ರಾಹುಲ್ ಗಾಂಧಿ ವಿರುದ್ಧ ನ್ಯಾಯಾಂಗ ನಿಂದನೆ (ಕಂಟೆಂಪ್ಟ್ ಆಫ್ ಕೋರ್ಟ್) ಮೊಕದ್ದಮೆ ಹೂಡಲು ಕೇಳಿದ್ದ ವಕೀಲರೊಬ್ಬರ ಮನವಿಯನ್ನು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ತಿರಸ್ಕರಿಸಿದ್ದಾರೆ. ನ್ಯಾಯಾಂಗದ ಕುರಿತ ರಾಹುಲ್ ಗಾಂಧಿಯವರ ಹೇಳಿಕೆಗಳು ‘ತುಂಬ ಅಸ್ಪಷ್ಟ’ವಾಗಿದ್ದು, ಜನರ ದೃಷ್ಟಿಯಲ್ಲಿ ಸಂಸ್ಥೆಯ ಘನತೆಯನ್ನು ಕಡಿಮೆ ಮಾಡುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ರಾಹುಲ್ ಗಾಂಧಿ ನ್ಯಾಯಾಂಗದ ಕುರಿತು ನೀಡಿದ ಹೇಳಿಕೆಗಳ ವಿರುದ್ದ ಸುಪ್ರೀಂ ಕೋರ್ಟ್ನಲ್ಲಿ ಕಂಟೆಂಪ್ಟ್ ಆಫ್ ಕೋರ್ಟ್ ಪ್ರಕರಣವನ್ನು ಪ್ರಾರಂಭಿಸಲು ವಕೀಲ ವಿನೀತ್ ಜಿಂದಾಲ್ ಅವರು ಅಟಾರ್ನಿ ಜನರಲ್ ಅವರ ಒಪ್ಪಿಗೆ ಕೋರಿದ್ದರು. ಖಾಸಗಿ ವ್ಯಕ್ತಿಯೊಬ್ಬರು ಸಲ್ಲಿಸಿದ ಯಾವುದೇ ಕಂಟೆಂಪ್ಟ್ ಪ್ರಕರಣವನ್ನು ಸುಪ್ರೀಂ ಕೋರ್ಟ್ ಆಲಿಸುವ ಮೊದಲು ಅಟಾರ್ನಿ ಜನರಲ್‌ರವರ ಅನುಮತಿಯ ಅಗತ್ಯವಿರುತ್ತದೆ.
“ಪ್ರತಿಯೊಬ್ಬರೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಶೇಕಡಾ 100 ರಷ್ಟು ಸ್ವಾತಂತ್ರ‍್ಯವನ್ನು ಹೊಂದಿರುವ ಕಾನೂನು ವ್ಯವಸ್ಥೆಯನ್ನು ಈ ದೇಶ ಹೊಂದಿದೆ. ಬಿಜೆಪಿ ತನ್ನ ಜನರನ್ನು ದೇಶದ ಈ ಎಲ್ಲಾ ಸಂಸ್ಥೆಗಳಲ್ಲಿ ಸೇರಿಸಿಕೊಳ್ಳುತ್ತಿದೆ ಎಂಬುದು ಬಹಳ ಸ್ಪಷ್ಟವಾಗಿದೆ. ಇದು ಪಕ್ಕಾ. ಅವರು ಈ ದೇಶದ ಸಾಂಸ್ಥಿಕ ಚೌಕಟ್ಟನ್ನು ಕಿತ್ತುಕೊಳ್ಳುತ್ತಿದ್ದಾರೆ” ಎಂದು ರಾಹುಲ್ ಗಾಂಧಿ ತಮ್ಮ ಸಂದರ್ಶನದಲ್ಲಿ ಉಲ್ಲೇಖಿಸಿದ್ದರು.
ಕಾಂಗ್ರೆಸ್ ಮುಖಂಡ ನ್ಯಾಯಾಂಗವನ್ನು ಅವಮಾನಿಸಿದ್ದಾರೆ ಮತ್ತು ಈ ಟೀಕೆಗಳಿಂದ ಅದರ ಘನತೆಯನ್ನು ಕಡಿಮೆ ಮಾಡಿದ್ದಾರೆ ಎಂದು ವಕೀಲ ವಿನೀತ್ ಜಿಂದಾಲ್ ಆರೋಪಿಸಿದ್ದರು.
ಆದರೆ, ಸರ್ಕಾರದ ಉನ್ನತ ವಕೀಲರು ಇದನ್ನು ಒಪ್ಪಲಿಲ್ಲ. ರಾಹುಲ್ ಗಾಂಧಿ ಅವರು ನ್ಯಾಯಾಂಗದ ಬಗ್ಗೆ “ಸಾಮಾನ್ಯ” ಹೇಳಿಕೆ ನೀಡಿದ್ದಾರೆ ಮತ್ತು ನಿರ್ದಿಷ್ಟವಾಗಿ ಸುಪ್ರೀಂ ಕೋರ್ಟ್ ಅಥವಾ ನ್ಯಾಯಾಧೀಶರನ್ನು ಉಲ್ಲೇಖಿಸಿಲ್ಲ ಎಂದು ಹೇಳಿದರು.
“ನನ್ನ ಒಪ್ಪಿಗೆ ನೀಡುವ ಪ್ರಶ್ನೆಯು ಉದ್ಭವಿಸುವುದಿಲ್ಲ. ಯಾವುದೇ ಸಂದರ್ಭದಲ್ಲಿ, ಈಗ ಉಲ್ಲೇಖಿಸಿರುವ ಹೇಳಿಕೆಗಳು ಸಾರ್ವಜನಿಕರ ದೃಷ್ಟಿಯಲ್ಲಿ ಸಂಸ್ಥೆಯ ಅಧಿಕಾರವನ್ನು ಕಡಿಮೆ ಮಾಡಿವೆ ಎಂದು ಹೇಳಲು ತುಂಬಾ ಅಸ್ಪಷ್ಟವಾಗಿವೆ ಎಂದು ನಾನು ಭಾವಿಸುತ್ತೇನೆ” ಎಂದು ಅಟಾರ್ನಿ ಜನರಲ್ ಹೇಳಿದರು.
ಇದನ್ನೂ ಓದಿ: ರೈತ ಮುಖಂಡ ರಾಕೇಶ್ ಟಿಕಾಯತ್ ವಿರುದ್ದ ಶಿವಮೊಗ್ಗದಲ್ಲಿ FIR ದಾಖಲು


