ಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯ ಗುಜರಾತ್‌ನಲ್ಲಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MGNREGA) ಅಡಿಯಲ್ಲಿ ಸತ್ತ ವ್ಯಕ್ತಿಯ ಹೆಸರಿನಲ್ಲಿ ವೇತನ ಬಿಡುಗಡೆಯಾಗಿರುವ ದೊಡ್ಡ ಹಗರಣ ಮುನ್ನೆಲೆಗೆ ಬಂದಿದೆ.
MGNREGA ದ ಇತ್ತೀಚಿನ ದಾಖಲೆಗಳ ಪ್ರಕಾರ, ಹಲವು ದಿನಗಳ ಹಿಂದೆ ಸಾವನ್ನಪ್ಪಿರುವ ಕಾರ್ಮಿಕನ ಹೆಸರಿನಲ್ಲಿ, ಸೈನಿಕನ ಹೆಸರಿನಲ್ಲಿ, ಕೆಲವು ಶಿಕ್ಷಕರ ಹೆಸರಿನಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ, ಸಂಬಳ ಪಡೆಯಲಾಗಿದೆ ಎಂಬುದು ತಿಳಿದುಬಂದಿದೆ.
“ದಾಖಲೆಗಳಪ್ರಕಾರ, ಈ ವ್ಯಕ್ತಿಗಳು ಏಪ್ರಿಲ್ 2020 ರವರೆಗೆ ಸಂಬಳವನ್ನು ಪಡೆಯುತ್ತಿದ್ದರು. ಆದರೆ ಅವರು ಬಹಳ ಹಿಂದೆಯೇ ನಿಧನರಾಗಿದ್ದಾರೆ. ಲಾಕ್ ಡೌನ್ ಸಮಯದಲ್ಲಿಯೂ ಸಹ, ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ಈ ಯೋಜನೆಯಡಿ ಸತ್ತ ವ್ಯಕ್ತಿಗೆ ಕೆಲಸವನ್ನು ನೀಡಿಲಾಗಿದೆ ಎಂದರೆ ಭ್ರಷ್ಟಾಚಾರದ ಮಟ್ಟವನ್ನು ನೀವೇ ಊಹಿಸಿ” ಎಂದು ಹಗರಣವನ್ನು ಬಹಿರಂಗಪಡಿಸಿದ ವಡ್ನಗರ್ ಶಾಸಕ ಜಿಗ್ನೇಶ್ ಮೇವಾನಿ ಹೇಳಿದ್ದಾರೆ.
ಎರಡು ದಿನಗಳ ಹಿಂದೆ ಅವರು ಗುಜರಾತ್ ಕಾಂಗ್ರೆಸ್ ನ ಕಾರ್ಯಾಧ್ಯಕ್ಷ ಹಾರ್ದಿಕ್ ಪಟೇಲ್ ಅವರೊಂದಿಗೆ ಜಿಗ್ನೇಶ್ ಮೇವಾನಿ, ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದರು.
ಇದನ್ನೂ ಓದಿ: ಉದ್ಯೋಗ ಖಾತರಿ ಕೆಲಸ ಹುಡುಕುತ್ತಿರುವ ಪದವೀಧರರ ಕತೆಗಳು: ಉತ್ತರ ಪ್ರದೇಶದಲ್ಲಿ ನಿರುದ್ಯೋಗದ ಸ್ಥಿತಿ ಗಂಭೀರ
ಗುಜರಾತ್‌ನ ಬನಸ್ಕಂತ ಜಿಲ್ಲೆಯ ಹಳ್ಳಿಯಲ್ಲಿ ಬಹು ಕೋಟಿ ಹಗರಣ ಬೆಳಕಿಗೆ ಬಂದಿದ್ದು, MGNREGA ಯೋಜನೆಯಡಿ ಹಣ ವರ್ಗಾವಣೆಯ ಅರಿವಿಲ್ಲದ ಸುಮಾರು 500 ಗ್ರಾಮಸ್ಥರ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ ಎಂದು ಜಿಗ್ನೇಶ್ ಮೇವಾನಿ ಆರೋಪಿಸಿದ್ದರು.
