Homeಕರ್ನಾಟಕ9 ತಿಂಗಳಿಂದ ವೇತನ ಸಿಗದೆ ಸಂಕಷ್ಟದಲ್ಲಿ ಹಂಪಿ ವಿವಿ ನೌಕರರು: ವಿಶೇಷ ವರದಿ

9 ತಿಂಗಳಿಂದ ವೇತನ ಸಿಗದೆ ಸಂಕಷ್ಟದಲ್ಲಿ ಹಂಪಿ ವಿವಿ ನೌಕರರು: ವಿಶೇಷ ವರದಿ

- Advertisement -
- Advertisement -

“ಸಾಲ ಮಾಡಿ ಒಂದು ಸಣ್ಣ ಮನೆ ಕಟ್ಟಿಸಿಕೊಂಡಿದ್ದೇನೆ. ವಿವಿಯಿಂದ ಬರುತ್ತಿದ್ದ ಸಂಬಳದಲ್ಲಿ ಈ ಸಾಲದ ಲೋನು ಪ್ರತಿ ತಿಂಗಳೂ ಕಡಿತವಾಗುತ್ತಿತ್ತು. ಆದರೆ ಈಗ 9 ತಿಂಗಳಿನಿಂದ ಸಂಬಳವಾಗಿಲ್ಲ. ಈ ಕಾರಣವನ್ನ ಬ್ಯಾಂಕ್ ಒಪ್ಪಿಕೊಳ್ಳುವುದಿಲ್ಲ. ಲೋನ್ ಕಟ್ಟದಿದ್ದರೆ, ಅದಕ್ಕೆ ಬಡ್ಡಿ, ಬಡ್ಡಿಗೆ ಚಕ್ರಬಡ್ಡಿಯನ್ನು ಸೇರಿಸುತ್ತಲೇ ಹೋಗುತ್ತದೆ. ಇನ್ನು ಸಂಬಳವನ್ನೇ ನೆಚ್ಚಿಕೊಂಡಿರುವ ಒಂದು ಕುಟುಂಬಕ್ಕೆ ಇಷ್ಟು ತಿಂಗಳಿನಿಂದ ಸಂಬಳ ಇಲ್ಲವೆಂದರೆ ಆ ಕುಟುಂಬದ ಪರಿಸ್ಥಿತಿ ಏನಾಗಬಹುದು? ಸಾಲ ಮಾಡಿ ಕಟ್ಟಿದ ಮನೆಯೊಳಗೆ ಕುಳಿತು ಒಪ್ಪೊತ್ತಿನ ಊಟಕ್ಕೂ ಕಷ್ಟಪಡುವಂತಾಗಿದೆ ನಮ್ಮ ಪರಿಸ್ಥಿತಿ. ಹೆಸರಿಗಷ್ಟ ವಿವಿಯ ಉದ್ಯೋಗ. ಆದರೆ ದಿನಗೂಲಿ ನೌಕರರಂತೆಯೇ ನಮ್ಮ ಪರಿಸ್ಥಿತಿಯೂ ಅನಿಶ್ಚಿತವಾಗಿದೆ” ಹೀಗೆ ತಮ್ಮ ಅಳಲು ತೋಡಿಕೊಂಡಿದ್ದು ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ 28 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಗ್ಯಾನಪ್ಪ ಬಡಿಗೇರ. ಅವರು ಸದ್ಯಕ್ಕೆ ಅಲ್ಲಿ ಸೂಪರಿಂಟೆಂಡೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇದು ಇವರೊಬ್ಬರ ಸಮಸ್ಯೆ ಅಲ್ಲ. ಕನ್ನಡ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿರುವ ನೂರಕ್ಕೂ ಹೆಚ್ಚು ಗುತ್ತಿಗೆ ನೌಕರರ ಸಮಸ್ಯೆಯಾಗಿದೆ. ಇನ್ನೂ ಕೆಲವರ ಪರಿಸ್ಥಿತಿ ಇದಕ್ಕಿಂತಲೂ ಹೀನಾಯವಾಗಿದೆ. ಯಾಕೆಂದರೆ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಕಳೆದ 9 ತಿಂಗಳಿನಿಂದ ಸಂಬಳ ನೀಡಿಲ್ಲ. ಇದಕ್ಕೆ ಕಾರಣ ಸರ್ಕಾರದ ವತಿಯಿಂದ ಬರಬೇಕಾಗಿರುವ ಅನುದಾನ ಬಂದಿಲ್ಲ ಎಂದು ವಿವಿ ಹೇಳುತ್ತದೆ. ವಿವಿಗೆ ನೀಡಲು ಹಣವಿಲ್ಲ ಎಂದು ಸರ್ಕಾರ ಹೇಳುತ್ತದೆ. ಆದರೆ ಈ ನೌಕರರ ಸ್ಥಿತಿ ಸದ್ಯಕ್ಕೆ ಚಿಂತಾಜನಕವಾಗಿರುವುದಂತೂ ನಿಜ.

