Homeಅಂತರಾಷ್ಟ್ರೀಯನೇಪಾಳ: ಜೆನ್-ಜೀ ದಂಗೆಯೋ? ದಲಿತ ಬಹುಜನ ಕ್ರಾಂತಿಯೋ?

ನೇಪಾಳ: ಜೆನ್-ಜೀ ದಂಗೆಯೋ? ದಲಿತ ಬಹುಜನ ಕ್ರಾಂತಿಯೋ?

- Advertisement -
- Advertisement -

(ನ್ಯಾಯಪಥ ಸೆಪ್ಟಂಬರ್ ಸಂಚಿಕೆಯಲ್ಲಿ ಪ್ರಕಟವಾಗಿದ್ದ ಬರಹ)

ನೇಪಾಳದಲ್ಲಿ ಸರ್ಕಾರವನ್ನು ’ಕೆಡವಿದ’ ವಿದ್ಯಮಾನಗಳು ಬಹಳ ವೇಗವಾಗಿ ಜರುಗಿದವು. ‘ಜೆನ್-ಜಿ ಮೂವ್‌ಮೆಂಟ್’ ಎಂದು ಕರೆಯಲಾದ ಈ ಕ್ರಾಂತಿಯಲ್ಲಿ 13ರಿಂದ 28 ವರ್ಷದ ಯುವಕಯುವತಿಯರು ಭಾಗಿಯಾಗಿದ್ದರು. 2025ರ ಜುಲೈ ಕೊನೆಯ ವಾರದಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ‘ನೆಪೊ ಕಿಡ್ಸ್’ ಎಂಬ ಹ್ಯಾಶ್‌ಟ್ಯಾಗ್‌ನಡಿಯಲ್ಲಿ, ಜೆನ್-ಜಿ ಮುಖ್ಯವಾಗಿ ಒಳಗೊಂಡಿದ್ದ ಜನಸಾಮಾನ್ಯರು ನೇಪಾಳದ ರಾಜಕಾರಣಿಗಳು, ಶ್ರೀಮಂತರು ಮತ್ತು ಉದ್ಯಮಪತಿಗಳ ಭ್ರಷ್ಟಾಚಾರವನ್ನು ಖಂಡಿಸತೊಡಗಿದರು. ಅವರ ವಿರುದ್ಧ ಫೇಸ್‌ಬುಕ್, ಎಕ್ಸ್, ಇನ್‌ಸ್ಟಾಗ್ರಾಮ್ ಮುಂತಾದ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಭಟನೆಯ ಮೀಮ್‌ಗಳು, ರೀಲ್‌ಗಳ ಸುರಿಮಳೆಯಾಗತೊಡಗಿತು. ಈ ತೀಕ್ಷ್ಣವಾದ ಸೋಶಿಯಲ್ ಮೀಡಿಯಾ ದಾಳಿಗೆ ಕವಿ ಸಿದ್ದಲಿಂಗಯ್ಯನವರ ಕವನ ‘ಸಾವಿರಾರು ನದಿ’ಗಳಂತೆ ಘಟನೆಗಳ ಸರಮಾಲೆಯು ಸೇರತೊಡಗಿದವು. ಅಣುಬಾಂಬಿನಂತೆ ಐಡಿಯಾಗಳು ಸೋಶಿಯಲ್ ಮೀಡಿಯಾದಲ್ಲಿ ಸ್ಫೋಟಿಸಲಾರಂಭಿಸಿದವು. ವೇದಶಾಸ್ತ್ರ ಪುರಾಣ, ಬಂದೂಕದ ಗುಡಾಣ ತರಗಲೆ ಕಸಕಡ್ಡಿಯಾಗಿ ತೇಲಿತೇಲಿಹೋದವು.

ಸೆಪ್ಟೆಂಬರ್ 4ರಿಂದ ಆರಂಭವಾದ ಈ ದಾಳಿ ಸೆಪ್ಟೆಂಬರ್ 8ರ ವೇಳೆಗೆ ತೀವ್ರ ಸ್ವರೂಪವನ್ನು ತಲುಪಿತ್ತು. ಇದರಿಂದ ತರಗುಟ್ಟಿದ ನೇಪಾಳ ಸರ್ಕಾರ ಸಾಮಾಜಿಕ ಮಾಧ್ಯಮಗಳನ್ನು ನಿರ್ಬಂಧಿಸಿತು. ಉರಿಯುವ ಬೆಂಕಿಗೆ ಪೆಟ್ರೋಲ್ ಸುರಿದಂತಾಯಿತು. ಸೋಶಿಯಲ್ ಮೀಡಿಯಾ ಬ್ಯಾನ್ ಮಾಡಿದ್ದರಿಂದ ಪ್ರವಾಸೋದ್ಯಮವನ್ನೇ ನಂಬಿಕೊಂಡಿದ್ದ ಲಕ್ಷಾಂತರ ಜನರ ಜೀವನೋಪಾಯಕ್ಕೆ ಹೊಡೆತ ಬಿತ್ತು. ಪ್ರವಾಸಿಗರನ್ನು ಸಂಪರ್ಕಿಸಲು, ಹೋಟೆಲ್ ಮತ್ತು ವಾಹನಗಳನ್ನು ಬುಕ್ ಮಾಡಲು ಮತ್ತು ಸ್ವಿಗ್ಗಿ ಜೊಮ್ಯಾಟೋದ ಮೂಲಕ ಆಹಾರ ಪೂರೈಸುವುದು ಸಾಧ್ಯವಾಗಲಿಲ್ಲ. ಇದರಿಂದ ಜನ ಕಂಗಾಲಾಗಿಹೋದರು. ಇದನ್ನು ಅರಿಯದೆ ಕೇವಲ ‘ಜೆನ್-ಜೀ’ ಎಂದರೆ ಸೋಶಿಯಲ್ ಮೀಡಿಯಾಗೆ ಚಟದಾಸರಾಗಿರುವವರು, ಅದಕ್ಕಾಗಿಯೇ ದಂಗೆ ಎದ್ದಿದ್ದಾರೆ ಎಂದು ಅಜ್ಞಾನಿಗಳು ಆಡಿಕೊಂಡರು. ಇದ್ಯಾವುದನ್ನೂ ಕೇರ್ ಮಾಡದೆ ಜೆನ್-ಜೀ ಮೂವ್‌ಮೆಂಟ್ ನೇಪಾಳ ದೇಶದಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬಿತು. ನೇಪಾಳ ರಾಜಧಾನಿ ಕಠ್ಮಂಡು ಹಾಗೂ ಪೋಕ್ರಾ, ಇಟಾಹರಿ ಮತ್ತಿತರ ಸಣ್ಣ ಪಟ್ಟಣಗಳಲ್ಲಿ ಹುಡುಗ ಹುಡುಗಿಯರು ಹುತ್ತದಲ್ಲಿದ್ದ ನಾಗರಗಳಂತೆ ಎದ್ದು ಬಂದರು.

