ವಿಶ್ವವಿಖ್ಯಾತ ಪ್ರೇಕ್ಷಣೀಯ ಸ್ಥಳವಾದ ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲೆಯ ನಂದಿಬೆಟ್ಟದಲ್ಲಿ ನಡೆದ ಬೆಂಗಳೂರು ಕಂದಾಯ ವಿಭಾಗದ ವಿಶೇಷ ಸಚಿವ ಸಂಪುಟದ ಸಭೆಯಲ್ಲಿ ‘ಚನ್ನರಾಯಪಟ್ಟಣ ಭೂಸ್ವಾಧೀನ ವಿಚಾರ’ ಪ್ರಸ್ತಾಪಿಸುತ್ತಾರೆ ಎಂಬ ರೈತರ ಭರವಸೆ ಹುಸಿಯಾಗಿದೆ.
ಇಂದು ರಾಜ್ಯ ಸರ್ಕಾರ ನಡೆಸಿದ ವಿಶೇಷ ಸಚಿವ ಸಂಪುಟ ಸಭೆ ಹಿನ್ನೆಲೆಯಲ್ಲಿ, ಚನ್ನರಾಯಪಟ್ಟಣದ ನಾಡ ಕಚೇರಿ ಮುಂಭಾಗ ನಡೆಯುತ್ತಿರುವ ಧರಣಿ ಸ್ಥಳದಲ್ಲಿ ರೈತರು ಮತ್ತು ಫ್ರೀಡಂ ಪಾರ್ಕಿನಲ್ಲಿ ನಡೆಯುತ್ತಿರು ಭೂಮಿ ಸತ್ಯಾಗ್ರಹದ ವೇದಿಕೆಯಲ್ಲಿ ‘ಸಂಯುಕ್ತ ಹೋರಾಟ-ಕರ್ನಾಟಕ’ದ ಮುಖಂಡರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಇಂದಿನ ಸಭೆಯಲ್ಲಿ ಕೆಐಎಡಿಬಿ ಭೂಸ್ವಾಧೀನ ಕೈಬಿಡುವ ನಿರ್ಧಾರ ಪ್ರಕಟಿಸಬಹದು ಎಂದು ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ದೇವನಹಳ್ಳಿಯ ಕೂಗಳತೆ ದೂರದಲ್ಲಿ ಸಭೆ ನಡೆಸಿದ್ದರಿಂದ, ಭೂಸ್ವಾಧೀನದ ಬಗ್ಗೆ ಪ್ರಸ್ತಾಪಿಸಲು ಎಂಬ ಕಾರಣಕ್ಕೆ ರೈತರು ಸರ್ಕಾರದ ಗಮನ ಸೆಳೆಯಲು ಉಪವಾಸ ಆರಂಭಿಸಿದ್ದರು. ಆದರೆ, ಮುಖ್ಯಮಂತ್ರಿಗಳು ಸುದ್ದಿಗೋಷ್ಠಿಯಲ್ಲಿ ಭೂಸ್ವಾಧೀನ ವಿಚಾರ ಪ್ರಸ್ತಾಪಿಸದೇ ಇರುವುದು ರೈತರಿಗೆ ನಿರಾಸೆ ಮೂಡಿಸಿದೆ.
ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಅಸಮಾಧಾನ
ಚನ್ನರಾಯಪಟ್ಟಣದ 13 ಹಳ್ಳಿಗಳ ರೈತರು ಉಪವಾಸ ಸತ್ಯಾಗ್ರಹ ನಡೆಸಿದೆವು. ನಂದಿಬೆಟ್ಟದಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ, ಚನ್ನರಾಯಪಟ್ಟಣದಲ್ಲಿ ಉದ್ದೇಶಿಸಿರುವ 1777 ಎಕರೆ ಬಲವಂತದ ಭೂಸ್ವಾಧೀನವನ್ನು ಕೈಬಿಡುವ ವಿಚಾರವನ್ನು ವಿಶೇಷ ಚರ್ಚೆಯ ವಿಷಯವಾಗಿ ತೆಗೆದುಕೊಳ್ಳುವಂತೆ ಮತ್ತು ರೈತರ ಪರವಾದ ನಿರ್ಣಯಕ್ಕೆ ಬರಲು ಸಾತ್ವಿಕವಾಗಿ ಒತ್ತಡ ಹೇರಲಾಯಿತು ಎಂದರು.
ಚನ್ನರಾಯಪಟ್ಟಣದ ಉಪವಾಸ ಸತ್ಯಾಗ್ರಹದಲ್ಲಿ ಮಕ್ಕಳು, ಯುವಜನರು, ಮಹಿಳೆಯರು, ವಯೋವೃದ್ಧರು ಸೇರಿದಂತೆ 13 ಹಳ್ಳಿಯ ರೈತರು, ಹಾಗೂ ರೈತಪರ ಹೋರಾಟಗಾರರಾದ ಆಂಜನೇಯ ರೆಡ್ಡಿ, ಚಂದ್ರ ತೇಜಸ್ವಿ ಮತ್ತು ಕಾರಳ್ಳಿ ಶ್ರೀನಿವಾಸ್ ಭಾಗಿಯಾಗಿದ್ದರು. ಇಲ್ಲಿ ಅನ್ನ ಬೆಳೆಯುವ ರೈತರೇ ಉಪವಾಸ ಕುಳಿತಿದ್ದಾರೆ; ಇದು ಒಳ್ಳೆಯ ಬೆಳವಣಿಗೆಯಲ್ಲ. ಈ ಹೋರಾಟ ಗೆಲ್ಲಲೇಬೇಕು. ಈ ಹೋರಾಟ ಇಂದು ಕೇವಲ ಚನ್ನರಾಯಪಟ್ಟಣದ ರೈತರ ಹೋರಾಟವಾಗಿ ಉಳಿದಿಲ್ಲ, ಇಡೀ ಕರ್ನಾಟಕವೇ ಇಲ್ಲಿನ ರೈತರ ಉಳಿವಿನ ನಿರ್ಧಾರಕ್ಕಾಗಿ ಕಾಯುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿರೋಧ ಪಕ್ಷದಲ್ಲಿದ್ದಾಗ ನೀಡಿದ ಭರವಸೆಯಂತೆ ನಡೆದುಕೊಳ್ಳುತ್ತಾರೆ ಎಂಬ ನಂಬಿಕೆ ಇದೆ. ಜುಲೈ 4 ರಂದು ರೈತಪರ ನಿರ್ಣಯ ಹೊರಬರುತ್ತದೆ ಎಂಬ ನಿರೀಕ್ಷೆ ಇದೆ ಎಂದು ರೈತರು ಅಭಿಪ್ರಾಯಪಟ್ಟರು.