“ನನಗೆ ಎರಡು ಸಣ್ಣ ಮಕ್ಕಳಿವೆ. ಒಂದು ಮಗು ಸ್ಕೂಲ್‌ಗೆ ಹೋಗುತ್ತಿದೆ. ವಯಸ್ಸಾದ ಅಪ್ಪ-ಅಮ್ಮ ಜೊತೆಗಿದ್ದಾರೆ. ಹೀಗಿರುವಾಗ ವಿಶ್ವವಿದ್ಯಾನಿಲಯದಿಂದ ಕೊಡುತ್ತಿದ್ದ ಸಂಬಳವೇ ಸಾಕಾಗುತ್ತಿರಲಿಲ್ಲ. ಆದರೆ ಈಗ ನಮಗೆ ಸಂಬಳ ಕೊಟ್ಟು ಸುಮಾರು 9 ತಿಂಗಳಾಗುತ್ತಾ ಬಂದಿದೆ. ಅಪ್ಪ-ಅಮ್ಮನ ಔಷಧಿ ಖರ್ಚು, ಮಗುವಿನ ಸ್ಕೂಲ್ ಫೀಸ್, ಮನೆಗೆ ರೇಷನ್, ಕರೆಂಟ್ ಬಿಲ್ ಸೇರಿದಂತೆ ಇತ್ಯಾದಿ ಮನೆ ಖರ್ಚುಗಳನ್ನು ನಿಭಾಯಿಸೋಕೆ ಸಾಲ ಮಾಡಬೇಕಾಗಿ ಬಂತು. ಯಾರೇ ಆದರೂ 2-3 ತಿಂಗಳು ಸಾಲ ಕೊಡುತ್ತಾರೆ. ಆದರೆ ನಮಗೆ 9 ತಿಂಗಳಿನಿಂದ ಸಂಬಳ ಆಗಿಲ್ಲ. ಯಾರು ಸಾಲ ಕೊಡ್ತಾರೆ. ಈಗ ನಾವು ತಿನ್ನೋ ಪ್ರತಿ ಅನ್ನದ ಅಗಳೂ ಕೂಡ ಸಾಲದ್ದು. ಅದರಲ್ಲೂ ಈ ಕೊರೊನಾದಿಂದ ನಮ್ಮ ಬದುಕು ಇನ್ನೂ ಬೀದಿಗೆ ಬಿದ್ದಿದೆ” ಎಂದು ಕನ್ನಡ ವಿಶ್ವವಿದ್ಯಾಲಯದ ಹೆಸರು ಹೇಳಲಿಚ್ಛಿಸದ ಬೋಧಕೇತರ ಸಿಬ್ಬಂದಿಯೊಬ್ಬರು ಗೌರಿ ಲಂಕೇಶ್ ನ್ಯಾಯಪಥ ಪತ್ರಿಕೆಯೊಂದಿಗೆ ತಮ್ಮ ನೋವನ್ನು ಹಂಚಿಕೊಳ್ಳುತ್ತಾರೆ.

