ಮಹಾರಾಷ್ಟ್ರದ ಜಾಮ್ನೇರ್‌ನಲ್ಲಿ ನಡೆದ ಒಂದು ಭೀಕರ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಸುಲೇಮಾನ್ ರಹೀಮ್ ಖಾನ್ (21) ಎಂಬ ಯುವಕನನ್ನು ಅಪಹರಿಸಿ, ಥಳಿಸಿ ಹತ್ಯೆ ಮಾಡಲಾಗಿದೆ. ಈ ಘಟನೆ ಜಾಮ್ನೇರ್ ತಾಲೂಕಿನ ಚೋಟಿ ಬೆಟವಾಡ್ ಗ್ರಾಮದಲ್ಲಿ ಸೋಮವಾರದಂದು ನಡೆದಿದೆ. ಸುಲೇಮಾನ್, ಒಬ್ಬ ರೈತನ ಮಗ. ಇತ್ತೀಚೆಗೆ 12ನೇ ತರಗತಿ ಪೂರೈಸಿದ್ದ ಈ ಯುವಕ, ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಕನಸು ಕಂಡಿದ್ದನು. ಇದೇ ಉದ್ದೇಶಕ್ಕಾಗಿ ಪೊಲೀಸ್ ನೇಮಕಾತಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಜಾಮ್ನೇರ್‌ಗೆ ತೆರಳಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಘಟನೆ ನಡೆದಿದ್ದು ಹೇಗೆ?
ಸುದ್ದಿ ಮೂಲಗಳ ಪ್ರಕಾರ, ಸುಲೇಮಾನ್ ಸ್ಥಳೀಯ ಪೊಲೀಸ್ ಠಾಣೆಯ ಸಮೀಪದ ಕೆಫೆಯಲ್ಲಿ ಇನ್ನೊಂದು ಸಮುದಾಯಕ್ಕೆ ಸೇರಿದ 17 ವರ್ಷದ ಯುವತಿಯೊಂದಿಗೆ ಇದ್ದಾಗ 9-15 ಜನರ ಗುಂಪೊಂದು ದಾಳಿ ಮಾಡಿದೆ. ಗುಂಪು ಸುಲೇಮಾನ್ ಅವರನ್ನು ಬಲವಂತವಾಗಿ ವಾಹನಕ್ಕೆ ಹತ್ತಿಸಿಕೊಂಡು ಹೋಗಿ, ಬೇರೆ ಬೇರೆ ಸ್ಥಳಗಳಲ್ಲಿ ಮಾರಣಾಂತಿಕವಾಗಿ ಹಲ್ಲೆ ಮಾಡಿದೆ. ಕಬ್ಬಿಣದ ರಾಡ್‌ಗಳು, ದೊಣ್ಣೆಗಳು ಮತ್ತು ಕೈಗಳಿಂದಲೂ ಕ್ರೂರವಾಗಿ ಥಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಲ್ಲೆಯಿಂದಾಗಿ ಸುಲೇಮಾನ್ ಅವರ ದೇಹದ ಮೇಲೆ ಒಂದಿಂಚೂ ಗಾಯಗಳಿಲ್ಲದ ಜಾಗ ಇರಲಿಲ್ಲ ಎಂದು ಅವರ ತಂದೆ ರಹೀಮ್ ಖಾನ್ ನೋವಿನಿಂದ ಹೇಳಿದ್ದಾರೆ.
