು, 47%ದಷ್ಟು ದರ ಹೆಚ್ಚಳ ಎಂದು ಬಿಎಂಆರ್‌ಸಿಎಲ್ ಹೇಳಿದ್ದರೂ ಹಲವು ಕಡೆಗಳಲ್ಲಿ ಹಿಂದಿನ ದರಕ್ಕಿಂತ ದುಪ್ಪಟ್ಟು ಅಂದರೆ 100%ದಷ್ಟು ಅಧಿಕ ಮೊತ್ತ ನೀಡಬೇಕಾಗಿ ಬಂದಿದೆ. ಮೆಟ್ರೋ ದರ ಅಸಹಜ ಏರಿಕೆ
ಪ್ರಯಾಣ ದರ ಏರಿಕೆ ಹೆಚ್ಚಳದೊಂದಿಗೆ ದೇಶದಲ್ಲಿಯೇ ಅತಿ ದುಬಾರಿ ಪ್ರಯಾಣ ದರವನ್ನು ಹೊಂದಿರುವ ಮೆಟ್ರೋ ಎಂಬ ಕುಖ್ಯಾತಿಗೆ ‘ನಮ್ಮ ಮೆಟ್ರೋ’ ಪಾತ್ರವಾಗಿದೆ. ಪ್ರಯಾಣಿಕರಿಂದ ಪ್ರಯಾಣ ದರವನ್ನು ಪಡೆಯುವ ಬದಲು ಬೃಹತ್ ಆದಾಯ ಸಂಗ್ರಹದ ಉದ್ದೇಶದಿಂದ ದರ ಹೆಚ್ಚಳ ಮಾಡಲಾಗಿದೆ ಎಂಬ ಆರೋಪಕ್ಕೆ ನಿಗಮ ಗುರಿಯಾಗಿದೆ.
ಮೆಟ್ರೋ ದರ ಏರಿಕೆ ನಮ್ಮ ತೀರ್ಮಾನವಲ್ಲ
ಮೆಟ್ರೋ ಟಿಕೆಟ್ ದರ ಏರಿಕೆಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡಿದೆ ಎನ್ನುವ ಬಿಜೆಪಿಯವರ ಆರೋಪದ ಪ್ರತಿಕ್ರಿಯಿಸಿದ್ದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ “ಬಿಜೆಪಿಯವರಿಗೆ ರಾಜಕೀಯ ಹೊರತಾಗಿ ಬೇರೇನೂ ಗೊತ್ತಿಲ್ಲ. ಸುಳ್ಳು ಹೇಳುವುದು ಅವರ ಕಾಯಿಲೆ. ಮೆಟ್ರೋ ಯೋಜನೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಶೇ 50:50 ಅನುಪಾತದಲ್ಲಿ ಮಾಡಲಾಗಿರುತ್ತದೆ.
ದರ ಏರಿಕೆಗೆ ಒಂದು ಸಮಿತಿ ಮಾಡಲಾಗಿದೆ. ಕೇಂದ್ರ ಸರ್ಕಾರ ಹೈಕೋರ್ಟ್ ನ್ಯಾಯಧೀಶರ ನೇತೃತ್ವದಲ್ಲಿ ಸಮಿತಿ ಮಾಡಿರುತ್ತಾರೆ. ಆ ಸಮಿತಿಯ ತೀರ್ಮಾನ ನಮ್ಮ ಗಮನಕ್ಕೂ ಬರುವುದಿಲ್ಲ, ದರ ಏರಿಕೆ ತೀರ್ಮಾನ ಅವರು ಮಾಡಿದ್ದಾರೆ. ಇದರಲ್ಲಿ ರಾಜ್ಯ ಸರ್ಕಾರದ ಪಾತ್ರವಿಲ್ಲ” ಎಂದು ಹೇಳಿದ್ದರು.


