Homeಕರ್ನಾಟಕ’ಮಿಯಾವಾಕಿ’: ಗಡಿ ದಾಟಿ ವ್ಯಾಪಿಸಿದ ’ನಗರ ಅರಣ್ಯ’ ಕಲ್ಪನೆ

’ಮಿಯಾವಾಕಿ’: ಗಡಿ ದಾಟಿ ವ್ಯಾಪಿಸಿದ ’ನಗರ ಅರಣ್ಯ’ ಕಲ್ಪನೆ

- Advertisement -
- Advertisement -

ಪ್ರಸ್ತುತ ಮಿತಿಮೀರಿದ ನಗರೀಕರಣ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ಆಗುತ್ತಿರುವ ಹಲವು ಕೆಲಸಗಳಿಂದ ಆತಂಕಕಾರಿ ಪ್ರಮಾಣದಲ್ಲಿ ಅರಣ್ಯ ಪ್ರದೇಶಗಳನ್ನು ನಾಶ ಮಾಡಲಾಗುತ್ತಿದೆ. ಶತಮಾನಗಳಷ್ಟು ಹಳೆಯದಾದ ಮರಗಳನ್ನು ಕೆಲವೇ ಗಂಟೆಗಳಲ್ಲಿ ಉರುಳಿಸಲಾಗುತ್ತಿದೆ. ಈ ನಷ್ಟಕ್ಕೆ ಪರಿಹಾರ ಸುಲಭವಾದದ್ದೂ ಅಲ್ಲ. ಆದರೆ, ನಗರ ಪ್ರದೇಶಗಳಲ್ಲಿ ಕಳೆದುಹೋದ ಹಸಿರು ಹೊದಿಕೆಯನ್ನು ತ್ವರಿತವಾಗಿ ಮರಳಿ ತರಲು ಒಂದು ’ಆಧುನಿಕ’ ಪರಿಹಾರವಿದೆ. ಅದುವೇ ’ಮಿಯಾವಾಕಿ ನಗರ ಅರಣ್ಯ’.

ನೈಸರ್ಗಿಕವಾಗಿ ರೂಪುಗೊಳ್ಳುವ ಅರಣ್ಯಕ್ಕಿಂತ ಹತ್ತು ಪಟ್ಟು ವೇಗವಾಗಿ ಸಸಿಗಳು ಬೆಳವಣಿಗೆ ಕಾಣುವ ಮತ್ತು ಸಾಮಾನ್ಯಕ್ಕಿಂತ 30 ಪಟ್ಟು ಹೆಚ್ಚು ದಟ್ಟವಾಗಿರುವ ಅರಣ್ಯ ಸೃಷ್ಟಿಸಲು ಸಾಧ್ಯವಾಗುವ ವಿಧಾನವೇ ’ಮಿಯಾವಾಕಿ ನಗರ ಅರಣ್ಯ’ ಪದ್ಧತಿ.

ಕಾಂಕ್ರೀಟ್ ಕಾಡಿಗೆ ತಿರುಗುತ್ತಿರುವ ನಗರಗಳಿಗೆ ಮಿಯಾವಾಕಿ ಅರಣ್ಯ ಪರಿಹಾರವಾಗಬಲ್ಲದು ಎಂದು ಪರಿಗಣಿಸಲಾಗುತ್ತಿದೆ. ನಗರದೊಳಗೆ ಬೃಹತ್ ಅಪಾರ್ಟ್‌ಮೆಂಟ್‌ಗಳ ನಡುವಿನ ಪ್ರದೇಶಗಳು ಮತ್ತು ಇತರ ಖಾಲಿ ಜಾಗಗಳಲ್ಲಿ ಅಭಿವೃದ್ಧಿಪಡಿಸಲು ಸಾಧ್ಯವಾಗುವ ಈ ಆಧುನಿಕ ಅರಣ್ಯ ಪದ್ಧತಿ, ಹೆಚ್ಚಿನ ಪ್ರಮಾಣದಲ್ಲಿ ಇಂಗಾಲದ ಡೈ ಆಕ್ಸೈಡ್‌ಅನ್ನು ಹೀರಿ ಮತ್ತು ಆಮ್ಲಜನಕದ ಹೊರ ಸೂಸುವಿಕೆಗೆ ಸಹಕರಿಸಬಲ್ಲುದು. ಸ್ವಾಭಾವಿಕ ಹಸಿರು ವಲಯದ ವಿನಾಶಕ್ಕೆ ಅದೇ ಮಟ್ಟದ ಪರಿಹಾರ ಇದಲ್ಲದಿದ್ದರೂ, ಈಗಾಗಲೇ ಸರಿಪಡಿಸಲಾಗದಷ್ಟು ಹಾನಿಯಾಗಿರುವ ನಗರಪ್ರದೇಶಗಳಿಗೆ ತಾತ್ಕಾಲಿಕವಾಗಿ ಸಮಸ್ಯೆಯನ್ನು ಬಗೆಹರಿಸುವ ವಿಧಾನವಾಗಿ ಜನಪ್ರಿಯವಾಗಿದೆ.

