ಹಿಜಾಬ್ ವಿವಾದದ ಹಗ್ಗಜಗ್ಗಾಟದಲ್ಲಿ ಕರ್ನಾಟಕ ತೊಡಗಿರುವ ಹೊತ್ತಿನಲ್ಲೇ ಮೈಸೂರಿನ ಶತಮಾನದ ಕನ್ನಡ ಶಾಲೆಗೆ ಬೀಗ ಬಿದ್ದಿರುವುದು ಅಷ್ಟಾಗಿ ಚರ್ಚೆಯಾಗುತ್ತಿಲ್ಲ. ಮೈಸೂರಿನಲ್ಲಿ ನಡೆಯುತ್ತಿರುವ ಹೋರಾಟ ಮೈಸೂರಿನಾಚೆಗೆ ಪಸರಿಸಲಿಲ್ಲ.
ಮೈಸೂರು ನಗರದ ಮಹಾರಾಣಿಯವರ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ (ಎನ್‌ಟಿಎಂಎಸ್) ಕಳೆದ ಗುರುವಾರ ಬೀಗ ಜಡಿಯಲಾಗಿದೆ. ಶತಮಾನದ ಕನ್ನಡ ಶಾಲೆ, ಹೆಣ್ಣು ಮಕ್ಕಳಿಗಾಗಿಯೇ ಆ ಕಾಲದಲ್ಲಿ ರಾಜ ವಂಶಸ್ಥರು ಆರಂಭಿಸಿದ ಶಾಲೆ ಮುಚ್ಚಿ ಹೋಗುತ್ತಿದೆ. ವಿವಾದದ ಕೇಂದ್ರ ಬಿಂದುವಾಗಿದ್ದ ರಾಮಕೃಷ್ಣ ಆಶ್ರಮ ಮೇಲುಗೈ ಸಾಧಿಸಿದೆ.
ಸ್ವಾಮಿ ವಿವೇಕನಂದರ ಹೆಸರಿನಲ್ಲಿ ಸ್ಮಾರಕ ನಿರ್ಮಾಣಕ್ಕಾಗಿ ರಾಮಕೃಷ್ಣ ಆಶ್ರಮಕ್ಕೆ ಈ ಶಾಲೆಯ ಕಟ್ಟಡ ಸೇರಿದಂತೆ ಜಾಗವನ್ನು ರಾಜ್ಯ ಸರ್ಕಾರ ನೀಡಿತ್ತು. ಇದರ ಸಂಬಂಧ ವಿವಾದ ಉಂಟಾಗಿತ್ತು. ಸ್ವಾಮಿ ವಿವೇಕಾನಂದರು ಭೇಟಿ ನೀಡಿದ ಜಾಗವೆಂದು ಆಶ್ರಮಕ್ಕೆ ಈ ಶಾಲೆಯ ಜಾಗವನ್ನು ನೀಡಲು ಮುಂದಾದ ದಿನದಿಂದಲೂ ಹೋರಾಟ ನಡೆಯುತ್ತಿತ್ತು. ಸುಮಾರು ಹತ್ತು ವರ್ಷಗಳಿಂದ ವಿವಾದ ಜೀವಂತವಾಗಿದೆ. ಕಳೆದ ಹಲವು ತಿಂಗಳಿಂದ ಹೋರಾಟ ತೀವ್ರವಾಗಿತ್ತು.
ಮಹಾರಾಣಿ ಕೆಂಪನಂಜಮಣ್ಣಿಯವರು ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ತೆರೆದ ಈ ಶಾಲೆಗೆ ಐತಿಹಾಸಿಕ ಮಹತ್ವವಿದೆ. ಇದನ್ನು ಮುಚ್ಚಬಾರದು ಎಂದು ಹಲವಾರು ತಿಂಗಳಿಂದ ಹೋರಾಟ ನಡೆಯುತ್ತಿತ್ತು. ಕಳೆದ ಹತ್ತು ವರ್ಷಗಳಿಂದಲೂ ಈ ಜಾಗ ವಿವಾದ ಕೇಂದ್ರವಾಗಿತ್ತು. ಸ್ವಾಮಿ ವಿವೇಕಾನಂದರ ಆಶಯದಂತೆ ಶಿಕ್ಷಣಕ್ಕೆ ಒತ್ತು ನೀಡಬೇಕು. ಆ ಮೂಲಕ ಸ್ವಾಮೀಜಿಯವರ ಆಶಯ ಈಡೇರಿಸಬೇಕು. ಆಶ್ರಮ ಪಟ್ಟು ಬಿಡಬೇಕು ಎಂದು ಒತ್ತಾಯಿಸಲಾಗಿತ್ತು. ಶಾಲೆಯನ್ನು ಉಳಿಸಿಕೊಂಡೇ ಸ್ಮಾರಕ ನಿರ್ಮಿಸುವ ಚರ್ಚೆಗಳಾಗುತ್ತಿದ್ದವು.
