ಶುಕ್ರವಾರ (ಡಿಸೆಂಬರ್ 12) ರಾತ್ರಿ ಬಿಹಾರದ ನವಾಡಾ ಜಿಲ್ಲೆಯಲ್ಲಿ ಧಾರ್ಮಿಕ ಗುರುತು ಕೇಳಿ (ಧರ್ಮ ಕೇಳಿ) ಗುಂಪೊಂದು ಮುಸ್ಲಿಂ ಬಟ್ಟೆ ವ್ಯಾಪಾರಿ ಮೇಲೆ ಹಲ್ಲೆ ನಡೆಸಿದ್ದು, ಗಂಭೀರ ಗಾಯಗೊಂಡಿದ್ದ ಅವರು ಸಾವನ್ನಪ್ಪಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಗಗನ್ ದಿವಾನ್ ಗ್ರಾಮದ ನಿವಾಸಿ ಮೊಹಮ್ಮದ್ ಅಥರ್ ಹುಸೇನ್ ಸೈಕಲ್‌ನಲ್ಲಿ ಬಟ್ಟೆ ಮಾರಾಟ ಮಾಡುತ್ತಿದ್ದರು. ಡಿಸೆಂಬರ್ 5ರಂದು ರೋಹ್ ಪೊಲೀಸ್ ಠಾಣೆ ವ್ಯಾಪ್ತಿಯ ಭಟ್ವಾಪರ್ ಗ್ರಾಮದ ಬಳಿ ಅವರ ಮೇಲೆ ಹಲ್ಲೆ ನಡೆದಿತ್ತು. ಹುಸೇನ್ ಮನೆಗೆ ಹಿಂದಿರುಗುತ್ತಿದ್ದಾಗ ಅವರ ಸೈಕಲ್ ಚಕ್ರ ಪಂಕ್ಚರ್ ಆಗಿತ್ತು. ಅದನ್ನು ರಿಪೇರಿ ಮಾಡಿಸಲು ಸೈಕಲ್ ಅಂಗಡಿ ಹುಡುಕುತ್ತಿದ್ದರು. ಈ ವೇಳೆ ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ವರದಿ ತಿಳಿಸಿದೆ.
“ಭಟ್ವಾಪರ್ ಗ್ರಾಮದಲ್ಲಿ ಗುಂಪೊಂದು ಹುಸೇನ್ ಅವರನ್ನು ತಡೆದು ನಿಲ್ಲಿಸಿ ಹೆಸರು ಮತ್ತು ಕೆಲಸ ಕೇಳಿದೆ. ನಂತರ ಅವರ ಮೇಲೆ ದಾಳಿ ನಡೆಸಿದೆ. ಆರೋಪಿಗಳು ಹುಸೇನ್ ಅವರ ಕಿವಿಗಳನ್ನು ಕತ್ತರಿಸಿದ್ದಾರೆ. ಕಾದ ಕಬ್ಬಿಣದಿಂದ ಥಳಿಸಿದ್ದಾರೆ” ಎಂದು ಹುಸೇನ್ ಸಹೋದರ ಮೊಹಮ್ಮದ್ ಶಕೀಬ್ ಆಲಂ ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.
“ಆರೋಪಿಗಳು ಮೊದಲು ನನ್ನ ಹೆಸರು ಕೇಳಿದರು. ನಂತರ ಸೈಕಲ್‌ನಿಂದ ಎಳೆದು ನೆಲಕ್ಕೆ ಕೆಡವಿದರು. ನನ್ನಲ್ಲಿದ್ದ 18 ಸಾವಿರ ರೂಪಾಯಿ ಹಣ ದೋಚಿದರು, ಬಳಿಕ ಥಳಿಸಿದರು. ಆರಂಭದಲ್ಲಿ ಕಡಿಮೆ ಜನರ ಗುಂಪಿತ್ತು, ನಂತರ 15 ರಿಂದ 20 ಜನರು ಸೇರಿಕೊಂಡರು ಎಂದು ಹಲ್ಲೆಗೊಳಗಾದ ನಂತರ ರೆಕಾರ್ಡ್ ಮಾಡಲಾದ ವಿಡಿಯೋದಲ್ಲಿ ಹುಸೇನ್ ಹೇಳಿದ್ದಾರೆ” ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವಿವರಿಸಿದೆ.
“ನನ್ನ ಖಾಸಗಿ ಭಾಗವನ್ನು ಪರಿಶೀಲಿಸಲು ಆರೋಪಿಗಳು ವಿವಸ್ತ್ರಗೊಳಿಸಿದರು. ನಂತರ ಕಾದ ಕಬ್ಬಿಣದಿಂದ ಥಳಿಸಿದರು” ಎಂದೂ ಹುಸೇನ್ ತಿಳಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಹುಸೇನ್ ಅವರನ್ನು ಮೊದಲು ರೋಹ್‌ನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ನಂತರ ನವಾಡಾ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರಿಸ್ಥಿತಿ ಗಂಭೀರವಾದಾಗ ಪವಾಪುರಿ ವಿಐಎಂಎಸ್‌ಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಶುಕ್ರವಾರ ತಡರಾತ್ರಿ ನಿಧನರಾದರು. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದು ವರದಿ ಹೇಳಿದೆ.
ಪ್ರಕರಣ ಸಂಬಂಧ ಇದುವರೆಗೆ ಆರು ಜನರನ್ನು ಬಂಧಿಸಲಾಗಿದ್ದು, ಇಬ್ಬರು ಅಪ್ರಾಪ್ತ ವಯಸ್ಕರನ್ನೂ ಬಂಧನ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಸೆಂಬರ್ 6ರಂದು ಹುಸೇನ್ ಅವರ ಪತ್ನಿ ಶಬ್ನಮ್ ಪರ್ವೀನ್ ದಾಖಲಿಸಿರುವ ದೂರಿನಲ್ಲಿ ಭಟ್ಟಾಪರ್ ಗ್ರಾಮದ 10 ಜನರನ್ನು ಆರೋಪಿಗಳೆಂದು ಹೆಸರಿಸಿದ್ದಾರೆ. ಹುಸೇನ್ ಮೇಲೆ ಹಲ್ಲೆ ನಡೆಸಿದ ಇತರ ಹತ್ತು ಜನರ ಗುರುತು ಪತ್ತೆಯಾಗಿಲ್ಲ.
ಕಳ್ಳತನದ ಸುಳ್ಳು ಆರೋಪ ಹೊರಿಸಿ ಹುಸೇನ್ ಮೇಲೆ ಹಲ್ಲೆ ನಡೆಸಲಾಗಿದೆ ಮತ್ತು ಗ್ರಾಮಕ್ಕೆ ಬಂದ ಅವರ ಕುಟುಂಬ ಸದಸ್ಯರನ್ನು ಕೂಡ ನಿಂದಿಸಿ ಬೆದರಿಕೆ ಹಾಕಲಾಗಿದೆ ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ.
ಶಬ್ನಮ್ ದೂರು ಆಧರಿಸಿ ಪೊಲೀಸರು ಆರಂಭದಲ್ಲಿ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಕಾನೂನುಬಾಹಿರ ಗುಂಪು ಸೇರುವಿಕೆ, ಗಲಭೆ ಮತ್ತು ಗಂಭೀರ ಗಾಯಕ್ಕೆ ಸಂಬಂಧಿಸಿದ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಹುಸೇನ್ ನಿಧನರಾದ ನಂತರ ಕೊಲೆ ಆರೋಪಗಳನ್ನು ಸೇರಿಸಲಾಗಿದೆ.
ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ಸಿಕಂದರ್ ಯಾದವ್ ಕೂಡ ವಿರುದ್ದ ದೂರು ದಾಖಲಿಸಿದ್ದು, ಹುಸೇನ್ ಆ ರಾತ್ರಿ ಕಳ್ಳತನಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಎರಡೂ ದೂರುಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಶೇಷ ತನಿಖಾ ತಂಡವು ಘಟನೆ ನಡೆದು 24 ಗಂಟೆಗಳ ಒಳಗೆ ನಾಲ್ವರು ಶಂಕಿತರನ್ನು ಮತ್ತು ಶನಿವಾರ ಇನ್ನೂ ನಾಲ್ವರನ್ನು ಬಂಧಿಸಿದೆ ಎಂದು ನವಾಡಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಧಿಮಾನ್ ತಿಳಿಸಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
“ಒಟ್ಟು ಎಂಟು ಜನರನ್ನು ಬಂಧಿಸಲಾಗಿದೆ ಅಥವಾ ವಶಕ್ಕೆ ಪಡೆಯಲಾಗಿದೆ. ಉಳಿದ ಆರೋಪಿಗಳನ್ನು ಪತ್ತೆಹಚ್ಚಲು ಬಲೆ ಬೀಸಿದ್ದೇವೆ” ಎಂದು ಧಿಮಾನ್ ಹೇಳಿದ್ದಾರೆ.


