Homeಕರ್ನಾಟಕ‍ಸಿಎಂ ಬದಲಿಸಬೇಕೆಂದು ಬಿಟ್‌ ಕಾಯಿನ್‌ ವಿಷಯ ನಮಗೆ ತಿಳಿಸಿದ್ದೇ ಅಶ್ವತ್ಥ್‌ ನಾರಾಯಣ್: ಡಿ.ಕೆ.ಶಿವಕುಮಾರ್‌

‍ಸಿಎಂ ಬದಲಿಸಬೇಕೆಂದು ಬಿಟ್‌ ಕಾಯಿನ್‌ ವಿಷಯ ನಮಗೆ ತಿಳಿಸಿದ್ದೇ ಅಶ್ವತ್ಥ್‌ ನಾರಾಯಣ್: ಡಿ.ಕೆ.ಶಿವಕುಮಾರ್‌

ಡಿ.ಕೆ.ಸುರೇಶ್‌ ಮತ್ತು ಅಶ್ವತ್ಥ್‌ ನಾರಾಯಣ್ ನಡುವಿನ ಗಲಾಟೆಯ ಕುರಿತು ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯೆ ನೀಡಿದ್ದಾರೆ.

- Advertisement -
- Advertisement -

ರಾಮನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಸಂಸದ ಡಿ.ಕೆ.ಸುರೇಶ್‌ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್‌ ನಾರಾಯಣ್ ಅವರ ನಡುವೆ ನಡೆದ ಜಗಳಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್‌ ಅವರು ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ರಾಮನಗರದ ಘಟನೆ ಒಬ್ಬ ಸಚಿವರ ದುರಹಂಕಾರದ ಪರಮಾವಧಿ. ಸಚಿವ ಅಶ್ವತ್ಥ್‌ ನಾರಾಯಣ ಅವರು ಮುಖ್ಯಮಂತ್ರಿಯನ್ನು ಕರೆದುಕೊಂಡು ಬಂದಿದ್ದಾರೆ. ಅವರು ಮುಖ್ಯಮಂತ್ರಿಗಳಿರುವ ವೇದಿಕೆಯಲ್ಲಿ ಏನು ಮಾತನಾಡಬೇಕು, ಅವರಿಗೆ ಯಾವ ರೀತಿ ಗೌರವ ಕೊಡಬೇಕು ಎಂಬ ಪರಿಜ್ಞಾನ ಇರಬೇಕು” ಎಂದು ತಿಳಿಸಿದರು.

ರಾಜಕಾರಣದಲ್ಲಿ ಜೈಕಾರ ಹಾಕುವವರು, ಧಿಕ್ಕಾರ ಕೂಗುವವರು, ಕಲ್ಲು, ಮೊಟ್ಟೆ, ಟೊಮೆಟೋ ಹೊಡೆಯುವವರು ಇರುತ್ತಾರೆ. ಯಾವುದೋ ಸನ್ನಿವೇಶದಲ್ಲಿ ದಲಿತರಿಗೆ ನೋವಾಗಿದ್ದು, ಅವರು ಘೋಷಣೆ ಕೂಗಿದ್ದಾರೆ. ಇಂತಹ ಘಟನೆಯನ್ನು ನಾವೂ ಎದುರಿಸಿದ್ದೇವೆ ಎಂದು ಪ್ರತಿಕ್ರಿಯಿಸಿದರು.

ಸಭೆಯನ್ನು ಹೇಗೆ ನಿಭಾಯಿಸಬೇಕು. ಸಿಎಂ ಬಂದ ಸಂದರ್ಭದಲ್ಲಿ ಯಾರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಕನಿಷ್ಟ ಜ್ಞಾನ ಜಿಲ್ಲಾ ಉಸ್ತುವಾರಿ ಮಂತ್ರಿಗಳಿಗೆ ಇರಬೇಕು. ಅವರಿಗೆ ಆ ಜ್ಞಾನ ಇಲ್ಲವೋ, ಸಮಯಪ್ರಜ್ಞೆ ಇಲ್ಲವೋ, ಇದು ಅವರ ಸಂಸ್ಕೃತಿಯೋ ಗೊತ್ತಿಲ್ಲ. ಇಲ್ಲಿ ಯಾವುದನ್ನೂ ಕತ್ತಲಲ್ಲಿ ಇಡಲು ಸಾಧ್ಯವಿಲ್ಲ ಎಂದರು.

