ಉತ್ತರಪ್ರದೇಶ-ದೆಹಲಿ ಗಡಿಯ ಗಾಜಿಪುರ್ ಪ್ರದೇಶದಲ್ಲಿ ರಾಕೇಶ್ ಟಿಕಾಯತ್ ನೇತೃತ್ವದ ಭಾರತ್ ಕಿಸಾನ್ ಯುನಿಯುನ್ (ಬಿಕೆಯು) ಅಡಿಯಲ್ಲಿ 60 ಕ್ಕೂ ಹೆಚ್ಚು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯನ್ನು ಮುಗಿಸಿಬಿಡಲು ಅರೆಸೇನಾ ತುಕಡಿಗಳು, ಸಿಅರ್‌ಪಿಎಫ್ ತುಕಡಿಗಳು ಮತ್ತು ಸಾವಿರಾರು ಸಂಖ್ಯೆಯಲ್ಲಿ ಪೊಲೀಸರನ್ನು ಗುರುವಾರ ಸಂಜೆ ನಿಯೋಜಿಸಲಯಿತು.
ಇದಕ್ಕು ಮೊದಲೆ ಗುರುವಾರ ರಾತ್ರಿಯೊಳಗೆ ಪ್ರತಿಭಟನಾ ಸ್ಥಳವನ್ನು ಖಾಲಿ ಮಾಡಬೇಕು ಎಂದು ಉತ್ತರಪ್ರದೇಶ ಆಡಳಿತವು ಹುಕುಂ ಚಲಾಯಿಸಿತ್ತು. ಮಧ್ಯರಾತ್ರಿ ಹೊತ್ತಿಗೆ ಪೊಲೀಸ್ ಲಾಠಿಗಳು, ಅಶ್ರುವಾಯು, ಜಲಫಿರಂಗಿಗಳನ್ನು ಬಳಸಿ ವ್ಯವಸ್ಥಿತವಾಗಿ ರೈತರನ್ನು ಅಲ್ಲಿಂದ ಒಕ್ಕಲೆಬ್ಬಿಸುವ ಸಂಚು ರೂಪುಗೊಂಡಿತ್ತು. ಅದಕ್ಕೆ ಪೂರ್ವಭಾವಿಯಾಗಿ 144 ಸೆಕ್ಷನ್ ಹೇರಲಾಗಿತ್ತು.

ಇದನ್ನೂ ಓದಿ: ಒಂದೇ ಒಂದು ಇಂಚು ಹಿಂದೆ ಸರಿಯದಿರಿ, ನಿಮ್ಮ ಜೊತೆ ನಾವಿದ್ದೇವೆ: ರೈತರಿಗೆ ರಾಹುಲ್ ಗಾಂಧಿ
ಮೀಡಿಯಾಗಳು ಸಹಜವಾಗಿಯೇ ಪ್ರತಿಭಟನೆ ಮುಗಿದ ಕತೆ ಎನ್ನುತ್ತ, ಮತ್ತೆ ಮತ್ತೆ ದೆಹಲಿಯ ಅಹಿತಕರ ಘಟನೆಯ ತುಣಕನ್ನು ಪ್ರದರ್ಶಿಸುತ್ತಿದ್ದವು. ಇದು ದೇಶದ ಎಲ್ಲ ಭಾಗದ ರೈತರಷ್ಟೇ ಅಲ್ಲದೇ, ಈ ಚಳವಳಿಯನ್ನು ಬೆಂಬಲಿಸುತ್ತ ಬಂದವರೆಲ್ಲರಿಗೂ ಆತಂಕ, ಸಂಕಟ ಶುರುವಾಗಿತ್ತು. ಎಷ್ಟೋ ಜನ ಮಧ್ಯರಾತ್ರಿ 2 ರವರೆಗೂ ನಿದ್ದೆ ಮಾಡದೇ ಏನಾಗುವುದೋ ಎಂದು ಟಿವಿ, ಸಾಮಾಜಿಕ ಜಾಲತಾಣಗಳ ಮೊರೆ ಹೋಗಿದ್ದರು.
