ಗೋಸಾಗಾಟ ನೆಪದಲ್ಲಿ ಹಲ್ಲೆ-ಗೂಂಡಾಗಿರಿ ನಡೆಸಿದರೆ ಅಂತಹವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಅವರಿಗೆ ಸಾಮಾಜಿಕ ಜಾಲತಾಣ ವಾಟ್ಸಪ್ ಗ್ರೂಪ್ ನಲ್ಲಿ ಕೊಲೆ ಬೆದರಿಕೆ ಒಡ್ಡಿರುವ ಘಟನೆ ನಡೆದಿದೆ.
ದ.ಕ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ನಡೆದಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅಕ್ರಮ ಗೋ ಸಾಗಾಟ ನಡೆಸುವವರನ್ನು ಪೊಲೀಸರಿಗೆ ಒಪ್ಪಿಸಬೇಕು, ಸಾರ್ವಜನಿಕರು ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಜಾನುವಾರು ಸಾಗಾಟ ಮಾಡುವ ವಾಹನ ಹಾಗೂ ಜನರ ಮೇಲೆ ಹಲ್ಲೆ ನಡೆಸಿದರೆ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದ್ದರು.
ಜಿಲ್ಲಾಧಿಕಾರಿಯ ಈ ಹೇಳಿಕೆಯನ್ನು ಮಾಧ್ಯಮಗಳು ವರದಿ ಮಾಡಿದ್ದು, ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು. ಈ ಮಾದ್ಯಮ ವರದಿಯ ಪೋಸ್ಟ್‌ಗೆ ಸಂಬಂಧಿಸಿ “ರಾಮ್ ಸೇನಾ” ಎಂಬ ವಾಟ್ಸಪ್ ಗುಂಪಿನಲ್ಲಿ +919632188546 ಮೊಬೈಲ್ ಸಂಖ್ಯೆಯಲ್ಲಿ ವ್ಯಕ್ತಿಯೊಬ್ಬ ತುಳು ಭಾಷೆಯಲ್ಲಿ ಜಿಲ್ಲಾಧಿಕಾರಿಗಳನ್ನು ಕಡಿದು ಕೊಲೆ ಮಾಡಬೇಕು ಎಂಬ ಅರ್ಥ ಬರುವ ಸಂದೇಶವನ್ನು ಹಾಕಿದ್ದಾರೆ.


ನಮ್ಮ ಹಿಂದುತ್ವಕ್ಕೆ ಆಗಲಿ ನಮ್ಮ ದೇವರಿಗೆ ಆಗಲಿ ಯಾರಾದರು ಧಕ್ಕೆ ಮಾಡಿದರೆ ಜೀವ ತೆಗೆಯಲೂ ತಯಾರು ಹಾಗೂ ಜೀವ ಕೊಡಲೂ ತಯಾರು ಎಂದು ಅವರು ಚಾಟ್‌ನಲ್ಲಿ ಮಾತನಾಡಿದ್ದಾರೆ. ಇದಕ್ಕೆ ಕೆಲವರು ಸಮ್ಮತಿ ಕೂಡಾ ಸೂಚಿಸಿದ್ದಾರೆ.
ಈ ಸಂದೇಶ ಇದೀಗ ವೈರಲ್ ಆಗಿದ್ದು, ಸಾರ್ವಜನಿಕ ವಲಯದಿಂದ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಕೊಲೆ ಬೆದರಿಕೆ ಹಾಕಿದವರನ್ನು ಕಾನೂನಿನ ಅಡಿಯಲ್ಲಿ ತಂದು ಶಿಕ್ಷಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಯಿಸಿರುವ ಮಂಗಳೂರು ಉಪ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ಅರುಣಾಂಶಗಿರಿ, “ಈ ಬಗ್ಗೆ ತನಿಖೆ ಪ್ರಾರಂಭವಾಗಿದೆ. ಜಿಲ್ಲಾಧಿಕಾರಿ ಜತೆ ಮಾತಾಡಿದ್ದೇವೆ. ಜಿಲ್ಲಾಧಿಕಾರಿ ದೂರು ನೀಡಿದರೆ ಸ್ವೀಕರಿಸಲಾಗುತ್ತದೆ. ಇಲ್ಲವಾದರೆ ಸ್ವಯಂಪ್ರೇರಿತ ಪ್ರಕರಣ ದಾಖಲು ಮಾಡಿಕೊಳ್ಳಲಾಗುತ್ತದೆ. ಯಾವ ಕಾರಣಕ್ಕೂ ಪ್ರಕರಣವನ್ನು ಕಡೆಗಣಿಸಲಾಗುವುದಿಲ್ಲ” ಎಂದಿದ್ದಾರೆ.
ಈತನ್ಮಧ್ಯೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರನ್ನು ತಕ್ಷಣದಿಂದ ಜಾರಿಯಾಗುವಂತೆ ವರ್ಗಾವಣೆಗೊಳಿಸಿ ಕರ್ನಾಟಕ ಸರಕಾರ ಆದೇಶ ಹೊರಡಿಸಿದೆ. ಅವರನ್ನು ಎಲೆಕ್ಟ್ರಾನಿಕ್ ಡೆಲಿವರಿ ಆಫ್ ಸಿಟಿಝನ್ ಸರ್ವೀಸ್(ಈಡಿಸಿಎಸ್) ನಿರ್ದೇಶಕರಾಗಿ ನಿಯೋಜಿಸಲಾಗಿದೆ.
ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಬೆಳಗಾವಿ ಜಿಲ್ಲಾ ಪಂಚಾಯತ್ ಸಿಇಒ ಆಗಿದ್ದ ಡಾ.ರಾಜೇಂದ್ರ ಕೆ.ವಿ ರವರನ್ನು ನೇಮಕಗೊಳಿಸಲಾಗಿದೆ.
ರಾಜ್ಯ ಸರಕಾರವು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಸೇರಿದಂತೆ ಒಟ್ಟು 14 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಇಂದು ಆದೇಶ ಹೊರಡಿಸಿದೆ.
ಓದಿ: ಮಂಗಳೂರು ಗೋಲಿಬಾರ್ ನಲ್ಲಿ ಮೃತಪಟ್ಟವರು ಅಮಾಯಕರು: ವಿಧಾನಸಭಾ ಅಧಿವೇಶನದಲ್ಲಿ ಕುಮಾರಸ್ವಾಮಿ