ಸೆಪ್ಟೆಂಬರ್ 10ರಂದು ಶುರುವಾಯಿತು ನೋಡಿ ನಿಜವಾದ ದಂಗೆ! ಚಿಲಿಯ ಕವಿ ನೆರೂದಾನ ಕವನದಂತೆ ರಸ್ತೆಯಲ್ಲಿ ’ನೆತ್ತರು’ ಚೆಲ್ಲಾಡತೊಡಗಿತು. ಜೆನ್-ಜೀ ಮೂವ್‌ಮೆಂಟಿಗೆ ಕೆಟ್ಟ ಹೆಸರು ತರಬೇಕೆಂದು ಅಲ್ಲಿನ ರಾಜನ ಸರ್ವಾಧಿಕಾರವನ್ನು ಬೆಂಬಲಿಸುವವರು ಮತ್ತು ಮನುಸ್ಮೃತಿಯ ಪರಿಪಾಲಕರು ಗುಂಪಿನಲ್ಲಿ ಸೇರಿಕೊಂಡು ಚಳುವಳಿಯನ್ನು ರಕ್ತಸಿಕ್ತ ಮಾಡಿದರು. ಪೊಲೀಸರು ಲಾಠಿ ಚಾರ್ಜ್ ಮಾಡಿ ಹನ್ನೊಂದು ಜನ ಹುಡುಗಹುಡುಗಿಯರನ್ನು ಕೊಂದರು. ಇದರಿಂದ ರೊಚ್ಚಿಗೆದ್ದ ಸಾವಿರಾರು ಯುವಕ ಯುವತಿಯರು ಪಾರ್ಲಿಮೆಂಟಿಗೆ ನುಗ್ಗಿ ಬೆಂಕಿ ಹಚ್ಚಿದರು. ಸುಪ್ರೀಮ್ ಕೋರ್ಟ್ ಉರಿದು ಬೂದಿಯಾಯಿತು. ಆಡಳಿತ ಪಕ್ಷದ ಹೆಡ್‌ಕ್ವಾರ್ಟರ್ಸ್ ಉರುಳಿಬಿತ್ತು. ರಾಜಕಾರಣಿಗಳ ಮನೆಗಳು ಧ್ವಂಸವಾದವು. ಪ್ರಧಾನಿ ಓಲಿ ಮತ್ತು ಆತನ ಕುಟುಂಬ ದಿಕ್ಕೆಟ್ಟರು. ಕೊಬ್ಬಿನಿಂದ ಮೆರೆಯುತ್ತಿದ್ದ ಕ್ಯಾಬಿನೆಟ್ ಕುಟುಂಬದವರಿಗೆ ಲಾತ ಬಿದ್ದವು. ಭೂತಯ್ಯನ ಮಗ ಅಯ್ಯು ಚಲನಚಿತ್ರದಂತೆ ಮನೆಗಳನ್ನು ಲೂಟಿ ಮಾಡಲಾಯಿತು. ಕ್ಯಾಬಿನೆಟ್ ಮಿನಿಸ್ಟರ್‌ಗಳು ಏಟು ತಿನ್ನಲಾರದೆ ನಾಯಿಗಳಂತೆ ಕುಂಯ್‌ಗುಡುತ್ತಾ ರಸ್ತೆಗಳಲ್ಲಿ ಓಡಲಾರಂಭಿಸಿದರು. ಆದರೂ ಅವರನ್ನು ಬಿಡದೆ ಗದ್ದೆಯಲ್ಲಿ, ಬೀದಿಯಲ್ಲಿ, ಗಲ್ಲಿಯಲ್ಲಿ ಇಟ್ಟಾಡಿಸಿಕೊಂಡು ಹೊಡೆಯಲಾಯಿತು.

ಓಲಿ

ಏರ್‌ಪೋರ್ಟ್ ಸುಟ್ಟು ಹೋಯಿತು, ಸುಳ್ಳು ಬೊಗಳುತ್ತಿದ್ದ ಟಿವಿ ಚಾನಲ್‌ಗಳು ಬಂದ್ ಆದವು. ಪ್ರಧಾನಮಂತ್ರಿ ಮತ್ತವನ ಕ್ಯಾಬಿನೆಟ್ ರಾಜಿನಾಮೆ ಸಲ್ಲಿಸಲು ಅಧ್ಯಕ್ಷರನ್ನು ಹುಡುಕಾಡಬೇಕಾಯಿತು. ಒಂದರ್ಥದಲ್ಲಿ ನೇಪಾಳದ ಸರ್ಕಾರ 78 ಗಂಟೆಗಳಲ್ಲಿ ಕಾಣದಂತೆ ಮಾಯವಾಯಿತು. ರಾಜ ಜ್ಞಾನೇಂದ್ರ ಜನರನ್ನು ಸಮಾಧಾನವಾಗಿರುವಂತೆ ಕೇಳಿಕೊಂಡ. ಪರಿಸ್ಥಿತಿಯ ಭೀಕರತೆಯನ್ನು ಅರಿತ ಎಂ.ಪಿ.ಗಳು, ಮಂತ್ರಿಗಳು ಮತ್ತು ಉದ್ಯಮಪತಿಗಳು ಮತ್ತು ಅವರ ಭ್ರಷ್ಟ ಸಂತಾನ ಮಿಲಿಟರಿಯ ಮಧ್ಯಪ್ರವೇಶಕ್ಕೆ ಗೋಗರೆದವು.

ಸೆಪ್ಟೆಂಬರ್ 11ರ ವೇಳೆಗಾಗಲೇ ಸಾವಿನ ಸಂಖ್ಯೆ 50ನ್ನು ಮೀರಿತ್ತು. ಸಾವಿರಾರು ಜನ ಗಾಯಗೊಂಡಿದ್ದರು. ಮಿಲಿಟರಿ ಆಯಕಟ್ಟಿನ ಸ್ಥಾನಗಳನ್ನು ವಶಪಡಿಸಿಕೊಂಡಿತು. ಸ್ವಲ್ಪ ಮಟ್ಟಿಗೆ ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ಜೆನ್-ಜೀ ಮುಂದಾಳುಗಳನ್ನು ಮಾತುಕತೆಗೆ ಕರೆಯಿತು. ಈ ಲೇಖನ ಬರೆಯುವ ಹೊತ್ತಿಗೆ ಸುಪ್ರೀಮ್ ಕೋರ್ಟ್ ನ್ಯಾಯಾಧೀಶರಾಗಿದ್ದ 73 ವರ್ಷದ ಮಹಿಳೆ ಸುಶೀಲಾ ಕರ್ಕಿ ಪ್ರಧಾನಿಯಾಗಲಿ ಎಂದು ಜೆನ್-ಜೀ ಮಿಲಿಟರಿಗೆ ಸೂಚಿಸಿತು. ಕ್ರಾಂತಿಯ ಬಿರುಗಾಳಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಭಾರತೀಯರನ್ನು ನಮ್ಮ ಸರ್ಕಾರವು ಸುರಕ್ಷಿತವಾಗಿ ಕರೆತಂದಿತು.

ಇಡೀ ಪ್ರಪಂಚದ ಗಮನ ಸೆಳೆದ ದಕ್ಷಿಣ ಏಷ್ಯಾವನ್ನು ನಡುಗಿಸಿದ 2025ರ ಈ ಸೆಪ್ಟೆಂಬರ್ ಕ್ರಾಂತಿ ಏಕೆ ನಡೆಯಿತು, ಅದರ ಹಿಂದಿನ ಕಾರಣಗಳೇನು ಎಂಬುದನ್ನು ವಿಶ್ಲೇಷಿಸೋಣ. ಇಡೀ ವಿದ್ಯಮಾನವನ್ನು ವಿವಿಧ ಸಿದ್ಧಾಂತಗಳ ಮೂಲಕ ಮಂಡಿಸಲಾಗುತ್ತಿದೆ. ಅವು ಯಾವುವೆಂದರೆ

