ಕೇಂದ್ರದಲ್ಲೂ ಬಿಜೆಪಿ, ರಾಜ್ಯದಲ್ಲೂ ಬಿಜೆಪಿ ನೇತೃತ್ವದ ಸರ್ಕಾರವಿದೆ. ಆದರೂ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವರು, ದೇವಾಲಯ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಸಾರ್ವಜನಿಕ ಪ್ರತಿಕ್ರಿಯೆ ನೀಡುತ್ತಿರುವ ಉದ್ದೇಶವೇನು ಎಂಬ ಪ್ರಶ್ನೆಗಳ ನಡುವೆಯೇ ಅವರು ಭಾನುವಾರ ಪತ್ರಿಕಾಗೋಷ್ಠಿ ನಡೆಸಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ದೇವಾಲಯಗಳ ತೆರವು ಕಾರ್ಯಾಚರಣೆ ಮಾಡದಂತೆ ಮೈಸೂರು ಜಿಲ್ಲಾಡಳಿತದ ವಿರುದ್ಧ ಪ್ರತಾಪ್ ಸಿಂಹ ಗುಡುಗಿದ್ದಾರೆ. ಕಾರ್ಯಾಚರಣೆ ಮುಂದುವರಿಸಿದರೆ ದೇವಸ್ಥಾನ ಉಳಿಸಿ ಜನಾಂದೋಲನ ಕೈಗೊಳ್ಳಲಾಗುವುದು ಎಂದಿದ್ದಾರೆ.
ಸುಪ್ರೀಂಕೋರ್ಟ್‌ನ ಆದೇಶವನ್ನು ಜಿಲ್ಲಾಡಳಿತ ಸರಿಯಾಗಿ ಅರ್ಥಮಾಡಿಕೊಂಡಿಲ್ಲ ಎಂದು ಆರೋಪಿಸಿರುವ ಅವರು, ಸಾರ್ವಜನಿಕವಾಗಿ ತಲೆ ಎತ್ತಿರುವ ಧಾರ್ಮಿಕ ಸ್ಥಳಗಳನ್ನು ಪ್ರತ್ಯೇಕವಾಗಿ ಪರಿಗಣಿಸಿ ಸೂಕ್ತ ಕ್ರಮ ಜರುಗಿಸಬೇಕು. ಸರ್ಕಾರ 2010ರಲ್ಲಿ ಹೊರಡಿಸಿರುವ ಆದೇಶವನ್ನು ವಾಪಸ್ ಪಡೆಯಬೇಕು. ಪ್ರತಿ ದೇಗುಲವನ್ನೂ ಪ್ರತ್ಯೇಕವಾಗಿ ಪರಿಗಣಿಸಿ, ಬದಲಿ ಸ್ಥಳ ನೀಡುವುದು, ಸಾಧ್ಯವಾದರೆ ಸಕ್ರಮಗೊಳಿಸುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳುವ ಮೂಲಕ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸುತ್ತಿರುವ ಜಿಲ್ಲಾಡಳಿತದ ವಿರುದ್ಧ ಪ್ರತಾಪ್ ಸಿಂಹ ಸಮರ ಸಾರುತ್ತಿರುವುದೇಕೆ? ಕೋರ್ಟ್ ಆದೇಶದಂತೆ ಎಲ್ಲ ಧರ್ಮಗಳ ಅನಧಿಕೃತ ಧಾರ್ಮಿಕ ಕೇಂದ್ರಗಳನ್ನು ಜಿಲ್ಲಾಡಳಿತ ತೆರವು ಮಾಡುವವರೆಗೂ ಸುಮ್ಮನಿರುತ್ತಿಲ್ಲವೇಕೆ? ದೇವಾಲಯ ಹೆಸರಲ್ಲಿ ಸಂಸದರು ರಾಜಕೀಯ ಮಾಡಲು ಹೊರಟಿದ್ದಾರೆ. ಅನ್ಯಧರ್ಮೀಯರ ಮೇಲೆ ಅಸಹಿಷ್ಣುತೆ ಬೆಳೆಸಲು ಈ ವಿದ್ಯಮಾನವನ್ನು ಬಳಸಿಕೊಳ್ಳುತ್ತಿದ್ದಾರೆ. ಧಾರ್ಮಿಕ ವಿಚಾರಗಳಿಗೆ ಪ್ರತಿಕ್ರಿಯೆ ನೀಡುವುದನ್ನು ಬಿಟ್ಟು, ಅಭಿವೃದ್ಧಿ ವಿಚಾರಗಳತ್ತ ಸಂಸದರು ಯೋಚಿಸಬೇಕು ಎಂದು ಪ್ರಜ್ಞಾವಂತರು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಇದನ್ನೂ ಓದಿ: ಸಂಸದ ಪ್ರತಾಪ್ ಸಿಂಹ ನನ್ನ ಮೇಲೆ ವೈಯಕ್ತಿಕ ದಾಳಿ ನಡೆಸುತ್ತಿದ್ದಾರೆ: ಡಿಸಿ ರೋಹಿಣಿ ಸಿಂಧೂರಿ
ಐಎಎಸ್ ಅಧಿಕಾರಿಗಳಾದ ರೋಹಿಣಿ ಸಿಂಧೂರಿ ಮತ್ತು ಶಿಲ್ಪಾನಾಗ್ ನಡುವಿನ ಗಲಾಟೆ ಪ್ರಕರಣದಲ್ಲೂ ಪ್ರತಾಪ್ ಸಿಂಹ ಅವರ ಹೆಸರು ಮುಂಚೂಣಿಯಲ್ಲಿತ್ತು. ಈ ಅಧಿಕಾರಿಗಳನ್ನು ಮೈಸೂರಿನಿಂದ ಎತ್ತಂಗಡಿ ಮಾಡುವ ಮೂಲಕ ವಿವಾದವನ್ನು ತಣ್ಣಗಾಗಿಸಲಾಗಿತ್ತು. ಕೋವಿಡ್ ಸಮಯದಲ್ಲಿ ಜನರತ್ತ ಗಮನ ಹರಿಸದೆ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಅಗ್ಗಜಗ್ಗಾಟದಲ್ಲಿ ಕಳೆದುಹೋಗಿದ್ದರು. ವಿವಾದಗಳಿಂದಲೇ ಎಷ್ಟು ಕಾಲ ಅಧಿಕಾರ ನಡೆಸಲು ಸಾಧ್ಯ? ಅಧಿಕಾರಿಗಳ ವಿರುದ್ಧ ಹೀಗೆ ಹೇಳಿಕೆ ನೀಡುವ ಉದ್ದೇಶವೇನು? ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆಯೇ? ಎಂಬ ಪ್ರಶ್ನೆಯನ್ನು ಜನರು ಕೇಳುತ್ತಿದ್ದಾರೆ.