ನನ್ನ ಸೋದರಿ ಅನಿತಾ ಅವರ ಮನಸಿಗೂ ನೋವಾಗಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ವಿಡಿಯೋದಲ್ಲಿ ಮುಖ್ಯಮಂತ್ರಿಗಳು ಕೂಡ ಆ ರೀತಿ ಮಾತಾಡುವುದು ಬೇಡ, ನಿಲ್ಲಿಸು ಎಂದು ಆ ಸಚಿವರಿಗೆ ಸನ್ನೆ ಮಾಡುತ್ತಾರೆ. ಆದರೂ ಅವರು ನಿಲ್ಲಿಸಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ರಾಮನಗರ ಜಿಲ್ಲೆ ಕೆಂಗಲ್ ಹನುಮಂತಯ್ಯ, ರಾಮಕೃಷ್ಣ ಹೆಗಡೆ, ದೇವೇಗೌಡರು, ಎರಡು ಬಾರಿ ಕುಮಾರಸ್ವಾಮಿ ಅವರನ್ನು, 2 ಕಿ.ಮೀ. ದೂರದಲ್ಲಿನ ಎಸ್.ಎಂ. ಕೃಷ್ಣ ಅವರನ್ನು ಸಿಎಂ ಆಗಿ ಕೊಟ್ಟಂತಹ ಜಿಲ್ಲೆ. ಪ್ರತಿ ಮನೆಗೂ ರಾಜಕಾರಣ ಗೊತ್ತಿದೆ. ನಾವು ಅಶ್ವತ್ ನಾರಾಯಣ್ ಅವರಷ್ಟು ದೊಡ್ಡವರಲ್ಲ, ಎಳಸು ಇರಬಹುದು. ಆದರೆ ರಾಮನಗರ ಜಿಲ್ಲೆಯವರು ಅವರ ಬೆದರಿಕೆಗೆ ಹೆದರುವ ಮಕ್ಕಳಲ್ಲ ಎಂದು ಸ್ಪಷ್ಟಪಡಿಸಿದರು.

ಅವರು ಬಂದಿರುವುದು ಬೆಂಗಳೂರು ಕಟ್ಟಿದ ಕೆಂಪೇಗೌಡರು, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಪ್ರತಿಮೆ ಅನಾವರಣಕ್ಕೆ. ಅದನ್ನು ಮಾಡಿಸಿದ್ದು ಇವರಲ್ಲ. ಜಿಲ್ಲಾ ಮಂತ್ರಿಯಾಗಿದ್ದಾಗ ನಾನು ಹಾಗೂ ಎಲ್ಲರೂ ಸೇರಿ ನಿರ್ಮಾಣ ಮಾಡಿದ ಪ್ರತಿಮೆ ಎಂದು ಹೇಳಿದರು.