ಅಕಿರಾ ಮಿಯಾವಾಕಿ

ಜಪಾನಿನ ಸಸ್ಯಶಾಸ್ತ್ರಜ್ಞ ಅಕಿರಾ ಮಿಯಾವಾಕಿ ಅವರು 1970ರ ದಶಕದಲ್ಲಿ ಮಿಯಾವಾಕಿ ನಗರ ಅರಣ್ಯ ವಿಧಾನವನ್ನು ಅಭಿವೃದ್ಧಿಪಡಿಸಿದರು. ಇದಕ್ಕಾಗಿ ಅವರು ಕಾಡುಗಳನ್ನು ಸುತ್ತಾಡಿ ಮರಗಳ ಬಗ್ಗೆ ಅಧ್ಯಯನ ಮಾಡಿದ್ದಾರೆ. ಅಭಿವೃದ್ಧಿಯ ನೆಪದಲ್ಲಿ ನಗರ ಪ್ರದೇಶಗಳಲ್ಲಿ ನಾಶವಾದ ಹಸಿರು ಹೊದಿಕೆಯನ್ನು ಮರಳಿ ರೂಪಿಸಲು ನಡೆಸಿದ ಪ್ರಯತ್ನದ ಭಾಗವಾಗಿ ಅಕಿರಾ ಅವರು ಮಿಯಾವಾಕಿ ಅರಣ್ಯ ಪದ್ಧತಿಯನ್ನು ಕಂಡುಕೊಂಡರು.

ಇದೊಂದು ವೈಜ್ಞಾನಿಕ ಪದ್ಧತಿಯಾಗಿರುವುದರಿಂದ ಜಗತ್ತು ಇದನ್ನು ವೇಗವಾಗಿ ಒಪ್ಪಿಕೊಂಡಿತು.

ನಗರದ ಪ್ರದೇಶಗಳಲ್ಲಿ ಖಾಲಿ ಜಾಗಗಳಿದ್ದರೆ, ಆ ಜಾಗಕ್ಕೆ, ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವ ಸ್ಥಳೀಯ ಸಸ್ಯ ಪ್ರಭೇದಗಳನ್ನು ಗುರುತಿಸುವುದು; ಸಾವಯವ ವಸ್ತುಗಳ ಮಿಶ್ರಣದಿಂದ ಮಣ್ಣನ್ನು ಅಭಿವೃದ್ಧಿಪಡಿಸುವುದು ಮತ್ತು ಸಸಿಗಳನ್ನು ದಟ್ಟವಾಗಿ ಬೆಳೆಯುವ ರೀತಿ ಮಿಶ್ರ ರೂಪದಲ್ಲಿ ನೆಡುವುದು ಮಿಯಾವಾಕಿ ನಗರ ಅರಣ್ಯ ಪದ್ಧತಿಯ ಪ್ರಮುಖ ಹಂತಗಳಾಗಿವೆ.

ನಗರ ಪ್ರದೇಶಗಳಲ್ಲಿ ಅಪಾರ್ಟ್‌ಮೆಂಟ್‌ನಂತಹ ಬೃಹತ್ ಕಟ್ಟಡಗಳ ಪರಿಸರದಲ್ಲಿ ಉದ್ಯಾನವನಗಳನ್ನು ಅಭಿವೃದ್ಧಿಪಡಿಸಿ ಸುಂದರವಾಗಿಸುವುದು ಈಗಿನ ವಾಡಿಕೆ. ಆದರೆ, ಮಿಯಾವಾಕಿ ಸೌಂದರ್ಯೀಕರಣದ ಉದ್ಯಾನವನವಲ್ಲ, ಇದು ಅರಣ್ಯ. ಇಲ್ಲಿ ಸೌಂದರ್ಯೀಕರಣದ ಬದಲಾಗಿ, ಅಂತರ್ಜಲ ವೃದ್ಧಿ, ಇಂಗಾಲದ ಡೈ ಆಕ್ಸೈಡ್ ಪ್ರಮಾಣ ಕುಗ್ಗಿಸಿ, ಆಮ್ಲಜನಕ ಹೆಚ್ಚಿಸುವುದು, ಪ್ರಾಣಿ-ಪಕ್ಷಿಗಳಿಗೆ ನೆಲೆ, ಆಹಾರ ಕಲ್ಪಿಸುವುದು ಗುರಿಯಾಗಿದೆ.

ಮಿಯಾವಾಕಿ ಅಭಿವೃದ್ಧಿಪಡಿಸಿರುವುದು ಜಪಾನಿನಲ್ಲಾದರೂ, ಅದು ಇಂದು ದೇಶಗಳ ಗಡಿ ದಾಟಿ ಜಾಗತಿಕವಾಗಿ ವ್ಯಾಪಿಸಿದೆ. ಭಾರತಕ್ಕೂ, ನಮ್ಮ ಕರ್ನಾಟಕಕ್ಕೂ ಮಿಯಾವಾಕಿ ಹೊಸತೇನಲ್ಲ. ಕರ್ನಾಟಕದ ಬೆಂಗಳೂರು, ಮಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಪ್ರಮುಖ ನಗರಗಳಲ್ಲಿ ಮಿಯಾವಾಕಿ ಅರಣ್ಯದ ಪ್ರಯೋಗ ನಡೆದಿದೆ; ಫಲವೂ ಕೊಟ್ಟಿದೆ.

ಬೆಂಗಳೂರು ಮಹಾನಗರದಲ್ಲಿ ಅನೇಕ ಪರಿಸರ ಸಂಘಟನೆಗಳು, ಕಾರ್ಯಕರ್ತರು, ವಿವಿಧ ಕಾರ್ಪೊರೇಟ್ ಕಂಪನಿಗಳ ಸಿಎಸ್‌ಆರ್ ನಿಧಿಯ ಬೆಂಬಲದೊಂದಿಗೆ ಮಿಯಾವಾಕಿ ಅರಣ್ಯ ಬೆಳೆಸಿದ್ದಾರೆ.

