“ಪ್ರಧಾನಿ ನರೇಂದ್ರ ಮೋದಿ ಅಂದ್ರೆ ವಿಷದ ಹಾವಿದ್ದಂತೆ. ವಿಷ ಹೌದೋ, ಅಲ್ಲವೋ ಎಂದು ನೀವೇನಾದರೂ ನೆಕ್ಕಿ ನೋಡಲು ಹೋದರೆ ಸತ್ತು ಹೋಗ್ತೀರಿ” ಎಂದು ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹೇಳಿರುವುದು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.
ರೋಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್.ಪಾಟೀಲ ಅವರ ಪರ ಪಟ್ಟಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ಬಹಿರಂಗ ಸಭೆಯಲ್ಲಿ ಖರ್ಗೆಯವರು ಮಾತನಾಡಿದ್ದಾರೆ.
ಏಕವಚನದಲ್ಲೇ ವಾಗ್ದಾಳಿ ನಡೆಸಿರುವ ಅವರು, “ಮೋದಿ ಒಬ್ಬ ಆಸೆಬುರುಕ ಮನುಷ್ಯ. ಯಾವುದಾದರೂ ಕುರ್ಚಿ ಖಾಲಿ ಇದ್ದರೆ ಅಲ್ಲಿ ಬಂದು ಕುಳಿತುಕೊಳ್ಳುತ್ತಾನೆ. ತಾನು ತಿನ್ನಲ್ಲ ತಿನ್ನಲ್ಲ, ತಿನ್ನೋಕೆ ಬಿಡಲ್ಲ ಎಂದು ಹೇಳುತ್ತಾನೆ. ಆದರೆ, ಶೇ 40ರಷ್ಟು ಲಂಚ ತಿಂದವರನ್ನು ಪಕ್ಕದಲ್ಲಿ ಕೂರಿಸಿಕೊಂಡು ರಾಜಕೀಯ ಮಾಡುತ್ತಾನೆ. ಆತ ದೇಶವನ್ನು ತನ್ನ ವಿಚಾರಧಾರೆಯಿಂದ ಹಾಳು ಮಾಡಲು ಬಂದಿದ್ದಾನೆ” ಎಂದು ಕಟುವಾಗಿ ಟೀಕಿಸಿದ್ದಾರೆ.
“ಸಂಸತ್‌ನಲ್ಲಿ ಪ್ರಶ್ನೆ ಮಾಡಿದರೆ 56 ಇಂಚಿನ ಎದೆ ಬಗ್ಗೆ ಹೇಳುತ್ತಾರೆ. ನಾವು ಅವರ ದೇಹದಾರ್ಢ್ಯತೆ ಕೇಳುತ್ತಿಲ್ಲ. ಅವರು ಮಾಡಿರುವ ಜನಪರ, ಅಭಿವೃದ್ಧಿಪರ ಕೆಲಸಗಳನ್ನು ಅಳತೆ ಮಾಡುತ್ತಿದ್ದೇವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನ ದಂಗೆ ಏಳುತ್ತಾರೆ ಎಂದು ಹೇಳುವ ಮೂಲಕ ಅಮಿತ್ ಶಾ ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ. ಇಲ್ಲಿಯವರೆಗೆ ದಂಗೆಗಳು ನಡೆದಿರುವುದು ಗುಜರಾತ್‌ನಲ್ಲಿ ಮಾತ್ರ” ಎಂದು ತಿಳಿಸಿದ್ದಾರೆ.
ಖರ್ಗೆಯವರ ಹೇಳಿಕೆಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. “ರಾಷ್ಟ್ರಸೇವೆಯನ್ನೇ ತನ್ನ ಜೀವನದ ಪರಮ ಧ್ಯೇಯವನ್ನಾಗಿಸಿಕೊಂಡು ಶ್ರಮಿಸುತ್ತಿರುವ, ಹಿಂದುಳಿದ ಸಮುದಾಯದ ನರೇಂದ್ರಮೋದಿಯವರನ್ನು ‘ಮೌತ್ ಕಿ ಸೌದಾಗರ್’ ‘ರಾವಣ’, ‘ನೀಚ ವ್ಯಕ್ತಿ’ ಎಂದೆಲ್ಲಾ ನಿಂದಿಸಿ, ಇದೀಗ ಸೋಲುವ ಹತಾಶೆಯಿಂದ ಖರ್ಗೆಯವರು ವಿಷಸರ್ಪ ಎನ್ನುವ ಮೂಲಕ ಕಾಂಗ್ರೆ ಸ್‌ನ ವಿಕೃತ ಮನಸ್ಥಿತಿಯನ್ನು ಸ್ವಯಂ ಬಯಲು ಮಾಡಿದ್ದಾರೆೆ” ಎಂದು ರಾಜ್ಯ ಬಿಜೆಪಿ ಟ್ವೀಟ್ ಮಾಡಿದೆ.
