ಉತ್ತರ ಕರ್ನಾಟಕವು ಪ್ರತಿಯೊಂದು ವಲಯದಲ್ಲೂ ಅನ್ಯಾಯ, ತಾರತಮ್ಯ ಮತ್ತು ನಿರ್ಲಕ್ಷ್ಯವನ್ನು ಎದುರಿಸುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಶಾಸಕ ಭರಮಗೌಡ (ರಾಜು) ಕಾಗೆ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಈ ಪ್ರದೇಶದ 15 ಜಿಲ್ಲೆಗಳಿಗೆ ಪ್ರತ್ಯೇಕ ರಾಜ್ಯದ ಸ್ಥಾನಮಾನ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಉತ್ತರ ಕರ್ನಾಟಕದ ಜನರ ದಶಕಗಳಷ್ಟು ಹಳೆಯದಾದ ಬೇಡಿಕೆಯನ್ನು ಮತ್ತೆ ಮುನ್ನಲೆಗೆ ತಂದಿರುವ ಕಾಗವಾಡ ಶಾಸಕ ರಾಜು ಕಾಗೆ, ಪ್ರತ್ಯೇಕ ರಾಜ್ಯಕ್ಕಾಗಿ ಉತ್ತರ ಕರ್ನಾಟಕ ಹೋರಾಟ ಸಮಿತಿ ಪ್ರಾರಂಭಿಸಿದ ಸಹಿ ಸಂಗ್ರಹ ಅಭಿಯಾನವನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ.
VIDEO | Karnataka: Congress MLA Bharamgouda (Raju) Kage has written to President Droupadi Murmu and Prime Minister Narendra Modi, demanding separate statehood for 15 districts of North Karnataka, citing alleged injustice, discrimination, and neglect in various sectors.
He said,… pic.twitter.com/3iiGRXP8eH
— Press Trust of India (@PTI_News) November 12, 2025
“ಆಡಳಿತಾತ್ಮಕ ಅನುಕೂಲತೆ ಮತ್ತು ಸಮಗ್ರ ಅಭಿವೃದ್ಧಿಗಾಗಿ ಉತ್ತರ ಕರ್ನಾಟಕದ 15 ಜಿಲ್ಲೆಗಳಾದ ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಕೊಪ್ಪಳ, ರಾಯಚೂರು, ಉತ್ತರ ಕನ್ನಡ, ಹಾವೇರಿ, ವಿಜಯನಗರ, ಬಳ್ಳಾರಿ ಮತ್ತು ದಾವಣಗೆರೆಗಳನ್ನು ಒಳಗೊಂಡ ಹೊಸ ರಾಜ್ಯವನ್ನು ರಚಿಸಬೇಕೆಂಬ ನನ್ನ ಬಲವಾದ ಬೇಡಿಕೆಯನ್ನು ವ್ಯಕ್ತಪಡಿಸಲು ನಾನು ಬಯಸುತ್ತೇನೆ” ಎಂದು ರಾಜು ಕಾಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ಮೋದಿ ಮತ್ತು ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ನವೆಂಬರ್ 4ರಂದು ರಾಜು ಕಾಗೆ ಬರೆದ ಪತ್ರವನ್ನು ಅವರ ಕಚೇರಿ ಬುಧವಾರ (ನ.12) ಬಿಡುಗಡೆ ಮಾಡಿದೆ.

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾಗಿರುವ ಕಾಗೆ, ಈ ಹಿಂದೆ ರಾಜ್ಯ ಸರ್ಕಾರವನ್ನು ಸಾರ್ವಜನಿಕವಾಗಿ ಟೀಕಿಸಿದ್ದರು. ಅಭಿವೃದ್ಧಿ ಮತ್ತು ಹಣದ ಕೊರತೆಯ ಬಗ್ಗೆ ದೂರಿ ವಿಧಾನಸಭೆಯ ಸದಸ್ಯತ್ವವನ್ನು ತ್ಯಜಿಸುವುದಾಗಿ ಬೆದರಿಕೆ ಹಾಕಿದ್ದರು.
ಕಳೆದ ಸೆಪ್ಟೆಂಬರ್‌ನಲ್ಲಿ, ಉತ್ತರ ಕರ್ನಾಟಕ ಪ್ರದೇಶಕ್ಕೆ ಕಿತ್ತೂರು ಕರ್ನಾಟಕ ಎಂಬ ಪ್ರತ್ಯೇಕ ರಾಜ್ಯ ಸ್ಥಾನವನ್ನು ಕೋರುವುದರಲ್ಲಿ ಯಾವುದೇ ತಪ್ಪಿಲ್ಲ, ಏಕೆಂದರೆ ಕಿತ್ತೂರು ಕರ್ನಾಟಕ ಪ್ರದೇಶದ ಕೆಲವು ಸ್ಥಳಗಳನ್ನು ಹೊರತುಪಡಿಸಿ, ಅದು ಕಲ್ಯಾಣ ಕರ್ನಾಟಕ ಪ್ರದೇಶದಂತೆ ಅಭಿವೃದ್ಧಿ ಹೊಂದಿಲ್ಲ ಎಂದು ರಾಜು ಕಾಗೆ ಹೇಳಿದ್ದರು. ಕಲ್ಯಾಣ ಕರ್ನಾಟಕಕ್ಕೆ ಭಾರತದ ಸಂವಿಧಾನದ 371(ಜೆ) ವಿಧಿಯಡಿ ವಿಶೇಷ ಸ್ಥಾನಮಾನವಿದೆ.