ರಾತ್ರಿಯಾಗುತ್ತಿದ್ದಂತೆ ಕೆಲವು ಬಿಜೆಪಿ ನಾಯಕರು ತಮ್ಮ ಕಾರ್ಯಕರ್ತರೊಂದಿಗೆ ಬಂದು ಅಲ್ಲಿಂದ ಜಾಗ ಖಾಲಿ ಮಾಡುವಂತೆ ಒತ್ತಡ ಹೇರುತ್ತ ಧಮಕಿ ಹಾಕತೊಡಗಿದರು. ಅವರ ಬೆನ್ನಿಗೆ ಪೊಲೀಸ್ ಪಡೆಯಿತ್ತು. ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಆಗಲೇ ಭಯ ಹುಟ್ಟಿಸಿದ್ದರು. ಇನ್ನೇನು ದೌರ್ಜನ್ಯದಿಂದ ಅಲ್ಲಿನ ರೈತರನ್ನು ಓಡಿಸುತ್ತಾರೆ ಎನ್ನುವ ಹೊತ್ತಿಗೆ ಹಿರಿಯ ರೈತ ನಾಯಕ ರಾಕೇಶ್ ಟಿಕಾಯತ್ ಮೈಕ್ ತೆಗೆದುಕೊಂಡರು.

ಇದನ್ನೂ ಓದಿ: ರೈತರನ್ನು ಗೌರವಿಸದ ದೇಶ ದೇಶವೇ ಅಲ್ಲ: ಮಾಜಿ ಸ್ಪೀಕರ್ ರಮೇಶ್ ಕುಮಾರ್
ಮಧ್ಯರಾತ್ರಿಯ ಮಾಸ್ಟರ್‌ಸ್ಟ್ರೋಕ್
ತೀವ್ರ ನೊಂದಿದ್ದ ಟಿಕಾಯತ್, “ನಾವು ಇಲ್ಲಿಂದ ಕದಲುವುದಿಲ್ಲ. ಗುಂಡಿಗೆ ಬೇಕಾದರೆ ಎದೆ ಕೊಡುತ್ತೇನೆ ಇಲ್ಲವೇ ಇಲ್ಲೇ ನೇಣು ಹಾಕಿಕೊಳ್ಳುತ್ತೇನೆ. ಪೊಲೀಸರು ಮತ್ತು ಬಿಜೆಪಿಯವರು ಸೇರಿ ನಮ್ಮನ್ನೆಲ್ಲ ದೌರ್ಜನ್ಯದಿಂದ ಕೊಲ್ಲಲು ಬಂದಿದ್ದಾರೆ. ಆದರೆ ಯಾರೂ ಧೃತಿಗೆಡಬೇಡಿ” ಎನ್ನುತ್ತ ಭಾವುಕರಾದರು. ಅವರ ಕಣ್ಣುಗಳು ತೇವಗೊಂಡವು.
