ಹಾಸನದ ಎಚ್ ಡಿ ರೇವಣ್ಣ ಮತ್ತು ಪುತ್ರ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯದ ಪ್ರಕರಣ ದೇಶದಲ್ಲಿ ಭಾರೀ ಸದ್ದು ಮಾಡಿತ್ತು. ಇದೀಗ ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಸಿಲುಕಿಕೊಂಡಿರುವ ರೇವಣ್ಣ ವಿರುದ್ಧ ಮೈಸೂರು ಜಿಲ್ಲೆಯ ಕೆಆರ್ ನಗರದಲ್ಲಿ ಮಹಿಳೆಯೊಬ್ಬರು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ.
ನಾಪತ್ತೆಯಾಗಿರುವ ಮಹಿಳೆಯ ಪುತ್ರ ರಾಜು ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದಾರೆ. ಪ್ರಜ್ವಲ್ ಲೈಂಗಿಕ ದೌರ್ಜನ್ಯದ ವಿಡಿಯೋದಲ್ಲಿ ನನ್ನ ತಾಯಿಯ ವಿಡಿಯೋ ಕೂಡ ಇದೆ. ವಿಡಿಯೋಗಳು ಬಹಿರಂಗವಾದ ಬಳಿಕ ತಾಯಿ ದಿಢೀರ್ ನಾಪತ್ತೆಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಹೆಚ್ಡಿ ರೇವಣ್ಣ ವಿರುದ್ಧ ಸೆಕ್ಷನ್ 149/2024 ಕಲಂ, 364/A 365 ಹಾಗೂ 34 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ರೇವಣ್ಣರನ್ನು ಆರೋಪಿ ಸಂಖ್ಯೆ 1 ಮತ್ತು ಸತೀಶ್ ಬಾಬು ಎಂಬವರನ್ನು ಆರೋಪಿ ಸಂಖ್ಯೆ 2 ಎಂದು ದೂರಿನಲ್ಲಿ ನಮೂದಿಸಲಾಗಿದೆ.
ರಾಜು ನೀಡಿದ ದೂರಿನಲ್ಲಿ ಏನಿದೆ?
ನನ್ನ ತಂದೆಗೆ ಮೂವರು ಮಕ್ಕಳು, ನನ್ನ ತಾಯಿ ಹೊಳೇನರಸಿಪುರದ ಚೆನ್ನಾಂಬಿಕ ಥಿಯೇಟರ್ ಪಕ್ಕ ಇರುವ ಎಚ್‌ಡಿ ರೇವಣ್ಣ ಅವರ ಮನೆಯಲ್ಲಿ ಸುಮಾರು 6 ವರ್ಷ ಕೆಲಸ ಮಾಡಿದ್ದರು. ನಂತರ ಕೆಲಸ ಬಿಟ್ಟು ಬಂದು ನಮ್ಮೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಈಗ ಲೋಕಸಭೆ ಚುನಾವಣೆ ವೇಳೆ ನಮಗೆ ಪರಿಚಯಸ್ಥರಾಗದ್ದ ಸತೀಶ್ ಎಂಬವರು ಭವಾನಿ ಅಕ್ಕರವರು ಕರೆಯುತ್ತಿದ್ದಾರೆ ಎಂದು ಹೇಳಿ ನನ್ನ ತಾಯಿಯನ್ನು ಕರೆದುಕೊಂಡು ಹೋಗಿದ್ದಾರೆ. ಚುನಾವಣೆಯ ದಿವಸ ಬೆಳಿಗ್ಗೆ ನನ್ನ ತಾಯಿಯನ್ನು ಸತೀಶ್ ವಾಪಸ್ಸು ಕರೆದುಕೊಂಡು ಬಂದಿದ್ದಾರೆ. ನನ್ನ ತಂದೆ ಮತ್ತು ತಾಯಿಗೆ ಪೊಲೀಸ್ ಬಂದರೆ ಏನೂ ಹೇಳಬೇಡಿ, ಅವರಿಗೆ ಸಿಗಬೇಡಿ, ನಿಮ್ಮ ಮೇಲೆ ಕೇಸ್ ಆಗುತ್ತದೆ. ಬಂದರೆ ನನಗೆ ತಿಳಿಸಿ ನಾನು ಬಂದು ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಏಪ್ರಿಲ್ 29ರಂದು 9ಗಂಟೆಗೆ ಮತ್ತೆ ಬಂದ ಸತೀಶ್, ನಿಮ್ಮ ತಾಯಿ ಪೊಲೀಸ್‌ನವರಿಗೆ ಸಿಕ್ಕಿ ಹಾಕಿಕೊಂಡರೆ ಕೇಸು ಆಗುತ್ತದೆ ಮತ್ತೆ ನೀವು ಸಹ ಜೈಲಿಗೆ ಹೋಗಬೇಕಾಗುತ್ತದೆ. ರೇವಣ್ಣ ಸಾಹೇಬರು ಕರೆದುಕೊಂಡು ಬರಲು ಹೇಳಿದ್ದಾರೆ ಎಂದು ನನ್ನ ತಾಯಿಗೆ ಹೇಳಿ ನನ್ನ ತಾಯಿಯನ್ನು ಒತ್ತಾಯ ಮಾಡಿಕೊಂಡು ಸತೀಶ್ ಅವರು ಹೀರೋ ಹೊಂಡಾ ಸ್ಪ್ಲೆಂಡರ್ ಬೈಕಿನಲ್ಲಿ ಕರೆದುಕೊಂಡು ಹೋದರು. ನನ್ನ ತಾಯಿಯನ್ನು ಎಲ್ಲಿಗೆ ಕರೆದುಕೊಂಡು ಹೋದರು ಎಂಬುದು ನಮಗೆ ಗೊತ್ತಿಲ್ಲ. ಮೇ.1ರಂದು ನಮ್ಮ ತಾಯಿಯ ವಿಡಿಯೋ ಬಗ್ಗೆ ಸ್ನೇಹಿತರು ನನಗೆ ಮಾಹಿತಿ ನೀಡಿದ್ದಾರೆ. ನಿನ್ನ ಅಮ್ಮನ ಕಾಲು ಕಟ್ಟಿ ಪ್ರಜ್ವಲ್ ಬಲತ್ಕಾರ ಮಾಡಿದ್ದಾರೆ ಎಂದು ಹೇಳಿದರು. ಈ ಬಗ್ಗೆ ದೊಡ್ಡ ಕೇಸಾಗಿರುವುದಾಗಿ ನನಗೆ ತಿಳಿಸಿದರು. ನಂತರ ನಾನು ರಾತ್ರಿ ಫೋನ್ ಮಾಡಿ ನನ್ನ ತಾಯಿ ಬಗ್ಗೆ ವಿಚಾರಿಸಿದೆ. ನನ್ನ ತಾಯಿಯನ್ನು ವಾಪಾಸು ಕರೆದುಕೊಂಡು ಬರುವಂತೆ ಹೇಳಿದೆ, ಆದರೆ ಹಲ್ಲೆ ಪ್ರಕರಣವೊಂದರಲ್ಲಿ ನಿಮ್ಮ ತಾಯಿ ಆರೋಪಿ ಎಂದು ಸುಳ್ಳು ಹೇಳಿದ್ದಾರೆ. ನನ್ನ ತಾಯಿಯನ್ನು ಹೆದರಿಸಿ ಒತ್ತಾಯವಾಗಿ ಕರೆದುಕೊಂಡು ಹೋಗಿ ಕೂಡಿ ಹಾಕಿದ್ದಾರೆ, ನನ್ನ ತಾಯಿಯ ಜೀವಕ್ಕೆ ಅಪಾಯವಿದೆ, ಆದ್ದರಿಂದ ನನ್ನ ತಾಯಿಯನ್ನು ಪತ್ತೆ ಮಾಡಬೇಕಾಗಿ ಕೇಳಿಕೊಳ್ಳುತ್ತೇನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನು ಓದಿ: ರೋಹಿತ್ ವೇಮುಲಾ ‘ಪರಿಶಿಷ್ಟ ಜಾತಿ’ಗೆ ಸೇರಿದವರಲ್ಲ: ಪ್ರಕರಣದ ಫೈಲ್ ಕ್ಲೋಸ್ ಮಾಡಿದ ಪೊಲೀಸರು


