ಸ್ವಯಂ ಘೋಷಿತ ಗೋರಕ್ಷಕ, ಇಬ್ಬರು ಮುಸ್ಲಿಮರ ಕೊಲೆ ಪ್ರಕರಣದ ಆರೋಪಿ ಮೋನು ಮಾನೇಸರ್‌ನ ಕಾರ್ಯಕ್ರಮಗಳನ್ನು ಯೂಟ್ಯೂಬ್ ತನ್ನ ಮ್ಯಾನಿಟೈಸೇಷನ್ ವ್ಯಾಪ್ತಿಯಿಂದ ಹೊರಗಿಟ್ಟಿದೆ. ಹೀಗಾಗಿ ಮೋನು ಮಾನೇಸರ್ ಪೋಸ್ಟ್ ಮಾಡುವ ವಿಡಿಯೊಗಳಿಗೆ ಇನ್ನು ಮುಂದೆ ಹಣ ಬರುವುದಿಲ್ಲ.
ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಆತನ ಯೂಟ್ಯೂಬ್ ಚಾನೆಲ್‌ನಿಂದ ಒಂಬತ್ತು ವೀಡಿಯೊಗಳನ್ನು ತೆರೆವು ಮಾಡಲಾಗಿದೆ. ಇತರ ಇಬ್ಬರಿಗೆ ವಯಸ್ಸಿನ ನಿರ್ಬಂಧಗಳನ್ನು ಹಾಕಿದೆ ಎಂದು ‘ದಿ ವೈರ್’ ವರದಿ ಮಾಡಿದೆ.
ಅಮೆರಿಕ ಮೂಲದ ಸುದ್ದಿ ವೆಬ್‌ಸೈಟ್ Codastorಗೆ ಯೂಟ್ಯೂಟ್ ಸಂಸ್ಥೆ ಮಂಗಳವಾರ ಇಮೇಲ್ ಮೂಲಕ ಸ್ಪಷ್ಟನೆ ನೀಡಿದೆ. ಮೋನು ಮೋನೇಸರ್ ಕಮ್ಯುನಿಟಿ ಸ್ಟಾಡರ್ಡ್‌ಗಳನ್ನು ಉಲ್ಲಂಘಿಸುತ್ತಿರುವುದನ್ನು ಉಲ್ಲೇಖಿಸಿದೆ. ಮೋನೇಸರ್ ಮತ್ತು ಇತರರು ಇಬ್ಬರು ಮುಸ್ಲಿಂ ಯುವಕರ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾಗಿ ಗುರುತಿಸಲ್ಪಟ್ಟಿದ್ದಾರೆ.
ಭಿವಾನಿ ಜಿಲ್ಲೆಯಲ್ಲಿ ಇಬ್ಬರು ಮುಸ್ಲಿಮರ ಹತ್ಯೆಯಾಗುವ ಕೆಲವು ದಿನಗಳ ಮೊದಲು ತನಿಖಾ ವರದಿ ಪ್ರಕಟಿಸಿದ್ದ ಆಲ್ಟ್‌ನ್ಯೂಸ್, ಮೋನು ಹೇಗೆ ಕಾನೂನಿನ ತಡೆ ಇಲ್ಲದೆ ಹಲವಾರು ಹಿಂಸಾತ್ಮಕ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡಿದ್ದಾರೆ ಎಂಬುದನ್ನು ಹೊರಗೆಳೆದಿತ್ತು. ಆಲ್ಟ್‌ನ್ಯೂಸ್‌ನ ಶಿಂಜಿನಿ ಮಜುಂದಾರ್ ತನಿಖಾ ವರದಿ ಬರೆದಿದ್ದರು.
ಸಾಮಾಜಿಕ ಮಾಧ್ಯಮದಲ್ಲಿ ಮೋನು, ಸಾಕಷ್ಟು ಫಾಲೋಯರ್ಸ್‌ಗಳನ್ನು ಹೊಂದಿದ್ದಾರೆ. ಯೂಟ್ಯೂಬ್‌ನಲ್ಲಿ 2 ಲಕ್ಷಕ್ಕೂ ಹೆಚ್ಚು, ಫೇಸ್‌ಬುಕ್ ಪುಟದಲ್ಲಿ 83,000 ಫಾಲೋಯರ್ಸ್‌ಗಳನ್ನು ಹೊಂದಿದ್ದಾರೆ. ಮೆಟಾ ಮತ್ತು ಯೂಟ್ಯೂಬ್‌ನ ಸುರಕ್ಷತಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಹಲವಾರು ವಿಷಯಗಳನ್ನು ಮೋನು ಅಪ್‌ಲೋಡ್ ಮಾಡುತ್ತಲೇ ಬಂದಿದ್ದಾನೆ.