  1. ಭೌಗೋಳಿಕ ರಾಜಕೀಯ ತಜ್ಞರು, ವಿದೇಶಾಂಗ ನೀತಿಗಳ ಪರಿಣಿತರ ಪ್ರಕಾರ ಭಾರತವು ಟ್ರಂಪ್‌ನ ನೀತಿಗಳನ್ನು ವಿರೋಧಿಸಿ ರಶ್ಯಾ ಮತ್ತು ಚೀನಾದ ಜೊತೆ ಹೆಚ್ಚು ಸಖ್ಯವನ್ನು ಸಾಧಿಸಿತು. ಭಾರತದ ನೆರೆಯ ದೇಶವಾದ ನೇಪಾಳವನ್ನು ದಾಳವಾಗಿಟ್ಟುಕೊಂಡು ಭಾರತದಲ್ಲಿಯೂ ಇಂತಹ ಒಂದು ಪರಿಸ್ಥಿತಿ ಸೃಷ್ಟಿಸಿ ಇಲ್ಲಿನ ಆಡಳಿತವನ್ನು ಅಭದ್ರಗೊಳಿಸುವ ಉದ್ದೇಶ ಅಮೆರಿಕಾಗೆ ಇದೆ ಎಂಬ ಸಿದ್ಧಾಂತವನ್ನು ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಮಂಡಿಸುತ್ತಿದ್ದಾರೆ.
  2. ಭಾರತವು ಅತ್ಯಂತ ಬಲವಾದ ಗುಪ್ತಚರ ಸಂಸ್ಥೆಯನ್ನು ಹೊಂದಿದೆ. ನಮ್ಮ ದೇಶದ ರಿಸರ್ಚ್ ಮತ್ತು ಅನಾಲಿಸಿಸ್ ವಿಂಗ್ ’ರಾ’ ನೇಪಾಳದಲ್ಲಿ ವಹಿಸುತ್ತಿರುವ ಪಾತ್ರ ದೊಡ್ಡ ಮಟ್ಟದಲ್ಲಿದೆ. ನೇಪಾಳದ ಚುನಾವಣಾ ಸಂದರ್ಭದಲ್ಲಿ ಭಾರತ ವಿರೋಧಿ ಧೋರಣೆಯನ್ನು ತಾಳಿ ಓಲಿ ಚುನಾವಣೆ ಗೆದ್ದರು. ಅವರ ಪ್ರಕಾರ ಉತ್ತರ ಪ್ರದೇಶಕ್ಕೆ ಹೊಂದಿಕೊಂಡ ಸೂಸ್ತ, ತ್ರಿಬೇನಿ, ಲುಂಬಿನಿ ಮತ್ತು ನಿಚ್ಚಲಾಲ್‌ಗಳನ್ನು ಭಾರತವು ವಶಪಡಿಸಿಕೊಂಡಿದೆ. ಆದುದರಿಂದ ಅದು ನಮ್ಮ ಶತ್ರು ದೇಶವೆಂದು ಚುನಾವಣೆಯಲ್ಲಿ ಓಲಿಯು ಭಾರತವನ್ನು ಬಿಂಬಿಸಿದರು. ಅದನ್ನು ಭಾರತದ ಮಾಯಾ ಯುದ್ಧವೆಂದು (ಮುಸುಕಿನ) ಕರೆಯಲಾಯಿತು. ಆಗಾಗ ಭಾರತ ನೇಪಾಳದ ಮೇಲೆ ವ್ಯಾಪಾರ ವಹಿವಾಟಿನ ನಿರ್ಬಂಧ ಹೇರುವ ಬೆದರಿಕೆಯನ್ನು ಒಡ್ಡುತ್ತಲೇ ಇತ್ತು. ಓಲಿಯು ಚೀನಾದ ಕಡೆ ವಾಲಿದ ಕೂಡಲೆ ಭಾರತವು ಓಲಿಯನ್ನು ಪದಚ್ಯುತಗೊಳಿಸಬೇಕೆಂಬ ಹಠದಿಂದ ತನ್ನ ಹಿಂದೂ ಸಂಘಟನೆಗಳ ಮೂಲಕ ಹಣದ ಹೊಳೆಯನ್ನು ಹರಿಸಿ ಜೆನ್-ಜೀಯನ್ನು ಪ್ರಚೋದಿಸಿತು ಎಂಬ ಸಿದ್ಧಾಂತವನ್ನು ಅಮ್ಜದ್ ಜಾವೆದ್‌ರಂತಹ ಕೆಲವು ಅಂತಾರಾಷ್ಟ್ರೀಯ ಸಂಬಂಧಗಳ ತಜ್ಞರು ಮಂಡಿಸುತ್ತಾರೆ. ಇದನ್ನು ಅಷ್ಟು ಸುಲಭವಾಗಿ ತಳ್ಳಿಹಾಕಲು ಸಾಧ್ಯವಿಲ್ಲ.
  3. ನೇಪಾಳದಲ್ಲಿ ಕೆಲವು ದಶಕಗಳಿಂದ ನಿರಂತರವಾಗಿ ಅಭದ್ರ ಸರ್ಕಾರಗಳೇ ರಚನೆಯಾಗುತ್ತಿದೆ. 13 ವರ್ಷಗಳಲ್ಲಿ 11 ಸರ್ಕಾರಗಳು. ನೇಪಾಳಿ ಕಾಂಗ್ರೆಸ್, ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ್, ಪೀಪಲ್ಸ್ ಸೋಶಿಯಲಿಸ್ಟ್ ಪಾರ್ಟಿ, ಡೆಮಾಕ್ರಟಿಕ್ ಸೋಶಿಯಲಿಸ್ಟ್ ಪಾರ್ಟಿ ಮುಂತಾದ ರಾಜಕೀಯ ಪಕ್ಷಗಳು ಅಸ್ತಿತ್ವದಲ್ಲಿದೆ. ಅರಸೊತ್ತಿಗೆ ಹೋದ ಮೇಲೆ ಈ ರಾಜಕೀಯ ಪಕ್ಷಗಳು ಅಪವಿತ್ರ ಮೈತ್ರಿ ಮಾಡಿಕೊಂಡು ಒಪ್ಪಂದದ ಮೇಲೆ ಸದಾ ಸರ್ಕಾರದಲ್ಲಿರುತ್ತವೆ. ಈ ಪ್ರಮುಖ ಪಕ್ಷಗಳಲ್ಲಿರುವ ರಾಜಕಾರಣಿಗಳು ಒಂದಲ್ಲ ಒಂದು ಅಧಿಕಾರ ಸ್ಥಾನದಲ್ಲಿ ಸದಾ ಮುಂದುವರಿಯುತ್ತಾರೆ. ತಮ್ಮ ಮಕ್ಕಳನ್ನು ವಿದೇಶಗಳಲ್ಲಿ ವ್ಯಾಸಂಗಕ್ಕೆ ಕಳಿಸಿ ಮಿಲಿಯಗಟ್ಟಲೆ ಹಣವನ್ನು ಲೂಟಿ ಮಾಡಿ ನೇಪಾಳವನ್ನು ದರಿದ್ರ ಸ್ಥಿತಿಗೆ ತಂದು ನಿಲ್ಲಿಸಿದ್ದಾರೆ. ನೇಪಾಳಿ ಜನರ ಬೆವರು ಮತ್ತು ರಕ್ತದಿಂದ ಕಟ್ಟಿದ ದೇಶದ ಸಮಸ್ತ ಆಸ್ತಿಯನ್ನು ಕೇವಲ 2% ಜನರು ತಮ್ಮ ಹತೋಟಿಯಲ್ಲಿಟ್ಟುಕೊಂಡಿದ್ದಾರೆ. ಜೊತೆಗೆ ಕಣ್ಣಿಗೆ ರಾಚುವಂತೆ ತಮ್ಮ ಶ್ರೀಮಂತಿಕೆಯ ಅಶ್ಲೀಲ ಪ್ರದರ್ಶನವನ್ನು ಮಾಡುತ್ತಿದ್ದಾರೆ. ಇದರಿಂದ ರೊಚ್ಚಿಗೆದ್ದ ಜೆನ್-ಜೀ ಯುವಕ ಯುವತಿಯರು ಭ್ರಷ್ಟಾಚಾರದ ವಿರುದ್ಧ ಹೋರಾಟವನ್ನು ಆರಂಭಿಸಿದರು. ನೆಪೋ-ಕಿಡ್ಸ್ ಎಂಬ ಹ್ಯಾಶ್‌ಟ್ಯಾಗ್ ಅಡಿಯಲ್ಲಿ ಇಡೀ ಕ್ರಾಂತಿ ಜರುಗಿತು. ಇದು ಮತ್ತೊಂದು ಜನಪ್ರಿಯ ಮತ್ತು ಈಗ ಅಸ್ತಿತ್ವದಲ್ಲಿರುವ ಸಿದ್ಧಾಂತ.

