Homeಕರ್ನಾಟಕರಾಜ್ಯದಲ್ಲಿ 1980ರಿಂದ 2024ರವರೆಗೆ ನಕ್ಸಲ್ ಇತಿಹಾಸ

ರಾಜ್ಯದಲ್ಲಿ 1980ರಿಂದ 2024ರವರೆಗೆ ನಕ್ಸಲ್ ಇತಿಹಾಸ

- Advertisement -
- Advertisement -

1967ರಲ್ಲಿ ಪಶ್ಚಿಮ ಬಂಗಾಳದ ನಕ್ಸಲ್ಬರಿಯಲ್ಲಿ ಆರಂಭವಾಗಿದ್ದ ನಕ್ಸಲಿಸಂ

ಪಶ್ಚಿಮ ಬಂಗಾಳದ ‘ನಕ್ಸಲ್ಬರಿ’ ಎನ್ನುವ ಹಳ್ಳಿಯಲ್ಲಿ 1967ರಲ್ಲಿ ಕೃಷಿ ಕೂಲಿ ಕಾರ್ಮಿಕರು ಭೂಮಾಲೀಕರ ವಿರುದ್ಧ ಸಿಡಿದೆದ್ದು, ಸಶಸ್ತ್ರ ಹೋರಾಟದ ಘೋಷಣೆ ಮೊಳಗಿಸಿದರು. ಆ ಹಿಂಸಾತ್ಮಕ ಹೋರಾಟದ ನೇತೃತ್ವ ವಹಿಸಿದ್ದವರು ಕಾ. ಚಾರು ಮಜುಂದಾರ್. ನಂತರ ಇವರ ಜೊತೆ ಕನು ಸನ್ಯಾಲ್ ಮತ್ತು ಜಂಗಲ್ ಸಂತಾಲ್ ಅವರು ಸೇರಿದರು. ಈ ಹೋರಾಟ ‘ನಕ್ಸಲಿಸಂ’ ಎಂದು, ಹೋರಾಟಗಾರರನ್ನು ‘ನಕ್ಸಲೀಯರು’ ಎಂದು ಕರೆಯಲಾಯಿತು. ಮುಂದೆ ಈ ಹೋರಾಟದ ಮಾದರಿ ದೇಶದ ವಿವಿಧ ಭಾಗಗಳಿಗೆ ಹರಡಿತು. 1969ರಲ್ಲಿ ಸಿಪಿಐ (ಎಂಎಲ್‌) ಪಕ್ಷವನ್ನು ಸ್ಥಾಪಿಸಲಾಯಿತು.

