ಕೇಂದ್ರ ಸರ್ಕಾರದ ಧೋರಣೆ ವಿರೋಧಿಸಿ ತಮಿಳುನಾಡಿನಾದ್ಯಂತ ಡಿಎಂಕೆ ಪಕ್ಷದ ಸಾವಿರಾರು ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಜನರನ್ನುದ್ದೇಶಿ ಮಾತನಾಡಿದ ಮುಖ್ಯಮಂತ್ರಿ ಮತ್ತು ಡಿಎಂಕೆ ಅಧ್ಯಕ್ಷ ಎಂ ಕೆ ಸ್ಟಾಲಿನ್, “ಎಂಜಿಎನ್‌ಆರ್‌ಇಜಿಎ ಕಾರ್ಮಿಕರ ದುಃಸ್ಥಿತಿಯ ಬಗ್ಗೆ ಕೇಂದ್ರದ ಬಿಜೆಪಿ ಸರ್ಕಾರ ಕಾಳಜಿ ವಹಿಸಿಲ್ಲ” ಎಂದು ಆರೋಪಿಸಿದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಜಿಎನ್‌ಆರ್‌ಇಜಿಎ) ಕಾರ್ಮಿಕರಿಗೆ ಬಾಕಿ ಸಂಬಳವನ್ನು ಬಿಡುಗಡೆ ಮಾಡದಿದ್ದಕ್ಕಾಗಿ ಬಿಜೆಪಿ ಸರ್ಕಾರವನ್ನು ಟೀಕಿಸಿದ ಅವರು, ಮಹಾತ್ಮಾ ಗಾಂಧಿ ಮತ್ತು ಅವರ ಹೆಸರಿನ 100 ದಿನಗಳ ಕೆಲಸದ ಯೋಜನೆಯನ್ನು ಅವರು ಇಷ್ಟಪಡುವುದಿಲ್ಲ ಎಂದು ಹೇಳಿದರು.
“ಭಾರತೀಯ ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬು ಮತ್ತು ಜೀವಾಳವಾಗಿ ಯುಪಿಎ ಸರ್ಕಾರ ಅಭಿವೃದ್ಧಿಪಡಿಸಿದ ಎಂಜಿಎನ್‌ಆರ್‌ಇಜಿಎಯನ್ನು ನಾಶಮಾಡಲು ನಿರ್ದಯ ಬಿಜೆಪಿ ಹೊರಟಿದೆ. ಕಾರ್ಪೊರೇಟ್‌ಗಳಿಗೆ ಲಕ್ಷಾಂತರ ಕೋಟಿ ರೂಪಾಯಿಗಳನ್ನು ಒಂದೇ ಸಹಿಯಿಂದ ಮನ್ನಾ ಮಾಡಿದಾಗ, ಸುಡುವ ಬಿಸಿಲಿನಲ್ಲಿ ಬೆವರು ಸುರಿಸಿ ದುಡಿದ ಬಡವರಿಗೆ ಸಂಬಳವಾಗಿ ಬಿಡುಗಡೆ ಮಾಡಲು ಹಣ ಏಕೆ ಇಲ್ಲ? ಹಣವಿಲ್ಲವೇ ಅಥವಾ ಹೃದಯವಿಲ್ಲವೇ” ಎಂದು ಸ್ಟಾಲಿನ್ ಪ್ರಶ್ನಿಸಿದರು.
ತಮಿಳುನಾಡಿನಾದ್ಯಂತ ಇಂದಿನ ಪ್ರತಿಭಟನೆಯ ಮೂಲಕ ಡಿಎಂಕೆ ಸದಸ್ಯರು ಮತ್ತು ಬಡ ಜನರ ಧ್ವನಿ ನವದೆಹಲಿಯನ್ನು ತಲುಪಬೇಕು ಎಂದು ಅವರು ಹೇಳಿದರು.
ಕೇಂದ್ರ ಸರ್ಕಾರವನ್ನು ಖಂಡಿಸಲು ಹಾಗೂ ಎಂಜಿಎನ್‌ಆರ್‌ಇಜಿಎ ಕಾರ್ಮಿಕರಿಗೆ ಬಾಕಿ ಇರುವ ರೂ. 4,034 ಕೋಟಿಯನ್ನು ತಕ್ಷಣ ಬಿಡುಗಡೆ ಮಾಡುವಂತೆ ಬಿಜೆಪಿ ಸರ್ಕಾರವನ್ನು ಒತ್ತಾಯಿಸಲು ಸುಮಾರು 1,170 ಸ್ಥಳಗಳಲ್ಲಿ ನಡೆದ ಪ್ರತಿಭಟನೆಯಲ್ಲಿ ಹಲವಾರು ಮಹಿಳೆಯರು ಭಾಗವಹಿಸಿದ್ದರು.
ಪ್ರತಿಭಟನೆಯ ಸಮಯದಲ್ಲಿ, ಸದಸ್ಯರು ಕೇಂದ್ರವನ್ನು ಖಂಡಿಸುವ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ‘ನಮ್ಮ ಸಂಬಳ ಎಲ್ಲಿ’ ಎಂದು ಕೇಳುವ ಫಲಕಗಳನ್ನು ಹಿಡಿದಿದ್ದರು. ಮತ್ತೊಂದು ಫಲಕದಲ್ಲಿ ಸಿಎಂ ಮಹಿಳೆಯರಿಗೆ ಮಾಸಿಕ ರೂ. 1,000 ಆರ್ಥಿಕ ನೆರವು ನೀಡುತ್ತಿದ್ದಾರೆ ಎಂದು ಬರೆಯಲಾಗಿತ್ತು.
ಎಂಜಿಎನ್‌ಆರ್‌ಇಜಿಎ ಫಲಾನುಭವಿಗಳಿಗೆ ಬಾಕಿ ಇರುವ ವೇತನವನ್ನು ಬಿಡುಗಡೆ ಮಾಡುವಂತೆ ಕೇಂದ್ರವನ್ನು ಒತ್ತಾಯಿಸಲು ಮುಖ್ಯಮಂತ್ರಿ ಶನಿವಾರ ರಾಜ್ಯವ್ಯಾಪಿ ಪ್ರತಿಭಟನೆಗಳನ್ನು ಘೋಷಿಸಿದ್ದರು.
ಆರ್‌ಜಿ ಕರ್ ಪ್ರಕರಣದಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿಲ್ಲ: ನ್ಯಾಯಾಲಯಕ್ಕೆ ಸಿಬಿಐ ವರದಿ