ಜೆಪಿ ನಗರದ 9ನೇ ಹಂತದಲ್ಲಿರುವ ರಾಯಲ್ ಪಾರ್ಕ್ ರೆಸಿಡೆನ್ಸಿ ಬಡಾವಣೆಯ ಅರ್ಧ ಎಕರೆ ಪ್ರದೇಶದಲ್ಲಿ ನೆಟ್ಟ ಸಾವಿರದ ಮುನ್ನೂರು ಗಿಡಗಳ ಮಿಯಾವಾಕಿ ಮಾದರಿ ಅರಣ್ಯವನ್ನು ಜೂನ್ 23, 2024ರಂದು ಲೋಕಾರ್ಪಣೆ ಮಾಡಲಾಗಿದೆ.

ಮಿಯಾವಾಕಿ ಅರಣ್ಯದ ರೂವಾರಿ ಮತ್ತು ಬಡಾವಣೆಯ ನಿವಾಸಿ ಚಂದ್ರಶೇಖರ್ ಕಾಕಲ್ ಮಾತನಾಡಿ, “ರಾಯಲ್ ಪಾರ್ಕ್ ಬಡಾವಣೆಯಲ್ಲಿ ನಾಲ್ಕು ವರ್ಷಗಳಲ್ಲಿ ಸುಮಾರು 4 ಸಾವಿರ ಸಸಿಗಳನ್ನು ಮಿಯಾವಾಕಿ ಮಾದರಿ ಕಿರು ಅರಣ್ಯದಲ್ಲಿ ನೆಟ್ಟು ಪೋಷಿಸುತ್ತಾ ಬಂದಿದ್ದೇವೆ. ಆ ಗಿಡಗಳು ಈಗ 20 ಅಡಿಗಿಂತಲೂ ಹೆಚ್ಚು ಎತ್ತರಕ್ಕೆ ಹಾಗೂ ಒತ್ತೊತ್ತಾಗಿ ಬೆಳೆದು ಕಿರು ಅರಣ್ಯ ಆರಣ್ಯವೇ ಆಗಿದೆ. ಬಡಾವಣೆಯಲ್ಲಿ ಒಟ್ಟು ನಾಲ್ಕು ಮಿಯಾವಾಕಿ ಅರಣ್ಯಗಳನ್ನು ಅಭಿವೃದ್ದಿಪಡಿಸಿದ್ದೇವೆ” ಎಂದಿದ್ದಾರೆ.

ಮೈಸೂರು ರಸ್ತೆಯ ಹೆಜ್ಜಾಲದಲ್ಲಿ ಇಂಡಿಯನ್ ರೈಲ್ವೆ ಇನ್‌ಸ್ಟಿಟ್ಯೂಟ್ ಆಫ್ ಡಿಸಾಸ್ಟರ್ ಮ್ಯಾನೇಜ್‌ಮೆಂಟ್‌ನ 4.75 ಎಕರೆ ಜಾಗದಲ್ಲಿ ಬೆಂಗಳೂರಿನ ಅತೀ ದೊಡ್ಡ ಮಿಯಾವಾಕಿ ಅರಣ್ಯವನ್ನು ಅಭಿವೃದ್ಧಿಪಡಿಸಲಾಗಿದೆ. ಇಲ್ಲಿ ಸುಮಾರು 60 ಬಗೆಯ ಸಸಿಗಳನ್ನು ನೆಟ್ಟು ಬೆಳೆಸಲಾಗಿದೆ. ಸೇ ಟ್ರೀಸ್ (Say Trees)ಎಂಬ ಸ್ವಯಂ ಸೇವಾ ಸಂಸ್ಥೆ (ಎನ್‌ಜಿಒ) ನವೆಂಬರ್ 2018ರಿಂದ ಜನವರಿ 2023ರ ನಡುವೆ ಇಲ್ಲಿ ಗಿಡಗಳನ್ನು ನೆಟ್ಟು ಪೋಷಣೆ ಮಾಡಿದೆ.

“ಸೇ ಟ್ರೀಸ್ ನಗರದ ಬಾಣಸವಾಡಿ, ಕೆಂಗೇರಿ, ಕೆ.ಆರ್ ಪುರ, ಜಿಗಣಿ ಸೇರಿದಂತೆ ಹಲವು ಕಡೆಗಳಲ್ಲಿ ಮಿಯಾವಾಕಿ ಅರಣ್ಯಗಳನ್ನು ಅಭಿವೃದ್ಧಿಪಡಿಸಿದೆ. ಬೇರೆ ರಾಜ್ಯಗಳಲ್ಲೂ ಇದೇ ಮಾದರಿಯ ಅರಣ್ಯ ಬೆಳೆಸಿದ್ದೇವೆ. ಮೊದಲ ಮಿಯಾವಾಕಿ ಅರಣ್ಯವನ್ನು ಬಿಡದಿ ಕೈಗಾರಿಕಾ ಪ್ರದೇಶದಲ್ಲಿ 2010ರಲ್ಲಿ ಅಭಿವೃದ್ಧಿಪಡಿಸಿದ್ದೇವೆ” ಎಂದು ಸಂಸ್ಥೆಯ ಮಿಯಾವಾಕಿ ವಿಭಾಗದ ಮುಖ್ಯಸ್ಥ ಶಂಶಾಕ್ ಶರ್ಮಾ ಮಾಹಿತಿ ನೀಡಿದ್ದಾರೆ.