ಈ ಸಿಪಿಐ (ಎಂಎಲ್) ಪಕ್ಷವು ಹಲವು ಏಳು ಬೀಳುಗಳನ್ನು ಕಂಡು ಆಂಧ್ರ ಪ್ರದೇಶದಲ್ಲಿ 70ರ ದಶಕದ ಕೊನೆಯಲ್ಲಿ ‘ಪೀಪಲ್ಸ್ ವಾರ್’ ಹೆಸರಿನಲ್ಲಿ ಮರುಹುಟ್ಟು ಪಡೆದು ಶಸ್ತ್ರಾಸ್ತ್ರ ಹೋರಾಟವನ್ನು ಕೈಗೆತ್ತಿಕೊಂಡಿತ್ತು. ಇಲ್ಲಿ ತೀವ್ರಗೊಂಡಿದ್ದ ನಕ್ಸಲ್ ಚಳವಳಿಯನ್ನು ಕರ್ನಾಟಕಕ್ಕೆ ವಿಸ್ತರಣೆ ಮಾಡಬೇಕು ಎಂದು ಆಂಧ್ರ ಪೀಪಲ್ಸ್ ವಾರ್ ಪಕ್ಷವು 1980ರಲ್ಲಿ ತೀರ್ಮಾನ ಕೈಗೊಂಡಿತ್ತು. ಅದರಂತೆ ಚೆರುಕುರಿ ರಾಜ್‌ಕುಮಾರ್ ಅಲಿಯಾಸ್ ಆಝಾದ್ ಎಂಬವರು ಅಂದು ನಮ್ಮ ರಾಜ್ಯದಲ್ಲಿ ಸಂಘಟನೆಯನ್ನು ಕಟ್ಟುವ ಜವಾಬ್ದಾರಿಯನ್ನು ವಹಿಸಿದ್ದರು. ಮೂಲತ ಆಂಧ್ರದ ಅತಿದೊಡ್ಡ  ಭೂಮಾಲೀಕ ಕುಟುಂಬದಲ್ಲಿ 1952ರಲ್ಲಿ ಜನಿಸಿದ್ದ ಈ ರಾಜ್ ಕುಮಾರ್ ಅವರನ್ನು  2010ರ ಜುಲೈ 1ರಂದು ಆಂಧ್ರ ಪ್ರದೇಶ ಪೊಲೀಸರು ಆಂಧ್ರಪ್ರದೇಶದಲ್ಲಿ ಎನ್ಕೌಂಟರ್ ನಲ್ಲಿ ಹತ್ಯೆ ಮಾಡಿದ್ದರು. ಈ ಹತ್ಯೆ ಸಮಯದಲ್ಲಿ ರಾಜ್ ಕುಮಾರ್ ಅವರು ಮಾವೋವಾದಿ ಪಕ್ಷದ ಹಿರಿಯ ಪಾಲಿಟ್ ಬ್ಯೂರೋ ಸದಸ್ಯರಾಗಿದ್ದರು.

ಮುಂದೆ ಇದೇ ಪೀಪಲ್ಸ್ ವಾರ್ ಪಕ್ಷವನ್ನು ಸಿಪಿಐ(ಎಂ) ಮಾವೊವಾದಿ ಎಂದು ನಾಮಕರಣ ಮಾಡಲಾಯಿತು.  1980ರಲ್ಲಿ ನಮ್ಮ ರಾಜ್ಯದಲ್ಲಿಯೂ ಕೂಡ ಪೀಪಲ್ಸ್‌ ವಾರ್‌ ಎಂಬ ಹೆಸರಿನಲ್ಲಿ ಕಾರ್ಯಾಚರಿಸುತ್ತಿತ್ತು. ಈ ಪೀಪಲ್ಸ್ ವಾರ್ ಸಂಘಟನೆಯು ರಾಜ್ಯದ  ಬೆಂಗಳೂರಿನಲ್ಲಿ ಪ್ರಗತಿಪರ ವಿದ್ಯಾರ್ಥಿ ಕೇಂದ್ರ ಎಂಬ ಸಂಘಟನೆಯನ್ನು ಶಾಲಾ ಕಾಲೇಜು ಮತ್ತು ಹಾಸ್ಟೇಲ್ ಗಳಲ್ಲಿ ಪ್ರಾರಂಭಿಸಿತ್ತು. ನಂತರ ಇದು ದೆಹಲಿಯ ಜವಾಹರಲಾಲ್‌ ನೆಹರು ವಿವಿಯಲ್ಲಿ ಓದಿದ್ದ ಮೈಸೂರಿನ ಸಾಕೇತ್‌ ರಾಜನ್‌  ನೇತೃತ್ವದಲ್ಲಿ ಮೈಸೂರಿಗೂ ವಿಸ್ತರಿಸಿತು.