ಗಾಯಗೊಂಡ ಸ್ಥಿತಿಯಲ್ಲಿರುವ ವ್ಯಕ್ತಿಗಳ ತಲೆಗೂದಲಿಡಿದು ಚಿತ್ರ ಹಿಂಸೆ ನೀಡುತ್ತಿರುವ ಪೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಮೋನು ಮತ್ತು ಆತನ ಸಹಚರರು ಅಪ್‌ಲೋಡ್ ಮಾಡುತ್ತಾ ಬಂದಿದ್ದಾರೆ. ಹಸುವಿನ ಕಳ್ಳಸಾಗಣೆಯಲ್ಲಿ ತೊಡಗಿದ ವ್ಯಕ್ತಿಗಳು ಇವರೆಂದು ಮೋನು ಬಣದವರು ವಾದಿಸುತ್ತಾರೆ.
ಮೋನು ಅವರ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಲಾದ ಯಾವುದೇ ವಿಷಯದ ಕುರಿತು ಮೆಟಾ ಸಂಸ್ಥೆ ಈವರೆಗೆ ಕ್ರಮ ಜರುಗಿಸಿಲ್ಲ.
ಕೊಲೆ ಪ್ರಕರಣ
ಹರಿಯಾಣದ ಜಿಂದ್‌ನಲ್ಲಿರುವ ಗೋಶಾಲೆಯಿಂದ ಪತ್ತೆಯಾದ ಸುಟ್ಟ ದೇಹಗಳು ಮತ್ತು ಎಸ್‌ಯುವಿ ಕಾರ್‌ನಲ್ಲಿ ಪತ್ತೆಯಾದ ರಕ್ತದ ಕಲೆಗಳು ಜುನೈದ್ ಮತ್ತು ನಾಸಿರ್ ಅವರದ್ದೇ ಎಂದು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ದೃಢಪಡಿಸಿದೆ ಎಂದು ರಾಜಸ್ಥಾನ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಪಹರಣಕ್ಕೊಳಗಾಗಿದ್ದ ರಾಜಸ್ಥಾನದ ಭರತ್‌ಪುರ ಮೂಲದ ವ್ಯಕ್ತಿಗಳ ಶವಗಳು ಫೆಬ್ರವರಿ 16ರಂದು ಹರಿಯಾಣದ ಭಿವಾನಿ ಜಿಲ್ಲೆಯಲ್ಲಿ ವಾಹನದೊಳಗೆ ಪತ್ತೆಯಾಗಿದ್ದವು. ಈ ಇಬ್ಬರು ಮುಸ್ಲಿಮರನ್ನು ಬಜರಂಗದಳದ ಗೂಂಡಾಗಳು ಹೊಡೆದು ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
“ಜಿಂದ್‌ನ (ಹರಿಯಾಣ) ಗೋಶಾಲಾದಿಂದ ವಶಪಡಿಸಿಕೊಂಡ ಎಸ್‌ಯುವಿಯಲ್ಲಿನ ಸುಟ್ಟ ದೇಹಗಳು ಮತ್ತು ರಕ್ತದ ಕಲೆಗಳು ನಾಸಿರ್ ಮತ್ತು ಜುನೈದ್ ಅವರದ್ದು ಎಂದು ಎಫ್‌ಎಸ್‌ಎಲ್ (ವಿಧಿ ವಿಜ್ಞಾನ ಪ್ರಯೋಗಾಲಯ) ವರದಿಯು ದೃಢಪಡಿಸುತ್ತದೆ” ಎಂದು ಭರತ್‌ಪುರ ರೇಂಜ್ ಐಜಿ ಗೌರವ್ ಶ್ರೀವಾಸ್ತವ್ ಹೇಳಿದ್ದಾರೆ.
ನಾಸಿರ್ ಮತ್ತು ಜುನೈದ್ ಅವರ ಕುಟುಂಬದ ಸದಸ್ಯರ ರಕ್ತದ ಮಾದರಿಗಳನ್ನು ಸಹ ಸಂಗ್ರಹಿಸಲಾಗಿದ್ದು, ಎಸ್‌ಯುವಿಯಲ್ಲಿ ಕಂಡುಬಂದ ರಕ್ತದ ಕಲೆಗಳು ಮತ್ತು ಸುಟ್ಟ ವಾಹನದಲ್ಲಿ ಪತ್ತೆಯಾದ ಮೂಳೆಗಳು ಹೊಂದಾಣಿಕೆಯಾಗುತ್ತವೆ. ವರದಿಯು ಈಗ ಎರಡೂ ಶವಗಳ ಗುರುತನ್ನು ದೃಢಪಡಿಸಿದೆ ಎಂದಿದ್ದಾರೆ.


