ಗುಜರಾತ್‌ನ ಬನಸ್ಕಂತ ಜಿಲ್ಲೆಯ ಹಳ್ಳಿಯಲ್ಲಿ ಬಹು ಕೋಟಿ ಹಗರಣ ಬೆಳಕಿಗೆ ಬಂದಿದ್ದು, ಎಂಜಿಎನ್‌ಆರ್‌ಇಜಿಎ ಯೋಜನೆಯಡಿ ಹಣ ವರ್ಗಾವಣೆಯ ಅರಿವಿಲ್ಲದ ಸುಮಾರು 500 ಗ್ರಾಮಸ್ಥರ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ ಎಂದು ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಆರೋಪಿಸಿದ್ದಾರೆ.
ಕೊರೊನಾದಿಂದ ಆರ್ಥಿಕವಾಗಿ ಹಾನಿಗೊಳಗಾದ ಕೆಲವು ಗ್ರಾಮಸ್ಥರು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಪಡೆಯಲು ಹೋದ ನಂತರ ಅಮೀರ್‌ಗಡ್‌ನ ಬಲುಂದ್ರ ಗ್ರಾಮದಲ್ಲಿ ಹಗರಣ ಬೆಳಕಿಗೆ ಬಂದಿದೆ ಎಂದು ಅವರು ತಿಳಿಸಿದ್ದಾರೆ.
ಗುಜರಾತ್‌ನ ಇತರ ಹಳ್ಳಿಗಳಲ್ಲಿ ಇದೇ ರೀತಿಯ ಹಗರಣಗಳು ನಡೆಯುತ್ತಿವೆ ಎಂದು ಮೇವಾನಿ ಆರೋಪಿಸಿದ್ದಾರೆ.
ಅವರ ಕ್ಷೇತ್ರವಾದ ಬನಸ್ಕಂತ ಜಿಲ್ಲೆಯ ವಡ್ಗಾವ್ ಸೇರಿದಂತೆ, ಹಲವೆಡೆ ಹಣವನ್ನು ಇತರರು ಕಸಿದುಕೊಳ್ಳುತ್ತಿದ್ದಾರೆ. ಆದರೆ ಗ್ರಾಮಸ್ಥರನ್ನು ಅದರ ಫಲಾನುಭವಿಗಳೆಂದು ತೋರಿಸಿ ವಂಚಿಸಲಾಗುತ್ತಿದೆ ಎಂದಿದ್ದಾರೆ.
ಬಲೂಂದ್ರ ಗ್ರಾಮದಲ್ಲಿ ಸುಮಾರು 500 ಜನರು MGNREGA ದೈನಂದಿನ ವೇತನ ಕೆಲಸಕ್ಕೆ ಹೋಗಿಲ್ಲ. ಆದರೂ ಅವರು ಕೆಲಸ ಮಾಡುತ್ತಿದ್ದಾರೆಂದು ತೋರಿಸಲಾಗಿದೆ. ಅವರ ಜಾಬ್ ಕಾರ್ಡ್‌ಗಳನ್ನು ತಯಾರಿಸಿ, ಅವರ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆದು ಹಣ ಹೊಡೆದಿದ್ದಾರೆ ಎಂದು ಮೇವಾನಿ ತಿಳಿಸಿದ್ದಾರೆ.
ಅಹ್ಮದಾಬಾದ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿವಿಧ ಸರ್ಕಾರಿ ಯೋಜನೆಗಳ ಲಾಭವನ್ನು ಪಡೆಯುತ್ತೀರಿ ಎಂದು ಗ್ರಾಮಸ್ಥರ ಸಹಿ ಅಥವಾ ಹೆಬ್ಬೆರಳು ಗುರುತನ್ನು ಪಡೆಯಲಾಗುತ್ತದೆ. ನಂತರ ಗ್ರಾಮಸ್ಥರ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆದು ಪಾಸ್‌ಬುಕ್ ಮತ್ತು ಎಟಿಎಂ ತಾವೇ ಇಟ್ಟುಕೊಂಡಿರುತ್ತಾರೆ. ನಂತರ ಲೂಟಿಕೋರರು ಜೆಸಿಬಿ ಯಂತ್ರಗಳನ್ನು ಬಳಸಿಕೊಂಡು ನರೇಗ ಅಡಿಯಲ್ಲಿ ನಿಗದಿಪಡಿಸಿದ ಕೆಲಸವನ್ನು ನಿರ್ವಹಿಸುತ್ತಾರೆ. ಹೆಚ್ಚು ದಿನ ಊರಿನ ಜನರೇ ಕೆಲಸ ಮಾಡಿದ್ದಾರೆ ಎಂದು ಸುಳ್ಳು ದಾಖಲೆ ಸೃಷ್ಟಿಸಿ ಆ ಖಾತೆಗಳಿಗೆ ಹಣ ಹೋಗುವಂತೆ ಮಾಡಿ ಅದನ್ನು ಲಪಟಾಯಿಸುತ್ತಿದ್ದಾರೆ. ಹೀಗೆ ಸುಮಾರು 9-10 ಕೋಟಿ ಹಣ ನುಂಗಿದ್ದಾರೆ ಎಂದು ಮೇವಾನಿ ಆರೋಪಿಸಿದ್ದಾರೆ.
ಈ ಆರೋಪಗಳನ್ನು ಸಾಬೀತುಪಡಿಸಲು ಸಾಕ್ಷ್ಯಗಳು ದೊರೆತಿವೆ ಎಂದು ಹೇಳಿದ ಮೇವಾನಿ, ಈ ಸಂಬಂಧ ಶೀಘ್ರದಲ್ಲೇ ಪೊಲೀಸರಲ್ಲಿ ದೂರು ದಾಖಲಿಸುವುದಾಗಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಗುಜರಾತ್ ಕಾಂಗ್ರೆಸ್ ಕಾರ್ಯಕಾರಿ ಅಧ್ಯಕ್ಷ ಹಾರ್ದಿಕ್ ಪಟೇಲ್ ಉಪಸ್ಥಿತರಿದ್ದರು.
ಇದನ್ನೂ ಓದಿ: ಮೆಹಬೂಬಾ ಮುಫ್ತಿ ಬಂಧನ ಕಾನೂನಿನ ದುರುಪಯೋಗ, ಸಂವಿಧಾನಕ್ಕೆ ವಿರುದ್ಧ: ಚಿದಂಬರಂ