ಮುಂದೆ ಈ ನಕ್ಸಲ್ ಚಳುವಳಿಯು 1990ರಲ್ಲಿ ರಾಜ್ಯದ ಬೀದರ್‌ನಲ್ಲಿ ಸಂಘಟಿತ ಹೋರಾಟದ ರೂಪ ಪಡೆಯಿತು. ನಂತರ ಅದು ರಾಯಚೂರಿನಲ್ಲಿ ಶಸ್ತ್ರಾಸ್ತ್ರ ಹೋರಾಟವನ್ನು ಪ್ರಾರಂಭಿಸಿ, ಅಲ್ಲಿ ಭೂಮಾಲಿಕ ಸುದರ್ಶನ್ ರೆಡ್ಡಿಯನ್ನು ಹತ್ಯೆ ಮಾಡಿದ ನಂತರ ತನ್ನ ಹೋರಾಟದ ವ್ಯಾಪ್ತಿಯನ್ನು ವಿಸ್ತರಿಸಿತು. ನಕ್ಸಲ್ ಕಾರ್ಯಕರ್ತ ಬುಡ್ಡಣ್ಣ, ನಕ್ಸಲ್ ಶಸ್ತ್ರಾಸ್ತ್ರ ಪಡೆಯ ನಾಯಕ ಆಂಧ್ರ ಮೂಲದ ಭಾಸ್ಕರ್ ಹತ್ಯೆಯ ನಂತರ ತೀವ್ರ ನಷ್ಟ ಅನುಭವಿಸತೊಡಗಿತು. ನಂತರ ಅದು ರಾಯಚೂರಿನಲ್ಲಿ ನೆಲೆಕಂಡುಕೊಳ್ಳಲು ಸಾಧ್ಯವಾಗದೆ ಅದು ನಂತರ ರಾಜ್ಯದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ತಮ್ಮ ಚಟವಟಿಕೆಯನ್ನು ಪ್ರಾರಂಭಿಸಿತು.

ಅದೇ ಸಮಯದಲ್ಲಿ ಅಂದರೆ 1990ರಲ್ಲಿ ನಕ್ಸಲ್‌ ಚಳವಳಿಯು  ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ಮಲೆನಾಡು ಪ್ರದೇಶವನ್ನೂ ವ್ಯಾಪಿಸಿತು. ‘ಕರ್ನಾಟಕ ವಿಮೋಚನಾ ರಂಗ’ದ ಬೆಂಬಲದಲ್ಲಿ ಚಳವಳಿಗಾರರು ಮಲೆನಾಡಿನ ಆದಿವಾಸಿಗಳ ವಿಶ್ವಾಸವನ್ನು ಪಡೆದುಕೊಂಡು ಸಂಘಟನೆಯನ್ನು ಬಲಪಡಿಸಿದರು.

2001ರ ಇಸವಿಯಲ್ಲಿ ನಕ್ಸಲ್ ಚಳವಳಿಯು ಪಶ್ಚಿಮ ಘಟ್ಟದಲ್ಲಿ ಪೊಲೀಸರ ಗಮನಕ್ಕೆ ಬಾರದಂತೆ ತನ್ನ ಚಟುವಟಿಕೆಯ ತಯಾರಿ ನಡೆಸಲು ಪ್ರಾರಂಭಿಸಿತ್ತು. 2002ರಲ್ಲಿ ನಕ್ಸಲರು ತಮ್ಮ ತರಬೇತಿ ವೇಳೆ ಹಾರಿಸಿದ ಗುಂಡು ಕೊಪ್ಪ ತಾಲ್ಲೂಕಿನ ಮೆಣಸಿನಹಾಡ್ಯ ಗ್ರಾಮದ ಚೀರಮ್ಮ ಅವರ ಕಾಲಿಗೆ ತಗುಲಿತ್ತು. ಇದರ ನಂತರ ನಕ್ಸಲ್ ಚಟುವಟಿಕೆಯು ರಾಜ್ಯದಲ್ಲಿ ಬೆಳಕಿಗೆ ಬಂದಿತ್ತು. 2003ರ ನವೆಂಬರ್ 17ರಂದು ಕಾರ್ಕಳ ತಾಲ್ಲೂಕಿನ ಈದು ಗ್ರಾಮದ ಬೊಲ್ಲೊಟ್ಟೋದಲ್ಲಿ ನಡೆದ ಎನ್‌ಕೌಂಟರ್‌ಗೆ ಪಾರ್ವತಿ ಮತ್ತು ಹಾಜಿಮಾ ಬಲಿಯಾಗಿದ್ದರು.