ಅಲ್ಲಿಗೇ ಮತ್ತೆ ರೈತರಲ್ಲಿ ಹೊಸ ಚೈತನ್ಯ ಸಂಚಯವಾಯಿತು. ನಾವ್ಯಾರೂ ಜಾಗ ಬಿಟ್ಟು ಕದಲುವುದಿಲ್ಲ ಎಂದು ಸಾರಿದರು. ಟಿಕಾಯತ್ ಭಾಷಣ ವೈರಲ್ ಆಯಿತು. ಇದು ಪಶ್ಚಿಮ ಉತ್ತರಪ್ರದೇಶ ಮತ್ತು ಹರಿಯಾಣದಲ್ಲಿ ಪೊಲೀಸರ ಮೇಲೆ ಆಕ್ರೋಶ ಹೆಚ್ಚಲು ಕಾರಣವಾಯಿತು, ರಾತ್ರಿಯೇ ತಂಡೋಪತಂಡವಾಗಿ ಟ್ರ್ಯಾಕ್ಟರಿಗಳಲ್ಲಿ ರೈತರು ಗಾಜಿಪುರ್‌ದತ್ತ ಬರತೊಡಗಿದರು. ಆಗ ರೈತಶಕ್ತಿಯೇ ಪ್ರಭುತ್ವಕ್ಕೆ ಒಂದು ಮಾಸ್ಟರ್‌ಸ್ಟ್ರೋಕ್ ತೋರಿಸಿದಂತಾಗಿತು. ಮುಂಜಾನೆ ಹೊತ್ತಿಗೆ ರೈತರ ಜಮಾವಣೆ ಹೆಚ್ಚುತ್ತಲೇ ಹೋಯಿತು. ದೇಶದ ಎಲ್ಲೆಡೆಯಿಂದ ರೈತರಿಗೆ ಬೆಂಬಲ ದ್ವಿಗುಣಗೊಂಡಿತು.
ಇದನ್ನೂ ಓದಿ: ಟ್ರ್ಯಾಕ್ಟರ್ ರ್‍ಯಾಲಿಯಲ್ಲಿ ಮಿಂದೆದ್ದ ರೈತ ಗಣರಾಜ್ಯೋತ್ಸವ: ವಿಶೇಷ ವರದಿ
ಜಾಟರ ಸಿಟ್ಟು ಬಿಜೆಪಿ ಮೇಲೆ
ಪಶ್ಚಿಮ ಉತ್ತರಪ್ರದೇಶ, ಹರಿಯಾಣ ಮತ್ತು ಪೂರ್ವ ರಾಜಸ್ತಾನದಲ್ಲಿ ಕೃಷಿಕ ಜಾಟ್ ಸಮುದಾಯ ಪ್ರಬಲವಾಗಿದೆ, ಜನಸಂಖ್ಯೆಯಲ್ಲೂ ಗಣನೀಯವಾಗಿದೆ. 2013 ರಲ್ಲಿ ಉತ್ತರಪ್ರದೇಶದ ಮುಜಾಫರ್‌ಘರ್‌ನಲ್ಲಿ ಸಂಭವಿಸಿದ (ಸೃಷ್ಟಿಸಿದ) ಹೇಯ ಕೋಮು ಗಲಭೆಯ ನಂತರ, ಜಾಟರು ಮತ್ತು ಮುಸ್ಲಿಮರ ನಡುವೆ ಬಿರುಕು ತಂದ ಬಿಜೆಪಿ ಅಲ್ಲಿ ಜಾಟರ ವೊಟ್‌ಬ್ಯಾಂಕ್ ಅನ್ನು ಭದ್ರಪಡಿಸಿಕೊಂಡು ಚುನಾವಣೆಗಳನ್ನು ಗೆಲ್ಲುತ್ತಾ ಬಂದಿದೆ.
ನೇರ ರಾಜಕಾರಣ ಮಾಡದಿದ್ದರೂ ಟಿಕಾಯತ್ ಸಹೋದರರು ಬಿಜೆಪಿಗೆ ಬಹಿರಂಗ ಬೆಂಬಲ ಕೊಡುತ್ತ ಬಂದಿದ್ದರು. ತಮ್ಮ ರೈತ ನಾಯಕ ಕಣ್ಣೀರು ಹಾಕುವಂತೆ ಮಾಡಿದ ಬಿಜೆಪಿ ವಿರುದ್ದ ಜಾಟರು ತಿರುಗಿ ಬೀಳಬಹುದು ಎಂದು ರಾಜಕಿಯ ವಿಶ್ಲೇಷಕರು ಅಬಿಪ್ರಾಯ ಪಟ್ಟಿದ್ದಾರೆ. ಶುಕ್ರವಾರ ಅದರ ಕುರುಹುಗಳು ಢಾಳಾಗಿಯೇ ಗೋಚರಿಸಿವೆ ಅಲ್ಲವೇ?