ಕುಟುಂಬದ ಮೇಲೆ ಹಲ್ಲೆ
ದಾಳಿಕೋರರು ಸುಲೇಮಾನ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಬದಲು, ಅವರ ನಿರ್ಜೀವ ದೇಹವನ್ನು ಮನೆಯ ಮುಂದೆ ಎಸೆದು ಹೋಗಿದ್ದಾರೆ. ಈ ಭಯಾನಕ ದೃಶ್ಯವನ್ನು ಕಂಡ ಸುಲೇಮಾನ್ ಅವರ ಪೋಷಕರು ಮತ್ತು ಸಹೋದರಿ ಅವನನ್ನು ರಕ್ಷಿಸಲು ಓಡಿ ಬಂದಾಗ, ದುಷ್ಕರ್ಮಿಗಳು ಅವರ ಮೇಲೂ ಹಲ್ಲೆ ಮಾಡಿದ್ದಾರೆ. ತಂದೆ ರಹೀಮ್ ಖಾನ್, ತಾಯಿ ಮತ್ತು ಸಹೋದರಿ ಗಾಯಗೊಂಡಿದ್ದಾರೆ. ಸುಲೇಮಾನ್ ಅವರನ್ನು ಜಲಗಾಂವ್ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅವರು ಅದಾಗಲೇ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಸುಲೇಮಾನ್ ಅವರ ಕುಟುಂಬದ ಕೋರಿಕೆಯ ಮೇರೆಗೆ, ಹಲ್ಲೆಯ ಎಲ್ಲ ಗಾಯಗಳನ್ನು ದಾಖಲಿಸಲು ಪೊಲೀಸ್ ರಕ್ಷಣೆಯ ಅಡಿಯಲ್ಲಿ ಇನ್-ಕ್ಯಾಮೆರಾ ಶವಪರೀಕ್ಷೆ ನಡೆಸಲಾಗಿದೆ.
मॉब लिंचिंग का एक और मामला। सोमवार दोपहर जलगांव के Jamner तालुका के एक गाँव में गुंडों ने 20 वर्षीय कॉलेज छात्र की उसके माता-पिता और बहन के सामने पीट-पीटकर हत्या कर दी। सुलेमान खान पर इस आरोप में हमला किया गया कि वह दूसरे समुदाय की लड़की से बात कर रहा था। पुलिस अब परिवार पर अंतिम… pic.twitter.com/ohmDnH9XqE
— Imtiaz Jaleel (@imtiaz_jaleel) August 12, 2025
ನ್ಯಾಯಕ್ಕಾಗಿ ಆಗ್ರಹ
ಸುಲೇಮಾನ್ ಅವರ ತಂದೆ ರಹೀಮ್ ಖಾನ್, “ನನ್ನ ಮಗನ ದೇಹದ ಮೇಲೆ ಗಾಯಗಳಿಲ್ಲದ ಒಂದಿಂಚೂ ಜಾಗ ಇರಲಿಲ್ಲ. ಅವರು ಅವನನ್ನು ಬಡಿದು ಹಾಕಿಬಿಟ್ಟರು. ನಾವು ಅವನನ್ನು ಉಳಿಸಲು ಹೋದಾಗ, ನಮ್ಮ ಮೇಲೂ ಹಲ್ಲೆ ಮಾಡಿದರು. ಸುಲೇಮಾನ್ ನನ್ನ ಒಬ್ಬನೇ ಮಗ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವವರೆಗೂ ನಾನು ಸುಮ್ಮನಿರಲ್ಲ,” ಎಂದು ಕಣ್ಣೀರು ಹಾಕಿದ್ದಾರೆ.
ಈ ಘಟನೆ ಜಾಮ್ನೇರ್‌ನಾದ್ಯಂತ ತೀವ್ರ ಉದ್ವಿಗ್ನತೆಯನ್ನು ಸೃಷ್ಟಿಸಿದೆ. ರಾಜ್ಯದಲ್ಲಿ ಕೋಮು ಹಿಂಸಾಚಾರ ಹೆಚ್ಚುತ್ತಿರುವ ಬಗ್ಗೆ ಆತಂಕಗಳು ವ್ಯಕ್ತವಾಗಿವೆ. ಬೀಡ್‌ನಲ್ಲಿ ನಡೆದ ಗುಂಪು ಹತ್ಯೆಯ ನಂತರ ಇದು ಮತ್ತೊಂದು ಭೀಕರ ಘಟನೆಯಾಗಿದೆ. ಸುಲೇಮಾನ್ ಕುಟುಂಬ ಮತ್ತು ಸಮುದಾಯದ ಮುಖಂಡರು, ಈ ದಾಳಿಯನ್ನು “ಗುಂಪು ಹಿಂಸಾಚಾರದ ಪಠ್ಯಪುಸ್ತಕ ಪ್ರಕರಣ” ಎಂದು ಬಣ್ಣಿಸಿ, ಆರೋಪಿಗಳನ್ನು ಮಹಾರಾಷ್ಟ್ರ ಕಂಟ್ರೋಲ್ ಆಫ್ ಆರ್ಗನೈಸ್ಡ್ ಕ್ರೈಮ್ ಆಕ್ಟ್ (MCOCA) ಅಡಿಯಲ್ಲಿ ಬಂಧಿಸಬೇಕೆಂದು ಆಗ್ರಹಿಸುತ್ತಿದ್ದಾರೆ.
