ನಿತೀಶ್ ಕುಮಾರ್ ಅವರೇ ಬಿಹಾರಕ್ಕೆ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ. ಇದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಎಲ್.ಜೆ.ಪಿ ಸಂಸದೆ ಶಾಂಭವಿ ಚೌಧರಿ ಭರವಸೆ ವ್ಯಕ್ತ ಪಡಿಸಿದ್ದಾರೆ.
ಬಿಹಾರ ಚುನಾವಣೆಯಲ್ಲಿ ಎನ್‌ಡಿಯ ಮೈತ್ರಿಕೂಟ ಭರ್ಜರಿ ಜಯ ಸಾಧಿಸಿರುವ ಬೆನ್ನಲ್ಲೇ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಚರ್ಚೆಗಳು ಶುರುವಾಗಿವೆ. ಈ ಮಧ್ಯೆ ಶಾಂಭವಿ ಚೌಧರಿ ಅವರ ಹೇಳಿಕೆ ಭಾರೀ ಕುತೂಹಲ ಮೂಡಿಸಿದೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ಶಾಂಭವಿ ಚೌಧರಿ ಅವರು ನಿತೀಶ್ ಕುಮಾರ್ ಅವರೇ ಮತ್ತೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ನೀಡಿದ ಭರವಸೆಗಳನ್ನು ಅವರೇ ಪೂರೈಸಲಿದ್ದಾರೆ ಎಂದಿದ್ದಾರೆ.
ಶಾಂಭವಿ ಚೌಧರಿ ಅವರು ಬಿಹಾರದ ಎಸ್‌ಸಿ ಮೀಸಲು ಲೋಕಸಭಾ ಕ್ಷೇತ್ರವಾದ ಸಮಷ್ಠಿಪುರದ ಸಂಸದೆಯಾಗಿದ್ದಾರೆ.
#WATCH | Patna, Bihar: #BiharElection2025, As NDA crosses the majority mark in Bihar, LJP-Ram Vilas MP Shambhavi Chaudhary says, "There is no doubt that Nitish Kumar is going to become the Chief Minister again. He will take a grand oath and we will deliver the promises we made to… pic.twitter.com/jFyrV191fz
— ANI (@ANI) November 14, 2025
ಈ ಬಾರಿ ಎನ್‌ಡಿಎ ಕೂಟ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡಿರಲಿಲ್ಲ. ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು ಕಾಂಗ್ರೆಸ್ ಜೊತೆ ಸೇರಿ ಬಿಹಾರದಲ್ಲಿ ಅಧಿಕಾರಕ್ಕೆ ಬರುವ ಕನಸು ಕಂಡಿದ್ದರು, ಜೊತೆಗೆ ತಾವೇ ಮುಖ್ಯಮಂತ್ರಿ ಅಭ್ಯರ್ಥಿ ಎಂಬುದನ್ನು ಹೇಳಿದ್ದರು. ಆದರೆ, ಅವರ ಮಹಾಘಟಬಂಧನ್ ಹಿನ್ನೆಡೆ ಕಾಯ್ದುಕೊಂಡದ್ದು, ಸದ್ಯದ ವರದಿಗಳ ಪ್ರಕಾರ ಎನ್.ಡಿ.ಎ ಪೂರ್ಣ ಬಹುಮತ ಗಳಿಸಿದೆ.
ಹೀಗಾಗಿ ಎನ್‌ಡಿಎ ಭರ್ಜರಿ ಜಯ ಸಾಧಿಸುತ್ತಿರುವ ಹಿನ್ನೆಲೆಯಲ್ಲಿ ನಿತೀಶ್ ಕುಮಾರ್ ಅವರೇ ಸಿಎಂ ಆಗಲಿದ್ದಾರೆ ಎಂದು ಹಲವರು ಚರ್ಚಿಸುತ್ತಿದ್ದಾರೆ. ಮೋದಿ–ಅಮಿತ್ ಶಾ ಜೊತೆ ಜೆಡಿಯು ನಾಯಕರ ಚರ್ಚೆಯ ಬಳಿಕ ಅಧಿಕೃತ ಘೋಷಣೆ ಹೊರಬಿಳ್ಳಲಿದೆ.
ಸರಿ ಸುಮಾರು 20 ವರ್ಷ ಬಿಹಾರ ಸಿಎಂ ಆಗಿರುವ 74 ವರ್ಷದ ನಿತೀಶ್ ಕುಮಾರ್ 6ಅವರು ಮತ್ತೆ ಬಿಹಾರ ಆಡಳಿತದ ಚುಕ್ಕಾಣಿ ಹಿಡಿಯುತ್ತಾರೋ, ಅಥವಾ ಏನಾದರೂ ಬದಲಿ ನಿರ್ಧಾರ ತೆಗೆದುಕೊಳ್ಳುತ್ತಾರೋ ಎಂಬುದು ಶೀಘ್ರದಲ್ಲೇ ತಿಳಿಯಲಿದೆ.


