ಈ ಹಿಂದಿನಂತೆ ಗಾಝಾ ಕದನ ವಿರಾಮ ಕೇವಲ ಕಾಗದಕ್ಕೆ ಸೀಮಿತವಾಗಿದ್ದು, ಇಸ್ರೇಲ್ ಬಾಂಬ್ ದಾಳಿ ನಡೆಸಿ ಅಮಾಯಕರ ಹತ್ಯೆಯನ್ನು ಮುಂದುವರಿಸಿದೆ.
ಹಮಾಸ್ ಒಪ್ಪಂದ ಉಲ್ಲಂಘಿಸಿದ ನೆಪ ಹೇಳಿ ಮಂಗಳವಾರ (ಅ.28) ಇಸ್ರೇಲ್ ಗಾಝಾ ಪಟ್ಟಿಯ ವಿವಿಧ ಪ್ರದೇಶಗಳ ಮೇಲೆ ಭೀಕರ ವಾಯದಾಳಿ ನಡೆಸಿದೆ. ಇದರಲ್ಲಿ ಈವರೆಗೆ 30 ಜನರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.
ತನ್ನ ಪಡೆಗಳ ಮೇಲೆ ಹಮಾಸ್ ನಡೆಸಿದ ದಾಳಿಗೆ ಪ್ರತಿಯಾಗಿ ಈ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಸೇನೆ ಹೇಳಿದೆ. ಪ್ಯಾಲೆಸ್ತೀನಿಯನ್ ಗುಂಪು ಕದನ ವಿರಾಮವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದೆ.
ಮಂಗಳವಾರ ಹಮಾಸ್ ಮತ್ತು ಇಸ್ರೇಲ್ ಸೇನೆ ನಡುವೆ ದಕ್ಷಿಣ ರಫಾದಲ್ಲಿ ಗುಂಡಿನ ಚಕಮಕಿ ನಡೆದಿದೆ ಎಂದು ವರದಿಯಾಗಿದೆ. ಹಮಾಸ್ ರೆಡ್ ಲೇನ್ ದಾಟಿ ಬಂದು ನಮ್ಮ ಪಡೆಗಳ ಮೇಲೆ ಅಪ್ರಚೋದಿನ ಗುಂಡಿನ ದಾಳಿ ಮಾಡಿದೆ ಎಂದು ಇಸ್ರೇಲ್ ಹೇಳಿಕೊಂಡಿದೆ.
ಈ ಗುಂಡಿನ ಚಕಮಕಿ ವರದಿಯ ಬಳಿಕ, ಗಾಝಾ ಮೇಲೆ ಪ್ರಬಲ ದಾಳಿ ನಡೆಸುವಂತೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸೇನೆಗೆ ಆದೇಶಿಸಿದ್ದಾರೆ ಎಂದು ಅವರ ಕಚೇರಿಯ ಪ್ರಕಟಣೆ ತಿಳಿಸಿದೆ.
ನೆತನ್ಯಾಹು ಆದೇಶದ ಬೆನ್ನಲ್ಲೇ ಇಸ್ರೇಲ್ ಸೇನೆ ಗಾಝಾ ಮೇಲೆ ದಾಳಿ ನಡೆಸಿ ನಾಗರಿಕರನ್ನು ಹತ್ಯೆ ಮಾಡಿದೆ. ಹಮಾಸ್ ಪ್ರಕಾಶಮಾನವಾದ ರೆಡ್ ಲೇನ್ ದಾಟಿ ಮುನ್ನುಗ್ಗಿದೆ. ಇದಕ್ಕೆ ಬಲವಾದ ತಿರುಗೇಟನ್ನು ನಾವು ಕೊಡುತ್ತೇವೆ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಹೇಳಿದ್ದಾರೆ.
ಹಮಾಸ್‌ನ ಸಶಸ್ತ್ರ ವಿಭಾಗವಾದ ಕಸ್ಸಮ್ ಬ್ರಿಗೇಡ್ಸ್, ಇಸ್ರೇಲ್ ಕದನ ವಿರಾಮವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದೆ. ಕಾಣೆಯಾದ ಒತ್ತೆಯಾಳುಗಳ ಶವದ ಹಸ್ತಾಂತರವನ್ನು ಮುಂದೂಡುವುದಾಗಿ ಹೇಳಿದೆ.
ಇಸ್ರೇಲ್ ದಾಳಿ ನಡೆಸುತ್ತಿರುವುದರಿಂದ ಕಟ್ಟಡಗಳ ಅವಶೇಷಗಳಡಿ ಹುದುಗಿರುವ ಇಸ್ರೇಲಿ ಒತ್ತೆಯಾಳುಗಳ ಶವಗಳ ಹುಡುಕಾಟಕ್ಕೆ ಅಡ್ಡಿಯಾಗಿದೆ. ಇದರಿಂದ ಶವಗಳ ವಿಳಂಬವಾಗಲಿದೆ ಎಂದು ಹಮಾಸ್ ತಿಳಿಸಿದೆ.
ಎರಡೂ ಕಡೆಗಳಿಂದ ಕದನ ವಿರಾಮ ಉಲ್ಲಂಘನೆ ಆರೋಪಗಳು ಕೇಳಿ ಬಂದರೂ, ಗಾಝಾ ಕದನ ವಿರಾಮ ಇನ್ನೂ ಚಾಲ್ತಿಯಲ್ಲಿದೆ ಎಂದು ಯುಎಸ್ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ವಾಷಿಂಗ್ಟನ್ ಡಿಸಿಯಲ್ಲಿ ಹೇಳಿದ್ದಾರೆ.
“ಕದನ ವಿರಾಮ ಎಂದರೆ ಅಲ್ಲಲ್ಲಿ ಸಣ್ಣಪುಟ್ಟ ಗುಂಡಿನ ಚಕಮಕಿಗಳು ನಡೆಯುವುದಿಲ್ಲ ಎಂದರ್ಥವಲ್ಲ” ಎಂದು ವ್ಯಾನ್ಸ್ ಕ್ಯಾಪಿಟಲ್ ಹಿಲ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
“ಹಮಾಸ್ ಅಥವಾ ಗಾಝಾದೊಳಗಿನ ಇತರ ಯಾರೋ ಇಸ್ರೇಲ್ ಸೇನೆ ಮೇಲೆ ದಾಳಿ ಮಾಡಿದ್ದಾರೆ ಎಂದು ನಮಗೆ ಗೊತ್ತಾಗಿದೆ. ಅದಕ್ಕೆ ಇಸ್ರೇಲ್ ಸೇನೆ ಪ್ರತಿಕ್ರಿಯೆ ನೀಡುತ್ತದೆ. ಇದರ ಹೊರತಾಗಿಯೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕದನ ವಿರಾಮ ಜಾರಿಯಲ್ಲಿರುತ್ತದೆ” ಎಂದು ವ್ಯಾನ್ಸ್ ಹೇಳಿಕೆ ನೀಡಿದ್ದಾರೆ.
ಇಸ್ರೇಲ್ ಸೇನೆ ಮೇಲೆ ರಫಾದಲ್ಲಿ ದಾಳಿ ಮಾಡಲಾಗಿದೆ ಎಂಬುವುದನ್ನು ಹಮಾಸ್ ತಳ್ಳಿಹಾಕಿದೆ.
ಯುಕೆಯಲ್ಲಿ ಮತ್ತೊಬ್ಬರು ಭಾರತೀಯ ಮೂಲದ ಯುವತಿ ಮೇಲೆ ‘ಜನಾಂಗೀಯ ಪ್ರೇರಿತ’ ಅತ್ಯಾಚಾರ


