ಸಚಿವ ಶ್ರೀರಾಮುಲು ನನ್ನ ವಿರುದ್ಧ ಚುನಾವಣೆಯಲ್ಲಿ ಸೋತಿದ್ದರು. ಪಾಪ ಇನ್ನೂ ಆ ಹತಾಶೆಯಿಂದ ಹೊರಬಂದಂತೆ ಕಾಣುತ್ತಿಲ್ಲ. ಅದಕ್ಕೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ ಅಂತಾ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಸಿದ್ದರಾಮಯ್ಯ ಅವರು, ಸಚಿವ ಶ್ರೀರಾಮುಲು ಅವರನ್ನು ಟೀಕಿಸಿದ್ದಾರೆ. ಅವರಿಗೆ ಮಾನ ಮರ್ಯಾದೆ ಇದ್ದರೆ ಹಿಂದೆಯೇ ರಾಜೀನಾಮೆ ಕೊಡಬೇಕಿತ್ತು. ಶಾಸಕರೇ ಅಲ್ಲದವರಿಗೆ ಉಪಮುಖ್ಯಮಂತ್ರಿ ಹುದ್ದೆ ಕೊಟ್ಟಿದ್ದಾರೆ. ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿ ಮಾಡುತ್ತೇವೆಂದು ಪ್ರಚಾರ ಮಾಡಿದ್ದರು. ಕೊನೆಗೆ ಉಪಮುಖ್ಯಮಂತ್ರಿ ಮಾಡಿದರಾ..? ಎಂದು ಪ್ರಶ್ನಿಸಿದರು.
ಎಸ್.ಟಿ ಜನಾಂಗಕ್ಕೆ ಶೇ. 7ರಷ್ಟು ಮೀಸಲಾತಿ ನೀಡದಿದ್ದರೆ ರಾಜೀನಾಮೆ ಕೊಡುತ್ತೇನೆ. ಒಂದು ನಿಮಿಷ ಸಹ ಇರಲ್ಲ ಎಂದಿದ್ದರು. ಏನಾಯ್ತು? ಸ್ವಾರ್ಥಿಗಳೆಲ್ಲ ಒಂದೆಡೆ ಸೇರಿಕೊಂಡಿದ್ದಾರೆ. ಅವರ ಬಳಿ ಸ್ವಾರ್ಥವೊಂದು ಬಿಟ್ಟು ಬೇರಾವ ಮೌಲ್ಯ, ಸಿದ್ದಾಂತಗಳು ಇಲ್ಲ. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ದುಡ್ಡಿನ ಮೂಲಕ ಚುನಾವಣೆ ಗೆಲ್ಲಲು ಮುಂದಾಗಿವೆ. 30 ಸಾವಿರ ಸೀರೆ ಸಿಕ್ಕಿತಲ್ಲ ಅದು ಯಾರದ್ದು? ಅಷ್ಟು ಹಣ ಎಲ್ಲಿಂದ ಬಂತು? ಇದು ಅಕ್ರಮ ಅಲ್ವಾ? ಕಾನೂನಿನಲ್ಲಿ ಸೀರೆ ಹಂಚುವುದಕ್ಕೆ ಅವಕಾಶ ಇದೆಯಾ?
ಸರ್ಕಾರದಲ್ಲಿ ಇದ್ದುಕೊಂಡು ಅಕ್ರಮ ಮಾಡುವವರಿಗೆ ಅಧಿಕಾರದಲ್ಲಿ ಮುಂದುವರೆಯುವ ಯಾವ ನೈತಿಕತೆ ಇದೆ? ಎಂದು ಪ್ರಶ್ನಿಸುವ ಮೂಲಕ ಬಿಜೆಪಿಗೆ ತಿವಿದಿದ್ದಾರೆ.


