ಸಿದ್ದಗಂಗಾ ಮಠವೂ ಸೇರಿದಂತೆ 355 ಶಾಲೆಗಳಿಗೆ ಅಕ್ಕಿ ಮತ್ತು ಗೋದಿ ಪೂರೈಕೆ ಸ್ಥಗಿತಗೊಳಿಸಿದ್ದ ರಾಜ್ಯ ಸರ್ಕಾರ ಇದರಿಂದಾದ ಡ್ಯಾಮೇಜ್ ಕಂಟ್ರೋಲ್ ಮಾಡಲು ಸಚಿವೆ ಶಶಿಕಲಾ ಜೊಲ್ಲೆ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಸಿದ್ದಲಿಂಗ ಸ್ವಾಮಿಗಳೊಂದಿಗೆ ಚರ್ಚೆ ನಡೆಸಿದರು. ಕೇಂದ್ರ ಸರ್ಕಾರ ಸಬ್ಸೀಡಿ ಅಕ್ಕಿ ಮತ್ತು ಗೋದಿ ನಿಲ್ಲಿಸಿರುವುದರಿಂದ ತಾತ್ಕಾಲಿಕ ವ್ಯತ್ಯಯವಾಗಿದೆ ಎಂಬುದನ್ನು ಸ್ವಾಮಿಗಳ ಗಮನಕ್ಕೆ ತಂದಿದ್ದಾರೆ.
ಕೆಲವು ಸಂಘ ಸಂಸ್ಥೆಗಳು ಸರ್ಕಾರಕ್ಕೆ ಪತ್ರವನ್ನು ಬರೆದಿದ್ದವು. ಆ ಪತ್ರಗಳನ್ನು ಪರಿಶೀಲಿಸಿದ ಅಧಿಕಾರಿಗಳು ಕೇಂದ್ರ ಸರ್ಕಾರ ಸಬ್ಸೀಡಿ ಅಕ್ಕಿ ಗೋದಿ ನಿಲ್ಲಿಸಿದೆ. ಸಿದ್ದಗಂಗಾ ಮಠಕ್ಕೆ ಅಕ್ಷರ ದಾಸೋಹ ಯೋಜನೆಯಡಿ ನೀಡುತ್ತಿದ್ದ ಅಕ್ಕಿ, ಗೋದಿ ನಿಲ್ಲಿಸಲಾಗಿದೆ ಎಂಬುದನ್ನು ಮಠದ ಶ್ರೀಗಳಿಗೆ ಸಚಿವೆ ವಿವರಿಸಿದರು. ಆಗಿರುವ ವ್ಯತ್ಯಯಕ್ಕೆ ಸಚಿವ ಶಶಿಕಲಾ ಜೊಲ್ಲೆ ವಿಷಾದ ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ.
ಸಿದ್ದಲಿಂಗ ಸ್ವಾಮಿಗಳ ಕಚೇರಿಯಿಂದ ಹೊರ ಬಂದ ಸಚಿವೆ ಶಶಿಕಲಾ ಜೊಲ್ಲೆ ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಸಮಾಧಾನದಿಂದಲೇ ಉತ್ತರಿಸಿದರು. ಸಿದ್ದಗಂಗಾ ಮಠ ಸೇರಿದಂತೆ 355 ಶಾಲೆಗೆಳಿಗೆ ಅಕ್ಷರ ದಾಸೋಹದ ಅಕ್ಕಿ ಮತ್ತು ಗೋದಿ ಪೂರೈಕೆಯಲ್ಲಿ ಆಗಿರುವ ವ್ಯತ್ಯಯಕ್ಕೆ ಮುಖ್ಯಮಂತ್ರಿಗಳು ನನ್ನ ಮೇಲೆ ಗರಂ ಆಗಿಲ್ಲ. ಸಂಘ-ಸಂಸ್ಥೆಗಳು ಬರೆದಿರುವ ಪತ್ರದ ಸಾರಾಂಶವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದಾಗಿ ಜೊಲ್ಲೆ ಸಮಜಾಯಿಸಿ ನೀಡಿದರು.
