ಬಂದಾ ಪಟ್ಟಣದ 38 ವರ್ಷದ ಮುಸ್ಲಿಂ ಹೂವಿನ ವ್ಯಾಪಾರಿಯೊಬ್ಬರು ಸಹ ವರ್ತಕರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಮಹಾರಾಷ್ಟ್ರ ರಾಜ್ಯ ಅಲ್ಪಸಂಖ್ಯಾತರ ಆಯೋಗವು ಸಿಂಧುದುರ್ಗ ಜಿಲ್ಲಾ ಪೊಲೀಸರಿಗೆ ನಿರ್ದೇಶಿಸಿದೆ.
ಅಫ್ತಾಬ್ ಶೇಖ್ ಎಂಬ ವರ್ತಕ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ, “ನನಗೆ ಗ್ರಾಮದ ಐವರು ವರ್ತಕರು ಕಿರುಕುಳ ನೀಡಿದ್ದಾರೆ” ಎಂದು ಆರೋಪಿಸಿ ಮೊಬೈಲ್ ನಲ್ಲಿ ವಿಡಿಯೋವೊಂದನ್ನು ಚಿತ್ರೀಕರಿಸಿದ್ದಾರೆ. ಆ ವಿಡಿಯೋ ಅವರ ಕುಟುಂಬ ಸದಸ್ಯರ ಗಮನಕ್ಕೆ ಬಂದಿದೆ ಎಂದು ವರದಿಗಳು ಹೇಳಿವೆ.
ಆರೋಪಿಗಳ ಬಗ್ಗೆ ಸ್ಪಷ್ಟ ಪುರಾವೆಗಳಿದ್ದರೂ, ಪೊಲೀಸರು ಪ್ರಕರಣ ದಾಖಲಿಸುವಲ್ಲಿ ವಿಫಲರಾಗಿದ್ದಾರೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಆರೋಪಿಗಳನ್ನು ಬಂಧಿಸುವವರೆಗೆ ಶೇಖ್ ಅವರ ಶವವನ್ನು ಶವಾಗಾರದಿಂದ ತೆಗೆದುಕೊಂಡು ಹೋಗಲು ನಿರಾಕರಿಸಿದ್ದಾರೆ.
ಬಂದಾ ಪಟ್ಟಣದ ಮುಸ್ಲಿಂ ವಾಡಿಯ ನಿವಾಸಿ ಶೇಖ್ ಅವರ ಮೃತದೇಹ, ಅಕ್ಟೋಬರ್ 29 ರಂದು ಅವರು ಮಲಗುವ ಕೋಣೆಯ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರು ಕೋಣೆಯ ಬಾಗಿಲಿಗೆ ಒಳಗಡೆಯಿಂದ ಬೀಗ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ.
ಶೇಖ್ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಗಮನಕ್ಕೆ ಬಂದ ಕೂಡಲೇ ಅವರ ಪತ್ನಿ, ಅವರ ಸಹೋದರ ಅಬ್ದುಲ್ ರಝಾಕ್ ಅವರಿಗೆ ಮಾಹಿತಿ ನೀಡಿದ್ದರು. ರಝಾಕ್ ಅವರು ಬಂದು ಬಾಗಿಲು ಒಡೆದು ಶೇಖ್ ಅವರನ್ನು ನೇಣಿನಿಂದ ಇಳಿಸಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದರು. ಹೆಚ್ಚಿನ ಚಿಕಿತ್ಸೆಗೆ ಅವರನ್ನು ಗೋವಾದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ವೈದ್ಯರು ಅವರು ಸಾವಿಗೀಡಾಗಿರುವ ಬಗ್ಗೆ ಘೋಷಿಸಿದ್ದಾರೆ ಎಂದು ವರದಿಗಳು ಹೇಳಿವೆ.
ಮಹಾರಾಷ್ಟ್ರದ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮುಂಬೈ ಸದಸ್ಯ ವಾಸಿಂ ಖ್ವಾಜಾಭಾಯಿ ಬುರ್ಹಾನ್ ಅವರು ಶನಿವಾರ ಪೊಲೀಸರಿಗೆ ಬರೆದ ಪತ್ರದಲ್ಲಿ, ಶೇಖ್ ಅವರನ್ನು ಹಿಂಸಿಸಿರುವುದು ಮತ್ತು ಬೆದರಿಕೆ ಹಾಕಿರುವುದು ವಿಡಿಯೋದಿಂದ ಗೊತ್ತಾಗಿದೆ. ಇದು ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿರಬಹುದು ಎಂದು ಹೇಳಿದ್ದಾರೆ.
ಆರೋಪಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಬೇಕು ಎಂದು ಬುರ್ಹಾನ್ ಪೊಲೀಸರನ್ನು ಒತ್ತಾಯಿಸಿದ್ದಾರೆ.
ಶೇಖ್ ಅವರ ಸಂಬಂಧಿಕರು ದೂರು ದಾಖಲಿಸಿದ್ದರೂ, ಯಾವುದೇ ಪ್ರಕರಣ ದಾಖಲಾಗಿಲ್ಲ ಮತ್ತು ಇನ್ನೂ ಯಾರನ್ನೂ ಬಂಧಿಸಲಾಗಿಲ್ಲ ಎಂದು ಬುರ್ಹಾನ್ ತಮ್ಮ ಪತ್ರದಲ್ಲಿ ಹೇಳಿದ್ದಾರೆ. ಸಿಂಧುದುರ್ಗ ಜಿಲ್ಲಾ ಪೊಲೀಸ್ ಆಡಳಿತವು ಯಾರ ಒತ್ತಡದಲ್ಲಿ ಕೆಲಸ ಮಾಡುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ನೆನಪಿಡಿ : ಯಾವುದೇ ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ. ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ. ತುರ್ತು ಪರಿಸ್ಥಿತಿಯಿದ್ದರೆ ಕರೆ ಮಾಡಿ ವೈದ್ಯರೊಂದಿಗೆ ಮಾತನಾಡಿ. ಬೆಂಗಳೂರು ಸಹಾಯವಾಣಿ 080-25497777, ಬೆಳಗ್ಗೆ 10ರಿಂದ ಸಂಜೆ 8ರವರೆಗೆ, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104
ಗಾಝಿಯಾಬಾದ್ : ಮುಸ್ಲಿಂ ಬಾಲಕಿ, ಆಕೆಯ ಕುಟುಂಬದ ಮೇಲೆ ಹಿಂದುತ್ವ ಗುಂಪುಗಳಿಂದ ಹಲ್ಲೆ