ಶೃಂಗೇರಿ ತಾಲ್ಲೂಕಿನ ಬುಕಡಿಬೈಲು ಸಮೀಪ ತಲಗಾರು ರಾಮೇಗೌಡ್ಲು ಅವರ ಮನೆ ಸಮೀಪ 2004ರ ಆಗಸ್ಟ್‌ 27ರಂದು ನಕ್ಸಲರು ಮತ್ತು ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಅಕ್ಟೋಬರ್ 7 ರಂದು ಶೃಂಗೇರಿ ತಾಲ್ಲೂಕಿನ ಕಿಗ್ಗ ಸಮೀಪದ ಮಘೇಬೈಲು ಬಳಿಯಿಂದ ಪೊಲೀಸ್‌ ಮುದ್ದಪ್ಪ ಅವರನ್ನು ನಕ್ಸಲರ ತಂಡ ಅಪಹರಿಸಿತ್ತು. ಅವರ ಬಳಿ ಇದ್ದ ಬಂದೂಕು ಕಸಿದುಕೊಂಡು ಬಿಡುಗಡೆ ಮಾಡಿದ್ದರು. ಅಕ್ಟೋಬರ್ 11ರಂದು ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಬರ್ಕಣ ಜಲಪಾತ ಬಳಿ ನಕ್ಸಲರು ಮತ್ತು ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ನವೆಂಬರ್ 21ರಂದು ಬಕಡಿಬೈಲು ಸಮೀಪದ ಹೆಮ್ಮಿಗೆ ಬಳಿ ಪೊಲೀಸರಿಗೆ ಮಾಹಿತಿದಾರ ಎಂಬ ಆರೋಪದಲ್ಲಿ ಚಂದ್ರಕಾಂತ ಎಂಬವರ ಮೇಲೆ ನಕ್ಸಲರ ತಂಡ ಮಾರಣಾಂತಿಕ ಹಲ್ಲೆ ನಡೆಸಿತ್ತು.

ಸಾಕೇತ್‌ ರಾಜನ್ ಎನ್‌ಕೌಂಟರ್‌

2005ರ  ಫೆ.6ರಂದು ಕೊಪ್ಪ ತಾಲ್ಲೂಕಿನ ಮೆಣಸಿನಹಾಡ್ಯದ ಬಳಿ ನಕ್ಸಲ್ ನಾಯಕ ಸಾಕೇತ್‌ರಾಜನ್ ಮತ್ತು ಶಿವಲಿಂಗು ಪೊಲೀಸರ ಗುಂಡಿಗೆ ಬಲಿಯಾಗಿದ್ದರು.  ಉನ್ನತ ಮಟ್ಟದ ವಿದ್ಯಾಭ್ಯಾಸ ಪಡೆದಿದ್ದ ಮೈಸೂರಿನ ಸಾಕೇತ್ ರಾಜನ್ ನಕ್ಸಲ್ ಚಳವಳಿಯಲ್ಲಿ ಪ್ರೇಮ್ ಎಂಬ ಹೆಸರಿನಿಂದ ಗುರುತಿಸಿಕೊಂಡಿದ್ದರು. ‘ಮೇಕಿಂಗ್ ಆಫ್ ಹಿಸ್ಟರಿ’ ಎಂಬ ಪುಸ್ತಕ ಬರೆದಿದ್ದರು. ನಿವೃತ್ತ ಮಿಲಿಟರಿ ಅಧಿಕಾರಿಯೊಬ್ಬರ ಮಗನಾಗಿದ್ದ ಸಾಕೇತ್, ಮೈಸೂರಿನ ಮಹರಾಜ ಕಾಲೇಜಿನಲ್ಲಿ ಬಿ.ಎ ಓದಿದ ಬಳಿಕ ಜೆಎನ್‌ಯು ವಿವಿಯಲ್ಲಿ ಸ್ನಾತಕ್ಕೋತ್ತರ ಪದವಿ ಪಡೆದುಕೊಂಡಿದ್ದರು.