ಈ ಮೂರು ಸಿದ್ಧಾಂತಗಳನ್ನು ಪರಿಶೀಲಿಸುವುದು ಅಗತ್ಯವಾಗಿದೆ. ಈ ಕ್ರಾಂತಿಯ ಹಿಂದೆ ಅಮೆರಿಕಾದ ಸಿಐಎ ಅಥವಾ ಭಾರತದ ’ರಾ’ ಅಥವಾ ಜೆನ್-ಜೀಯ ಪ್ರತಿಭಟನೆ ಇದೆ ಎಂದು ಇಟ್ಟುಕೊಂಡರೂ ಇಂತಹ ಒಂದು ಕ್ರಾಂತಿಯನ್ನು ಮೇಲ್ಪದರದಲ್ಲಿ ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಸಮುದ್ರದ ಆಳದಲ್ಲಿ ಭೂಮಿ ಕಂಪಿಸಿದಾಗ ಸುನಾಮಿ ಉಂಟಾಗುತ್ತದೆ. ಸಮುದ್ರದಷ್ಟೇ ಆಳವಾದ ನೇಪಾಳದ ಸಮಾಜದಲ್ಲಿ ಉಂಟಾಗಿರುವ ಸಾಮಾಜಿಕ ಕಂಪನ ಇದು. ಅದರ ಒಳ ಪ್ರವಾಹವನ್ನು ಗ್ರಹಿಸಿದರೆ ಈ ಕ್ರಾಂತಿಯನ್ನು ವಿಶ್ಲೇಷಿಸಲು ಬೇಕಾದ ಸರಿಯಾದ ಸಿದ್ಧಾಂತವೊಂದು ದೊರೆಯುತ್ತದೆ. ಸಮಾಜಶಾಸ್ತ್ರೀಯವಾಗಿ ವಿಶ್ಲೇಷಿಸಿದಾಗ ನೇಪಾಳವು ಅತ್ಯಂತ ಕಟುವಾದ ಮತ್ತು ಕ್ರೂರವಾದ ಜಾತಿವ್ಯವಸ್ಥೆಯನ್ನು ಹೊಂದಿರುವ ದೇಶ. ನೇಪಾಳದಲ್ಲಿನ ಜಾತಿಯ ಚರಿತ್ರೆಯು ಸಾಮಾನ್ಯ ಭಾರತೀಯರಿಗೆ ಅಷ್ಟಾಗಿ ಪರಿಚಯವಿಲ್ಲ. ಅದರ ಪರಿಚಯವಿಲ್ಲದಿರುವಾಗ ವಿವಿಧ ರೀತಿಯ ಅಪಕಲ್ಪನೆಗಳು ಹುಟ್ಟಿಕೊಳ್ಳುತ್ತವೆ.

ಜಾತಿಪದ್ಧತಿಯು ನೇಪಾಳದಲ್ಲಿ ವಹಿಸಿರುವ ಸಾಂಸ್ಕೃತಿಕ, ಧಾರ್ಮಿಕ, ನೈತಿಕ, ಆರ್ಥಿಕ ಮತ್ತು ಸಾಮಾಜಿಕ ಪಾತ್ರವನ್ನು ಸರಿಯಾಗಿ ಗ್ರಹಿಸುವುದು ಅತ್ಯಗತ್ಯವಾಗಿದೆ. ಅತ್ಯಂತ ವ್ಯವಸ್ಥಿತವಾಗಿ ರಾಜಾಳ್ವಿಕೆಯ ಮೂಲಕ ಜಾತಿಪದ್ಧತಿಯನ್ನು ನೇಪಾಳದಲ್ಲಿ ಜಾರಿಗೊಳಿಸಲಾಯಿತು.

ನೇಪಾಳವು ಕ್ರಿ.ಪೂ. 4000ದಲ್ಲಿ ಟಿಬೆಟೋ ಬರ್ಮನ್ ಭಾಷೆಗಳನ್ನು ಆಡುತ್ತಿದ್ದ ಜನರನ್ನು ಒಳಗೊಂಡಿತ್ತು ಎಂಬುದನ್ನು ಚಾರಿತ್ರಿಕ ದಾಖಲೆಗಳು ತಿಳಿಸುತ್ತವೆ. ಆಮೇಲೆ ಗೋಪಾಲರು, ಮಹಿಷಪಾಲರು, ಕಿರಾತರು ಅಲ್ಲಿಗೆ ವಲಸೆ ಬಂದರು. ರಾಜ್ಯವನ್ನು ಸ್ಥಾಪಿಸಿದ ಮೊದಲ ಬುಡಕಟ್ಟು ಕಿರಾತರು ಎಂದು ಹೇಳಲಾಗುತ್ತದೆ. ಬುದ್ಧನ ಹುಟ್ಟೂರಾದ ಲುಂಬಿನಿ ನೇಪಾಳದಲ್ಲಿಯೇ ಇದೆ. ಬೌದ್ಧ ಧರ್ಮವು ಪ್ರವರ್ಧಮಾನಕ್ಕೆ ಬಂದಮೇಲೆ ಮೌರ್ಯರ ರಾಜ ಅಶೋಕನ ಆಡಳಿತದ ಪ್ರಭಾವವು ನೇಪಾಳದ ಮೇಲೆ ಉಂಟಾಗಿದೆ ಎಂಬುದಕ್ಕೆ ಶಿಲಾ ಶಾಸನಗಳು ಸಾಕ್ಷಿಯಾಗಿವೆ. ಆಮೇಲೆ ಅನೇಕ ರಾಜರ ವಂಶಗಳು ನೇಪಾಳವನ್ನು ಆಳಿದವು. ಈ ಲೇಖನದ ಮಿತಿಯಲ್ಲಿ ಆ ಚಾರಿತ್ರಿಕ ವಿವರಗಳಿಗೆ ಹೋಗದೆ ಜೆನ್-ಜೀ ಕ್ರಾಂತಿಗೆ ಸಂಬಂಧಿಸಿದಂತೆ ಮಾತ್ರ ನಮ್ಮ ವಿಚಾರಗಳನ್ನು ಪರಿಶೀಲಿಸಬಹುದು.

