ವಿಶ್ವ ಕಾವ್ಯ ದಿನದ ಅಂಗವಾಗಿ ಯುವ ಕವಯತ್ರಿ ಮತ್ತು ಬರಹಗಾರ್ತಿ ಮಿಸ್ರಿಯಾ. ಐ.ಪಜೀರ್‌ರವರು ಬರೆದ ಕವನ.
ನನ್ನೊಳಗಿನ ಕವಿತೆ
————————–
ಪುಟ್ಟ ಕೈಯಲ್ಲಿ ಗೀಚಿದ
ಪುಟ್ಟ ಕವಿತೆ
ಇಂದಿಗೂ ಜೋಪಾನವಾಗಿದೆ..
ಅಲ್ಲಿ,
ಹಕ್ಕಿಗಳ ಸರಸವ ಹೊತ್ತೊಯ್ವ
ಗಾಳಿಗೆ ಮಾದಕತೆಯಿತ್ತು
ಹರಿವ ನದಿಗಳಿಗೆ
ತವರು ಸೇರುವ ತವಕವಿತ್ತು..
ಬಣ್ಣ ಬಣ್ಣದ ಚಿಟ್ಟೆ
ಹೂವ ಚುಂಬಿಸಲು
ರಂಗೇರಿಸುವ ಕನಸು
ಮೂಡುತಿತ್ತು
ನೇಸರನ ಕಣ್ತಪ್ಪಿಸಿ
ಧರೆಗಿಳಿವ ಇಬ್ಬನಿ
ಎಲೆಗೆ ಮುತ್ತಿಕ್ಕುವ ಸದ್ದಿಗೆ
ಮುಂಜಾವು ಸಾಕ್ಷಿ ನುಡಿಯುತಿತ್ತು
ಬೆಂಬಿಡದ ರವಿತೇಜ
ಬಾಣ ರಶ್ಮಿಯ
ಗುರಿಯಿಡಲು ಎಲೆಯೆದೆಗೆ
ಹನಿ ಮುತ್ತಾಗುವ ಹೊತ್ತು
ಮುತ್ತ ಭಾನು ತನ್ನೂರಿಗೆ
ಹೊತ್ತೊಯ್ಯಲು
ಎಲೆಯ ವಿರಹ ಗೀತೆಗೆ
ಕವಿ ಮನ ಮಿಡಿಯುತಿತ್ತು
ಈಗ ಹಾಗಿಲ್ಲ,
ಕಲ್ಪನೆಯು ನನ್ನೆದೆಯಲಿ
ಗೂಡು ಕಟ್ಟ ಬಯಸುವುದಿಲ್ಲ
ಆ ಲೋಕದಲಿ ವಿಹರಿಸಲು
ಸಮಯವೂ ಇದಲ್ಲ
ಲೇಖನಿಯು ಇಂದಿನೊಡನೆ
ಸಮರ ಹೂಡಿರಲು
ಬಣ್ಣ ಬಣ್ಣದ ಭಾವಗಳು
ಸಂಧಾನ ಮಾಡಬಯಸುವುದಿಲ್ಲ
ಹೊಗಳಿಕೆಯೋ ತೆಗಳಿಕೆಯೋ
ಅದರ ಹಂಗೆನಗಿಲ್ಲ
ಎಲ್ಲರನು ಮೆಚ್ಚಿಸಲು
ಆಸ್ಥಾನ ಕವಿಯೇನೂ ಅಲ್ಲ
ಬೀಳಿಸಿ ನಗುವವರ ವಿಕೃತಿಗೆ
ಬಿದ್ದು ನರಳುವವರ ನೋವಿಗೆ
ಒಂದೆರಡು ಸಾಲಿನ ಪ್ರತಿರೋಧವೊಡ್ಡದೆ
ನನ್ನ ಕವಿತೆ ಪೂರ್ಣವಾಗುವುದೇ ಇಲ್ಲ..
******