ಆದರೆ ಏಕಾಏಕಿ ಶಾಲೆಯ ಪಿಠೋಪಕರಣಗಳನ್ನು ಕಳೆದ ಗುರುವಾರ ಸಂಜೆ ಬೇರೆಡೆಗೆ ಸಾಗಿಸಲಾಗಿದೆ. “ಪೀಠೋಪಕರಣಗಳನ್ನು ಯಾವುದೇ ಕಾರಣಕ್ಕೂ ಸ್ಥಳಾಂತರ ಮಾಡುವುದಕ್ಕೆ ಬಿಡುವುದಿಲ್ಲ” ಎಂದು ಎನ್‌ಟಿಎಂಎಸ್ ಉಳಿಸಿ ಹೋರಾಟ ಸಮಿತಿಯ ಸದಸ್ಯರು ತಡೆಯಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಹೋರಾಟಗಾರರನ್ನು ಬಂಧಿಸಿ, ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲೆಗೆ ಬೀಗ ಹಾಕಿಸಿದ್ದಾರೆ.
ಸಂಧಾನ ಕುರಿತು ಅಂತಿಮ ತೀರ್ಮಾನವಾಗುವ ಮುನ್ನವೇ ಶಾಲೆಯನ್ನು ಹಸ್ತಾಂತರಿಸುವ ಪ್ರಕ್ರಿಯೆ ಆರಂಭವಾದ ಬೆನ್ನಲ್ಲೇ ಹಿರಿಯ ರಾಜಕಾರಣಿ, ಬಿಜೆಪಿ ಸಂಸದ ವಿ.ಶ್ರೀನಿವಾಸಪ್ರಸಾದ್ ಅವರನ್ನು ಭೇಟಿಯಾಗಿ ಶಾಲೆ ಉಳಿಸಿ ಹೋರಾಟ ಸಮಿತಿ ಮಾತುಕತೆ ನಡೆಸಿದೆ.
ಹಿರಿಯ ಸಾಹಿತಿ ದೇವನೂರ ಮಹಾದೇವ, ಹೋರಾಟ ಸಮಿತಿ ಅಧ್ಯಕ್ಷ ಪ.ಮಲ್ಲೇಶ್, ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಅವರ ನೇತೃತ್ವದಲ್ಲಿ ಹೋರಾಟಗಾರರು ಶ್ರೀನಿವಾಸಪ್ರಸಾದ್ ಅವರನ್ನು ಭೇಟಿಯಾಗಿ ಸಮಸ್ಯೆಯನ್ನು ಬಿಚ್ಚಿಟ್ಟಿದ್ದಾರೆ.
ಶಾಲೆಯೂ ಉಳಿಯಬೇಕು, ಸ್ಮಾರಕ ನಿರ್ಮಿಸಬೇಕು ಎನ್ನುವ ಕುರಿತು ಸಂಧಾನ ಕಳೆದ ವರ್ಷವೇ ನಡೆದಿತ್ತು. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಸಮ್ಮುಖದಲ್ಲೂ ಒಂದು ಸಭೆ ನಡೆದರೆ, ಆಶ್ರಮದ ಪರವಾಗಿ ವಿಧಾನಪರಿಷತ್ ಮಾಜಿ ಸದಸ್ಯ ಡಿ.ಮಾದೇಗೌಡ ಅವರು ಸಂಧಾನ ಸೂತ್ರದಂತೆ ಚರ್ಚೆ ನಡೆಸುವುದಾಗಿ ಹೇಳಿದ್ದರು. ಈಗ ಅದು ಬಿಟ್ಟು ಶಾಲೆ ಸ್ಥಳಾಂತರ ಮಾಡಲಾಗಿದೆ. ಏಕಾಏಕಿ ಶಾಲೆಯನ್ನು ಸ್ಥಳಾಂತರಿಸಲಾಗಿದೆ. ಈ ಕುರಿತು ಮಧ್ಯೆ ಪ್ರವೇಶಿಸಿ ಮಾತುಕತೆ ನಡೆಸುವಂತೆ ಪ್ರಸಾದ್ ಅವರಲ್ಲಿ ಹಿರಿಯ ಹೋರಾಟಗಾರರು ಕೋರಿದ್ದಾರೆ. ಪ್ರಸಾದ್ ಅವರು ಹೋರಾಟಗಾರರ ಒತ್ತಾಯವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.