ಸುಶೀಲಾ ಕರ್ಕಿ

ಜಯಸ್ಥಿತಿ ಮಲ್ಲ ಎಂಬ ರಾಜನು 1385ರಿಂದ 1395ರವರೆಗೆ ನೇಪಾಳವನ್ನು ಆಳಿದನು. ಆ ಸಂದರ್ಭದಲ್ಲಿ ಅವನು ವ್ಯವಸ್ಥಿತವಾಗಿ ಜಾತಿಪದ್ಧತಿಯನ್ನು ಜಾರಿಗೆ ತಂದನು. ಮನುಸ್ಮೃತಿಯನ್ನು ಮತ್ತು ಸಂಸ್ಕೃತವನ್ನು ಬಲ್ಲ ಐದು ಜನ ಬ್ರಾಹ್ಮಣರನ್ನು ಭಾರತದಿಂದ ಕರೆಸಿಕೊಂಡನು. ಅವರು ಯಾರೆಂದರೆ ಕೀರ್ತಿನಾಥ ಉಪಾಧ್ಯಾಯ, ಕನ್ಯಾ ಕುಬ್ಜ, ರಘುನಾಥ ಝಾ ಮೈಥಿಲಿ, ಶ್ರೀನಾಥ ಭಟ್ಟ ಮತ್ತು ರಾಮನಾಥ ಝಾ. ಈ ಐದು ಜನರು ಅಲ್ಲಿನ ಸ್ಥಳೀಯ ಜನರ ಮೇಲೆ ರಾಜನ ಮೂಲಕ ಹಲವು ಬಗೆಯ ನಿರ್ಬಂಧಗಳನ್ನು ಹೇರಿಸಿದರು. ಅಲ್ಲಿನ ದೇವತೆಯಾದ ತಲೇಜು ಭವಾನಿಗೆ ಎಮ್ಮೆಯ ಮಾಂಸ ಮತ್ತು ಮದವನ್ನು ಅರ್ಪಿಸಲಾಗುತ್ತಿತ್ತು. ಬ್ರಾಹ್ಮಣರು ಇದನ್ನು ನಿರ್ಬಂಧಿಸುವಂತೆ ರಾಜನನ್ನು ಒತ್ತಾಯಿಸಿದರು. ತಾವು ಇತರರಿಗಿಂತ ಉತ್ತಮರೆಂದು ತೋರಿಸಿಕೊಳ್ಳುವ ಸಲುವಾಗಿ, ತಾವು ಪುರೋಹಿತರಾಗಿರುವುದರಿಂದ ದೇವರನ್ನು ಪೂಜಿಸುವ ಹಕ್ಕು ತಮಗೆ ಮಾತ್ರ ಇದೆ ಎಂದು ಪ್ರತಿಪಾದಿಸತೊಡಗಿದರು. ನೇಪಾಳದ ಸಮಾಜವನ್ನು ನಾಲ್ಕು ವರ್ಣ, ಅರವತ್ತನಾಲ್ಕು ಜಾತಿಗಳನ್ನಾಗಿ ವಿಂಗಡಿಸಿದರು. ಇದಕ್ಕೆ ಬೌದ್ಧ ಧರ್ಮವು ಹೊರತಾಗಲಿಲ್ಲ. ಈ ಪರಂಪರೆಯು ಹೀಗೆ ಮುಂದುವರಿದು 1770ರಲ್ಲಿ ಪೃಥ್ವಿ ನಾರಾಯಣ ಶಾ ಎಂಬ ಕ್ಷತ್ರಿಯನು ಕಠ್ಮಂಡುವನ್ನು ರಾಜಧಾನಿಯನ್ನಾಗಿ ಮಾಡಿಕೊಂಡನು. ಜಯಸ್ಥಿತಿ ಮಲ್ಲನ ಬಾವುಟದ ಬಣ್ಣವನ್ನು ಹಿಂದೂಗಳ ರಾಷ್ಟ್ರೀಯ ಬಣ್ಣ ಎಂದು ಘೋಷಿಸಿದನು. ನೇಪಾಳವನ್ನು ಅಸಲಿ ಹಿಂದೂಸ್ಥಾನ ಎಂದು ಕರೆದನು. ನೇಪಾಳವನ್ನು ಒಗ್ಗೂಡಿಸಲು ನಾನೇ ಸಮರ್ಥನು ಎಂದು ಘೋಷಿಸಿ ಒಂದು ರಾಷ್ಟ್ರ, ಒಂದು ಧರ್ಮ ಮತ್ತು ಒಂದು ಭಾಷೆ ಇರಬೇಕೆಂದು ಅದಕ್ಕೆ ಪೂರಕವಾದ ಆಡಳಿತವನ್ನು ಜಾರಿಗೆ ತಂದನು.

ಮುಂದುವರಿದು, 1854ರಲ್ಲಿ ಅಧಿಕಾರಕ್ಕೆ ಬಂದ ಜಂಗ್ ಬಹದ್ದೂರ್ ರಾಣಾ, ‘ಮುಲುಕಿ ಐನ್’ ಎಂಬ ಕಾನೂನುಬದ್ಧವಾದ ಜಾತಿರಸಂಹಿತೆಯನ್ನು ಜಾರಿಗೆ ತಂದನು. ಈ ಜಾತಿಸಂಹಿತೆಯು ಸಂಪೂರ್ಣವಾಗಿ ಮನುಸ್ಮೃತಿಗೆ ನಿಷ್ಠವಾಗಿತ್ತು. ಇಡೀ ಸಮಾಜವನ್ನು ಐದು ಪ್ರಮುಖ ಜಾತಿಗಳ ಗುಂಪುಗಳನ್ನಾಗಿ ವಿಂಗಡಿಸಲಾಯಿತು. ಈ ವಿಂಗಡಣೆಯನ್ನು ಹೀಗೆ ಮಾಡಲಾಗಿತ್ತು.

  1. ಜನಿವಾರಧಾರಿ (ಉಪಾಧ್ಯಾಯ ಬ್ರಾಹ್ಮಣರು, ರಜಪೂತರು, ಕ್ಷತ್ರಿಯರು ಮತ್ತು ಭಾರತೀಯ ಬ್ರಾಹ್ಮಣರು)
  2. ನೀರು ಸ್ವೀಕರಿಸಬಹುದಾದ ಜಾತಿ (ಮಗರ್, ಗುರುಂಗ್, ಸುನುವರ್)
  3. ಗುಲಾಮಗಿರಿಗೆ ಒಳಪಡಿಸಲಾಗದ ಮದ್ಯ ಸೇವಿಸುವ ಜಾತಿ (ಭೋತೆ, ಚಪಾಂಗ್, ಕುಮಲ್, ಹಾಯು, ಥಾರು, ಗರ್ಟಿ)
  4. ಗುಲಾಮಗಿರಿಗೆ ಒಳಪಡಿಸಬಹುದಾದ ಮದ್ಯ ಸೇವಿಸುವ ಅಶುದ್ಧ ಆದರೆ ಮುಟ್ಟಬಹುದಾದ ಜಾತಿ (ಕಸಾಯ್ (ಮಾಂಸ ಕಡಿಯುವವರು), ಕುಸ್ಲೆ (ನೆವರ್ ಸಂಗೀತಗಾರರು), ದೋಭಿ (ಅಗಸರು), ಕುಲು (ಚರ್ಮ ಹದಮಾಡುವವರು), ಮುಸಲ್ಮಾನರು (ಮ್ಲೇಚರು).
  5. ಅಶುದ್ಧ ಮತ್ತು ಅಸ್ಪೃಶ್ಯ ಮತ್ತು ನೀರನ್ನೂ ಸ್ವೀಕರಿಸಬಾರದ ಜಾತಿ (ಕಮಿ- ಕಮ್ಮಾರ, ಸರ್ಕಿ- ಚಪ್ಪಲಿ ಹೊಲಿಯುವವರು, ಕದರ- ಕಮಿ ಮತ್ತು ಕರ್ಕಿಗಳ ಸಂಗದಿಂದ ಹುಟ್ಟಿದವರು, ದಮಾಯ್- ದರ್ಜಿಗಳು ಮತ್ತು ಸಂಗೀತಗಾರರು, ಗೈನೆ- ಅಲೆಮಾರಿ ಸಂಗೀತಗಾರರು, ಬಡಿ- ಸಂಗೀತಗಾರರು, ಪೊಡೆ- ಚರ್ಮ ಹದಮಾಡುವವರು ಮತ್ತು ಮೀನುಗಾರರು, ಚೈಮೆ- ಜಾಡಮಾಲಿಗಳು) (ಆಧಾರ: Quest Journals, Journal of Research in Humanities and Social Science, Vol 10 – issue 11 (2022) pp: 335-340. www.questjournal.org)

