ಕೇರಳ ಮೂಲದ ಹಿಂದೂ ಸಂಘಟನೆಯಾದ ಶ್ರೀ ನಾರಾಯಣ ಮಾನವ ಧರ್ಮಂ ಟ್ರಸ್ಟ್, ವಕ್ಫ್ (ತಿದ್ದುಪಡಿ) ಕಾಯ್ದೆ -2025 ಅನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಈ ಕಾನೂನು ಭಾರತದಲ್ಲಿ ಮುಸ್ಲಿಂ ಸಮುದಾಯದ ಅಸ್ತಿತ್ವಕ್ಕೆ ಧಕ್ಕೆ ತರುತ್ತದೆ ಎಂದು ವಾದಿಸಿದೆ.
ಸಮಾಜ ಸುಧಾರಕ ನಾರಾಯಣ ಗುರುಗಳ ಮೌಲ್ಯಗಳು ಮತ್ತು ಬೋಧನೆಗಳ ಅಧ್ಯಯನ ಮತ್ತು ಪ್ರಸಾರಕ್ಕಾಗಿ 2023ರಲ್ಲಿ ಸ್ಥಾಪಿಸಲಾದ ಟ್ರಸ್ಟ್, ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಪ್ರಶ್ನಿಸಿ ಈಗಾಗಲೇ ಅರ್ಜಿ ಸಲ್ಲಿಸಿರುವ ಪಕ್ಷಕಾರರ ಗುಂಪಿನಲ್ಲಿ ಸೇರಿಕೊಳ್ಳಲು ಮುಂದಾಗಿದೆ.
ವಕ್ಫ್ ಪ್ರಕರಣದ ವಿಚಾರಣೆಯನ್ನು ಇಂದು (ಮೇ.5) ಮಧ್ಯಾಹ್ನ 2 ಗಂಟೆಗೆ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ, ನ್ಯಾಯಮೂರ್ತಿ ಪಿವಿ ಸಂಜಯ್ ಕುಮಾರ್ ಮತ್ತು ನ್ಯಾಯಮೂರ್ತಿ ಕೆವಿ ವಿಶ್ವನಾಥನ್ ಅವರನ್ನೊಳಗೊಂಡ ಪೀಠ ಮುಂದುವರಿಸಲಿದೆ ಎಂದು ವರದಿಯಾಗಿದೆ.
ಈ ಪ್ರಕರಣ ವಿಚಾರಣೆ ನಡೆಯುತ್ತಿರುವ ಕಾರಣ ಹೊಸದಾಗಿ ಅರ್ಜಿ ಸಲ್ಲಿಸುವುದನ್ನು ಸುಪ್ರೀಂ ಕೋರ್ಟ್ ನಿರ್ಬಂಧಿಸಿದೆ. ಆದರೆ, ಈಗಾಗಲೇ ಸಲ್ಲಿಕೆಯಾಗಿರುವ ಅರ್ಜಿಗಳಲ್ಲಿ ಸೇರಿಕೊಳ್ಳಲು ಅನುಮತಿಸಿದೆ.
ನಾರಾಯಣ ಟ್ರಸ್ಟ್ ಸಲ್ಲಿಸಿರುವ ಮಧ್ಯಂತರ ಅರ್ಜಿಯಲ್ಲಿ, ವಕ್ಫ್ ತಿದ್ದುಪಡಿ ಕಾಯ್ದೆಯ ನಿಬಂಧನೆಗಳು ಭಾರತದಲ್ಲಿ ವಕ್ಫ್ ವ್ಯವಸ್ಥೆಗೆ ಸಂಚಕಾರ ತರಲಿದೆ ಎಂದು ವಾದಿಸಿರುವುದಾಗಿ barandbench.com ವರದಿ ಮಾಡಿದೆ.
“ವಕ್ಫ್ ತಿದ್ದುಪಡಿ ಕಾಯ್ದೆಯು ಭಾರತದಲ್ಲಿ ಮುಸ್ಲಿಂ ಸಮುದಾಯದ ಅಸ್ತಿತ್ವಕ್ಕೆ ಧಕ್ಕೆ ತರುತ್ತದೆ. ಏಕೆಂದರೆ, ಅದು ಭಾರತದಲ್ಲಿ ವಕ್ಫ್ ವ್ಯವಸ್ಥೆಗೆ ಸಂಚಕಾರ ತರುವ ಸಾಧ್ಯತೆ ಇದೆ. ವಕ್ಫ್ ಭಾರತದಲ್ಲಿ ಇಸ್ಲಾಂ ಧರ್ಮದ ಆಚರಣೆ ಮತ್ತು ಉಳಿವಿಗೆ ಅಗತ್ಯವಾದ ಆರ್ಥಿಕ ಸಂಪನ್ಮೂಲಗಳ ಪ್ರಮುಖ ಮೂಲವಾಗಿದೆ” ಎಂದು ನಾರಾಯಣ ಟ್ರಸ್ಟ್ ತನ್ನ ಅರ್ಜಿಯಲ್ಲಿ ಹೇಳಿದೆ.