ಪ್ರತಿಭಟನೆ ಮತ್ತು ತನಿಖೆ
ಘಟನೆಯನ್ನು ಖಂಡಿಸಿ, ಸೋಮವಾರ ಸಂಜೆ ಸ್ಥಳೀಯರು ಜಾಮ್ನೇರ್ ಪೊಲೀಸ್ ಠಾಣೆಯ ಮುಂದೆ ಧರಣಿ ನಡೆಸಿದರು. ಕೂಡಲೇ ಆರೋಪಿಗಳನ್ನು ಬಂಧಿಸಬೇಕೆಂದು ಒತ್ತಾಯಿಸಿದರು. ಆಡಳಿತ ವೈಫಲ್ಯ ಮತ್ತು ಕಾನೂನು ಸುವ್ಯವಸ್ಥೆಯ ಸಂಪೂರ್ಣ ಕುಸಿತದ ಬಗ್ಗೆ ಮಾನವ ಹಕ್ಕುಗಳ ಸಂಘಟನೆಗಳು ಕಟುವಾಗಿ ಟೀಕಿಸಿವೆ.
ಎಐಎಂಐಎಂನ ಮಾಜಿ ಸಂಸದ ಇಮ್ತಿಯಾಜ್ ಜಲೀಲ್ ಅವರು ಈ ಘಟನೆಯನ್ನು “ಮಹಾರಾಷ್ಟ್ರದಲ್ಲಿ ಮತ್ತೊಂದು ಗುಂಪು ಹತ್ಯೆ” ಎಂದು ಕರೆದಿದ್ದಾರೆ.
ಪರಿಸ್ಥಿತಿ ಹದಗೆಡುತ್ತಿದ್ದಂತೆ, ಪೊಲೀಸ್ ವರಿಷ್ಠಾಧಿಕಾರಿ ಮಹೇಶ್ವರ ರೆಡ್ಡಿ ಅವರು ವೈಯಕ್ತಿಕವಾಗಿ ಸ್ಥಳಕ್ಕೆ ಭೇಟಿ ನೀಡಿ, ತನಿಖೆ ನಡೆಸುವ ಭರವಸೆ ನೀಡಿದರು. ಇದುವರೆಗೆ ನಾಲ್ವರನ್ನು ಬಂಧಿಸಲಾಗಿದೆ ಮತ್ತು ಇನ್ನೂ ಐದು ಮಂದಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ. ಇದು “ಅಂತರ-ಸಮುದಾಯ ಸಂಬಂಧ”ದ ಹಿನ್ನೆಲೆಯಲ್ಲಿ ನಡೆದ ಘಟನೆ ಎಂದು ಮೇಲ್ನೋಟಕ್ಕೆ ಕಂಡುಬಂದರೂ, ತನಿಖೆ ಪೂರ್ಣಗೊಳ್ಳುವವರೆಗೂ ನಿರ್ದಿಷ್ಟ ಕಾರಣವನ್ನು ಹೇಳಲು ಸಾಧ್ಯವಿಲ್ಲ ಎಂದು ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಜಾಮ್ನೇರ್‌ನಲ್ಲಿ ಸದ್ಯ ಪರಿಸ್ಥಿತಿ ಹತೋಟಿಯಲ್ಲಿದ್ದರೂ, ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಈ ಪ್ರಕರಣ, ಮಹಾರಾಷ್ಟ್ರದಲ್ಲಿ ಹೆಚ್ಚುತ್ತಿರುವ ಗುಂಪು ಹಿಂಸಾಚಾರವನ್ನು ನಿಯಂತ್ರಿಸಲು ಸರ್ಕಾರಕ್ಕೆ ಒಂದು ಸವಾಲಾಗಿದೆ. ಆರೋಪಿಗಳಿಗೆ ನ್ಯಾಯಯುತ ಮತ್ತು ಕಠಿಣ ಶಿಕ್ಷೆ ವಿಧಿಸಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.