ಕೊರೊನಾ ಸಾಂಕ್ರಾಮಿಕ ರೋಗವು ಬಹುತೇಕ ಮಧ್ಯಮ ವರ್ಗ, ಕೆಳಮಧ್ಯಮ ವರ್ಗ ಮತ್ತು ಬಡಜನರ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಹತ್ತಾರು ಖಾಸಗಿ ಕಂಪನಿಗಳು ಲಾಕ್‌ಔಟ್ ಘೋಷಿಸಿ ಕಾರ್ಮಿಕರನ್ನು ಬೀದಿಗೆ ತಳ್ಳಿತ್ತು. ಇದರಿಂದ ಸಾವಿರಾರು ಕಾರ್ಮಿಕರು ಮತ್ತು ಅವರ ದುಡಿಮೆಯನ್ನೇ ನಂಬಿದ್ದ ಕುಟುಂಬಗಳು ಬೀದಿಪಾಲಾದವು. ಎಷ್ಟೋ ಜನ ಆತ್ಮಹತ್ಯೆ ಕೂಡ ಮಾಡಿಕೊಂಡರು. ಖಿನ್ನತೆಗೆ ಒಳಗಾದರು. ಸರ್ಕಾರಗಳ ಪರಿಹಾರ ಯೋಜನೆಗಳು ಮೂಗಿನ ಮೇಲೆ ಸವರಿದ ತುಪ್ಪದಂತಿವೆ. ಸರ್ಕಾರದ ಭಾಗವಾಗಿರುವ ಸಾರಿಗೆ ಸಂಸ್ಥೆಯ ಸಿಬ್ಬಂದಿ ಈ ಮೊದಲು ವೇತನ ವಿಳಂಬದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ಸರ್ಕಾರದ ಅಡಿಯಲ್ಲೆ ಬರುವ ವಿಶ್ವವಿದ್ಯಾಲಯವೊಂದರ ಸರದಿ!

ಇಂತಹ ಇಕ್ಕಟ್ಟಿನ ಪರಿಸ್ಥಿತಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಮತ್ತು ಅಲ್ಲಿನ ಬೋಧಕ/ಬೋಧಕೇತರ ಸಿಬ್ಬಂದಿಗಳು ಸಿಲುಕಿದ್ದಾರೆ. ಬೋಧಕ ವರ್ಗದವರಿಗೆ ಕಳೆದ ಐದಾರು ತಿಂಗಳಿನಿಂದ ಸಂಬಳವೇ ಬಂದಿಲ್ಲ. ಇನ್ನು ಬೋಧಕೇತರ ಸಿಬ್ಬಂದಿಗಂತೂ 9 ತಿಂಗಳಿನಿಂದ ಸಂಬಳ ಬಂದಿಲ್ಲ. ಸಂಬಳ ಬರದಿದ್ದರೆ ಬೋಧಕ ವರ್ಗದವರಾದರೂ ಒಂದು ವೇಳೆ ತಡೆದುಕೊಳ್ಳಬಹುದು. ಆದರೆ ಹತ್ತು-ಹನ್ನೆರಡು ಸಾವಿರಕ್ಕೆ ವಿವಿಯಲ್ಲಿ ದುಡಿಯುವ ಬೋಧಕೇತರ ಸಿಬ್ಬಂದಿಗಳ ಪರಿಸ್ಥಿತಿ! ಅಕ್ಷರಶಃ ಅವರ ಬದುಕು ಬರಡಾಗಿದೆ. ವಿವಿಗೆ ಸರ್ಕಾರ ನೀಡಬೇಕಾಗಿರುವ ಅನುದಾನವನ್ನು ನೀಡದೇ ಅಲ್ಲಿನ ಕೆಲಸಗಾರರನ್ನು ಶೋಷಿಸುತ್ತಿದೆ ಎನ್ನುವುದು ಬಹುತೇಕ ನೌಕರವರ್ಗದ ಆರೋಪ.

ಶಿಕ್ಷಣದಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ಉದ್ದೇಶ ಇದೆಯೆಂದು ಹೇಳಿಕೊಂಡು 36 ವರ್ಷಗಳ ನಂತರ ಹೊಸ ಶಿಕ್ಷಣ ನೀತಿಯನ್ನು ಕೇಂದ್ರ ಬಿಜೆಪಿ ಸರ್ಕಾರ ಜಾರಿಗೊಳಿಸಲು ಹೊರಟಿದೆ. ಅದನ್ನು ಇಲ್ಲಿನ ರಾಜ್ಯ ಬಿಜೆಪಿ ಸರ್ಕಾರ ಅನುಮೋದಿಸಿ ಉತ್ತೇಜಿಸುತ್ತಿದೆ. ಆದರೆ ಉನ್ನತ ಶಿಕ್ಷಣದ ಕೇಂದ್ರವಾದ ಒಂದು ವಿವಿಗೆ ಸಂಬಳ ಕೊಡಲು ಸಾಧ್ಯವಾಗದ ಪರಿಸ್ಥಿತಿ ತಲುಪಿರುವುದನ್ನು ಏನೆಂದು ಕರೆಯೋಣ?