ಅನೇಕಲ್ ಸಮೀಪದ ಬಿಂಗಿಪುರ ಗ್ರಾಮದಲ್ಲಿ ಖಾಲಿ ಜಾಗವೊಂದು 25 ವರ್ಷಗಳಿಂದ ಬೆಂಗಳೂರು ನಗರದ ತ್ಯಾಜ್ಯ ಸುರಿಯುವ ಪ್ರದೇಶವಾಗಿತ್ತು. 2022ರಲ್ಲಿ ಅಲ್ಲಿ ಮಿಯಾವಾಕಿ ಅರಣ್ಯ ಅಭಿವೃದ್ಧಿಪಡಿಸಲು ಕೆರೆಗಳ ಕಾರ್ಯಕರ್ತ ಆನಂದ್ ಮಲ್ಲಿಗಾವಡ್ ನೇತೃತ್ವದಲ್ಲಿ ಬಿಬಿಎಂಪಿ ಮತ್ತು ಸೇ ಟ್ರೀಸ್ ಮುಂದಾಗಿತ್ತು. ಆ ಅರಣ್ಯ ಪ್ರಸ್ತುತ ಯಾವ ಹಂತದಲ್ಲಿದೆ ಎಂಬ ಖಚಿತ ಮಾಹಿತಿ ಲಭ್ಯವಾಗಿಲ್ಲ.

ಸೇ ಟ್ರೀಸ್ ಸಂಸ್ಥೆಯ ವೆಬ್‌ಸೈಟ್‌ನಲ್ಲಿರುವ ಮಾಹಿತಿ ಪ್ರಕಾರ, ಅದು ಬೆಂಗಳೂರು ಸೇರಿದಂತೆ ಕರ್ನಾಟಕ ಮತ್ತು ಇತರ ರಾಜ್ಯಗಳಲ್ಲಿ ಇದುವರೆಗೆ 12 ಮಿಯಾವಾಕಿ ಅರಣ್ಯಗಳ ಮೂಲಕ ಒಟ್ಟು 34,515 ಸಸಿಗಳನ್ನು ಇದುವರೆಗೆ ನೆಟ್ಟು ಬೆಳೆಸಿದೆ.

ಸೇ ಟ್ರೀಸ್ ಮಾತ್ರವಲ್ಲದೆ ಇನ್ನೂ ಅನೇಕ ಸಂಘಸಂಸ್ಥೆಗಳು ಕೂಡ ನಗರದಲ್ಲಿ ಮಿಯಾವಾಕಿ ಅರಣ್ಯ ಅಭಿವೃದ್ಧಿಪಡಿಸಿದೆ. ಆದರೆ, ಪ್ರಮುಖವಾಗಿ ಸೇ ಟ್ರೀಸ್ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.

ಸರ್ಕಾರದ ಮಟ್ಟದಲ್ಲಿ ಬಿಬಿಎಂಪಿ ತೋಟಗಾರಿಕೆ ವಿಭಾಗದ ಸ್ವಾಧೀನದಲ್ಲಿರುವ ಒಂಬತ್ತು ಉದ್ಯಾನವನಗಳನ್ನು ಅರಣ್ಯ ವಿಭಾಗದ ವತಿಯಿಂದ ವೃಕ್ಷವನಗಳನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಬಿಬಿಎಂಪಿ ಈಗ ಒಂದು ಮಿಯಾವಾಕಿ ಅರಣ್ಯವನ್ನು ನಿರ್ಮಿಸಿದ್ದು, ಇನ್ನೂ ಎರಡು ಅರಣ್ಯಗಳನ್ನು ನಿರ್ಮಿಸಲಾಗುವುದು ಎಂದು ಬಿಬಿಎಂಪಿ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸ್ವಾಮಿ ಕಳೆದ ಆಗಸ್ಟ್‌ನಲ್ಲಿ ಹೇಳಿದ್ದರು. ವರದಿಗಳ ಪ್ರಕಾರ, ಬೊಮ್ಮನಹಳ್ಳಿ ಹಾಗೂ ಆವಲಹಳ್ಳಿ ಮತ್ತು ಯಲಹಂಕದಲ್ಲಿ ಮಿಯಾವಾಕಿ ಅರಣ್ಯಗಳ ಅಭಿವೃದ್ಧಿಗೆ ಬಿಬಿಎಂಪಿ ಮುಂದಾಗಿದೆ. ಇದಕ್ಕಾಗಿ ತಲಾ 2 ಕೋಟಿ ರೂಪಾಯಿಯಂತೆ 4 ಕೋಟಿ ರೂ. ಮೀಸಲಿಟ್ಟಿದೆ.