ಸಾಕೇತ್‌ ರಾಜನ್ ಎನ್‌ಕೌಂಟರ್‌ ನಂತರ ಪೊಲೀಸ್ ಹತ್ಯಾಕಾಂಡ

ಆಂಧ್ರ ಗಡಿಭಾಗದಲ್ಲಿ ನಕ್ಸಲ್‌ ಚಟುವಟಿಕೆ ತೀವ್ರ ಸ್ವರೂಪ ಪಡೆದುಕೊಂಡಿದ್ದ ಸಂದರ್ಭದಲ್ಲಿ ನಡೆದ ನಕ್ಸಲ್‌ ದಾಳಿಯಲ್ಲಿ ಏಳು ಪೊಲೀಸರು ಸೇರಿ ಎಂಟು ಜನ ಹತರಾಗಿದ್ದರು. 2005ರ ಫೆಬ್ರುವರಿ 10ರಂದು ರಾತ್ರಿ ಪಾವಗಡ ತಾಲ್ಲೂಕಿನ ನಾಗಲಮಡಿಕೆ ಹೋಬಳಿ ವೆಂಕಟಮ್ಮನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಬೀಡುಬಿಟ್ಟಿದ್ದ ಕೆಎಸ್‌ಆರ್‌ಪಿ 9ನೇ ಕ್ಯಾಂಪ್‌ ಸಿಬ್ಬಂದಿ ಮೇಲೆ ನಕ್ಸಲರು ದಾಳಿ ನಡೆಸಿದ್ದರು. 300ಕ್ಕೂ ಹೆಚ್ಚು ನಕ್ಸಲರ ತಂಡ ಒಮ್ಮೆಲೇ ದಾಳಿ ನಡೆಸಿತ್ತು. ಇದು ರಾಜ್ಯದಲ್ಲಿ ಸಾಕೇತ್ ರಾಜನ್ ಹತ್ಯೆಯ ನಂತರದ ಘಟನೆಯಾಗಿತ್ತು.

2005ರಲ್ಲಿ ಶೃಂಗೇರಿ ತಾಲ್ಲೂಕಿನ ‌ಸಿರಿಮನೆ ಬಳಿ ದೇವರಹಕ್ಲು ಗ್ರಾಮದ ಸಿಂಗಪ್ಪಗೌಡ ಅವರ ಮನೆಗೆ 7 ಜನರ ನಕ್ಸಲರ ತಂಡ ಜನವರಿ 1ರಂದು ಭೇಟಿ ನೀಡಿತ್ತು. ಜ.29 ರಂದು ಶೃಂಗೇರಿ ತಾಲ್ಲೂಕು ಕಿಗ್ಗ ಸಮೀಪ ಅರಣ್ಯ ಇಲಾಖೆ ಕಳ್ಳಬೇಟೆ ನಿಗ್ರಹ ದಳ ಬಿಡಾರದ ಮೇಲೆ ನಕ್ಸಲರು ದಾಳಿ ನಡೆಸಿದ್ದರು. ಜೂ.23ರಂದು ಕುಂದಾಪುರ ತಾಲ್ಲೂಕಿನ ಶಂಕರನಾರಾಯಣ ಸಮೀಪದ ದೇವರಬಾಳು ಬಳಿ ನಡೆದ ಎನ್‌ಕೌಂಟರ್‌ಗೆ ಮೂಡಿಗೆರೆ ತಾಲ್ಲೂಕಿನ ಸಬ್ಲಿ ಉಮೇಶ್ ಮತ್ತು ರಾಯಚೂರಿನ ಅಜಿತ್‌ ಕುಸಬಿ ಬಲಿಯಾಗಿದ್ದರು. ಜುಲೈ 28ರಂದು ಕಾರ್ಕಳ ತಾಲ್ಲೂಕಿನ ಹೆಬ್ರಿ ಬಳಿಕ ಕಬ್ಬಿನಾಲೆ ಬಳಿಯ ಮತ್ತಾವು ಬಳಿ ಪೊಲೀಸ್ ಜೀಪ್‌ವೊಂದನ್ನು ನಕ್ಸಲರು ಸ್ಫೋಟಿಸಿದ್ದರು. ಸೆ. 24 ರಂದು ಮೂಡಿಗೆರೆ ತಾಲ್ಲೂಕಿನ ಕಚೇರಿ ಗೋಡೆ ಮೇಲೆ ನಕ್ಸಲರು ಭಿತ್ತಿಪತ್ರ ಅಂಟಿಸಿದ್ದರು. ನ.4ರಂದು ಶೃಂಗೇರಿ ತಾಲ್ಲೂಕಿನ ತನಿಕೋಡು ಅರಣ್ಯ ತನಿಖಾ ಠಾಣೆ ಕಟ್ಟಡವನ್ನು ನಕ್ಸಲರು ಸ್ಫೋಟಿಸಿದ್ದರು.

