ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ನಗರಸಭೆಯ ಪೌರಾಯುಕ್ತೆ ಜಿ. ಅಮೃತಗೌಡ ಅವರಿಗೆ ದೂರವಾಣಿ ಮೂಲಕ ಧಮ್ಕಿ ಹಾಕಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ರಾಜೀವ್ ಗೌಡ ಅವರನ್ನು ಪೊಲೀಸರು ಸೋಮವಾರ (ಜ.26) ಕರ್ನಾಟಕ-ಕೇರಳ ಗಡಿ ಸಮೀಪ ಕೇರಳ ರಾಜ್ಯದ ವ್ಯಾಪ್ತಿಯಲ್ಲಿ ಬಂಧಿಸಿದ್ದಾರೆ.
ರಾಜೀವ್ ಗೌಡ ಅವರು ಕಳೆದ 12-13 ದಿನಗಳಿಂದ ತಲೆಮರೆಸಿಕೊಂಡಿದ್ದರು. ಎಫ್‌ಐಆರ್ ರದ್ದತಿ ಮತ್ತು ನಿರೀಕ್ಷಣಾ ಜಾಮೀನು ಕೋರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಜನವರಿ 22ರಂದು ಹೈಕೋರ್ಟ್ ತಿರಸ್ಕರಿಸಿತ್ತು. ಅಲ್ಲದೆ, ಜನವರಿ 24ರಂದು ಅವರನ್ನು ಕೆಪಿಸಿಸಿ ಶಿಸ್ತುಸಮಿತಿ ಕಾಂಗ್ರೆಸ್ ಪಕ್ಷದಿಂದ ಅಮಾನತು ಮಾಡಿತ್ತು. ಇದಕ್ಕೂ ಮುನ್ನ ರಾಜೀವ್‌ಗೌಡ ಕೆಪಿಸಿಸಿ ಸಂಯೋಜಕರಾಗಿದ್ದರು.
ರಾಜೀವ್ ಗೌಡ ಅವರನ್ನು ಕೇರಳ ಗಡಿ ಪ್ರದೇಶದಲ್ಲಿ ಬಂಧಿಸಲಾಗಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಕುಶಾಲ್ ಚೌಕ್ಸೆ ಸೋಮವಾರ (ಜ.26) ದೃಢಪಡಿಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಮಂಗಳವಾರ (ಜ.27) ಹಂಚಿಕೊಳ್ಳುವುದಾಗಿ ಹೇಳಿದ್ದಾರೆ.
ಕೇರಳಕ್ಕೆ ಪ್ರಯಾಣಿಸುವ ಮೊದಲು, ರಾಜೀವ್ ಗೌಡ ಮೂರು ದಿನಗಳ ಕಾಲ ಮಂಗಳೂರಿನ ರೆಸಾರ್ಟ್‌ನಲ್ಲಿ ತಂಗಿದ್ದರು. ಅವರು ಸಂಬಂಧಿಕರ ಕಾರಿನಲ್ಲಿ ಮಂಗಳೂರಿಗೆ ತೆರಳಿದ್ದರು. ಈ ಸಂಬಂಧ ಆಶ್ರಯ ನೀಡಿದ್ದ ಮಂಗಳೂರಿನ ಉದ್ಯಮಿ ಮೈಕಲ್ ಅವರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸೋಮವಾರ ತಡರಾತ್ರಿ ಈ ಇಬ್ಬರನ್ನು ಕರೆತಂದು ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಬಳಿಯ ಅತಿಥಿ ಗೃಹದಲ್ಲಿ ಇರಿಸಲಾಗಿದೆ. ಮಂಗಳವಾರ ಬೆಳಿಗ್ಗೆಯಿಂದಲೇ ಎಎಸ್‌ಪಿ ಜಗನ್ನಾಥ ರೈ, ಡಿವೈಎಸ್‌ಪಿ ರವಿಕುಮಾರ್, ತನಿಖಾಧಿಕಾರಿ ಇನ್‌ಸ್ಪೆಕ್ಟರ್ ಆನಂದ್ ವಿಚಾರಣೆ ನಡೆಸುತ್ತಿದ್ದಾರೆ. ಸೋಕೊ ತಂಡ ಕೂಡ ವಿಚಾರಣೆಯಲ್ಲಿ ಭಾಗಿಯಾಗಿದೆ ಎಂದು ವರದಿಯಾಗಿದೆ.
ವರದಿಯೊಂದರ ಪ್ರಕಾರ, ಪೊಲೀಸರ ಕಣ್ತಪ್ಪಿಸಲು ಯತ್ನಿಸಿದ್ದ ರಾಜೀವ್ ಗೌಡ ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣದ ಬಳಿ ಕಾರು ನಿಲ್ಲಿಸಿ, ಉದ್ಯಮಿಯ ಕಾರಿನಲ್ಲಿ ತಲಪಾಡಿ ಮಾರ್ಗವಾಗಿ ಕಾಸರಗೋಡಿನತ್ತ ಹೋಗುತ್ತಿದ್ದರು. ಈ ವೇಳೆ ಪೊಲೀಸರು ಬಂಧಿಸಿದ್ದಾರೆ.
ಸಚಿವ ಝಮೀರ್ ಅಹ್ಮದ್ ಅವರ ಮಗ ಝೈದ್ ಖಾನ್ ನಟನೆಯ ‘ಕಲ್ಟ್’ ಸಿನಿಮಾದ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿದ ವಿಚಾರವಾಗಿ ರಾಜೀವ್ ಗೌಡ, ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಜಿ. ಅಮೃತಗೌಡ ಅವರೊಂದಿಗೆ ಗೂಂಡಾವರ್ತನೆ ಮಾಡಿ ಧಮ್ಕಿ ಹಾಕಿದ್ದರು.
ರಾಜೀವ್ ಗೌಡ ಅವರು ಅಧಿಕಾರಿ ಅಮೃತಗೌಡ ಅವರಿಗೆ ಕರೆ ಮಾಡಿ ಅವಾಚ್ಯವಾಗಿ ನಿಂದಿಸಿದ್ದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.