ರಾಷ್ಟ್ರಸೇವೆಯನ್ನೇ ತನ್ನ ಜೀವನದ ಪರಮ ಧ್ಯೇಯವನ್ನಾಗಿಸಿಕೊಂಡು ಶ್ರಮಿಸುತ್ತಿರುವ, ಹಿಂದುಳಿದ ಸಮುದಾಯದ @narendramodiಯವರನ್ನು 'ಮೌತ್ ಕಿ ಸೌದಾಗರ್' 'ರಾವಣ', 'ನೀಚ ವ್ಯಕ್ತಿ' ಎಂದೆಲ್ಲಾ ನಿಂದಿಸಿ, ಇದೀಗ ಸೋಲುವ ಹತಾಶೆಯಿಂದ @khargeಯವರು ವಿಷಸರ್ಪ ಎನ್ನುವ ಮೂಲಕ ಕಾಂಗ್ರೆ ಸ್‌ನ ವಿಕೃತ ಮನಸ್ಥಿತಿಯನ್ನು ಸ್ವಯಂ ಬಯಲು ಮಾಡಿದ್ದಾರೆೆ. pic.twitter.com/NUnxvBuMA3
— BJP Karnataka (@BJP4Karnataka) April 27, 2023
“ಖರ್ಗೆ ಅವರನ್ನು ಯಾರೊಬ್ಬರೂ ತಮ್ಮ ಪಕ್ಷದ ಮುಖ್ಯಸ್ಥ ಎಂದು ಒಪ್ಪಿಕೊಳ್ಳದ ಕಾರಣ ಈ ಹೇಳಿಕೆ ನೀಡಿದ್ದಾರೆ. ಖರ್ಗೆಯವರ ಹೇಳಿಕೆಗೆ ಕಾಂಗ್ರೆಸ್ ದೇಶದ ಕ್ಷಮೆಯಾಚಿಸಬೇಕು” ಎಂದು ಕೇಂದ್ರ ಸಚಿವ ಅನುರಾಗ್ ಒತ್ತಾಯಿಸಿದ್ದಾರೆ.
ತಮ್ಮ ಹೇಳಿಕೆಗೆ ಖರ್ಗೆಯವರು ಸ್ಪಷ್ಟನೆಯನ್ನು ನೀಡಿದ್ದಾರೆ. “ಬಿಜೆಪಿ ಪಾರ್ಟಿ ಹಾವು ಇದ್ದ ಹಾಗೆ. ಸ್ವಲ್ಪ ನೆಕ್ಕಿ ನೋಡುತ್ತೇವೆ ಅಂದರೂ ಸಾವು ಖಚಿತ ಎಂಬರ್ಥದಲ್ಲಿ ಹೇಳಿದೆ. ಪ್ರಧಾನಿ ಮೋದಿ ಅವರ ಬಗ್ಗೆ ಈ ಮಾತು ಹೇಳಿಲ್ಲ. ವೈಯಕ್ತಿಕವಾಗಿ ಯಾರ ಬಗ್ಗೆಯೂ ನನಗೆ ಅಸೂಯೆ ಇಲ್ಲ” ಎಂದು ತಿಳಿಸಿದ್ದಾರೆ.
“ಬಿಜೆಪಿಯವರ ಮಾಡಿದ ಭ್ರಷ್ಟಚಾರಗಳು ಅಷ್ಟಿಷ್ಟಲ್ಲ. ಅವುಗಳ ಬಗ್ಗೆ ಹೇಳಿದರೆ ಇಡಿ, ಐಟಿ ಅಸ್ತ್ರಗಳನ್ನು ಬಳಕೆ ಮಾಡಿ ಹೆದರಿಸುವುದು ಸರ್ವೇ ಸಾಮಾನ್ಯವಾಗಿದೆ. ಆದ್ದರಿಂದ ಮೋದಿ ಸರ್ಕಾರ ಒಂದು ವಿಷಯುಕ್ತ ಹಾವಿನಂತಿದೆ. ಬಿಜೆಪಿ ಐಡಿಯಾಲಾಜಿ ವಿಷದಂತಿದೆ. ಅದನ್ನು ನೀವು ಬೆಂಬಲಿಸುತ್ತೇವೆ ಅಂದರೆ ಸಾವು ಖಚಿತ” ಎಂದು ಸ್ಪಷ್ಟಪಡಿಸಿದ್ದಾರೆ.


