ರಾಜ್ಯದಲ್ಲಿ ಕೊರೋನಾ ಮತ್ತು ಓಮಿಕ್ರಾನ್ ರೂಪಾಂತರಿ ಸೋಂಕು ತಡೆಗಟ್ಟುವ ನಿಟ್ಟನಲ್ಲಿ ರಾಜ್ಯಾದ್ಯಂತ ವಿಧಿಸಿದ್ದ ರಾತ್ರಿ ಕರ್ಫ್ಯೂವನ್ನು ವಾಪಸ್ ಪಡೆದಿದ್ದು, ಸೊಮುವಾರದಿಂದ ಶಾಲೆ – ಕಾಲೇಜು ಆರಂಭವಾಗಲಿವೆ. ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಕೋವಿಡ್- 19ಗೆ ಸಂಬಂಧಿಸಿದಂತೆ ಪರಿಶೀಲನಾ ಸಭೆ ನಡೆದಿದ್ದು ಜನವರಿ 31 ರಿಂದ ರಾತ್ರಿ ಕರ್ಫೂ ಅನ್ನು ಹಿಂತೆಗೆದುಕೊಳ್ಳುವುದಾಗಿ ಸರ್ಕಾರ ನಿರ್ಧರಿಸಿದೆ.
ತಜ್ಞರ ಸಭೆಯ ನಂತರ ಕಂದಾಯ ಸಚಿವ ಆರ್. ಅಶೋಕ್ ಮಾತನಾಡಿ, “ಜ.31ರಿಂದ ರಾಜ್ಯದಾದ್ಯಂತ ರಾತ್ರಿ ಕರ್ಫ್ಯೂ ಹಿಂತೆಗೆದುಕೊಳ್ಳಲಾಗುವುದು. ರೆಸ್ಟೋರಂಟ್, ಹೋಟೆಲ್‌ಗಳಲ್ಲಿ 50% ನಿಯಮ ತೆಗೆದುಹಾಕಲಾಗುವುದು. ಸಿನಿಮಾ ಮಂದಿರ, ಈಜುಕೊಳ, ಜಿಮ್‌ಗಳಲ್ಲಿ ಶೇ.50ರಷ್ಟು ಮಾತ್ರ ಭರ್ತಿಗೆ ಅವಕಾಶ ನೀಡಲಾಗಿದೆ. ಮಹಾರಾಷ್ಟ್ರ, ಗೋವಾ, ಕೇರಳದಿಂದ ಬರುವ ಪ್ರಯಾಣಿಕರಿಗೆ ಕಡ್ಡಾಯ ನೆಗೆಟಿವ್ ವರದಿ ಇರಬೇಕು ಎಂದು ತಿಳಿಸಿದರು.
ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಕೋವಿಡ್ 19 ಗೆ ಸಂಬಂಧಿಸಿದಂತೆ ಪರಿಶೀಲನಾ ಸಭೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಸಚಿವರಾದ ಬಿ.ಸಿ.ನಾಗೇಶ್, ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ: ಸುದರ್ಶನ್ ಹಾಗೂ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. pic.twitter.com/Xd3VDCOrBE
— R. Ashoka (ಆರ್. ಅಶೋಕ) (@RAshokaBJP) January 29, 2022
ಮದುವೆಗಳಿಗೆ ಒಳಾಂಗಣದಲ್ಲಿ 200 ಜನರಿಗೆ, ಹೊರಾಂಗಣದಲ್ಲಿ 300 ಜನರಿಗೆ ಅವಕಾಶ ನೀಡಲಾಗಿದೆ. ಮಂದಿರ, ಮಸೀದಿ, ಚರ್ಚ್ ಸೇರಿದಂತೆ ಧಾರ್ಮಿಕ ಕೇಂದ್ರಗಳಲ್ಲಿ ಸೇವೆ ಪುನಾರಂಭ ಮಾಡಬಹುದು. ಆದರೆ ಧಾರ್ಮಿಕ ಸ್ಥಳಗಳಲ್ಲಿ 50 ಜನ ಮಾತ್ರ ಒಂದೇ ಬಾರಿ ದರ್ಶನ ಪಡೆಯಬಹುದು. ಜಾತ್ರೆ, ಮೆರವಣಿಗೆ, ಧರಣಿ, ಪ್ರತಿಭಟನೆ ಧಾರ್ಮಿಕ ಉತ್ಸವಗಳಿಗೆ ನಿರ್ಬಂಧ ಹೇರಲಾಗಿದೆ ಎಂದು ಸಚಿವ ಆರ್. ಅಶೋಕ್ ಮಾಹಿತಿ ಹಂಚಿಕೊಂಡರು.
