Homeಮುಖಪುಟಮೋದಿಯವರ ಸಚಿವ ಸಂಪುಟದಲ್ಲಿ ‘ಸಾಮಾಜಿಕ ನ್ಯಾಯ’ದ ದನಿ ಹುಡುಕುತ್ತ....

ಮೋದಿಯವರ ಸಚಿವ ಸಂಪುಟದಲ್ಲಿ ‘ಸಾಮಾಜಿಕ ನ್ಯಾಯ’ದ ದನಿ ಹುಡುಕುತ್ತ….

ಇತರ ರಾಜ್ಯಗಳಲ್ಲಿ ಶೇ.50% ರಷ್ಟು ಮತ ಹಾಕಿದ ಆದಿವಾಸಿಗಳಿಗೆ ಕೇವಲ 2 ಸಚಿವ ಸ್ಥಾನ ನೀಡಿದರೆ, ಕರ್ನಾಟಕದಲ್ಲಿ ಎಲ್ಲ 7 ಮೀಸಲು ಕ್ಷೇತ್ರ ಗೆದ್ದರೂ ಒಬ್ಬರಿಗೂ ಸಚಿವಗಿರಿಯಿಲ್ಲ!

- Advertisement -

| ಪಿ.ಕೆ ಮಲ್ಲನಗೌಡರ್ |

ನಮ್ಮ ಅಧಿಕಾರ ಕೇಂದ್ರಗಳು ಎಂದಿಗೂ ಜನಪರವಲ್ಲ, ಹೀಗಾಗಿ ಇಲ್ಲಿ ಸಂಸತ್ತಿನಲ್ಲಿ ಸಾಮಾಜಿಕ ನ್ಯಾಯದ ಪ್ರಾಮಾಣಿಕ ದನಿ ಕೇಳೀತೇ ಎಂಬುದೂ ಸಂಶಯಾತ್ಮಕವೇ. ಸದ್ಯ ನಮ್ಮ ಸಂಸತ್ತಿಗೆ ಆಯ್ಕೆಯಾದವರು ಯಾವ ಯಾವ ಧರ್ಮ, ಸಮುದಾಯಕ್ಕೆ ಸೇರಿದವರು ಎಂಬ ಅಂಕಿಸಂಖ್ಯೆ ನೋಡಿದರೇನೇ ಇಲ್ಲಿ ‘ಬಹು ಸಂಖ್ಯಾತ’ರು ಪ್ರಬಲವಾಗಿ ಆವರಿಸುತ್ತಲೇ ಹೋಗುತ್ತಿರುವುದನ್ನು ಗಮನಿಸಬಹುದು…

ಈ 17ನೇ ಲೋಕಸಭೆಯಲ್ಲಿ ಶೇ, 90.4ರಷ್ಟು ಜಾತಿ- ಹಿಂದುಗಳು, ಶೇ. 5.2ರಷ್ಟು ಮುಸ್ಲಿಮರು (2014ಕ್ಕೆ ಹೋಲಿಸಿದರೆ ಈ ಸಲ ಐವರು ಮುಸ್ಲಿಂ ಎಂಪಿಗಳು ಹೆಚ್ಚಾಗಿದ್ದಾರೆ), ಶೇ. 4ರಷ್ಟು ಇತರೆ ಧಾರ್ಮಿಕ ಅಲ್ಪಸಂಖ್ಯಾತರು. ಬಿಜೆಪಿಯ ಎಂಪಿಗಳ ಪೈಕಿ ಶೇ. 99ರಷ್ಟು ಜಾತಿ-ಹಿಂದೂಗಳೇ.

ಜಾತಿ/ಸಮುದಾಯವಾರು ಲೆಕ್ಕಕ್ಕೆ ಬಂದರೆ, 542ರಲ್ಲಿ ಮೇಲ್ಜಾತಿಯವರ ಸಂಖ್ಯೆ 232, ಒಬಿಸಿ-120, ಎಸ್‍ಸಿ-86, ಎಸ್‍ಟಿ-52, ಧಾರ್ಮಿಕ ಅಲ್ಪಸಂಖ್ಯಾತರು-52.