ಇದೇ ರೀತಿಯ ಮತ್ತೊಂದು ಹಗರಣವು ಬೆಳಕಿಗೆ ಬಂದಿದ್ದು, ಬಲೂಂದ್ರ ಗ್ರಾಮದಲ್ಲಿ ಸುಮಾರು 500 ಜನರು MGNREGA ದೈನಂದಿನ ವೇತನದ ಕೆಲಸಕ್ಕೆ ಹೋಗಿಲ್ಲ. ಆದರೂ ಅವರು ಕೆಲಸ ಮಾಡುತ್ತಿದ್ದಾರೆಂದು ತೋರಿಸಲಾಗಿದೆ. ಅವರ ಜಾಬ್ ಕಾರ್ಡ್‌ಗಳನ್ನು ತಯಾರಿಸಿ, ಅವರ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆದು ಹಣ ಹೊಡೆದಿದ್ದಾರೆ ಎಂದು ಮೇವಾನಿ ತಿಳಿಸಿದ್ದರು.
“ಇದು ರಾಜ್ಯದಾದ್ಯಂತ ನಡೆಯುತ್ತಿರುವ ಹಗರಣವಾಗಿದ್ದು, ಸತ್ತ ಜನರ ಹೆಸರಿನಲ್ಲಿ ಸುಳ್ಳು ಜಾಬ್ ಕಾರ್ಡ್‌ಗಳನ್ನು ತಯಾರಿಸಿ, ಬಡ ಜನರಿಗೆ ಕಳುಹಿಸಿದ ಹಣವನ್ನು ಬಿಜೆಪಿ ಸರ್ಕಾರದ ಕಣ್ಗಾವಲಿನಲ್ಲಿರುವ ಸರ್ಕಾರಿ ಅಧಿಕಾರಿಗಳು ಕದ್ದಿದ್ದಾರೆ. ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಇವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು” ಎಂದು ಮೇವಾನಿ ಆಗ್ರಹಿಸಿದರು.
ಪೊಲೀಸ್ ನಿಷ್ಕ್ರಿಯತೆಯ ಬಗ್ಗೆ ತಮ್ಮ ದುಃಖವನ್ನು ವ್ಯಕ್ತಪಡಿಸಿದ ಮೇವಾನಿ, ಹಗರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗಿದ್ದರೂ, ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ದೂರವಾಣಿಯಲ್ಲಿ ನ್ಯಾಷನಲ್ ಹೆರಾಲ್ಡ್ ಗೆ ತಿಳಿಸಿದ್ದಾರೆ.
“ಇದು ಕೇವಲ ಹಣದ ವಿಷಯ ಅಲ್ಲ. ಆದರೆ, ಸಂವಿಧಾನ ನಮಗೆ ಒದಗಿಸಿರುವ ಜೀವನೋಪಾಯದ ಹಕ್ಕುಗಳನ್ನು ದೋಚುತ್ತಿರುವ ಭ್ರಷ್ಟ ಅಧಿಕಾರಿಗಳು ಮತ್ತು ರಾಜಕೀಯ ನಾಯಕರು, ಬಿಜೆಪಿಯ ಉನ್ನತ ನಾಯಕರ ನೇರ ಪ್ರೋತ್ಸಾಹವನ್ನು ಪಡೆಯುತ್ತಿದ್ದಾರೆ” ಎಂದು ಮೇವಾನಿ ಹೇಳಿದರು.
ಇದನ್ನೂ ಓದಿ: MGNREGA ಯೋಜನೆಯಲ್ಲಿ ಬಹು ಕೋಟಿ ಹಗರಣ: ಜಿಗ್ನೇಶ್ ಮೇವಾನಿ ಆರೋಪ