2006ರ ಮೇ 30ರಂದು ಕೊಪ್ಪ ತಾಲ್ಲೂಕು ಹೆಗ್ಗಾರು ಕೊಡಿಗೆ ಕೃಷ್ಣ ನಾರಾಯಣಗೌಡ ಮನೆಗೆ 8 ನಕ್ಸಲರು ಭೇಟಿ ನೀಡಿ ಬಂದೂಕು ಅಪಹರಿಸಿದ್ದರು. ಆಗಸ್ಟ್ 23 ರಂದು ಶೃಂಗೇರಿ ತಾಲ್ಲೂಕು ಕೆರೆಕಟ್ಟೆ ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಕಚೇರಿ ಮೇಲೆ ನಕ್ಸಲರು ದಾಳಿ ನಡೆಸಿ ಬೆಂಕಿ ಹಚ್ಚಿದ್ದರು. ಅರಣ್ಯ ಇಲಾಖೆ ವಾಹನ ಹಾಗೂ ಕಡತಗಳು ನಾಶವಾಗಿದ್ದವು. ಅ.12ರಂದು ಮೂಡಿಗೆರೆ ತಾಲ್ಲೂಕಿನ ಸಾರಗೋಡು-ಕುಂದೂರು ಬಳಿ ಚೆಕ್‌ಪೋಸ್ಟ್ ಮೇಲೆ ದಾಳಿ ನಡೆಸಿದ್ದರು. ಡಿಸೆಂಬರ್ 25ರಂದು ಶೃಂಗೇರಿ ತಾಲ್ಲೂಕಿನ ಕಿಗ್ಗ ಸಮೀಪದ ಕೆಸಮುಡಿಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ನಕ್ಸಲ್ ತಂಡದ ಬೆಳ್ತಂಗಡಿ ತಾಲ್ಲೂಕಿನ ನಾರಾವಿಯ ದಿನಕರ್ ಬಲಿಯಾಗಿದ್ದರು.

2007ರಂದು ನಕ್ಸಲ್ ಶಂಕಿತ ಚನ್ನಮ್ಮ ಎಂಬುವರನ್ನು ಮಾ.13ರಂದು ಪೊಲೀಸರು ಬಂಧಿಸಿದ್ದರು. ಶೃಂಗೇರಿ ತಾಲ್ಲೂಕಿನ ಕಿಗ್ಗಾ ಸಮೀಪ ಗಂಡಘಟ್ಟದಲ್ಲಿ ಜೂನ್‌ 3ರಂದು ಕಾಂಗ್ರೆಸ್ ಮುಖಂಡ ವೆಂಕಟೇಶ್ ಅವರನ್ನು ನಕ್ಸಲರ ತಂಡ ಹತ್ಯೆ ಮಾಡಿತ್ತು. ಜುಲೈ 10 ರಂದು ಕೊಪ್ಪ ತಾಲ್ಲೂಕಿನ ಒಡೆಯರಮಠದ (ಮೆಣಸಿನಹಾಡ್ಯ) ಬಳಿ ನಡೆದ ಎನ್‌ಕೌಂಟರ್‌ಗೆ ನಕ್ಸಲ್ ಯುವಕ ಸಿಂಧನೂರಿನ ಗೌತಮ್, ಕುದುರೆಮುಖ ರಾಷ್ಟ್ರೀಯ ಉದ್ಯಾನ ವಿರೋಧಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿದ್ದ ಪರಮೇಶ್ವರ್ ಮತ್ತು ಸುಂದರೇಶ್ ಹತ್ಯೆಯಾಗಿತ್ತು. ಅವರೊಂದಿಗೆ ಗ್ರಾಮಸ್ಥರಾದ ಕಾವೇರಮ್ಮ ಮತ್ತು ರಾಮೇಗೌಡ ಎಎನ್‌ಎಫ್ ಗುಂಡಿಗೆ ಬಲಿಯಾಗಿದ್ದರು. ಇದೇ ವೇಳೆ ಗುಂಡಿನ ಚಕಮಕಿಯಲ್ಲಿ ಸಬ್‌ಇನ್‌ಸ್ಪೆಕ್ಟರ್‌ ವೆಂಕಟೇಶ್ ಕೂಡ ಮೃತಪಟ್ಟಿದ್ದರು.