ಕರ್ನಾಟಕದ ಉದಾಹರಣೆ ತೆಗೆದುಕೊಂಡರೆ, ಇಲ್ಲಿ 5 ಪರಿಶಿಷ್ಟ ಜಾತಿ ಮತ್ತು 2 ಪರಿಶಿಷ್ಟ ಪಂಗಡ ಮೀಸಲಿನ ಕ್ಷೇತ್ರಗಳೆಲ್ಲವೂ ಬಿಜೆಪಿಯ ಪಾಲಾಗಿವೆ. ಉಳಿದ ಸಾಮಾನ್ಯ ಕ್ಷೇತ್ರಗಳಲ್ಲಿ ಲಿಂಗಾಯತರು, ಒಕ್ಕಲಿಗರು ಮತ್ತು ಬ್ರಾಹ್ಮಣರದ್ದೇ ಪ್ರಾಬಲ್ಯ! ಈ ಸಲ 9 ಲಿಂಗಾಯತ ಸಂಸದರು, 3 ಬ್ರಾಹಣ ಸಂಸದರು (ಎಲ್ಲ ಬಿಜೆಪಿ) ಆಯ್ಕೆಯಾಗಿದ್ದಾರೆ. 6 ಒಕ್ಕಲಿಗರು (ಬಿಜೆಪಿ 4, ಕಾಂಗ್ರೆಸ್ ಜೆಡಿಎಸ್ ತಲಾ ಒಂದು) ಸಂಸತ್ ಪ್ರವೇಶಿಸಿದ್ದಾರೆ. ಅಂದರೆ 28ರಲ್ಲಿ 18 ಸಂಸದರು ಮೇಲ್ಜಾತಿಗೆ ಸೇರಿದವರೇ!

ಉತ್ತರ ಭಾರತದ ಹಿಂದು ಬೆಲ್ಟಿನಲ್ಲಿ ಬಿಜೆಪಿ ಮೇಲ್ಜಾತಿ, ಒಬಿಸಿ ಮತ್ತು ಆದಿವಾಸಿಗಳನ್ನು ಕೇಂದ್ರಿಕರಿಸಿ ಚುನಾವಣಾ ತಂತ್ರ ಹೆಣೆದಿತ್ತು ಎಂದು ಲೋಕನೀತಿ-ಸಿಎಸ್‍ಡಿಎಸ್ ಸಂಸ್ಥೆಯ ಸಮೀಕ್ಷೆ ಹೇಳಿದೆ. ಇಂತಹ ಯಾವ ಪ್ಲಾನೂ ಅಲ್ಲಿನ ಕಾಂಗ್ರೆಸ್ ಮತ್ತು ಮಹಾಘಟಬಂಧನದ ಪಕ್ಷಗಳಿಗೆ ಇರಲೇ ಇಲ್ಲ. ಎಸ್‍ಪಿ-ಬಿಎಸ್‍ಪಿ ಮತ್ತು ಆರ್‍ಎಲ್‍ಡಿ ನಡುವೆ ಮತವರ್ಗಾವಣೆ ಆಗುತ್ತದೆ ಎಂಬ ದೃಢ ನಿರ್ಧಾರಕ್ಕೆ ಘಟಬಂಧನ ಜೋತು ಬಿದ್ದು ಹಿಂದಕ್ಕೆ ಚಲಿಸಿತು.

ಸಹಜವಾಗಿ ಈ ಸಲ ಮೇಲ್ಜಾತಿಯ ಮತಗಳನ್ನು ಪಕ್ಕ ಮಾಡಿಕೊಂಡಿದ್ದ ಬಿಜೆಪಿ, ಒಬಿಸಿ ಮತ್ತು ಆದಿವಾಸಿಗಳನ್ನು ಕೇಂದ್ರೀಕರಿಸಿ ತನ್ನ ಪ್ರಚಾರ ವ್ಯೂಹವನ್ನು ಹೆಣೆದಿತ್ತು.. ಡಿಸೆಂಬರ್‍ನಲ್ಲಿ ಮಧ್ಯಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಶೇ. 34ರಷ್ಟು ಆದಿವಾಸಿ ಮತಗಳು ಬಂದಿದ್ದರೆ ಈ ಲೊಕಸಭಾ ಚುನಾವಣೆಯಲ್ಲಿ ಅದು ಶೇ. 52ಕ್ಕೆ ಏರಿತ್ತು! ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಘಡ್, ಹಿಮಾಚಲ ಪ್ರದೇಶ, ಬಿಹಾರ್-ಹೀಗೆ ಆದಿವಾಸಿಗಳಿಂದ ಸಾಕಷ್ಟು ಮತ ಪಡೆದ ಬಿಜೆಪಿ ಈಗ ಅವರಿಗೆ ಕಾಟಾಚಾರಕ್ಕೆ ಎಂಬಂತೆ ಎರಡೇ ಎರಡು ಸಚಿವ ಸ್ಥಾನ ನೀಡಿದೆ.