ಮಂಗಳೂರು ನಗರದ ಮೊಟ್ಟಮೊದಲ ಮಿಯಾವಾಕಿ ಅರಣ್ಯವನ್ನು ರಾಮಕೃಷ್ಣ ಮಿಷನ್ ಅಭಿವೃದ್ಧಿಪಡಿಸಿತ್ತು. ಹಲವು ಪರಿಸರ ಸಂಘಟನೆಗಳು ಮತ್ತು ಕಾರ್ಯಕರ್ತರು ಕೂಡ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ರಾಮಕೃಷ್ಣ ಮಿಷನ್ ’ವಿವೇಕಾನಂದ ವೃಕ್ಷಾಲಯ’ ಎಂಬ ಹೆಸರಿನಲ್ಲಿ ವಿಶೇಷ ಅಭಿಯಾನ ಹಮ್ಮಿಕೊಂಡಿದ್ದು, ಅದರಡಿ ಮೊದಲ ಮಿಯಾವಾಕಿ ಅರಣ್ಯವನ್ನು 2019ರಲ್ಲಿ ಮಂಗಳೂರು ನಗರದ ಕೊಟ್ಟಾರದಲ್ಲಿ ಅಭಿವೃದ್ಧಿಪಡಿಸಿದೆ. ಅಲ್ಲಿ 5 ಸೆಂಟ್ಸ್ ಜಾಗದಲ್ಲಿ ಸುಮಾರು 250 ಗಿಡಗಳನ್ನು ಬೆಳೆಸಿದೆ. ಬಳಿಕ ನಗರದ ಮಂಗಳಾದೇವಿಯಲ್ಲಿರುವ ಮಠದ ಆವರಣದಲ್ಲಿ ಎರಡು ಕಡೆ, ಕೊಟ್ಟಾರ, ಪಚ್ಚನಾಡಿಯಲ್ಲಿ ಮತ್ತು ಉರ್ವದ ಖಾಸಗಿ ಆಸ್ಪತ್ರೆಯ ಜಾಗವೊಂದರಲ್ಲಿ ಮಿಯಾವಾಕಿ ಅರಣ್ಯಗಳನ್ನು ಬೆಳೆಸಿದೆ. ಒಟ್ಟು 100 ಅರಣ್ಯಗಳ ಮೂಲಕ 1 ಲಕ್ಷ ಗಿಡಗಳನ್ನು ಬೆಳೆಸುವ ಗುರಿಯನ್ನು ರಾಮಕೃಷ್ಣ ಮಿಷನ್ ಹೊಂದಿದೆ.

ಪರಿಸರ ಕಾರ್ಯಕರ್ತ ಜೀತ್ ಮಿಲನ್ ರೋಶ್ ಅವರು ಮಂಗಳೂರು ಮಹಾನಗರ ಪಾಲಿಕೆಯ ಪ್ರೋತ್ಸಾಹ, ಬಯೋಕಾನ್ ಮತ್ತು ಸಿಂಜಿನ್ ಇಂಟರ್‌ನ್ಯಾಷನಲ್ ಲಿಮಿಟೆಡ್ ಸಂಸ್ಥೆಗಳ ಸಿಎಸ್‌ಆರ್ ನಿಧಿಯ ಬೆಂಬಲದೊಂದಿಗೆ ತಮ್ಮ ವನ ಚಾರಿಟೇಬಲ್ ಟ್ರಸ್ಟ್ ಮೂಲಕ ನಗರದ ಪದುವಾ ಜಂಕ್ಷನ್ ಬಳಿ 2022ರಲ್ಲಿ ಮಿಯಾವಾಕಿ ಅರಣ್ಯವನ್ನು ಅಭಿವೃದ್ಧಿಪಡಿಸಿದ್ದಾರೆ. ಈಗ ಅಲ್ಲಿ 1000 ದಷ್ಟು ಗಿಡ, ಮರಗಳು ದಟ್ಟವಾಗಿ ಬೆಳೆದುನಿಂತಿವೆ.

ಆದರೆ, ಈ ಅರಣ್ಯವನ್ನು ತೆರವುಗೊಳಿಸುವಂತೆ ಜಾಗದ ಮಾಲೀಕತ್ವ ಹೊಂದಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶಿಸಿತ್ತು. ಇದರ ವಿರುದ್ಧ ಅರಣ್ಯ ಬೆಳೆಸಿದ ಸಂಸ್ಥೆಗಳು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದವು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಕಳೆದ ಅಕ್ಟೋಬರ್ 5ರಂದು ಹೆದ್ದಾರಿ ಪ್ರಾಧಿಕಾರದ ಆದೇಶಕ್ಕೆ ತಡೆ ನೀಡಿದೆ.

“ಅರಣ್ಯ ನಾಶವಾಗಿದೆ ಎಂದು ನಾವು ಈ ಅರಣ್ಯಗಳನ್ನು ಮರುಕಳಿಸುವ ಕ್ರಮಕ್ಕೆ ಮುಂದಾದರೆ, ಅದನ್ನೂ ತೆರವುಗೊಳಿಸಲು ಹೇಳುತ್ತಿದ್ದಾರೆ. ನಾವು ಶ್ರಮಪಟ್ಟು ನೆಟ್ಟು ಬೆಳೆಸಿದ ಗಿಡಗಳನ್ನು ತೆರವುಗೊಳಿಸಲು ಒಪ್ಪಿಗೆ ನೀಡುವುದು, ನಮ್ಮ ಮಕ್ಕಳನ್ನು ಕೊಲ್ಲಲು ಅವಕಾಶ ಕೊಟ್ಟಂತೆ” ಎಂದು ಜೀತ್ ಮಿಲನ್ ಹೇಳಿದ್ದಾರೆ.