ಈ ಕುರಿತು ಪ್ರತಿಕ್ರಿಯಿಸಿದ ವಿವಿಯ ಕನ್ನಡ ಭಾಷಾ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಪಾಂಡುರಂಗ ಬಾಬು, “ನೋಡಿ, ಪಾಠ ಮಾಡುವವರಿಗೆ ಕೂಡ ಸಂಬಳ ಬಂದಿಲ್ಲ. ಆದರೂ ಅವರಿಗೆ 2-3 ತಿಂಗಳು ತಡೆದುಕೊಳ್ಳುವ ಶಕ್ತಿ ಇರುತ್ತದೆ. ಆದರೆ ವಿವಿಯಲ್ಲಿ ಕೆಲಸ ಮಾಡುವ ಗುತ್ತಿಗೆ ನೌಕರರು, ಭದ್ರತಾ ಸಿಬ್ಬಂದಿ ಸೇರಿದಂತೆ ಇತರರ ಪರಿಸ್ಥಿತಿ ಅಯ್ಯೋ ಎನಿಸುತ್ತದೆ. ಪ್ರತಿಷ್ಠಿತ ಕನ್ನಡ ವಿವಿಗೆ ಇದುವರೆಗೆ ಯಾವುದೇ ಸರ್ಕಾರಗಳು ಹೆಚ್ಚಿನ ಅನುದಾನ ಬಿಡುಗಡೆ ಮಾಡಿಲ್ಲ. ಬೋಧಕ ಮತ್ತು ಬೋಧಕೇತರರಿಗೆ ನೀಡುವ ಸಂಬಳ ಸೇರಿ ದಿನನಿತ್ಯದ ಖರ್ಚುಗಳಿಗೆ ಮಾತ್ರ ಪ್ರತಿ ವರ್ಷಕ್ಕೆ ಸುಮಾರು 6 ಕೋಟಿ ವೆಚ್ಚವಾಗುತ್ತದೆ. ಆದರೆ ಇದುವರೆಗೂ ಯಾವುದೇ ಸರ್ಕಾರ ಇದರ ಬಗ್ಗೆ ಕಾಳಜಿ ವಹಿಸಿದಂತೆ ಕಾಣುತ್ತಿಲ್ಲ. ಈ ಬಾರಿಯಂತೂ ಅನುದಾನವನ್ನು 50 ಲಕ್ಷಕ್ಕೆ ಕಡಿತಗೊಳಿಸಿದೆ. ಅದನ್ನೂ ನಾಲ್ಕು ಕಂತುಗಳಲ್ಲಿ ನೀಡುವುದಾಗಿ ಹೇಳಿತ್ತು. ಮೊದಲ ಕಂತಿನ ಭಾಗವಾಗಿ 12.5 ಲಕ್ಷ ಬಿಡುಗಡೆಯಾಗಿದೆ. ಆದರೆ ಇದರಿಂದ ಗುತ್ತಿಗೆ ನೌಕರರಿಗೆ ಒಂದು ತಿಂಗಳ ಸಂಬಳ ಮಾತ್ರ ನೀಡಲು ಸಾಧ್ಯವಾಗಿದೆ. ಅದನ್ನೂ ಕೂಡ ಕೆಲವರ ಅಕೌಂಟಿಗೆ ಬೀಳುತ್ತಿದ್ದಂತೆ ಲೋನ್ ನೀಡಿದ ಕಂಪನಿಗಳು ಕಸಿದುಕೊಂಡಿವೆ. ಹಾಗಾಗಿ ಅವರ ಬದುಕು ನಿಜಕ್ಕೂ ದುಸ್ತಾರವಾಗಿದೆ. ಹಾಗಾಗಿ ಸರ್ಕಾರ ಈ ಕುರಿತು ಗಮನಹರಿಸಿ ಈ ಸಮಸ್ಯೆಯನ್ನು ಶೀಘ್ರವೇ ಬಗೆಹರಿಸಬೇಕೆಂದು ಮನವಿ ಮಾಡುತ್ತೇನೆ” ಎನ್ನುತ್ತಾರೆ.