ಬೆಂಗಳೂರಿನಲ್ಲಿ ಶಾಲೆ-ಕಾಲೇಜು ಆರಂಭಕ್ಕೆ ಗ್ರೀನ್ ಸಿಗ್ನಲ್
ಕಳೆದ ಕೆಲವು ವಾರಗಳ ಹಿಂದೆ ಕೊರೊನಾ ಸೋಂಕು ಪ್ರಕರಣಗಳ ಹೆಚ್ಚಳದಿಂದ ಬೆಂಗಳೂರಿನಲ್ಲಿ ಶಾಲೆ- ಕಾಲೇಜು ತರಗತಿಗಳನ್ನು ಬಂದ್ ಮಾಡಲಾಗಿತ್ತು. ಈಗ ಆರಂಭಕ್ಕೆ ತಜ್ಞರು ಮತ್ತು ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದ್ದು, ಸೋಮವಾರದಿಂದ ಎಲ್ಲಾ ತರಗತಿಗಳು ಪ್ರಾರಂಭವಾಗಲಿವೆ. ಆದರೆ ಕೋವಿಡ್ ನಿಯಮಾವಳಿ ಪಾಲಿಸಬೇಕು ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.
ರಾಜ್ಯದ ಇತರೆ ಶಾಲೆಗಳಿಗೆ ಇರುವ ಮಾರ್ಗಸೂಚಿಗಳು ಬೆಂಗಳೂರಿನ ಶಾಲೆಗಳಿಗೂ ಅನ್ವಯಿಸುತ್ತವೆ. ಯಾವುದಾದರೂ ವಿದ್ಯಾರ್ಥಿಗೆ ಪಾಸಿಟಿವ್ ಬಂದರೆ ಆ ತರಗತಿ ಮಾತ್ರ ಮುಚ್ಚುತ್ತದೆ. ತರಗತಿಯ ಎಲ್ಲಾ ಮಕ್ಕಳಿಗೂ ಕೋವಿಡ್ ಪರೀಕ್ಷೆ ಮಾಡಲಾಗುತ್ತದೆ. ಆ ತರಗತಿ ಎಷ್ಟು ದಿನ ಮುಚ್ಚಬೇಕು ಎಂದು ಸಂಬಂಧಿಸಿದ ಜಿಲ್ಲಾಧಿಕಾರಿಗಳು ನಿರ್ಧಾರ ತೆಗೆದುಕೊಳ್ಳುತ್ತಾರೆ. ಉಳಿದಂತೆ ಶಾಲೆ ತೆರೆದಿರುತ್ತದೆ ಎಂದು ಅವರು ಮಾಹಿತಿ ನೀಡಿದರು.
ಪ್ರವಾಸಕ್ಕೆ ನಿರ್ಬಂಧವಿಲ್ಲ
ಪ್ರವಾಸಿತಾಣಗಳ ಭೇಟಿಗೆ ಯಾವುದೇ ನಿರ್ಬಂಧ ವಿಧಿಸಿಲ್ಲ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ. ಕೋವಿಡ್ ನಿಯಮ ಪಾಲಿಸಿ ಪ್ರವಾಸಿಗರು ಭೇಟಿ ನೀಡಬಹುದು. ರಾಜ್ಯದ ಪ್ರವಾಸಿ ತಾಣಗಳು ಪ್ರವಾಸಿಗರಿಗೆ ಮುಕ್ತವಾಗಿರಲಿವೆ. ಸಫಾರಿ ಸೇರಿದಂತೆ ಎಲ್ಲಾ ಚಟುವಟಿಕೆಗೆ ಅವಕಾಶ ಇರುತ್ತದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ‘ಜಿಲ್ಲಾಧಿಕಾರಿ ಏಕೆ ಮೇಕಪ್ ಮಾಡಿಲ್ಲ?’- ಮನಕಲಕುವ ಕತೆ ಹಿಂದಿನ ವಾಸ್ತವವೇನು?