ಅಕ್ಷರ ದಾಸೋಹ ಯೋಜನೆಯಡಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಸಬ್ಸೀಡಿ ದರದಲ್ಲಿ ನೀಡುತ್ತಿದ್ದ ಅಕ್ಕಿ ಮತ್ತು ಗೋಧಿಯನ್ನು ಸಂಪೂರ್ಣವಾಗಿ ನಿಲ್ಲಿಸಿದೆ. ಇದರಿಂದ ಒಂದೆರಡು ದಿನ ಪೂರೈಕೆಯಲ್ಲಿ ವ್ಯತ್ಯಯವಾಗಿರುವುದು ಸತ್ಯ ಎಂದು ಒಪ್ಪಿಕೊಂಡ ಸಚಿವೆ ಶಶಿಕಲ ಸಚಿವ ಸಂಪುಟದಲ್ಲಿ ಈ ಕುರಿತು ಚರ್ಚೆ ನಡೆಸಲಾಯಿತು. ಮುಖ್ಯಮಂತ್ರಿಗಳು ಎಷ್ಟು ಖರ್ಚಾಗುತ್ತದೆ ಎಂದು ಕೇಳಿದರು. 18 ಕೋಟಿ ರೂಪಾಯಿ ಬೇಕಾಗುತ್ತದೆ ಎಂದು ಹೇಳಿದೆ. ಅದಕ್ಕೆ ಮುಖ್ಯಮಂತ್ರಿಗಳು ರಾಜ್ಯ ಸರ್ಕಾರದಿಂದಲೇ ಅಕ್ಕಿ ಗೋಧಿ ಪೂರೈಕೆ ಮಾಡೋಣ ಎಂದು ಅನುಮೋದನೆ ನೀಡಿದರು ಎಂದು ವಿವರಿಸಿದರು.
ಮಠದ ವಿದ್ಯಾರ್ಥಿಗಳಿಗೆ ತಿಂಗಳಿಗೆ 735 ಕ್ವಿಂಟಾಲ್ ಅಕ್ಕಿ, 365 ಕ್ವಿಂಟಾಲ್ ಗೋಧಿ ಬೇಕಾಗುತ್ತದೆ. ವಾರ್ಷಿಕ 360 ಮೆಟ್ರಿಕ್ ಟನ್ ಅಕ್ಕಿ, 160 ಮೆಟ್ರಿಕ್ ಟನ್ ಗೋಧಿ ಬೇಕು. ಅದನ್ನು ರಾಜ್ಯ ಸರ್ಕಾರವೇ ಪೂರೈಕೆ ಮಾಡುತ್ತದೆ. ಯಾವುದೇ ಕಾರಣಕ್ಕೂ ಅಕ್ಕಿ, ಗೋಧಿ ವಿತರಿಸುವುದನ್ನು ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ಬರುವ ಅಂಗನವಾಡಿ ಕಾರ್ಯಕರ್ತರಿಗೆ ಬೇರೆ ಹೆಸರನ್ನು ಕೊಡುವ ಬಗ್ಗೆ ಸಮಾಲೋಚನೆ ನಡೆಯುತ್ತಿದೆ. ಕಾರ್ಯಕರ್ತೆ ಅಂದರೆ ಯಾಕೋ ಸರಿಹೋಗುತ್ತಿಲ್ಲ. ಹಾಗಾಗಿ ಸಾರ್ವಜನಿಕರಿಂದ ಉತ್ತಮ ಹೆಸರು ನೀಡುವಂತೆ ಆಹ್ವಾನ ನೀಡಿದ್ದೇವೆ. ಒಳ್ಳೆಯ ಹೆಸರು ದೊರೆತ ಮೇಲೆ ಅಂಗನವಾಡಿ ಕಾರ್ಯಕರ್ತೆಯರ ಹೆಸರು ಬದಲಾವಣೆ ಮಾಡಲಾಗುವುದು ಎಂದು ತಿಳಿಸಿದರು.