ಅವರು ಅವರ ಪಕ್ಷದ ವೇದಿಕೆಯಲ್ಲಿ ಏನು ಬೇಕಾದರೆ ಹೇಳಿಕೊಳ್ಳಲಿ. ಇದು ಸಿಎಂ ಅವರ ಸಭೆ. ಸಿಎಂ ಇಳಿಸಲು ಮೊದಲಿನಿಂದಲೂ ಬಿಜೆಪಿಯಲ್ಲಿ ಪ್ರಯತ್ನ ನಡೆಯುತ್ತಿದೆ. ಯಡಿಯೂರಪ್ಪನವರನ್ನು ಇಳಿಸಲು ದೊಡ್ಡ ಷಡ್ಯಂತ್ರ ಮಾಡಿದ್ದರು. ಈಗ ಬೊಮ್ಮಾಯಿ ಅವರನ್ನು ಇಳಿಸಲು ಪ್ರಯತ್ನಿಸುತ್ತಿದ್ದಾರೆ. ಬಿಟ್ ಕಾಯಿನ್ ವಿಚಾರ ತೆಗೆದುಕೊಳ್ಳಿ, ಬೇರೆ ವಿಚಾರ ತೆಗೆದುಕೊಳ್ಳಿ ಎಂದು ನಮಗೆ ಮಾಹಿತಿ ಕೊಟ್ಟವರೇ ಬಿಜೆಪಿಯವರು, ಇದೇ ಅಶ್ವಥ್ ನಾರಾಯಣ್. ಈ ವಿಚಾರಗಳ ಬಗ್ಗೆ ಸಮಯ ಬಂದಾಗ ನಾವು ನಮ್ಮ ನಿರ್ಧಾರ ತಿಳಿಸುತ್ತೇವೆ ಎಂದು ಹೇಳಿದರು.

ಈಗಲೂ ಗುತ್ತಿಗೆದಾರರ ಕಮಿಷನ್ ವಿಚಾರ ಬಳಸಿಕೊಳ್ಳುತ್ತಿದ್ದಾರೆ. ಅವರ ಆಂತರಿಕ ಸಮಸ್ಯೆಗೆ ಮುಖ್ಯಮಂತ್ರಿಗಳನ್ನು ವೇದಿಕೆ ಮೇಲೆ ಕೂರಿಸಿಕೊಂಡು ಅಪಮಾನ ಮಾಡಿದರೆ ಅದು ಸರಿಯೇ? ಮಾಡಲಿ ಬಿಡಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅನಿತಕ್ಕ ಹಾಗೂ ಮುಖ್ಯಮಂತ್ರಿಗಳೇ ಅವರ ಮಾತು ಸರಿಯಾಗಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ ಮೇಲೆ ಅದರ ಬಗ್ಗೆ ನಾನು ಹೇಳುವುದಾದರೂ ಏನಿದೆ. ಅವರ ಎಲ್ಲ ಸವಾಲುಗಳನ್ನು ಎದುರಿಸಲು ನಾವು ಸಿದ್ಧ ಎಂದರು.

ಇದು ಮುಖ್ಯಮಂತ್ರಿ, ಅವರ ಪಕ್ಷ, ಆರ್‌‌ಎಸ್‌ಎಸ್‌, ಜಿಲ್ಲಾಡಳಿತ, ಜಿಲ್ಲೆಯ ಜನರಿಗೆ ಆಗಿರುವ ಅಪಮಾನ. ಇಂಥವರು ಮಂತ್ರಿಯಾಗಿರುವುದೇ ದೊಡ್ಡ ಅವಮಾನ. ಅವರು ಯಾವ ಅಭಿವೃದ್ಧಿ ಮಾಡಿದ್ದಾರೆ. ಅಭಿವೃದ್ಧಿ ಎಂದರೆ ಏನು ಎಂದು ನನಗೂ ತಿಳಿಸಲಿ. ನಾನು ಏಳು ಬಾರಿ ಶಾಸಕನಾಗಿದ್ದೇನೆ, ನನಗೂ ತಿಳಿಸಲಿ. ನಾಳೆ ಅವರೇ ಸಮಯ ನಿಗದಿ ಮಾಡಲಿ. ನಾವು ಬಂದು ತಿಳಿದುಕೊಳ್ಳುತ್ತೇವೆ ಎಂದು ಸವಾಲು ಹಾಕಿದರು.