ತಿರುಗುಬಾಣ
ಈ ಮಾಸ್ಟರ್‌ಸ್ಟ್ರೋಕ್‌ನಿಂದಾಗಿ ಕೇಂದ್ರ ಸರ್ಕಾರದ ಸುಳ್ಳು, ಸಂಚು ಮತ್ತು ದಮನಕಾರಿ ಪ್ರವೃತ್ತಿಯೇ ಅದಕ್ಕೆ ತಿರುಗುಬಾಣವಾಗಿತು. ರಾತ್ರಿಯೇ ಸ್ಥಗಿತಗೊಂಡಿದ್ದ ವಿದ್ಯುತ್, ನೀರು ಸೌಲಭ್ಯ ಮುಂಜಾನೆ ವಾಪಸ್ ಬಂದಿತು. ಹೆಚ್ಚುವರಿ ತುಕಡಿಗಳು ಮತ್ತು ಪೊಲೀಸರನ್ನು ಸರ್ಕಾರ ಹಿಂದಕ್ಕೆ ಕರೆಸಿಕೊಂಡಿತು. ಜಾಗ ಖಾಲಿ ಮಾಡಿಸಲು ಬಂದ ಸರ್ಕಾರವೇ ಜಾಗ ಖಾಲಿ ಮಾಡಬೇಕಾಯಿತು.
ಶುಕ್ರವಾರ ಮಧ್ಯಾಹ್ನ ಪಕ್ಷವೊಂದರ ಬಾಲಂಗೋಚಿಗಳಾದ ದುಷ್ಕರ್ಮಿಗಳು ಪ್ರತಿಭಟನೆಯ ಒಂದು ಸ್ಥಳಕ್ಕೆ ನುಗ್ಗಿ ದಾಂಧಲೆ ಮಾಡಿ, ರೈತರನ್ನು ಬೆದರಿಸಲು ನೋಡಿದರು. ರೈತರು ಅದಕ್ಕೆ ಪ್ರತ್ಯುತ್ತರ ನೀಡಿದರು.
ಶುಕ್ರವಾರ ಸಿಂಘುವಿನಲ್ಲಿ ಸಂಯುಕ್ತ್ ಕಿಸಾನ್ ಮೋರ್ಚಾ ತನ್ನ ಪ್ರತಿಭಟನೆಯನ್ನು ಚುರುಕುಗೊಳಿಸಿದೆ, ಪ್ರತಿಭಟನಾಕಾರರ ಹುಮ್ಮಸ್ಸನ್ನು ಹೆಚ್ಚಿಸಿದೆ.
ಸರ್ಕಾರ ಬೇರೊಂದು ಮಾರ್ಗದಲ್ಲಿ ದಮನ ಮಾಡಲು ಯತ್ನಿಸಬಹುದು. ಅದನ್ನು ವಿಫಲಗೊಳಿಸುವ ಶಕ್ತಿ ರೈತ ಹೋರಾಟಕ್ಕೆ ಇನ್ನಷ್ಟು ಸಂಚಯವಾಗಲಿ. ಅದಾಗಬೇಕೆಂದರೆ, ನಮ್ಮ ನಮ್ಮ ನೆಲೆಯಲ್ಲಿ ನಾವು ರೈತರ ಪರ ಧ್ವನಿ ಎತ್ತಬೇಕಾದ ತುರ್ತು ಸಮಯವಿದು.
ಇದನ್ನೂ ಓದಿ: ‘ಜ. 26ರ ಹಿಂಸಾಚಾರಕ್ಕೆ ಕೇಂದ್ರ ಸರ್ಕಾರ ಕಾರಣ’: ಬಿಜೆಪಿ ತೊರೆದ ಹಿರಿಯ ನಾಯಕ ರಾಂಪಾಲ್


