ಮೆಕ್ಸಿಕೋದ ವಾಯುವ್ಯ ರಾಜ್ಯವಾದ ಸೊನೊರಾದ ರಾಜಧಾನಿ ಹರ್ಮೊಸಿಲ್ಲೊದಲ್ಲಿರುವ ವಾಲ್ಡೋದ ಸೂಪರ್ ಮಾರ್ಕೆಟ್ ಒಂದರಲ್ಲಿ ಶನಿವಾರ (ನ.1) ಮಧ್ಯಾಹ್ನ ಸಂಭವಿಸಿದ ಪ್ರಬಲ ಸ್ಫೋಟದಲ್ಲಿ ಕನಿಷ್ಠ 23 ಜನರು ಸಾವನ್ನಪ್ಪಿದ್ದು, 11 ಜನರು ಗಾಯಗೊಂಡಿದ್ದಾರೆ.
ಮಧ್ಯಾಹ್ನ 2 ಗಂಟೆ ಸುಮಾರಿಗೆ ಸಂಭವಿಸಿದ ಸ್ಫೋಟದಿಂದ ಅಂಗಡಿಯಾದ್ಯಂತ ಭಾರೀ ಬೆಂಕಿ ಆವರಿಸಿದ್ದು, ಹಬ್ಬದ ರಜಾ ವಾರಾಂತ್ಯವನ್ನು ದುರಂತವನ್ನಾಗಿ ಪರಿವರ್ತಿಸಿದೆ.
ಮೃತರಲ್ಲಿ ಹಲವರು ಅಪ್ರಾಪ್ತ ವಯಸ್ಕರು ಎಂದು ಸೊನೊರಾ ಗವರ್ನರ್ ಅಲ್ಫೊನ್ಸೊ ಡುರಾಜೊ ತಿಳಿಸಿದ್ದಾರೆ. ಗಾಯಾಳುಗಳು ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.
ರಾಜ್ಯದ ಅಟಾರ್ನಿ ಜನರಲ್ ಗುಸ್ತಾವೊ ಸಲಾಸ್ ಅವರ ಪ್ರಕಾರ, ಹೆಚ್ಚಿನ ಸಾವುಗಳು ವಿಷಕಾರಿ ಹೊಗೆಯನ್ನು ಸೇವಿಸಿದ ಪರಿಣಾಮ ಸಂಭವಿಸಿವೆ.
ಘಟನೆಯ ಹಿಂದೆ ಯಾವುದೇ ಭಯೋತ್ಪಾದಕ ದಾಳಿ ಅಥವಾ ಇತರ ಹಿಂಸಾತ್ಮಕ ಕೃತ್ಯಗಳಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
“ಸ್ಫೋಟದ ಕಾರಣದ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ. ದುರಂತದ ಹಿಂದಿನ ನಿಖರ ಕಾರಣ ಪತ್ತೆ ಹಚ್ಚಲು ಮತ್ತು ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲು ಸರಿಯಾದ ಮತ್ತು ಪಾರದರ್ಶಕ ತನಿಖೆಗೆ ಆದೇಶಿಸಿದ್ದೇನೆ” ಎಂದು ಗವರ್ನರ್ ಡುರಾಜೊ ಹೇಳಿದ್ದಾರೆ.