ಮೈಸೂರು ಮಹಾನಗರ ಪಾಲಿಕೆ ಟೋಯೋಟೊ ಕಿರ್ಲೋಸ್ಕರ್ ಕಂಪನಿ ಜೊತೆಗೆ ಒಡಂಬಡಿಕೆ ಮಾಡಿಕೊಂಡು ನಗರದ ವಿಜಯನಗರ 2ನೇ ಹಂತ, ಹೆಬ್ಬಾಳ, ರಾಜೀವ್ ನಗರ, ಜೆಪಿನಗರ, ಕನಕದಾಸ ನಗರ, ಸಾತಗಳ್ಳಿ ಸೇರಿದಂತೆ 30 ಕಡೆಗಳಲ್ಲಿ ಮಿಯಾವಾಕಿ ಮಾದರಿಯ ಅರಣ್ಯಗಳನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ. ಪ್ರಾಥಮಿಕ ಹಂತದಲ್ಲಿ ಸುಮಾರು 40 ಸಾವಿರ ಗಿಡಗಳನ್ನು ನೆಡಲು ಮೈಸೂರು ಮಹಾನಗರ ಪಾಲಿಕೆ ಯೋಜಿಸಿದೆ.

ಕಳೆದ ಆಗಸ್ಟ್ 31ರಂದು ವಿಜಯನಗರ 3ನೇ ಹಂತದ ಹಿನಕಲ್ ರಸ್ತೆಯ ಉದ್ಯಾನವನದಲ್ಲಿ 1.2 ಎಕರೆ ವಿಸ್ತೀರ್ಣದ ಮಿಯಾವಾಕಿ ಅರಣ್ಯ ಯೋಜನೆಯನ್ನು ಶಾಸಕ ಜಿ.ಟಿ ದೇವೇಗೌಡ ಉದ್ಘಾಟಿಸಿದ್ದಾರೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ಧಾರವಾಡದ ಗಾಂಧಿ ನಗರದ ಶಾಂಭವಿ ಕಾಲೋನಿ, ರಾಘವೇಂದ್ರ ಕಾಲೋನಿ, ದೊಡ್ಡನಾಯಕನಕೊಪ್ಪ ಹಾಗೂ ಹುಬ್ಬಳ್ಳಿಯಲ್ಲಿ ತೋಳನಕೆರೆ ಪ್ರದೇಶಗಳಲ್ಲಿ ಮಿಯಾವಾಕಿ ಅರಣ್ಯ ಅಭಿವೃದ್ಧಿಯಾಗುತ್ತಿದೆ. ಒಟ್ಟಿನಲ್ಲಿ ಕರ್ನಾಟಕದ ವಿವಿಧ ನಗರಗಳಲ್ಲಿ ಮಿಯಾವಾಕಿ ಪ್ರಯೋಗ ನಡೆದಿದೆ.

ಮಿಯಾವಾಕಿ ಅರಣ್ಯ ಬೆಳೆಸುವುದು ಹೇಗೆ?

ಮಿಯಾವಾಕಿ ಅರಣ್ಯವನ್ನು ವೈಜ್ಞಾನಿಕವಾಗಿ ಹೇಗೆ ಅಭಿವೃದ್ಧಿಪಡಿಸಬೇಕು ಎಂದು ಅದರ ಸಂಶೋಧಕ ಅಕಿರಾ ಮಿಯಾವಾಕಿ ಸ್ಪಷ್ಟವಾಗಿ ಹೇಳಿಕೊಟ್ಟಿದ್ದಾರೆ. ಅವರ ಮಾರ್ಗಸೂಚಿಗಳಲ್ಲಿ ಪ್ರಾದೇಶಿಕತೆಗೆ ತಕ್ಕಂತೆ ಕೊಂಚ ಬದಲಾವಣೆ ಮಾಡಿಕೊಂಡು ಅರಣ್ಯ ರೂಪಿಸಬಹುದು.

ಈಗಾಗಲೇ ಹೇಳಿದಂತೆ, ಮಣ್ಣು ಸಿದ್ಧಪಡಿಸುವುದು, ಸ್ಥಳೀಯ ಸಸ್ಯಗಳ ಆಯ್ಕೆ, ಅವುಗಳನ್ನು ನೆಡುವುದು ಮತ್ತು ಕನಿಷ್ಠ ಮೂರು ವರ್ಷ ಪೋಷಣೆ ಮಾಡುವುದು ಮಿಯಾವಾಕಿ ನಗರದ ಅರಣ್ಯ ಪದ್ಧತಿಯ ಹಂತಗಳು. ಪರಿಸರ ತಜ್ಞರ ಪ್ರಕಾರ, ಮೊದಲ ಹಂತವಾಗಿ ಮಣ್ಣು ಸಿದ್ಧಪಡಿಸುವುದಕ್ಕೆ ಶೇ.80ರಷ್ಟು ಶ್ರಮ ಅಥವಾ ಹಣವನ್ನು ವ್ಯಯಿಸಬೇಕಾಗುತ್ತದೆ.