“ಕನ್ನಡ ವಿವಿ ಎಂದರೆ ಬರಿ ಭಾಷಾ ವಿವಿಯಲ್ಲ. ಇದು ಸಂಶೋಧನಾ ಕೇಂದ್ರ. ಕನ್ನಡದ ಸಂಸ್ಕೃತಿಯ ಬಗ್ಗೆ ಸವಿಸ್ತಾರವಾದ ಅಧ್ಯಯನಗಳು ಇಲ್ಲಿ ನಡೆದಿವೆ. ಕುಲಶಾಸ್ತ್ರೀಯ ಅಧ್ಯಯನಗಳು ಸೇರಿದಂತೆ, ಬುಡಕಟ್ಟು ಸಂಸ್ಕೃತಿಗಳ ಅಧ್ಯಯನ, ದೂರ ಶಿಕ್ಷಣ ಕೇಂದ್ರ, ಪ್ರಸಾರಾಂಗದಂತಹ ಹತ್ತಾರು ಕನ್ನಡ ಪರ ಕೆಲಸಗಳು ಇಲ್ಲಿ ನಡೆಯುತ್ತಿವೆ. ಆದರೆ ಅನುದಾನ ಬಾರದೆ ಇರುವುದರಿಂದ ಇದಾವುದೂ ಈಗ ನಡೆಯುತ್ತಿಲ್ಲ. ಹಾಗಾಗಿ ಸರ್ಕಾರ ಇದರ ಕಡೆ ಗಮನಹರಿಸಿ, ಈ ವಿವಿಯನ್ನು ಅಭಿವೃದ್ಧಿಪಡಿಸುವಲ್ಲಿ ಶ್ರಮವಹಿಸಬೇಕು” ಎಂದು ಹೇಳಿದರು.

ಈ ಕುರಿತು ಮಾತನಾಡಿದ ಕರವೇ (ಕರ್ನಾಟಕ ರಕ್ಷಣಾ ವೇದಿಕೆ) ಮುಖಂಡರಾದ ದಿನೇಶ್ ಕುಮಾರ್, “ಹಂಪಿ ವಿಶ್ವವಿದ್ಯಾಲಯ ಬೇರೆ ವಿವಿಗಳಂತೆ ಅಲ್ಲ. ಇದು ಸಂಶೋಧನಾ ಕೇಂದ್ರ. ಇದು ಸಂಪೂರ್ಣವಾಗಿ ಸರ್ಕಾರದ ಅನುದಾನದ ಅಡಿಯಲ್ಲಿ ನಡೆಯುವ ಸಂಸ್ಥೆ. ಜೊತೆಗೆ ಇದಕ್ಕೆ ಯಾವ ಕಡೆಯಿಂದಲೂ ಆದಾಯ ಬರುವುದಿಲ್ಲ. ಬಂದರೆ ಪ್ರಸಾರಾಂಗದಿಂದ ಬರಬೇಕು ಅಷ್ಟೆ. ಹಾಗಾಗಿ ಇದರ ಅಡಿಯಲ್ಲಿ ಯಾವುದೇ ಕಾಲೇಜುಗಳು ಇಲ್ಲದೇ ಇರುವುದರಿಂದ ಪ್ರತಿಯೊಂದಕ್ಕೂ ಸರ್ಕಾರವನ್ನೇ ನೆಚ್ಚಿಕೊಳ್ಳಬೇಕಿದೆ. ಇದು ಇರಬೇಕಾದ್ದು ಹಾಗೆಯೇ. ಯಾಕೆಂದರೆ ಬೇರೆ ವಿವಿಗಳಂತೆ ಇದಕ್ಕೂ ಅಫಿಲೇಟೆಡ್ ಕಾಲೇಜುಗಳನ್ನು ನೀಡಿದರೆ, ಇಲ್ಲಿ ಕನ್ನಡ ಎನ್ನುವುದು ಒಂದು ವಿಷಯವಾಗಿ ಅಧ್ಯಯ ವಾಗುತ್ತದೆಯೇ ವಿನಃ ಸಂಪೂರ್ಣ ಕನ್ನಡ ವಿವಿಯಾಗುವುದಿಲ್ಲ. ಆದರೆ ಕಳೆದ ಎರಡು ವರ್ಷದಿಂದ ಸರ್ಕಾರ ಅನುದಾನವನ್ನೇ ನಿಲ್ಲಿಸಿಬಿಟ್ಟಿದೆ. ಇದರ ಪರಿಣಾಮವಾಗಿ ವಿವಿಯಲ್ಲಿನ ಹಲವು ಕೋರ್ಸ್‌ಗಳನ್ನು ನಿಲ್ಲಿಸಲಾಗಿದೆ. ದೂರ ಶಿಕ್ಷಣವನ್ನೂ ನಿಲ್ಲಿಸಲಾಗಿದೆ. ಸಂಶೋಧನಾ ವಿದ್ಯಾರ್ಥಿಗಳಿಗೆ ಫೆಲೋಶಿಪ್ ಕೂಡಾ ನೀಡಿಲ್ಲ. ಹಾಸ್ಟೆಲ್‌ಗಳನ್ನೂ ತೆರೆದಿಲ್ಲ. ಜೊತೆಗೆ ಇಲ್ಲಿರುವ 95 ಜನ ಗುತ್ತಿಗೆ ನೌಕರರಿಗೆ ಕಳೆದ 9 ತಿಂಗಳಿನಿಂದ ಸಂಬಳವನ್ನೇ ನೀಡಿಲ್ಲ. ಸಂಬಳ ಇಲ್ಲದೇ ಯಾರೇ ಆದರೂ ಎಷ್ಟು ದಿನ ಜೀವನ ನಡೆಸಲು ಸಾಧ್ಯ? ಹಾಗಾಗಿ ಅವರಲ್ಲಿ ಬಹುತೇಕರು ತಮ್ಮ ಸ್ವಂತ ಊರುಗಳಿಗೆ ಮರಳಿದ್ದಾರೆ. ಹಾಗಾಗಿ ವಿವಿಯು ಸಂಪೂರ್ಣವಾಗಿ ಸ್ಥಗಿತಗೊಳ್ಳುವ ಹಂತಕ್ಕೆ ಬಂದಿದೆ” ಎಂದು ಹೇಳಿದರು.

