36 ವರ್ಷದ ವ್ಯಕ್ತಿಯೊಬ್ಬ ತನ್ನ ನಾಲ್ವರು ಗಂಡು ಮಕ್ಕಳನ್ನು ರೈಲ್ವೆ ಹಳಿಗಳಿಗೆ ಕರೆದೊಯ್ದು ಒಟ್ಟಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ಮಧ್ಯಾಹ್ನ ಹರಿಯಾಣದ ಫರಿದಾಬಾದ್‌ನ ಬಲ್ಲಭಗಢದಲ್ಲಿ ನಡೆದಿದೆ. ಸಾವಿಗೀಡಾದ ಮಕ್ಕಳಲ್ಲಿ ಅತ್ಯಂತ ಕಿರಿಯ ಮಗುವಿಗೆ ಮೂರು ವರ್ಷವಾಗಿದ್ದರೆ, ಹಿರಿಯ ಮಗನಿಗೆ ಒಂಬತ್ತು ವರ್ಷವಾಗಿತ್ತು. ವ್ಯಕ್ತಿಯು ಎಕ್ಸ್‌ಪ್ರೆಸ್ ರೈಲು ಹಾದು ಹೋಗುವವರೆಗೂ ಮಕ್ಕಳ ತೋಳುಗಳನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ನಾಲ್ವರು ಮಕ್ಕಳ ಜೊತೆಗೆ
ವ್ಯಕ್ತಿಯನ್ನು ಬಿಹಾರ ಮೂಲದ ಮನೋಜ್ ಮೆಹ್ತೋ ಎಂದು ಗುರುತಿಸಲಾಗಿದೆ. ಗೋಲ್ಡನ್ ಟೆಂಪಲ್ ಎಕ್ಸ್‌ಪ್ರೆಸ್ ಹಳಿಗಳ ಮೇಲೆ ವೇಗವಾಗಿ ಬರುತ್ತಿರುವುದನ್ನು ಕಂಡು, ತಮ್ಮನ್ನು ಬಿಡುವಂತೆ ಮಕ್ಕಳು ಕೇಳಿಕೊಂಡರೂ ಮನೋಜ್ ಅವರನ್ನು ಬಿಡಲು ನಿರಾಕರಿಸಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ ಎಂದು ವರದಿ ಹೇಳಿದೆ. ದಿನಗೂಲಿ ಕಾರ್ಮಿಕನಾಗಿದ್ದ ಮನೋಜ್ ತನ್ನ ಮತ್ತು ತನ್ನ ಮಕ್ಕಳ ಜೀವನವನ್ನು ಕೊನೆಗೊಳಿಸಲು ಏಕೆ ನಿರ್ಧರಿಸಿದನೆಂದು ಸ್ಪಷ್ಟವಾಗಿಲ್ಲ ಎಂದು ವರದಿ ಉಲ್ಲೇಖಿಸಿದೆ.
“ಮುಂಬೈನಿಂದ ಬರುತ್ತಿದ್ದ ರೈಲು ಮಧ್ಯಾಹ್ನ 1.10 ರ ಸುಮಾರಿಗೆ ಐವರನ್ನು ಬಲಿ ಪಡೆದಿದೆ” ಎಂದು ಸರ್ಕಾರಿ ರೈಲ್ವೆ ಪೊಲೀಸ್ ಘಟಕದ ಎಸ್‌ಎಚ್‌ಒ ರಾಜ್‌ಪಾಲ್ ಹೇಳಿದ್ದಾರೆ. ಸುಭಾಷ್ ಕಾಲೋನಿ ಬಳಿ ವಾಸಿಸುತ್ತಿದ್ದ ಮನೋಜ್ ಮಧ್ಯಾಹ್ನ 12.15 ರ ಸುಮಾರಿಗೆ ಮನೆಯಿಂದ ಹೊರಡುವಾಗ ತನ್ನ ಪತ್ನಿ ಪ್ರಿಯಾಗೆ ಮಕ್ಕಳನ್ನು ಆಟವಾಡಲು ಹತ್ತಿರದ ಉದ್ಯಾನವನಕ್ಕೆ ಕರೆದೊಯ್ಯುತ್ತಿದ್ದೇನೆ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.
ಮಕ್ಕಳನ್ನು ಫ್ಲೈಓವರ್ ಕೆಳಗೆ ನಿಲ್ಲಿಸಿ ಅವರಿಗೆ ಚಿಪ್ಸ್, ಕೋಲಾ ಕೂಡಾ ಖರೀದಿಸಿದ್ದರು. ಅದಾಗ್ಯೂ, ತನ್ನ ನಾಲ್ವರು ಮಕ್ಕಳನ್ನು ಆಟವಾಡಲು ಉದ್ಯಾನವನಕ್ಕೆ ಕರೆದೊಯ್ಯುವ ಬದಲು ಮನೋಜ್ ಅವರನ್ನು ರೈಲ್ವೆ ಹಳಿಗಳ ಬಳಿಗೆ ಕರೆದೊಯ್ದಿದ್ದನು. ಅಷ್ಟೆ ಅಲ್ಲದೆ, ಎಲ್ಸನ್ ಚೌಕ್ ಫ್ಲೈಓವರ್ ಕೆಳಗೆ ಸುಮಾರು ಒಂದು ಗಂಟೆ ಕುಳಿತು ರೈಲು ಬರುವವರೆಗೆ ಅವರಿಗೆ ಕಾಯುತ್ತಿದ್ದರು ಎಂದು ವರದಿಗಳು ಹೇಳಿವೆ.