ಇಲ್ಲಿ ಅನ್ನ ಬೆಳೆಯುವ ರೈತರು ಉಪವಾಸ ಕುಳಿತಿರುವಾಗ, ಅತ್ತ ನಮ್ಮನ್ನು ಬೆಂಬಲಿಸಿ ಫ್ರೀಡಂ ಪಾರ್ಕಿನಲ್ಲಿ ಹೋರಾಟಗಾರರು, ಪ್ರಗತಿಪರ ಚಿಂತಕರು, ಚಿತ್ರನಟರು, ನಿರ್ದೇಶಕರು, ಸಾಹಿತಿಗಳು, ಬರಹಗಾರರು ಉಪವಾಸ ಕುಳಿತಿದ್ದಾರೆ. ಅವರ ರೈತರ ಮೇಲಿನ ಕಾಳಜಿ ಮತ್ತು ತಾಯ್ತನದ ಪ್ರೀತಿಗೆ ನಾವು ಆಭಾರಿಯಾಗಿರುತ್ತೇವೆ. ದೇವನಹಳ್ಳಿಗೆ ಮಾತ್ರ ಸೀಮಿತವಾಗಿದ್ದ ಹೋರಾಟ ಇಂದು ನಾಡಿನ ಉದ್ದಗಲಕ್ಕೂ ಮಾತನಾಡುವಂತಾಗಿದೆ. ರಾಜ್ಯದ ಜನ ನಮ್ಮ ಕಷ್ಟವನ್ನು ತಮ್ಮಗೆ ಬಂದೊದಗಿರುವ ಆತಂಕವೆಂಬಂತೆ ಭಾವಿಸಿ ನಮ್ಮ ಹೋರಾಟಕ್ಕೆ ಜೊತೆಯಾಗಿದ್ದಾರೆ. ಅವರೆಲ್ಲರಿಗೂ ಇಲ್ಲಿನ ರೈತರಾದ ನಾವು ಹೃತ್ಪೂರ್ವಕ ಧನ್ಯವಾದ ತಿಳಿಸುತ್ತೇವೆ ಎಂದು ರೈತರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಹೋರಾಟ ನಮ್ಮ ಉಳಿವಿಗಾಗಿ ಮಾತ್ರವಲ್ಲ, ನಮ್ಮ ಕೃಷಿ ಪರಿಸರದ ಉಳಿವಿಗಾಗಿ, ಗ್ರಾಮೀಣ ಬದುಕಿನ ಉಳಿವಿಗಾಗಿ ಮಾಡುತ್ತಿರುವ ಹೋರಾಟ. ಆದ್ದರಿಂದ ನಾವು ಭರವಸೆ ನೀಡುತ್ತೇವೆ, ಈ ಭೂಮಿ ನಿಮ್ಮೆಲ್ಲರ ಬೆಂಬಲದಿಂದ ಉಳಿದೇ ಉಳಿಯುತ್ತದೆ. ನಾವು ಈ ನೆಲದ ಹಸಿರನ್ನು, ಗ್ರಾಮೀಣ ಸೊಗಡನ್ನು ಜೋಪಾನ ಮಾಡುತ್ತೇವೆ ಎಂದು ನಿಮಗೆ ಭರವಸೆ ನೀಡುತ್ತೇವೆ ಎಂದು ವಾಗ್ದಾನ ಮಾಡಿದ್ದಾರೆ.
ಜುಲೈ-4 ರ ಸಭೆ ಮೇಲೆ ಎಲ್ಲರ ಚಿತ್ತ
ಚನ್ನರಾಯಪಟ್ಟಣದ ಹೋಬಳಿಯ 13 ಹಳ್ಳಿಗಳ ರೈತರು ಹಾಗೂ ಸಂಯುಕ್ತ ಹೋರಾಟ-ಕರ್ನಾಟಕ ಮುಖಂಡರ ಜೊತೆಗೆ ಇದೇ 4ರಂದು ಸಮಗ್ರ ಸಭೆ ನಡೆಸಿ ನಿರ್ಧಾರಕ್ಕೆ ಬರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ.
ಚನ್ನರಾಯಪಟ್ಟಣ ಭೂಸ್ವಾಧೀನ ಕೈಬಿಡುವಂತೆ ಸಿಎಂಗೆ ಪತ್ರ ಬರೆದ ಬಿಹಾರ ಸಂಸದ ರಾಜಾರಾಮ್ ಸಿಂಗ್