2008ರಂದು ಹೊರನಾಡು ಸಮೀಪದ ಮಾವಿನಹೊಲ ಪ್ರದೇಶದಲ್ಲಿ ನ.19ರಂದು ನಡೆದ ಗುಂಡಿನ ಕಾಳಗದಲ್ಲಿ ನಕ್ಸಲರಾದ ರವಿ ದೇವಯ್ಯ ಮತ್ತು ಮನೋಹರ್ ಹತ್ಯೆಯಾಗಿತ್ತು. ಭಾಗಮಂಡಲದ ಕೆಎಸ್‌ಆರ್‌ಪಿ ಸಿಬ್ಬಂದಿ ಗುರುಪ್ರಸಾದ್ ಕೂಡ ಮೃತಪಟ್ಟಿದ್ದರು.

2010ರ ಮಾರ್ಚ್ 1ರಂದು ಕುಂದಾಪುರದ ಮುಟ್ಲುಪಾಡಿಯಲ್ಲಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ಪಂಜಾಲು ಗ್ರಾಮದ ವಸಂತಗೌಡ ಅವರ ಹತ್ಯೆಯಾಯಿತು. 2011ರಲ್ಲಿ ಕಬ್ಬಿನಾಲೆಯ ಸದಾಶಿವಗೌಡ ಎಂಬುವರನ್ನು ನಕ್ಸಲರು ಹತ್ಯೆ ಮಾಡಿದ್ದರು. ನಂತರ ಮಡಾಮಕ್ಕಿಯಲ್ಲಿ ಅರಣ್ಯ ಕಚೇರಿ ಹಾಗೂ ವಸತಿ ಗೃಹಗಳನ್ನು ನಕ್ಸಲರು ಧ್ವಂಸಗೊಳಿಸಿದ್ದರು. ಆಗುಂಬೆ ಸಮೀಪದ ಬಿದರಗೋಡು ಬಳಿ ಸರ್ಕಾರಿ ಬಸ್‌ಗೆ ಬೆಂಕಿ ಹಚ್ಚಿದ್ದರು. 2014ರಂದು ಸುಬ್ರಹ್ಮಣ್ಯದ ಐನೆಕಿದು ಗ್ರಾಮದ ಅರಣ್ಯ ವ್ಯಾಪ್ತಿಯಲ್ಲಿ ಮನೆಗೆ ಶಂಕಿತ ನಕ್ಸಲರು ಭೇಟಿ ನೀಡಿದ್ದಾರೆ ಎಂಬ ಸುದ್ದಿಯ ನಂತರ ಎಎನ್‌ಎಫ್ ಕಾರ್ಯಾಚರಣೆಯನ್ನು ಕೈಗೆತ್ತಿಕೊಂಡಿತು. 2018ರಂದು ಶಿರಾಡಿಯ ಮಿತ್ತಮಜಲು ಬಳಿ ಮೂರು ಮನೆಗಳಿಗೆ ಭೇಟಿ ನೀಡಿದ್ದರು.