ಕರ್ನಾಟಕದಲ್ಲಿ ಇಬ್ಬರು ಬ್ರಾಹ್ಮಣ ಬಿಜೆಪಿ ಸಂಸದರಿಗೆ ಸಚಿವ ಸ್ಥಾನ ಸಿಗಬಹುದು ಎಂಬ ಅಂದಾಜಿತ್ತು. ಕಳೆದ ಸಲ ಆರಂಭದಲ್ಲಿ ದಾವಣಗೆರೆಯ ಸಿದ್ದೇಶ್ವರ್ ಅವರಿಗೆ ಸಚಿವಗಿರಿ ಕೊಟ್ಟು ನಂತರ ಅವರನ್ನು ತೆಗೆದು ಹಾಕಲಾಗಿತ್ತು. 2018ರ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಅನಂತ ಹೆಗಡೆಗೆ ಮಂತ್ರಿ ಸ್ಥಾನ ನೀಡಲಾಗಿತ್ತು. ಆಗ ಮೂವರು ಬ್ರಾಹ್ಮಣ ಸಂಸದರ ಪೈಕಿ ಇಬ್ಬರು ಸಚಿವರಾಗಿದ್ದರೆ ಬಿಜೆಪಿಯ ಬೆಂಬಲಿಗರು ಅನಿಸಿಕೊಂಡ ಲಿಂಗಾಯತ ಸಮುದಾಯಕ್ಕೆ ಯಾವ ಸಚಿವಗಿರಿಯೂ ಇರಲಿಲ್ಲ.

ಈ ಸಲ ಬೆಂಗಳೂರು ದಕ್ಷಿಣದ ಅನಂತಕುಮಾರ್ ಸಾವಿನ ಕಾರಣದಿಂದ ಆ ಕೋಟಾ ಅವರ ಶಿಷ್ಯ ಧಾರವಾಡದ ಪ್ರಹ್ಲಾದ್ ಜೋಶಿಗೆ ಸಿಕ್ಕಿದೆ. ಮತ್ತೆ ಒಕ್ಕಲಿಗರ ಕೋಟಾದಲ್ಲಿ ನಾಲ್ವರು ಒಕ್ಕಲಿಗ ಸಂಸದರ ಪೈಕಿ ‘ಹಿರಿಯ’ ಸದಾನಂದಗೌಡರಿಗೆ ಮತ್ತೆ ಚಾನ್ಸು ಲಭಿಸಿದೆ. ಇವರಿಬ್ಬರೂ ಕ್ಯಾಬಿನೆಟ್ ಸಚಿವರು. ಬೆಳಗಾವಿಯಿಂದ 4 ಸಲ ಗೆದ್ದಿರುವ ಸುರೇಶ ಅಂಗಡಿ ಎಂಬ ಬಣಜಿಗ ಲಿಂಗಾಯತರಿಗೆ ರಾಜ್ಯ ಸಚಿವ ಸ್ಥಾನವನ್ನಷ್ಟೇ ನೀಡಲಾಗಿದೆ.