ಅಕಿರಾ ಮಿಯಾವಾಕಿಯ ಮಾರ್ಗಸೂಚಿಯ ಪ್ರಕಾರ, ಮಿಯಾವಾಕಿ ಅರಣ್ಯ ಬೆಳೆಸಲು ಮೊದಲು ಜಾಗ ಆಯ್ಕೆ ಮಾಡಿಕೊಂಡು, ಸಂಪೂರ್ಣ ಜಾಗದಲ್ಲಿ ಸುಮಾರು 4 ಅಡಿಯಷ್ಟು ಮಣ್ಣು ತೆಗೆಯಬೇಕು. ಬಳಿಕ ಗೊಬ್ಬರವನ್ನು ಬೆರೆಸಿದ ಫಲವತ್ತಾದ (ಉದಾ: ಕೆಂಪು ಮಣ್ಣು) ಮಣ್ಣನ್ನು ಅಲ್ಲಿಗೆ ತುಂಬಬೇಕು. ಬಳಿಕ ಅದರಲ್ಲಿ 2-3 ಅಡಿಯ ಗುಂಡಿಗಳನ್ನು ತೋಡಿ ಸಸಿಗಳನ್ನು ನೆಡಬೇಕು. ಸಸಿಗಳನ್ನು ನೆಡುವಾಗ ಅವುಗಳ ನಡುವಿನ ಅಂತರವನ್ನು ಗಮನಿಸಬೇಕು. ಒಂದು ಸಸಿ ಮತ್ತೊಂದು ಸಸಿಯ ಬೆಳವಣಿಗೆ ಅಡ್ಡಿಯಾಗಬಾರದು. ಒಂದು ಸಸಿಯ ಪಕ್ಕದಲ್ಲಿ ಮತ್ತೊಂದು ಯಾವ ಸಸಿ ನೆಡಬೇಕು ಎಂಬುದನ್ನು ವೈಜ್ಞಾನಿಕವಾಗಿ ನಿರ್ಧರಿಸಬೇಕು. ಸಸಿಗಳನ್ನು ನೆಟ್ಟ ಬಳಿಕ ಅದಕ್ಕೆ ನೀರಾವರಿ ವ್ಯವಸ್ಥೆ ಮಾಡಬೇಕು. ಹನಿ ನೀರಾವರಿ ಸೂಕ್ತ ವಿಧಾನವಾಗಿದೆ. ಇತರ ವಿಧಾನಗಳನ್ನೂ ಅಳವಡಿಸಿಕೊಳ್ಳಬಹುದು. ಬಳಿಕ ಕನಿಷ್ಠ 3 ವರ್ಷಗಳವರೆಗೆ ಗೊಬ್ಬರ, ನೀರು ಹಾಕಿ ಸಸಿಗಳ ಪೋಷಣೆ ಮಾಡಬೇಕು. ಒಂದೆರಡು ವರ್ಷಗಳಲ್ಲಿ ಮಿಯಾವಾಕಿ ಅರಣ್ಯದ ಪರಿಣಾಮ ನಮಗೆ ಗೊತ್ತಾಗುತ್ತದೆ.

ಮಿಯಾವಾಕಿಗೆ ಸಸಿಗಳನ್ನು ಆಯ್ಕೆ ಮಾಡುವಾಗ, ಅದು ಆಯಾ ಪ್ರದೇಶದ ಸ್ಥಳೀಯ ಸಸಿಗಳಾಗಿರಬೇಕು ಎನ್ನುವುದು ಒಂದು ರೀತಿಯ ಕಡ್ಡಾಯ ನಿಯಮ. ಉದಾಹರಣೆಗೆ ಮಂಗಳೂರಿನಲ್ಲಿ ಮಿಯಾವಾಕಿ ಅರಣ್ಯ ಮಾಡುವುದಾದರೆ, ಶ್ರೀಗಂಧ, ರೆಂಜೆ, ಚಂಪಕ, ಚಿಕ್ಕು, ಅಶೋಕ ಗಿಡ, ಹೊಳ ದಾಸವಾಳ, ಮಂದಾರ ಪುಷ್ಪ, ಹೊಂಗೆ, ಪುನರ್‌ಪುಳಿ, ಪಪ್ಪಾಯ ಇತ್ಯಾದಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

ಬೆಂಗಳೂರು, ಮೈಸೂರಿನಲ್ಲಿ ಮಾಡುವುದಾದರೆ, ಹೆಬ್ಬೇವು, ಬನಜಿ, ಮಹಾಗನಿ, ಹಲಸು, ಹೊಂಗೆ, ಬಾಗೆ, ಬೀಟೆ, ಹತ್ತಿ, ಬಿಲ್ಪತ್ರೆ, ಬೇವು, ಸೀತಾಫಲ, ಮಾವು, ನೆಲ್ಲಿ, ನೆರಳೆ, ಬಾದಾಮಿ, ಬಸವನಪಾದ, ಅರಳಿ, ಆಲ, ತಾರೆ, ಕುಂಕುಮ, ಸಿಲ್ವರ್ ಈ ರೀತಿಯ ಗಿಡಗಳನ್ನು ನೆಡಬಹುದು.

ಗಿಡಗಳನ್ನು ಆಯ್ದುಕೊಳ್ಳುವಾಗ ಸಣ್ಣ ಸಸಿ, ವೃಕ್ಷ, ಬೃಹತ್ ವೃಕ್ಷ ಹೀಗೆ ಭವಿಷ್ಯದ ಬೆಳವಣಿಗೆ ಗಮನದಲ್ಲಿಟ್ಟುಕೊಳ್ಳಲಾಗುತ್ತದೆ. ಹುಲ್ಲಿನಿಂದ ಹಿಡಿದು ಬೃಹತ್ ಮರಗಳವರೆಗೆ ಎಲ್ಲವನ್ನೂ ಈ ಆಯ್ಕೆ ಒಳಗೊಂಡಿರುತ್ತದೆ.