2024ರ ನ.7ರಂದು ಉಡುಪಿಯ ಈದು ಗ್ರಾಮದಲ್ಲಿ ಶಂಕಿತ ನಕ್ಸಲರ ಚಲನವಲನ ಕಂಡುಬಂದ ನಂತರ ಎಎನ್‌ಎಫ್ ಕೂಂಬಿಂಗ್ ಅನ್ನು ತೀವ್ರಗೊಳಿಸಿತ್ತು. ನ.9ರಂದು ಚಿಕ್ಕಮಗಳೂರು ಜಿಲ್ಲೆಯ ಕಡೆಗುಂದಿ ಗ್ರಾಮದ ಮನೆಯೊಂದಕ್ಕೆ ಮುಂಡಗಾರು ಲತಾ ಮತ್ತು ಜಯಣ್ಣ ಭೇಟಿ ನೀಡಿದ್ದರಿಂದ ಭದ್ರತಾ ಸಿಬ್ಬಂದಿ ಶೋಧ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದರು. ನವೆಂಬರ್ 18ರಂದು ನಕ್ಸಲ್ ನಿಗ್ರಹ ಪಡೆ (ಎಎನ್‌ಎಫ್) ಜೊತೆಗಿನ ಗುಂಡಿನ ಚಕಮಕಿಯಲ್ಲಿ ನಕ್ಸಲ್ ನಾಯಕ ವಿಕ್ರಮ್ ಗೌಡ (44) ಸಾವನ್ನಪ್ಪಿದ್ದರು.

2025ರ ಜನವರಿ 8ರಂದು 6 ಮಂದಿ ನಕ್ಸಲರು ಸಿಎಂ ಕಚೇರಿಯಲ್ಲಿ ಶರಣಾಗುವುದರೊಂದಿಗೆ ರಾಜ್ಯದ ನಕ್ಸಲ್ ಚಳುವಳಿಯ ಕೊನೆಯ ಕೊಂಡಿ ಎಂದು ಹೇಳಲಾಗುತ್ತಿದೆ.

2025ರ ಫೆಬ್ರವರಿ 1ರಂದು ಆ ತಂಡದ ಕೊನೆಯ ನಾಯಕ ಕೋಟೆಹೊಂಡ ರವೀಂದ್ರ ಮುಖ್ಯವಾಹಿನಿಗೆ ಮರಳುವ ಮೂಲಕ ರಾಜ್ಯ ಅಧಿಕೃತವಾಗಿ ನಕ್ಸಲ್ ಮುಕ್ತವಾಗಿದೆ.

ಇಷ್ಟರ ಮಧ್ಯೆ ರಾಜ್ಯದಲ್ಲಿ ಹಲವಾರು ನಕ್ಸಲರು ಶರಣಾಗಿದ್ದು ಮಾತ್ರವಲ್ಲದೆ ಕೆಲವರು ಬಂಧನ ನಡೆಸಲಾಯಿತು. ಇವರಲ್ಲಿ ಕೆಲವರು ಹತ್ತಾರು ವರ್ಷ ಜೈಲಿನಲ್ಲಿಯೇ ಕೊಳೆಯಬೇಕಾಗಿ ಬಂದು ನಂತರ ಸರಿಯಾದ ಸಾಕ್ಷ್ಯಾಧಾರವಿಲ್ಲದೆ ಇದೀಗ ಕೆಲವರು ಬಿಡುಗಡೆ ಹೊಂದಿದ್ದಾರೆ.

ನಕ್ಸಲ್ ಶರಣಾಗತಿ ಪ್ರಕ್ರಿಯೆಯಲ್ಲಿ ಬದಲಾವಣೆ; ಸಿಎಂ ಸಮ್ಮುಖದಲ್ಲಿ ಮುಖ್ಯವಾಹಿನಿಗೆ ಹೋರಾಟಗಾರರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...