ಹೆಚ್ಚು ವಿದ್ಯಾವಂತ ಮತ್ತು ಪರಿಣಿತ ಜನರೆ ಜಗತ್ತಿನಲ್ಲಿ ಭಯೋತ್ಪಾದನೆ ಮತ್ತು ಹಿಂಸಾಚಾರವನ್ನು ಹರಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ. ದೇಶದ ಅತ್ಯಂತ ಹಳೆಯ ವಿಶ್ವವಿದ್ಯಾಲಯವಾದ ವಿಶ್ವ ಭಾರತಿಯ ಪದವಿ ಪ್ರಧಾನ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ವಿಶ್ವಭಾರತಿಯ ಸ್ಪೂರ್ತಿದಾಯಕ ಪರಂಪರೆಯನ್ನು ಶ್ಲಾಘಿಸಿದ ಪ್ರಧಾನಿ, “ಹಳ್ಳಿಗಳಲ್ಲಿನ ರೈತರು ಮತ್ತು ಕುಶಲಕರ್ಮಿಗಳಿಗೆ ತಮ್ಮ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆಗಳನ್ನು ಹುಡುಕಲು ಸಹಾಯ ಮಾಡುವಂತೆ ನಾನು ವಿದ್ಯಾರ್ಥಿಗಳನ್ನು ಕೇಳಿಕೊಳ್ಳುತ್ತೇನೆ. ಅದು ‘ಆತ್ಮನಿರ್ಭರ್’ (ಸ್ವಾವಲಂಬಿ) ಭಾರತ ನಿರ್ಮಾಣದ ಒಂದು ಹೆಜ್ಜೆಯಾಗಿದೆ” ಎಂದರು.
ಇದನ್ನೂ ಓದಿ: ವಿಜಯನಗರ: ದೇವದಾಸಿಯಾಗಲು ನಿರಾಕರಿಸಿ ಪೊಲೀಸರಿಗೆ ದೂರು ನೀಡಿದ ದಿಟ್ಟ ಯುವತಿ!
“ಜ್ಞಾನದೊಂದಿಗೆ ಜವಾಬ್ದಾರಿ ಬರುತ್ತದೆ ಮತ್ತು ಅವರು ಪಡೆದ ಜ್ಞಾನವು ಅವರದಲ್ಲ, ಅದು ಭವಿಷ್ಯದ ಪೀಳಿಗೆಗೆ ಒಂದು ದಾರಿಯಾಗಿದೆ. ನಿಮ್ಮ ಜ್ಞಾನ ಮತ್ತು ಕೌಶಲ್ಯವು ಸಮಾಜವನ್ನು ಹೆಮ್ಮೆಪಡುವಂತೆ ಮಾಡುತ್ತದೆ. ಆದರೆ ಅದು ವಿನಾಶದ ಕತ್ತಲೆಯೊಳಗೆ ತಳ್ಳಲೂ ಸಾಧ್ಯತೆ ಇರುತ್ತದೆ. ಇತಿಹಾಸದಲ್ಲಿ ಮತ್ತು ವರ್ತಮಾನದಲ್ಲಿ ಇಂತಹ ಅನೇಕ ಉದಾಹರಣೆಗಳಿವೆ” ಎಂದರು.
“ಜಗತ್ತಿನಲ್ಲಿ ಭಯೋತ್ಪಾದನೆ ಮತ್ತು ಹಿಂಸಾಚಾರವನ್ನು ಹರಡುವವರಲ್ಲಿ ಕೆಲವು ಹೆಚ್ಚು ವಿದ್ಯಾವಂತ, ಪರಿಣಿತ ಜನರನ್ನು ನೀವು ಕಾಣಬಹುದು. ಮತ್ತೊಂದೆಡೆ, ಕೆಲವರು ಕೊರೊನಾದಂತಹ ಜಾಗತಿಕ ಸಾಂಕ್ರಾಮಿಕ ರೋಗದಿಂದ ಜಗತ್ತನ್ನು ಮುಕ್ತಗೊಳಿಸಲು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಎಲ್ಲಕ್ಕೂ ಮುಖ್ಯವಾದುದು ಮನಸ್ಥಿತಿಯಾಗಿದೆ” ಎಂದು ಪ್ರಧಾನ ಮಂತ್ರಿ ಹೇಳಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿಯು ಸ್ವಾವಲಂಬಿ ಭಾರತವನ್ನು ನಿರ್ಮಿಸುವ ಪ್ರಮುಖ ಹೆಜ್ಜೆಯಾಗಿದ್ದು, ಇದು ಸಂಶೋಧನೆ ಮತ್ತು ನಾವೀನ್ಯತೆಗೆ ಪ್ರಚೋದನೆ ನೀಡುತ್ತದೆ ಎಂದು ಅವರು ಹೇಳಿದ್ದಾರೆ.
ಸಮಾರಂಭದಲ್ಲಿ 2,535 ವಿದ್ಯಾರ್ಥಿಗಳು ಪದವಿಗಳನ್ನು ಪಡೆದರು.
ಇದನ್ನೂ ಓದಿ: ‘ಹೌದು ಮೈಲಾರ್ಡ್, ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರೆಲ್ಲಾ ಒಟ್ಟಾಗಿ ಸಂಚು ಹೂಡಿದರು’