ವಿದೇಶಗಳಲ್ಲಿ ಮಿಯಾವಾಕಿಗೆ ಮಣ್ಣು ಸಿದ್ಧಪಡಿಸುವಾಗ, ಹುಲ್ಲಿನ ಜೊತೆ ಮಣ್ಣು ಬೆರೆಸುತ್ತಾರೆ. ಇದನ್ನು ಬಯೋಮಾಸ್ ಎನ್ನಲಾಗುತ್ತದೆ. ಈ ವಿಧಾನಕ್ಕೆ ಖರ್ಚು ಜಾಸ್ತಿಯಾಗುತ್ತದೆ. ಆದರೆ, ಭಾರತದಲ್ಲಿ 4 ಅಡಿಯಷ್ಟು ಸಂಪೂರ್ಣ ಮಣ್ಣು ತೆರವುಗೊಳಿಸಿ ಹೊಸ ಮಣ್ಣು ಸುರಿಯುವ ಅಗತ್ಯವಿಲ್ಲ. ಇಲ್ಲಿನ ಮಣ್ಣು ಫಲವತ್ತಾಗಿರುವುದರಿಂದ ನೇರವಾಗಿ 2-3 ಅಡಿಯ ಗುಂಡಿ ತೋಡಿ ಅಲ್ಲಿನ ಮಣ್ಣಿಗೆ ಗೊಬ್ಬರ ಮಾತ್ರ ಬೆರೆಸಿ ಸಸಿಗಳನ್ನು ನೆಡಬಹುದು ಎನ್ನುತ್ತಾರೆ ಮಂಗಳೂರಿನ ರಾಮಕೃಷ್ಣ ಮಿಷನ್ ಅಧೀನದಲ್ಲಿ ಮಿಯಾವಾಕಿ ಅರಣ್ಯ ಅಭಿವೃದ್ಧಿಪಡಿಸುವ ತಂಡದ ಉಸ್ತುವಾರಿ ರಂಜನ್ ಬೆಲ್ಲರ್ಪಾಡಿ.

ರಂಜನ್ ಬೆಲ್ಲರ್ಪಾಡಿ

ಮಿಯಾವಾಕಿ ಅರಣ್ಯ ಅಭಿವದ್ಧಿಪಡಿಸುವಾಗ ಪ್ರಕೃತಿಗೆ ಏನಾದರು ಕೊಡುಗೆ ಕೊಡಬೇಕು ಎಂಬ ಉದ್ದೇಶ ಮೊದಲನೆಯದಾದರೆ, ನಗರ ಪ್ರದೇಶದಲ್ಲಿ ಹಸಿರು ಹೊದಿಕೆಯನ್ನು ಮರಳಿ ರೂಪಿಸುವುದು ಎರಡನೇ ಉದ್ದೇಶವಾಗಿದೆ. ಇದನ್ನು ಹೊರತುಪಡಿಸಿ ವಾಣಿಜ್ಯ ಉದ್ದೇಶದಿಂದಲೂ ಮಿಯಾವಾಕಿ ಬೆಳೆಸಬಹುದು. ಉದಾಹರಣೆಗೆ, ಬೆಲೆಬಾಳುವ ಶ್ರೀಗಂಧ, ತೇಗ, ಬೀಟೆಯಂತಹ ಸಸಿಗಳನ್ನು ನೆಟ್ಟು ಸುಮಾರು 25 ವರ್ಷದ ಬಳಿಕ ಅವುಗಳನ್ನು ಕಡಿದು ಮಾರಾಟ ಮಾಡಿ ಲಾಭ ಗಳಿಸಬಹುದು.

ಇಲ್ಲಿ, ಪರಿಸರ ಉಳಿಸಲು ಮುಂದಾದವರು ಮರಗಳನ್ನು ಕಡಿಯುವುದೇ? ಎಂಬ ಪ್ರಶ್ನೆ ನಿಮಗೆ ಮೂಡಬಹುದು. ಅರಣ್ಯ ನಾಶ ಮಾಡಿ ಮತ್ತೆ ಮರಗಳನ್ನು ಬೆಳೆಸದಿರುವುದನ್ನು ವಿರೋಧಿಸಬೇಕು. ಆದರೆ, ಇಲ್ಲಿ ಒಮ್ಮೆ ಮರಗಳನ್ನು ಕಡಿದರೆ ಮತ್ತೆ ಅಲ್ಲಿಯೇ ಹೊಸದಾಗಿ ಸಸಿಗಳನ್ನು ನೆಟ್ಟು ಬೆಳೆಸುವ ಉದ್ದೇಶವಿರುತ್ತದೆ. ಇದೊಂದು ರೀತಿಯಲ್ಲಿ ಸುಸ್ಥಿರ ಅಭಿವೃದ್ಧಿ ಎಂದರೂ ತಪ್ಪಾಗಲಾರದು.

“ಮಿಯಾವಾಕಿ ಅರಣ್ಯ ರಕ್ಷಣೆಗೆ ತೆಗೆದುಕೊಂಡ ದಿಟ್ಟ ನಿರ್ಧಾರ. ಸಹಜ ನಿಸರ್ಗದಲ್ಲಿ ನೂರು ವರ್ಷಗಳಲ್ಲಿ ಬೆಳೆಯುವ ಅರಣ್ಯವನ್ನು ನಮ್ಮ ಯತ್ನದಿಂದ ಹತ್ತೇ ವರ್ಷಗಳಲ್ಲಿ ನಿರ್ಮಿಸಬಹುದು. ಏನನ್ನೂ ಬೆಳೆಸಲಾಗದಂತಹ ದಟ್ಟ ದುಸ್ಥಿತಿಯ ತಾಣಗಳಲ್ಲೂ ಇಂತಹ ಅರಣ್ಯವನ್ನು ಬೆಳೆಸಬಹುದು” ಎನ್ನುತ್ತಾರೆ ಪರಿಸರ ತಜ್ಞ ನಾಗೇಶ್ ಹೆಗಡೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...