ಪ್ರತ್ಯೇಕ ರಾಜ್ಯ ರಚನೆಯು ಮತ್ತೊಂದು ಹೆಮ್ಮೆಯ ಕನ್ನಡ ಮಾತನಾಡುವ ರಾಜ್ಯಕ್ಕೆ ಜನ್ಮ ನೀಡುತ್ತದೆ. ಇದು ನಮಗೆ ಬಹಳ ಹೆಮ್ಮೆಯ ವಿಷಯವಾಗಿದೆ. ಉತ್ತರ ಕರ್ನಾಟಕವು ಎಲ್ಲಾ ರೀತಿಯ ಸಂಪನ್ಮೂಲಗಳಿಂದ ಸಮೃದ್ಧವಾಗಿರುವ ಪ್ರದೇಶವಾಗಿದ್ದು, ಕನ್ನಡ ಭಾಷೆಯ ಸಂರಕ್ಷಣೆ ಮತ್ತು ಕರ್ನಾಟಕದ ಏಕೀಕರಣಕ್ಕೆ ಮಹತ್ವದ ಕೊಡುಗೆ ನೀಡಿದೆ ಎಂದು ರಾಜು ಕಾಗೆ ತಮ್ಮ ಪತ್ರದಲ್ಲಿ ಹೇಳಿದ್ದಾರೆ.
ಉತ್ತರ ಕರ್ನಾಟಕ ಹೋರಾಟ ಸಮಿತಿಯ ಪ್ರತಿನಿಧಿಗಳ ಸಹಿ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ ಕಾಗೆ, ಒಂದು ಕೋಟಿಗೂ ಹೆಚ್ಚು ಜನರು ಈಗಾಗಲೇ ಲಿಖಿತ ಒಪ್ಪಿಗೆ ನೀಡಿ ಬೇಡಿಕೆಯ ಪರವಾಗಿ ಸಹಿ ಹಾಕಿದ್ದಾರೆ ಎಂದು ಹೇಳಿದ್ದಾರೆ.
ಉತ್ತರ ಕರ್ನಾಟಕ ಪ್ರದೇಶದ ಎಲ್ಲಾ ವರ್ಗಗಳ ಜನರು ತಮ್ಮ ಒಟ್ಟಾರೆ ಮತ್ತು ಸಮಗ್ರ ಅಭಿವೃದ್ಧಿಗಾಗಿ ಪ್ರತ್ಯೇಕ ರಾಜ್ಯಕ್ಕಾಗಿ ಒತ್ತಾಯಿಸುತ್ತಿದ್ದಾರೆ. ಆದ್ದರಿಂದ, ದಯವಿಟ್ಟು ನಮ್ಮ ಮನವಿಯನ್ನು ಪರಿಗಣಿಸಿ ಮತ್ತು ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ರಚನೆಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದು ನಾನು ವಿನಮ್ರವಾಗಿ ವಿನಂತಿಸುತ್ತೇನೆ ಎಂದು ಕಾಗೆ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಈ ವರ್ಷದ ಜನವರಿ 3ರಂದು ರಾಷ್ಟ್ರಪತಿ ಮತ್ತು ಜನವರಿ 5 ರಂದು ಪ್ರಧಾನ ಮಂತ್ರಿ ಕಚೇರಿಗೆ ಜ್ಞಾಪಕ ಪತ್ರವನ್ನು ಸಲ್ಲಿಸಲಾಗಿದೆ ಎಂದು ಕಾಗೆ ತನ್ನ ಪತ್ರದಲ್ಲಿ ನೆನಪಿಸಿದ್ದಾರೆ.
ಪ್ರತ್ಯೇಕ ರಾಜ್ಯದ ಬೇಡಿಕೆಯ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದೇನೆ ಎಂದು ಹೇಳಿರುವ ಕಾಗೆ, ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸುವುದಾಗಿ ತಿಳಿಸಿದ್ದಾರೆ.
2022ರಲ್ಲಿ, ಬಿಜೆಪಿ ನಾಯಕ ಮತ್ತು ಆಗಿನ ಸಚಿವ ದಿವಂಗತ ಉಮೇಶ್ ಕತ್ತಿ ಅವರು ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ರಾಜ್ಯದ ಸ್ಥಾನಮಾನ ನೀಡಬೇಕು ಎಂಬ ಬೇಡಿಕೆಯನ್ನು ಪುನರುಚ್ಚರಿಸಿದ್ದರು. ಈ ಪ್ರದೇಶವು ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದು ಆರೋಪಿಸಿದ್ದರು. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ಬಂದಿರುವ ಅಂತಹ ಬೇಡಿಕೆಗಳನ್ನು ಕೇಂದ್ರವು ಪರಿಶೀಲಿಸುತ್ತಿದೆ ಎಂದು ಅವರು ತಿಳಿಸಿದ್ದರು.
ನಾನು ಮೊದಲಿನಿಂದಲೂ ಸನಾತನವಾದಿ ಆರ್‌ಎಸ್‌ಎಸ್‌ಗೆ ವಿರುದ್ಧ : ಸಿಎಂ ಸಿದ್ದರಾಮಯ್ಯ