ಘಟನೆಯ ನಂತರ, ಲೋಕೋ ಪೈಲಟ್ ಬಲ್ಲಭಗಢ ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮನೋಜ್ ಅವರ ಆಧಾರ್ ಕಾರ್ಡ್ ಮೂಲಕ ಗುರುತಿಸಿದ್ದರು. ಅವರ ಜೇಬಿನಲ್ಲಿರುವ ಚಿಟ್‌ನಲ್ಲಿ ಅವರ ಪತ್ನಿಯ ಫೋನ್ ಸಂಖ್ಯೆಯನ್ನು ಬರೆದಿರುವುದು ಕಂಡುಬಂದಿತ್ತು. ಈ ಎಲ್ಲಾ ಮಾಹಿತಿಗಳು ಅವರ ಕೃತ್ಯಗಳು ಪೂರ್ವಯೋಜಿತವೆಂದು ಸೂಚಿಸುತ್ತದೆ ಎಂದು ವರದಿ ಹೇಳಿದೆ.
“ಒಬ್ಬ ಮಹಿಳೆ ಮತ್ತು ಆಕೆಯ ಮಕ್ಕಳು ರೈಲಿನ ಮುಂದೆ ಹಾರಿದ್ದಾರೆ ಎಂದು ನಮಗೆ ಆರಂಭದಲ್ಲಿ ಮಾಹಿತಿ ಬಂದಿತು. ಆದರೆ ನಾವು ಸ್ಥಳಕ್ಕೆ ತಲುಪಿದಾಗ, ತಂದೆ ಮತ್ತು ಅವರ ಪುತ್ರರು ಹಳಿಗಳ ಮೇಲೆ ಸಿಲುಕಿದ್ದಾರೆ ಎಂದು ನಮಗೆ ತಿಳಿದುಬಂದಿದೆ” ಎಂದು ಜಿಆರ್‌ಪಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮನೋಜ್ ಪತ್ನಿ ಪ್ರಿಯಾ ಅವರಿಗೆ ಕರೆ ಮಾಡಿದಾಗ, ತನ್ನ ಪತಿ ಮಕ್ಕಳನ್ನು ಉದ್ಯಾನವನಕ್ಕೆ ಕರೆದೊಯ್ದಿದ್ದು, ಶೀಘ್ರದಲ್ಲೇ ಮನೆಗೆ ಹಿಂತಿರುಗುತ್ತಾರೆ ಎಂದು ಜಿಆರ್‌ಪಿ ಸಿಬ್ಬಂದಿಗೆ ತಿಳಿಸಿದ್ದಾರೆ. ನಂತರ ಅವರನ್ನು ಸ್ಥಳಕ್ಕೆ ಬರುವಂತೆ ಕೇಳಿಕೊಂಡಿದ್ದು, ಅಲ್ಲಿ ಅವರು ಗಂಡ ಮತ್ತು ಮಕ್ಕಳ ಶವಗಳನ್ನು ನೋಡಿ ಮೂರ್ಛೆ ಹೋದರು ಎಂದು ವರದಿ ತಿಳಿಸಿದೆ.
ಶವಪರೀಕ್ಷೆಗಾಗಿ ಬಾದ್‌ಶಾ ಖಾನ್ ಸಿವಿಲ್ ಆಸ್ಪತ್ರೆಯ ಶವಾಗಾರಕ್ಕೆ ಮೃತದೇಹಗಳನ್ನು ಕೊಂಡೊಯ್ಯಲಾಗಿದೆ.
ಮನೋಜ್ ಏಕೆ ಇಂತಹ ನಿರ್ಧಾರ ಕೈಗೊಂಡರು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರ ವಿವಾಹದ ವೇಳೆ ತೊಂದರೆಯಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿದ್ದು, ಆದರೆ ಅದಕ್ಕೂ ಇದಕ್ಕೂ ಸಂಬಂಧವಿದೆಯೇ ಎಂಬುದು ಸ್ಪಷ್ಟವಾಗಿಲ್ಲ.
“ಮನೋಜ್ ಅವರ ಮನಸ್ಥಿತಿ ಮತ್ತು ಅಂತಹ ನಿರ್ಧಾರ ಕೈಗೊಳ್ಳಲು ಏನು ಕಾರಣ ಎಂಬುವುದು ಕಂಡುಕೊಳ್ಳುವುದು ಈಗ ಆದ್ಯತೆಯಾಗಿದೆ. ಜೊತೆಗೆ ದುಃಖಿತ ಕುಟುಂಬದ ಜೊತೆಗೆ ನಿಲ್ಲುವುದು ಕೂಡಾ ಸಹ ಮುಖ್ಯವಾಗಿದೆ.” ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ನಾಲ್ವರು ಮಕ್ಕಳ ಜೊತೆಗೆ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಗುಜರಾತ್ | ಇ-ಕೆವೈಸಿ ಲೋಪ; ಪಡಿತರವಿಲ್ಲದೆ ಬಳಲುತ್ತಿರುವ 10 ಲಕ್ಷ ಜನರು
ಗುಜರಾತ್ | ಇ-ಕೆವೈಸಿ ಲೋಪ; ಪಡಿತರವಿಲ್ಲದೆ ಬಳಲುತ್ತಿರುವ 10 ಲಕ್ಷ ಜನರು