ಶಾಲೆಯನ್ನು ಸ್ಥಳಾಂತರಕ್ಕೆ ಸರ್ಕಾರ ಆದೇಶ ಮಾಡಿರುವ ಸಂಬಂಧ ವರದಿಗಳಾಗಿವೆ. ಇತ್ತ ಶಾಲೆಯ ಬಳಿ ಪೊಲೀಸ್ ಬಗಿ ಬಂದೋಬಸ್ತ್ ಮಾಡಲಾಗಿದೆ. ಹೋರಾಟಗಾರರು ದನಿ ಎತ್ತಿದ್ದಾರೆ. ಪ್ರಕರಣ ಇತ್ಯರ್ಥವಾಗದೆ ಇರುವಾಗ ಏಕಾಏಕಿ ಶಾಲೆಯನ್ನು ಹಸ್ತಾಂತರಿಸಿರುವ ಕ್ರಮವನ್ನು ಖಂಡಿಸಿದ್ದಾರೆ.
ಶಾಲೆ ಉಳಿಸಿ ಹೋರಾಟ ಸಮಿತಿಯ ಅಧ್ಯಕ್ಷರಾದ ಪ.ಮಲ್ಲೇಶ್ ಅವರು, “ಐತಿಹಾಸಿಕ ಹಿನ್ನೆಲೆ ಇರುವ ಶಾಲೆಯನ್ನು ಉಳಿಸುವ ಹೋರಾಟ ನಿರಂತವಾಗಿ ನಡೆಯಲಿದೆ” ಎಂದು ಎಚ್ಚರಿಸಿದ್ದಾರೆ.
ಎನ್‌ಟಿಎಂ ಶಾಲೆಯಲ್ಲಿ 70 ಬಾಲಕಿಯರು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶಾಲೆಯನ್ನು ಸ್ಥಳಾಂತರ ಮಾಡಿದ 51 ಹೆಣ್ಣು ಮಕ್ಕಳು ಹಾಜರಿದ್ದರು. ಶಾಲೆಯ ಎದುರಿಗೆ ಇರುವ ಸರ್ಕಾರಿ ಶಿಕ್ಷಕಿಯರ ತರಬೇತಿ ಸಂಸ್ಥೆಗೆ ತರಗತಿಗಳನ್ನು ಸ್ಥಳಾಂತರಿಸಲಾಗಿದೆ.
ಧಾರ್ಮಿಕ ವಿಷಯವನ್ನಿಟ್ಟುಕೊಂಡು ರಾಜ್ಯದಲ್ಲಿ ದೊಡ್ಡಮಟ್ಟದ ವಿವಾದ ಸೃಷ್ಟಿಸಲಾಗಿದೆ. ಹಿಜಾಬ್ ಸಂಬಂಧ ತರಹೇವಾರಿ ಹೇಳಿಕೆಗಳನ್ನು ಶಾಸಕರು, ಸಚಿವರು ನೀಡುತ್ತಿದ್ದಾರೆ. ಆದರೆ ಇದೆಲ್ಲದರ ನಡುವೆ ಮೈಸೂರಿನ ಶತಮಾನದ ಶಾಲೆ, ಹೆಣ್ಣು ಮಕ್ಕಳ ಶಾಲೆಗೆ ಬೀಗ ಜಡಿದಿರುವುದು, ಮೈಸೂರಿನಾಚೆಗೆ ಗಂಭೀರ ಚರ್ಚೆಗೆ ಒಳಪಟ್ಟಿಲ್ಲದಿರುವುದು ದುರಂತವೇ ಸರಿ.



Give respect to constitution, by constitution rules legislator selected and they decided to give land but so called seculars making hue and cry