ಈ ವಿಂಗಡಣೆ ನಂತರ ಮೇಲಿನ ಪಟ್ಟಿಯಲ್ಲಿರುವ ಜಾತಿಗಳ ಲಕ್ಷಣಗಳನ್ನು ಹೊಂದಿರುವ ಅನೇಕ ಜಾತಿಗಳನ್ನು ಒಳಗೊಳ್ಳತೊಡಗಿತು. ಗಂಧರ್ವ, ಪರಿಯರ್, ಕಲಾರ್, ಚಿಡಿಮಾರ್, ಧೋಮ್, ತತ್ಮಾ, ಮೆಸ್ತಾರ್, ಸರ್ವಾಂಗ್ ಇತ್ಯಾದಿ ಜಾತಿಗಳು ಸೇರಿಕೊಂಡವು. 2001ರ ನೇಪಾಳ ಜನಗಣತಿಯ ಪ್ರಕಾರ 22 ಅಸ್ಪೃಶ್ಯ ಎಂದು ಕರೆಯಬಹುದಾದ ಜಾತಿಗಳನ್ನು ಅದು ಒಳಗೊಂಡಿದೆ. 2008ರಲ್ಲಿ ನೇಪಾಳದಲ್ಲಿ ಪ್ರಜಾಪ್ರಭುತ್ವದ ಪಾರ್ಲಿಮೆಂಟರಿ ವ್ಯವಸ್ಥೆಯು ಜಾರಿಗೆ ಬಂದಿತು, ಆಗ ಒಬ್ಬ ದಲಿತ ಪ್ರತಿನಿಧಿಯೂ ಇರಲಿಲ್ಲ. 2002ರಲ್ಲಿ ದಲಿತ ಅಭಿವೃದ್ಧಿ ಮತ್ತು ರಕ್ಷಣಾ ಕಾಯ್ದೆ ಜಾರಿಗೆ ಬಂದಿತು. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ದಲಿತ್ ಸ್ಟಡೀಸ್ ನಡೆಸಿದ ಅಧ್ಯಯನದ ಪ್ರಕಾರ ಶೇಕಡ 12.8 ಇರುವ ಈ ಜಾತಿಗಳನ್ನು ಇಷ್ಟು ವರ್ಷಗಳ ಕಾಲ ಮತ್ತು ಈಗಲೂ- ದೈಹಿಕ ಹಲ್ಲೆ, ವಿವಾಹದ ನೋಂದಣಿಗೆ ಅಡ್ಡಿ, ಭೂ ನೋಂದಣಿಗೆ ಅಡ್ಡಿ, ಮಹಿಳೆಯರ ಮೇಲೆ ಅತ್ಯಾಚಾರ, ಸತತವಾಗಿ ಕಳ್ಳತನ ಮತ್ತು ಅತ್ಯಾಚಾರದ ಆರೋಪದ ಮೇಲೆ ಅಮಾಯಕರನ್ನು ಬಂಧಿಸುವುದು, ಕೊಲೆ ಆರೋಪದಲ್ಲಿ ಬಂಧಿಸುವುದು, ಪೌರತ್ವಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸದೆ ಇರುವುದು- ಮೊದಲಾದ ಶೋಷಣೆಗಳನ್ನು ಪ್ರಭುತ್ವ ಪ್ರಾಯೋಜಿತವಾಗಿ ಮಾಡಲಾಗುತ್ತದೆ. ಮೇಲ್ಜಾತಿಗಳು ಅಂತರ್‌ಜಾತಿ ವಿವಾಹ ತಡೆಯುವುದು, ದಲಿತ ಮಹಿಳೆಯರ ಅತ್ಯಾಚಾರ, ಸಾರ್ವಜನಿಕ ಪ್ರದೇಶಗಳ ಪ್ರವೇಶವನ್ನು ನಿಯಂತ್ರಿಸುವುದು, ಕಾರಣ ಕೊಡದೆ ಕೆಲಸದಿಂದ ವಜಾಗೊಳಿಸುವುದು ಮೊದಲಾದವುಗಳನ್ನು ಮಾಡುತ್ತವೆ. ಸರ್ವೇಸಾಮಾನ್ಯವಾಗಿ ಇವರನ್ನು ಯಾವುದೇ ಕಾರಣ ನೀಡದೆ ಬಂಧಿಸುವುದು, ಹಲ್ಲೆ ಮಾಡುವುದು ಮತ್ತು ಹತ್ಯೆ ಮಾಡುವುದು ನಡೆಯುತ್ತದೆ. ಈ ಬಹುತೇಕ ಜಾತಿಗಳನ್ನು ಮಾದೇಶಿಗಳೆಂದು ಕರೆಯಲಾಗುತ್ತದೆ.

ಇತರ ಸ್ಪರ್ಶಿಸಬಹುದಾದ ಮತ್ತು ಮೂಲ ನಿವಾಸಿ ಜಾತಿಗಳಾದ ಮಗರ್, ಗುರುಂಗ್ ಮತ್ತು ಸುನುವರ್‌ಗಳು ಗುಲಾಮರನ್ನಾಗಿ ಮಾಡಿಕೊಳ್ಳಬಹುದಾದ ಚಪಾಂಗ್, ಕುಮಾಂಗ್, ಹಾಯು, ಥಾರು ಮೂಲನಿವಾಸಿಗಳಿಗೆ ಭೂಮಿ ಮತ್ತು ಇತರ ಸಂಪನ್ಮೂಲಗಳು ದೊರಕದಂತೆ ನೋಡಿಕೊಳ್ಳಲಾಗುತ್ತದೆ. ದಲಿತ ಜಾತಿಗಳಂತೆಯೇ ಇವರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಸಾಕಷ್ಟು ಪ್ರಾತಿನಿಧ್ಯ ನೀಡಿಲ್ಲ. ತಮ್ಮ ಬಡತನ ಮತ್ತು ಸಾಮಾಜಿಕ ಹಿಂದುಳಿಯುವಿಕೆಯಿಂದ ಇವರು ಸರಿಯಾದ ರಾಜಕೀಯ ಪ್ರಾತಿನಿಧ್ಯವನ್ನು ಪಡೆದಿಲ್ಲ. ಇವರೆಲ್ಲರೂ ಒಟ್ಟುಗೂಡಿ ಶೇಕಡ 85ರಷ್ಟು ಜನಜಾತಿಗಳಾಗುತ್ತಾರೆ. ಶೇಕಡ 15ರಷ್ಟಿರುವ ಉಪಾಧ್ಯಾಯ ಬ್ರಾಹ್ಮಣ, ರಜಪೂತೋ, ಕ್ಷತಿ, ದೇವಭಾಜು, ಖಜಿಕಾಲಕ್, ಬಸ್ನಯತ್, ಪಾಂಡೆ, ಥಾಪ, ಕಡ್ಗ, ಯಾದವ್ ಮೊದಲಾದವರು ಪ್ರಬಲ ಜಾತಿಗಳಾಗಿದ್ದಾರೆ.

