ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ. ಮಂಗಳವಾರ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ.
ನವದೆಹಲಿಯ ಡಾ. ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ನಡೆದ ರಾಷ್ಟ್ರಮಟ್ಟದ ಶೂಟಿಂಗ್ ಸ್ಪರ್ಧೆಯ ಸಂದರ್ಭದಲ್ಲಿ ಈ ಘಟನೆ ನಡೆದಿರುವುದಾಗಿ ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.
ಭಾರದ್ವಾಜ್ ಹೋಟೆಲ್ ಕೋಣೆಯಲ್ಲಿ ಶೂಟರ್ ಮೇಲೆ ಆಕೆಯ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡುವ ನೆಪದಲ್ಲಿ ಆಹ್ವಾನಿಸಿ ದೌರ್ಜನ್ಯ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಘಟನೆಯನ್ನು ಬಹಿರಂಗಪಡಿಸಿದರೆ ಆಕೆಯ ವೃತ್ತಿಜೀವನವನ್ನು ಹಾಳುಮಾಡುವುದಾಗಿ ಮತ್ತು ಆಕೆಯ ಕುಟುಂಬಕ್ಕೆ ಹಾನಿ ಮಾಡುವುದಾಗಿ ಕೋಚ್ ಬೆದರಿಕೆ ಹಾಕಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ.
ಆಘಾತದಿಂದ ಕ್ರೀಡಾಪಟು ಹೋಟೆಲ್‌ನಿಂದ ಹೊರಬಂದಿದ್ದಾರೆ ಮತ್ತು ನಂತರ ಘಟನೆಯ ಬಗ್ಗೆ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗಿದ್ದು, ನಂತರ ಕುಟುಂಬವು ಪೊಲೀಸರಿಗೆ ದೂರು ನೀಡಿದೆ.
ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆಯ ಸೆಕ್ಷನ್ 6 ಮತ್ತು ಭಾರತೀಯ ನ್ಯಾಯ ಸಂಹಿತಾದ ಸೆಕ್ಷನ್ 351(2) ರ ಅಡಿಯಲ್ಲಿ NIT ಫರಿದಾಬಾದ್‌ನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
“ಪ್ರಕರಣದ ಗಂಭೀರತೆಯನ್ನು ಗಮನಿಸಿದರೆ, ಅಪ್ರಾಪ್ತ ಬಾಲಕಿಯ ಆರೋಪಗಳನ್ನು ದೃಢೀಕರಿಸಲು ಘಟನೆ ನಡೆದ ದಿನದ ಎಲ್ಲಾ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ತಕ್ಷಣವೇ ಹಂಚಿಕೊಳ್ಳುವಂತೆ ನಾವು ಹೋಟೆಲ್ ಆಡಳಿತವನ್ನು ಈಗಾಗಲೇ ಕೇಳಿಕೊಂಡಿದ್ದೇವೆ” ಎಂದು ಫರಿದಾಬಾದ್ ಪೊಲೀಸರ ಸಾರ್ವಜನಿಕ ಸಂಪರ್ಕ ಅಧಿಕಾರಿ ಯಶ್ಪಾಲ್ ಯಾದವ್ ಹೇಳಿದ್ದಾರೆ.
ಭಾರದ್ವಾಜ್ ಅವರು ಭಾರತೀಯ ರಾಷ್ಟ್ರೀಯ ರೈಫಲ್ ಸಂಘ (NRAI) ನೇಮಕ ಮಾಡಿದ 13 ರಾಷ್ಟ್ರೀಯ ಪಿಸ್ತೂಲ್ ತರಬೇತುದಾರರಲ್ಲಿ ಒಬ್ಬರು.
ವಿಚಾರಣೆ ನಡೆಯುವವರೆಗೆ ಕೋಚ್ ಅಂಕುಶ್ ಅವರನ್ನು ಎಲ್ಲಾ ಕರ್ತವ್ಯಗಳಿಂದ ಅಮಾನತುಗೊಳಿಸಲಾಗಿದೆ, ಅವರಿಗೆ ಯಾವುದೇ ಹೊಸ ಹುದ್ದೆ ನೀಡಲಾಗುವುದಿಲ್ಲ” ಎಂದು NRAI ಪ್ರಧಾನ ಕಾರ್ಯದರ್ಶಿ ಪವನ್ ಕುಮಾರ್ ಸಿಂಗ್ ಹೇಳಿರುವುದಾಗಿ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿದೆ.


