ಮುಂಬೈ ರೈಲು ಸ್ಪೋಟ ಪ್ರಕರಣದ ಅಪರಾಧಿಗಳನ್ನು ಖುಲಾಸೆಗೊಳಿಸಿದ್ದ ಬಾಂಬೆ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ಗುರುವಾರ ತಡೆ ನೀಡಿದೆ. ಆದರೆ, ಆರೋಪಿಗಳು ಮತ್ತೆ ಜೈಲಿಗೆ ಹೋಗುವ ಅವಶ್ಯಕತೆ ಇಲ್ಲ ಎಂದಿದೆ.
2006ರ ಮುಂಬೈ ಲೋಕಲ್ ರೈಲು ಸ್ಪೋಟ ಪ್ರಕರಣದಲ್ಲಿ ಕೆಳ ನ್ಯಾಯಾಲಯ ವಿಧಿಸಿದ್ದ 12 ಮಂದಿಯ ಶಿಕ್ಷೆಯನ್ನು ಬಾಂಬೆ ಹೈಕೋರ್ಟ್ ಜುಲೈ 21ರಂದು ರದ್ದು ಮಾಡಿತ್ತು. ಬಂಧಿತರನ್ನು ಬಿಡುಗಡೆ ಮಾಡುವಂತೆ ಸೂಚಿಸಿತ್ತು. ಇದನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ನ್ಯಾಯಮೂರ್ತಿಗಳಾದ ಎಂ. ಎಂ ನಾಗರೇಶ್ ಮತ್ತು ಎನ್ ಕೆ ಸಿಂಗ್ ಅವರ ಪೀಠವು ಈ ತೀರ್ಪನ್ನು ಬೇರೆ ಯಾವುದೇ ಪ್ರಕರಣದಲ್ಲಿ ಪೂರ್ವನಿದರ್ಶನವೆಂದು ಪರಿಗಣಿಸಲಾಗುವುದಿಲ್ಲ ಎಂದು ಹೇಳಿದೆ.
ಸರ್ಕಾರದ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, “ತಡೆಯಾಜ್ಞೆ ಎಂದರೆ ಬಿಡುಗಡೆಯಾದವರನ್ನು ಮತ್ತೆ ಜೈಲಿಗೆ ಕಳುಹಿಸಬೇಕು ಎಂದು ನಾವು ಕೋರುತ್ತಿಲ್ಲ. ಅವರು ಪ್ರಸ್ತುತ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಹಾಗಾಗಿ, ಬಗ್ಗೆ ನ್ಯಾಯಾಲಯ ಸ್ಪಷ್ಟಪಡಿಸಬೇಕಿದೆ ಎಂದಿದ್ದಾರೆ.
ಮುಂದುವರಿದು, ನ್ಯಾಯಾಲಯದ ಅವಲೋಕನಗಳು ‘ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ'( MCOCA)ಯಡಿಯ ಎಲ್ಲಾ ಪ್ರಕರಣಗಳ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದ ಸುಪ್ರೀಂ ಕೋರ್ಟ್ ಈ ಬಗ್ಗೆ ನಿರ್ಧರಿಸಬೇಕು ಎಂದು ಕೋರಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, “ಮುಂಬೈ ರೈಲು ಸ್ಫೋಟ ಪ್ರಕರಣದ ಎಲ್ಲಾ ಅಪರಾಧಿಗಳನ್ನು ಬಿಡುಗಡೆ ಮಾಡಿರುವುದು ನಮ್ಮ ಗಮನಕ್ಕೆ ಬಂದಿದೆ. ಆದ್ದರಿಂದ, ಅವರನ್ನು ಮತ್ತೆ ಜೈಲಿಗೆ ಕಳಿಸುವ ಪ್ರಶ್ನೆಯೇ ಇಲ್ಲ. ಆದಾಗ್ಯೂ, ಕಾನೂನು ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಸಾಲಿಸಿಟರ್ ಜನರಲ್ ಮಾಡಿರುವ ಹೇಳಿಕೆಗಳನ್ನು ಗಮನಿಸಿ, ಈ ಪ್ರಶ್ನಾರ್ಹ ತೀರ್ಪನ್ನು ಬೇರೆ ಯಾವುದೇ ಪ್ರಕರಣದಲ್ಲಿ ಪೂರ್ವನಿದರ್ಶನವಾಗಿ ಪರಿಗಣಿಸಬಾರದು ಎಂದು ನಾವು ಈ ಸಂದರ್ಭದಲ್ಲಿ ಹೇಳುತ್ತಿದ್ದೇವೆ. ಈ ನಿಟ್ಟಿನಲ್ಲಿ ಸದ್ಯ ಪ್ರಕರಣಕ್ಕೆ ತಡೆ ನೀಡಲಾಗಿದೆ” ಎಂದಿದೆ.
ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (MCOCA) ಅಡಿಯಲ್ಲಿ ಗೊತ್ತುಪಡಿಸಿದ ವಿಶೇಷ ನ್ಯಾಯಾಲಯವು ಸೆಪ್ಟೆಂಬರ್ 2015ರಲ್ಲಿ ಐವರು ಅಪರಾಧಿಗಳಿಗೆ ಮರಣದಂಡನೆ ಮತ್ತು ಏಳು ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿ ನೀಡಿದ್ದ ತೀರ್ಪನ್ನು ಜುಲೈ 21ರಂದು ಬಾಂಬೆ ಹೈಕೋರ್ಟ್ ರದ್ದುಗೊಳಿಸಿತ್ತು. ಎಲ್ಲಾ 12 ಅಪರಾಧಿಗಳನ್ನು ಖುಲಾಸೆಗೊಳಿಸಿತ್ತು. ಇದಕ್ಕೂ ಮುನ್ನ ವಿಶೇಷ ನ್ಯಾಯಾಲಯ ಕೂಡ ಒಬ್ಬ ವ್ಯಕ್ತಿಯನ್ನು ಖುಲಾಸೆಗೊಳಿಸಿತ್ತು.
ಹೈಕೋರ್ಟ್ ನ್ಯಾಯಮೂರ್ತಿಗಳಾದ ಅನಿಲ್ ಎಸ್. ಕಿಲೋರ್ ಮತ್ತು ಶ್ಯಾಮ್ ಸಿ ಚಂದಕ್ ಅವರ ವಿಶೇಷ ಪೀಠವು ಕೆಲವು ಪ್ರಾಸಿಕ್ಯೂಷನ್ ಸಾಕ್ಷಿಗಳ ವಿಶ್ವಾಸಾರ್ಹತೆಯನ್ನು ಮತ್ತು ಕೆಲವು ಆರೋಪಿಗಳ ಪರೀಕ್ಷಾ ಗುರುತಿನ ಪೆರೇಡ್ (ಟಿಐಪಿ) ಅನ್ನು ಪ್ರಶ್ನಿಸಿತ್ತು.
ಜುಲೈ 11, 2006ರಂದು, ಪಶ್ಚಿಮ ಉಪನಗರ ರೈಲ್ವೆ ಅಥವಾ ಮುಂಬೈ ಲೋಕಲ್ ರೈಲುಗಳ ಏಳು ಬೋಗಿಗಳಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿತ್ತು. ಈ ಘಟನೆಯಲ್ಲಿ 189 ಜನರು ಸಾವನ್ನಪ್ಪಿದ್ದರು ಮತ್ತು 824 ಜನರು ಗಾಯಗೊಂಡಿದ್ದರು.
ಕರ್ನಾಟಕದ ಲೋಕಸಭಾ ಕ್ಷೇತ್ರದಲ್ಲಿ ಭಾರಿ ಮತ ಕಳ್ಳತನ: ರಾಹುಲ್ ಗಾಂಧಿ ಗಂಭೀರ ಆರೋಪ-video


