ರಾಜ್ಯ ಪೊಲೀಸ್ ಮಹಾನಿರ್ದೇಶಕ ಹಾಗೂ ಮಹಾನಿರೀಕ್ಷಕ (ಡಿಜಿ-ಐಜಿಪಿ) ಎಂ.ಎ ಸಲೀಂ ಅವರ ವಿರುದ್ಧ ಸುಳ್ಳು ಮಾಹಿತಿ ಹರಡಿದ ಆರೋಪದ ಮೇಲೆ ಕೊಲೆ ಆರೋಪಿ ಪುನೀತ್ ಕೆರೆಹಳ್ಳಿ ವಿರುದ್ದ ಬೆಂಗಳೂರಿನ ಸೈಬರ್ ಅಪರಾಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ಎಫ್‌ಐಆರ್ ಪ್ರಕಾರ, ಪುನೀತ್ ಕೆರೆಹಳ್ಳಿ ಮತ್ತು ಆತನ ಗುಂಪು ಜನವರಿ 22ರಂದು ಬೆಂಗಳೂರಿನ ಸೋಲದೇವನಹಳ್ಳಿ ಬಳಿಯ ಕೆಂಪಾಪುರದ ಶ್ವೇತಾ ಫಾರಂ ರಸ್ತೆಯಲ್ಲಿನ ಸಕೀನಾ ತಸ್ನೀಮ್ ಎಂಬುವರಿಗೆ ಸೇರಿದ ಜಾಗಕ್ಕೆ ಹೋಗಿ ಗಲಾಟೆ ಮಾಡಿದ್ದರು. ಬಾಂಗ್ಲಾದೇಶದವರನ್ನು ಮಾನವ ಕಳ್ಳ ಸಾಗಾಣಿಕೆ ಮೂಲಕ ಕರೆತಂದು ಅಕ್ರಮ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ವಾಗ್ವಾದ ನಡೆಸಿದ್ದರು.
ಶ್ವೇತಾ ಫಾರಂ ರಸ್ತೆಯ ಜಾಗವು ಡಿಜಿ-ಐಜಿಪಿ ಎಂ.ಎ.ಸಲೀಂ ಅವರ ಬೇನಾಮಿ ಆಸ್ತಿ ಎಂದು ಪುನೀತ್ ಮತ್ತು ಆತನ ಸಹಚರರು ಸುಳ್ಳಾರೋಪ ಮಾಡಿದ್ದರು. ಅಲ್ಲದೆ, ಆ ಜಾಗದಲ್ಲಿ ಬಾಂಗ್ಲಾ ಪ್ರಜೆಗಳು ಅಕ್ರಮವಾಗಿ ನೆಲೆಸಿದ್ದಾರೆ ಎಂದು ವಿಡಿಯೋ ಮಾಡಿ ಫೇಸ್‍ಬುಕ್ ಮತ್ತು ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು ಎಂದು ಪೊಲೀಸರು ಹೇಳಿದ್ದಾಗಿ ವರದಿಯಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಿಬಿಟ್ಟು ಸಮಾಜದಲ್ಲಿ ಶಾಂತಿ ಕದಡಿದ, ಕೋಮು ಸಾಮರಸ್ಯಕ್ಕೆ ಧಕ್ಕೆ ತಂದ, ಸಾರ್ವಜನಿಕರನ್ನು ಪ್ರಚೋದಿಸಿದ, ಸಮುದಾಯಗಳ ನಡುವೆ ದ್ವೇಷ ಮೂಡಿಸಿದ ಹಾಗೂ ಮಾಹಿತಿ ತಂತ್ರಜ್ಞಾನ ದುರ್ಬಳಕೆ ಆರೋಪದಡಿ ಪುನೀತ್ ಕೆರೆಹಳ್ಳಿ ಮತ್ತು ಸಹಚರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ದಿ ಹಿಂದೂ ವರದಿ ಮಾಡಿದೆ.
ಜನವರಿ 23ರಂದು ಬೆಂಗಳೂರು ನಗರ ಪೊಲೀಸರ ಸಾಮಾಜಿಕ ಮಾಧ್ಯಮ ಮೇಲ್ವಿಚಾರಣಾ ಘಟಕವು ಫೇಸ್‌ಬುಕ್ ಮತ್ತು ಇತರ ವೇದಿಕೆಗಳಲ್ಲಿ ವಿಡಿಯೋ ಪ್ರಸಾರವಾಗುತ್ತಿರುವುದನ್ನು ಗಮನಿಸಿದಾಗ ಈ ಘಟನೆ ಬೆಳಕಿಗೆ ಬಂದಿತ್ತು. ಈ ಸಂಬಂಧ ಪೊಲೀಸ್ ಅಧಿಕಾರಿಯೊಬ್ಬರು ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪೊಲೀಸ್ ಅಧಿಕಾರಿಯ ದೂರಿನ ಆಧಾರದ ಮೇಲೆ, ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 196 (ಧರ್ಮ, ಜನಾಂಗ, ಜನ್ಮಸ್ಥಳ, ನಿವಾಸ ಅಥವಾ ಭಾಷೆಯ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 353 (ಸಾರ್ವಜನಿಕ ಕಿಡಿಗೇಡಿತನಕ್ಕೆ ಕಾರಣವಾಗುವ ಹೇಳಿಕೆಗಳು) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಳೆದ ಹತ್ತು ದಿನಗಳಲ್ಲಿ ಪುನೀತ್ ಕೆರೆಹಳ್ಳಿ ವಿರುದ್ಧ ದಾಖಲಾಗಿರುವ ಮೂರನೇ ಎಫ್‌ಐಆರ್ ಇದಾಗಿದೆ.
ಇದಕ್ಕೂ ಮುನ್ನ, ಮನೆಯೊಂದಕ್ಕೆ ಅತಿಕ್ರಮಣ ಪ್ರವೇಶ ಮಾಡಿ ಬಾಡಿಗೆದಾರರನ್ನು ಅಕ್ರಮ ವಲಸಿಗರೆಂದು ಆರೋಪಿಸಿ, ವಲಸಿಗರಿಗೆ ಮನೆಯನ್ನು ನೀಡಿದ್ದಕ್ಕಾಗಿ ಮನೆ ಮಾಲೀಕರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಜನವರಿ 16ರಂದು ಬನ್ನೇರುಘಟ್ಟ ಪೊಲೀಸರು ಪುನೀತ್ ಕೆರೆಹಳ್ಳಿಯನ್ನು ಬಂಧಿಸಿದ್ದರು.