ಬ್ರಾಹ್ಮಣ ಮತ್ತು ಕ್ಷತ್ರಿಗಳು ಶೇಕಡ 60ಕ್ಕಿಂತ ಹೆಚ್ಚು ರಾಜಕೀಯ ಪ್ರಾತಿನಿಧ್ಯವನ್ನು ಪಡೆದಿದ್ದಾರೆ. ಭೂಮಿಯ ಮೇಲೆ ಶೇಕಡ 80ರಷ್ಟು ಒಡೆತನವನ್ನು ಹೊಂದಿದ್ದಾರೆ. ವ್ಯಾಪಾರ ವಹಿವಾಟಿನ ಮೇಲೆ ಭಾರತದಿಂದ ವಲಸೆ ಹೋದ ಮಾರ್‍ವಾಡಿಗಳು ಮತ್ತು ಅಲ್ಲಿನ ನವ ಮಧ್ಯಮ ವರ್ಗ ಸಂಪೂರ್ಣ ಹತೋಟಿಯನ್ನು ಹೊಂದಿದೆ. ಇದರಿಂದಾಗಿಯೇ ಅವರು ನೂರಾರು ವರ್ಷಗಳಿಂದ ಅನುವಂಶಿಕವಾಗಿ ಐಶಾರಾಮಿ ಬದುಕನ್ನು ನಡೆಸುತ್ತಿದ್ದಾರೆ. ಬಹುಸಂಖ್ಯಾತ ಶೂದ್ರರು ಮತ್ತು ದಲಿತರು ದಟ್ಟ ದಾರಿದ್ರ್ಯದಲ್ಲಿದ್ದಾರೆ. ನಿರುದ್ಯೋಗದ ಪ್ರಮಾಣ ಹೆಚ್ಚಾಗಿದೆ. ಭಾರತ, ಪಾಕಿಸ್ತಾನ, ಚೀನಾ, ಬರ್ಮಾ ದೇಶಗಳನ್ನು ಒಳಗೊಂಡಂತೆ ಪ್ರಪಂಚದ ವಿವಿಧ ಭಾಗಗಳಿಗೆ ವಲಸೆಹೋಗಿ ಅಲ್ಲಿನ ಪೌರತ್ವವನ್ನು ಪಡೆಯಲಾಗದೆ ಅಕ್ರಮ ವಲಸಿಗರೆಂಬ ಹಣೆಪಟ್ಟಿಯೊಂದಿಗೆ ಹಿಂಸೆ ಮತ್ತು ಅವಮಾನವನ್ನು ಎದುರಿಸುತ್ತಿದ್ದಾರೆ. ತುತ್ತು ಕೂಳಿಗೂ ಸಾಮಾನ್ಯ ಜನರು ಪರದಾಡುವಂತಾಗಿದೆ. ಇಂತಹ ಸ್ಥಿತಿಯಲ್ಲಿ ತಮ್ಮ ಮಕ್ಕಳನ್ನು ಪೋಷಿಸುತ್ತಿದ್ದಾರೆ. ತಂದೆತಾಯಿಗಳ ಕಷ್ಟ ಕಾರ್ಪಣ್ಯಗಳನ್ನು ಅರ್ಥಮಾಡಿಕೊಂಡು, ಜೊತೆಗೆ ಕಮ್ಯುನಿಸ್ಟ್ ಮತ್ತು ದಲಿತ ಬಹುಜನ ಪ್ರಜ್ಞೆಯಿಂದ ಎಚ್ಚರಹೊಂದಿ ಈ ಮಕ್ಕಳು ದಂಗೆ ಎದ್ದಿದ್ದಾರೆ. ಇಂತಹ ಒಂದು ಸಾಮಾಜಿಕ ಮತ್ತು ಚಾರಿತ್ರಿಕ ಚರ್ಚೆಯನ್ನು ಪಕ್ಕಕ್ಕೆ ತಳ್ಳಿ ಜೆನ್-ಜೀ ಕ್ರಾಂತಿಯನ್ನು ಸರಳೀಕರಿಸುವುದು ಯಾವುದೇ ಸಾಮಾಜಿಕ ಬದಲಾವಣೆಗೆ ಮಾಡುವ ಅವಮಾನವಾಗುತ್ತದೆ. ಮತ್ತೊಂದು ರೀತಿಯಲ್ಲಿ ಯಥಾಸ್ಥಿತಿವಾದದ ಪ್ರತಿಪಾದನೆಯೂ ಆಗುತ್ತದೆ.

ಈ ಕ್ರಾಂತಿಯು ನಡೆಯುವ ಕೆಲವೇ ತಿಂಗಳುಗಳ ಮೊದಲು ರಾಜಸತ್ತೆಯನ್ನು ಮರಳಿ ತರಬೇಕೆಂದು ಪ್ರತಿಭಟನೆಯನ್ನು ನಡೆಸಲಾಗಿತ್ತು. ಅದರ ಮುಂಚೂಣಿಯಲ್ಲಿ ಇದ್ದದ್ದು ಅಲ್ಲಿನ ಬ್ರಾಹ್ಮಣ ಮನುವಾದಿ ಹಿಂದೂ ಸಂಘಟನೆಗಳು. ಅದನ್ನು ಪೋಷಿಸಿ ಬೆಳೆಸುತ್ತಿರುವುದು ಭಾರತದ ಬ್ರಾಹ್ಮಣವಾದಿ ರಾಷ್ಟ್ರೀಯ ಸ್ವಯಂಸೇವಕ ಸಂಘ. ನೀವು ಯಾವುದೇ ಸಂಘ ಪರಿವಾರದ ಪುಸ್ತಕವನ್ನು ತೆರೆದರೂ ನೇಪಾಳ ಸಂಪೂರ್ಣ ಹಿಂದೂ ರಾಷ್ಟ್ರ ಎಂಬ ಘೋಷವಾಕ್ಯವನ್ನು ಓದುತ್ತೀರಿ. ಹಾಗೆಯೇ ಭಾರತವು ಆಗಬೇಕೆಂದು ಅದರ ಇಂಗಿತವಾಗಿದೆ. ಅಲ್ಲಿಯೂ ಆರ್.ಎಸ್.ಎಸ್.ಅನ್ನು ಹೋಲುವ ಹೆಚ್.ಎಸ್.ಎಸ್. (ಹಿಂದೂ ಸೇವಾ ಸಂಘ) ಎಂಬ ಸಂಘಟನೆ ಇದೆ. ಅವರ ಪ್ರತಿಕ್ರಾಂತಿಗೆ ವಿರುದ್ಧವಾಗಿ ಕ್ರಾಂತಿಯನ್ನು ಮಾಡಿದ ಜೆನ್-ಜೀ ಕ್ರಾಂತಿಯನ್ನು ದಲಿತ ಬಹುಜನ ಕ್ರಾಂತಿ ಎಂದರೆ ತಪ್ಪೇನು ಆಗುವುದಿಲ್ಲ. ಮನುವಾದಿಗಳ ವಿರುದ್ಧ ನಡೆದ ಅಪೂರ್ವವಾದ ಈ ಕ್ರಾಂತಿ ದಲಿತ ಮತ್ತು ಬಹುಜನ ಮಕ್ಕಳು ಇಡೀ ದಕ್ಷಿಣ ಏಷ್ಯಾಕ್ಕೆ ತೋರಿಸಿದ ಬೆಳಕಿನ ಹಾದಿಯಾಗಿದೆ. ಪ್ರಪಂಚದಾದ್ಯಂತ ಜನಾಂಗೀಯ ಶ್ರೇಷ್ಠತಾವಾದಿಗಳು ಮೇಲುಗೈ ಸಾಧಿಸುತ್ತಿರುವ ಈ ಸಂದರ್ಭದಲ್ಲಿ ನೇಪಾಳ ನೆಲದ ಬಹುಜನ ಮಕ್ಕಳು ನಡೆಸಿದ ಕ್ರಾಂತಿಯು ಬಹುಜನರಿಗೆ ದಾರಿದೀಪವಾಗಿದೆ. ಏಕೆಂದರೆ 1854ರಲ್ಲಿ ನೇಪಾಳ ರಾಷ್ಟ್ರೀಯ ಸಂಹಿತೆ ಎನ್ನುವ ಹೆಸರಿನಲ್ಲಿ ಜಾರಿಯಾದ ಮನುಸ್ಮೃತಿಯು 2018ರಲ್ಲಿ ರದ್ದಾಯಿತು ಎಂದರೆ ಅದು ದಲಿತ-ಬಹುಜರಿಗೆ ಮಾಡಿರುವ ಅನಾಹುತ ಮತ್ತು ಹಿಂಸೆಯನ್ನು ಊಹಿಸಿಕೊಳ್ಳಬಹುದು.