ಅಂಬೇಡ್ಕರ್ ಪ್ರತಿಮೆ ಅವರು ನಿರ್ಮಿಸಿದರಾ? ಅವರೇನು ಆಣೆಕಟ್ಟು ಕಟ್ಟಿದ್ದಾರಾ? ನರೇಗಾ ಯೋಜನೆಯಲ್ಲಿ ಯಾವುದಾದರೂ ಊರಿನ ಅಂತರ್ಜಲ ಹೆಚ್ಚಿಸಿದ್ದಾರಾ? ಕಟ್ಟಡ ಕಟ್ಟಿದ್ದಾರಾ? ರಸ್ತೆ ಮಾಡಿಸಿದ್ದಾರಾ? ಶಾಲೆ ನಿರ್ಮಿಸಿದ್ದಾರಾ? ಅವರು ಒಂದು ದಿನ ನನ್ನ ಜತೆ ಮಾತನಾಡಿಲ್ಲ. ಯಾವುದೂ ಗೊತ್ತಿಲ್ಲ. 900 ಕೋಟಿ ರೂ. ಎಲ್ಲಿ ಕೊಟ್ಟಿದ್ದಾರೆ? ಸರ್ಕಾರದಿಂದ ಅನುದಾನ ಹೋಗುತ್ತಿದೆಯಾ, ಅದೂ ಗೊತ್ತಿಲ್ಲ ಎಂದರು.

ಮುಖ್ಯಮಂತ್ರಿ ಸ್ಥಾನಕ್ಕೆ ನಾವು ಗೌರವ ನೀಡುತ್ತೇವೆ. ಅವರನ್ನು ವೈಯಕ್ತಿಕವಾಗಿ ನಾವು ಮೆಚ್ಚಿಕೊಳ್ಳುತ್ತೇವೆ. ಹಾಗೆಂದು ಅವರ ಸಮ್ಮುಖದಲ್ಲಿ ಮಂತ್ರಿಯೊಬ್ಬರು ಹೇಳಿದ್ದನ್ನೆಲ್ಲ ಕೇಳಿಸಿಕೊಂಡು ಕೂರಲು ಸಾಧ್ಯವೇ? ನಮಗೂ ಸ್ವಾಭಿಮಾನ ಇದೆ. ವೇದಿಕೆ ಮೇಲೆ ಕೂರಿಸಿ ನೀವು ಗಂಡಸಾ ಎಂದು ಕೇಳಿದರೆ ಸುಮ್ಮನೆ ಕೂರಲು ಸಾಧ್ಯವೇ? ರಾಜಕೀಯ, ಅಧಿಕಾರ ಬರುತ್ತದೆ ಹೋಗುತ್ತದೆ. ಆದರೆ ಅವರಿಗೆ ಗೊತ್ತಿರಲಿ. ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರಿನ ಜನರ ರಕ್ತವೇ ಬೇರೆ ಎಂದು ಎಂದು ಎಚ್ಚರಿಸಿದರು.


ಇದನ್ನೂ ಓದಿರಿ: ಅಶ್ವತ್ಥ್ ನಾರಾಯಣರೇ ನೀವೂ ನಿಮ್ಮ ಕೆಲಸವನ್ನು ತೋರಿಸಬೇಕಿದೆ: ಅತಿಥಿ ಉಪನ್ಯಾಸಕರ ಒತ್ತಾಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

‘ಕಲ್ಕತ್ತಾ ಹೈಕೋರ್ಟ್ ಮಾರಾಟ ಆಗಿದೆ’ ಎಂದ ಮಮತಾ ಬ್ಯಾನರ್ಜಿ ವಿರುದ್ಧ ಕ್ರಮಕ್ಕೆ ವಕೀಲರ ಗುಂಪು...

0
‘ಹೈಕೋರ್ಟ್ ಮಾರಾಟ ಆಗಿದೆ' ಎಂದು ಹೈಕೋರ್ಟ್‌ ವಿರುದ್ಧ ಟೀಕೆಯನ್ನು ಮಾಡಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಬೇಕೆಂದು ವಕೀಲರ ಗುಂಪು ಗುರುವಾರ ಕಲ್ಕತ್ತಾ ಹೈಕೋರ್ಟ್‌ಗೆ ಒತ್ತಾಯಿಸಿದೆ. ಶಾಲಾ ಉದ್ಯೋಗಿಗಳ...