ಯಡಿಯೂರಪ್ಪ ನೀಡಿದ ಪಟ್ಟಿಯಲ್ಲಿ ಒಬ್ಬರಿಗೂ ಸ್ಥಾನವಿಲ್ಲ! ಅವರು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಬಾಗಲಕೋಟೆಯ ಗದ್ದಿಗೌಡರ್, ಹಾವೇರಿ ಶಿವಕುಮಾರ್ ಉದಾಸಿ, ಕೊಪ್ಪಳದ ಕರಡಿ ಸಂಗಣ್ಣ ಮತ್ತು ತುಮಕೂರಿನ ಬಸವರಾಜು- ಇವರಲ್ಲಿ ಒಬ್ಬಿಬ್ಬರಿಗೆ ಸಚಿವ ಸ್ಥಾನ ಅಪೇಕ್ಷಿಸಿದ್ದರು!

ಎಸ್‍ಸಿ, ಎಸ್ಟಿಗೆ ಶೂನ್ಯ!
ಕಳೆದ ಸಲ 2014ರಲ್ಲಿ ಬಿಜೆಪಿ 7 ಮೀಸಲು ಕ್ಷೇತ್ರಗಳಲ್ಲಿ ಕೇವಲ ವಿಜಯಪುರ ಒಂದರಲ್ಲಿ ಮಾತ್ರ ಗೆದ್ದಿತ್ತು. ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಆಗ ವಿಜಯಪುರದ ರಮೇಶ ಜಿಗಜಿಗಣಿಯವರಿಗೆ ರಾಜ್ಯ ಸಚಿವ ಸ್ಥಾನ ನೀಡಲಾಗಿತ್ತು. ಆದರೆ ಈ ಸಲ ಬಿಜೆಪಿ ಎಲ್ಲ 7 ಮೀಸಲು ಕ್ಷೇತ್ರಗಳಲ್ಲಿ ಗೆದ್ದಿದ್ದರೂ ಆ ಸಮುದಾಯಗಳಿಗೆ ಸೇರಿದ ಒಬ್ಬ ಸಂಸದನಿಗೂ ಸಚಿವ ಸ್ಥಾನ ನೀಡಿಲ್ಲ. ಕಲಬುರ್ಗಿ ವಿಭಾಗದಲ್ಲೇ ಅದು 3 ಮೀಸಲು ಕ್ಷೇತ್ರಗಳನ್ನು ಗೆದ್ದಿದ್ದರೂ ಆ ಭಾಗಕ್ಕೂ ಮಣೆ ಹಾಕಿಲ್ಲ.
ಒಟ್ಟು 57 ಸಚಿವ ಸ್ಥಾನದಲ್ಲಿ 21ನ್ನು ಬ್ರಾಹ್ಮಣರಿಗೆ ನೀಡಿರುವ, ಸಂಘ ಪರಿವಾರ ನಿರ್ಧರಿಸುವ ಪಟ್ಟಿಯಲ್ಲಿ ಇನ್ನೆಂತಾ ಸಾಮಾಜಿಕ ನ್ಯಾಯ ಹುಡುಕೋಣ?

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಆಸ್ಪತ್ರೆ ಸಿಬ್ಬಂದಿಗೆ ಲಂಚ ನೀಡಲು ಸಾಧ್ಯವಾಗದೆ ರಸ್ತೆಯಲ್ಲೆ 6 ತಿಂಗಳ ಶಿಶುವಿಗೆ ಜನ್ಮ ನೀಡಿದ ಮಹಿಳೆ | Naanu Gauri

ಆಸ್ಪತ್ರೆ ಸಿಬ್ಬಂದಿಗೆ ಲಂಚ ನೀಡಲು ಸಾಧ್ಯವಾಗದೆ ರಸ್ತೆಯಲ್ಲೆ 6 ತಿಂಗಳ ಶಿಶುವಿಗೆ ಜನ್ಮ ನೀಡಿದ...

0
ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ನಿರಾಕರಿಸಿದ ಕಾರಣಕ್ಕೆ ಮಹಿಳೆಯೊಬ್ಬರು ರಸ್ತೆಯಲ್ಲೇ ಆರು ತಿಂಗಳ ಶಿಶುವಿಗೆ ಜನ್ಮ ನೀಡಿರುವ ಅಘಾತಕಾರಿ ಘಟನೆ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ. ಆರು ತಿಂಗಳ ಗರ್ಭಿಣಿಯಾಗಿದ್ದ ಕಲ್ಲೋ ಬಾಯಿಯನ್ನು...
Wordpress Social Share Plugin powered by Ultimatelysocial