ಪುಶ್ಯಮಿತ್ರ ಶುಂಗ ಕೊನೆಯ ಮೌರ್ಯ ದೊರೆ ಬೃಹದತ್ತ ಮೌರ್ಯನನ್ನು ಕೊಂದು ಬೌದ್ಧ ಧರ್ಮವನ್ನು ಮತ್ತು ಬೌದ್ಧರನ್ನು ಸರ್ವನಾಶ ಮಾಡಿದನು. ಬುದ್ಧ ಮಾಡಿದ ಕ್ರಾಂತಿಗೆ ಪ್ರತಿಕ್ರಾಂತಿಯನ್ನು ಮಾಡಿ ಮನುಸ್ಮೃತಿಯನ್ನು ಜೀವಂತಗೊಳಿಸಿದ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತಮ್ಮ ಕ್ರಾಂತಿ ಮತ್ತು ಪ್ರತಿಕ್ರಾಂತಿ ಪುಸ್ತಕದಲ್ಲಿ ಈ ಅಂಶದ ಮೇಲೆ ಬೆಳಕು ಚೆಲ್ಲಿ ಭಾರತದ ಚರಿತ್ರೆ ಕಟ್ಟುವಿಕೆಯಲ್ಲಿ ಆಗಿದ್ದ ದೋಷವನ್ನು ಸರಿಪಡಿಸುತ್ತಾರೆ. ಕಾನ್ಶಿ ರಾಮ್ ಅದಕ್ಕೆ ಜೀವ ತುಂಬುತ್ತಾರೆ. ಈ ಹಿನ್ನೆಲೆಯಲ್ಲಿ ಜೆನ್-ಜೀ ಕ್ರಾಂತಿಯನ್ನು ಅರ್ಥಮಾಡಿಕೊಳ್ಳದೆ ಹೋದರೆ ಅದೊಂದು ಚಾರಿತ್ರಿಕ ದ್ರೋಹವೆನ್ನದೆ ವಿಧಿಯಿಲ್ಲ.

ಡಾ. ಸಿ.ಜಿ. ಲಕ್ಷ್ಮೀಪತಿ

ಡಾ. ಸಿ.ಜಿ. ಲಕ್ಷ್ಮೀಪತಿ
ಸಮಾಜ ಶಾಸ್ತ್ರಜ್ಞರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...

ಮೊದಲ ಪತ್ನಿಗೆ ಮುಸ್ಲಿಂ ಪತಿ ಜೀವನಾಂಶ ನಿರಾಕರಿಸುವಂತಿಲ್ಲ: ಕೇರಳ ಹೈಕೋರ್ಟ್

ಎರಡನೇ ಪತ್ನಿಯ ಮೇಲಿನ ಆರ್ಥಿಕ ಜವಾಬ್ದಾರಿ ಕುರಿತ ಮಹತ್ವದ ತೀರ್ಪಿನಲ್ಲಿ, ಮುಸ್ಲಿಂ ಪುರುಷನು ತನ್ನ ಮೊದಲ ಪತ್ನಿಗೆ ಜೀವನಾಂಶ ಪಾವತಿಸುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ. ಎಲ್ಲ ಪತ್ನಿಯರನ್ನು ಸಮಾನವಾಗಿ...

ಆಸ್ಪತ್ರೆಗಳು ಕಡ್ಡಾಯವಾಗಿ ದರಪಟ್ಟಿ ಪ್ರದರ್ಶಿಸಬೇಕು, ಹಣ ಪಾವತಿಸದ ಕಾರಣ ತುರ್ತು ಆರೈಕೆ ನಿರಾಕರಿಸುವಂತಿಲ್ಲ : ಕಾನೂನು ಎತ್ತಿ ಹಿಡಿದ ಹೈಕೋರ್ಟ್

ಕೇರಳ ವೈದ್ಯಕೀಯ ಸಂಸ್ಥೆಗಳ ಕಾಯ್ದೆ ಮತ್ತು ನಿಬಂಧನೆಗಳನ್ನು ಎತ್ತಿಹಿಡಿದ ಹೈಕೋರ್ಟ್‌ನ ಏಕ ಸದಸ್ಯ ಪೀಠದ ಆದೇಶದ ವಿರುದ್ಧ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮತ್ತು ಕೇರಳ ಖಾಸಗಿ ಆಸ್ಪತ್ರೆಗಳ ಸಂಘ ಸಲ್ಲಿಸಿದ್ದ ಮೇಲ್ಮನವಿಗಳನ್ನು...

ಎಸ್‌ಐಆರ್‌ನ ನಿಜವಾದ ಉದ್ದೇಶ ಎನ್‌ಆರ್‌ಸಿ : ಮಮತಾ ಬ್ಯಾನರ್ಜಿ

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್‌) ಹಿಂದಿನ ಕೇಂದ್ರ ಸರ್ಕಾರದ ನಿಜವಾದ ಉದ್ದೇಶ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಮಾಡುವುದು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ (ನವೆಂಬರ್...

ಬೆಂಗಳೂರು ಚಲೋ: ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಸಚಿವ ಮಹದೇವಪ್ಪ: ಸಿಎಂ ಜೊತೆ ಚರ್ಚಿಸುವ ಭರವಸೆ 

ಕೇಂದ್ರ ಸರ್ಕಾರದ ರೈತ, ಕಾರ್ಮಿಕ, ಜನವಿರೋಧಿ ನೀತಿಗಳು ಹಾಗೂ ರಾಜ್ಯ ಸರ್ಕಾರದ ನಿರ್ಲಕ್ಷ್ಯ, ನಿರ್ಲಜ್ಜ ಧೋರಣೆಯ ವಿರುದ್ಧ ಸಂಯುಕ್ತ ಹೋರಾಟ ಕರ್ನಾಟಕದ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ‘ಬೆಂಗಳೂರು ಚಲೋ’...

ಛತ್ತೀಸ್‌ಗಢ : ಬಿಜಾಪುರದಲ್ಲಿ 41 ಮಾವೋವಾದಿಗಳು ಶರಣಾಗತಿ

ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಬುಧವಾರ (ನವೆಂಬರ್ 26) 41 ಮಂದಿ ನಕ್ಸಲರು ಶರಣಾಗಿದ್ದು, ಈ ಪೈಕಿ 32 ಮಂದಿಯ ತಲೆಗೆ ಒಟ್ಟು 1.19 ಕೋಟಿ ರೂಪಾಯಿ ಬಹುಮಾನ ಘೋಷಣೆಯಾಗಿತ್ತು ಎಂದು ವರದಿಯಾಗಿದೆ. ಸರ್ಕಾರದ ಹೊಸ...

ಬೆಂಗಳೂರು ಚಲೋ: ಧರಣಿ ಸ್ಥಳಕ್ಕೆ ಬಾರದ ಸಚಿವರು, ಕೋಪಗೊಂಡು ರಸ್ತೆಗಿಳಿದ ಪ್ರತಿಭಟನಾಕಾರರು

ಕೇಂದ್ರ ಸರ್ಕಾರದ ರೈತ, ಕಾರ್ಮಿಕ, ಜನವಿರೋಧಿ ನೀತಿಗಳು ಹಾಗೂ ರಾಜ್ಯ ಸರ್ಕಾರದ ನಿರ್ಲಕ್ಷ್ಯ, ನಿರ್ಲಜ್ಜ ಧೋರಣೆಯ ವಿರುದ್ಧ ಸಂಯುಕ್ತ ಹೋರಾಟ ಕರ್ನಾಟಕದ ನೇತೃತ್ವದಲ್ಲಿ ಬೃಹತ್ 'ಬೆಂಗಳೂರು ಚಲೋ' ಬುಧವಾರ (ನವೆಂಬರ್ 26) ಫ್ರೀಡಂ...