“ವಾಸ್ತವದಲ್ಲಿ ನಿಜವಾದ ಸಮಸ್ಯೆ ಏನು ಎಂಬುದು ಕೆಲವು ದಿನಗಳ ಹಿಂದೆ ನಮಗೆ ಅರಿವಾಯಿತು. ಸರ್ಕಾರಕ್ಕೆ ಈ ವಿವಿಯನ್ನು ಎಲ್ಲಾ ವಿವಿಗಳಂತೆ ಮಾಡುವ ಉದ್ದೇಶವಿದೆ. ಯಾಕೆಂದರೆ ಯಾವುದೇ ಆದಾಯವಿಲ್ಲದ ವಿವಿಗೆ ಅನುದಾನ ಯಾಕೆ ನೀಡಬೇಕು ಎನ್ನುವ ಮನಸ್ಥಿತಿಯಿದೆ. ಹಾಗಾಗಿ ಎಲ್ಲಾ ವಿವಿಗಳಂತೆಯೇ ಇದನ್ನೂ ಅಫಿಲೇಟೆಡ್ ಮಾಡಿದರೆ, ಅದಕ್ಕೆ ಯಾವುದೇ ಅನುದಾನ ನೀಡಬೇಕಿಲ್ಲ. ಬದಲಿಗೆ ಅದೇ ಸ್ವಾವಲಂಬಿಯಾಗುತ್ತದೆ ಎನ್ನುವುದು ಸರ್ಕಾರದ ಅಭಿಪ್ರಾಯ. ಹಾಗಾಗಿಯೇ ಇಂತಹ ನೀತಿಗಳನ್ನು ಅನುಸರಿಸಿ ಪ್ರತ್ಯೇಕ ಅಸ್ತಿತ್ವವಿರುವ ಕನ್ನಡ ವಿವಿಯನ್ನು ಮುಚ್ಚುವ ಸಂಚು ಮಾಡುತ್ತಿದೆ. ಆದರೆ ಸರ್ಕಾರ ಕನ್ನಡ ಭಾಷಾ ವಿವಿಯಿಂದ ಆದಾಯವನ್ನು ನಿರೀಕ್ಷಿಸುತ್ತಿರುವುದು ನಿಜಕ್ಕೂ ವಿಷಾದನೀಯ. ಇದರಿಂದ ಆದಾಯ ಬರುವುದಿಲ್ಲ ಎನ್ನುವ ಕಾರಣಕ್ಕೆ ಸರ್ಕಾರ ಅನುಸರಿಸುತ್ತಿರುವ ನೀತಿ ಸರಿಯಲ್ಲ. ಇದು ಕೇವಲ ಭಾಷಾ ವಿವಿಯಲ್ಲ. ಕನ್ನಡಿಗರ ಸಂಸ್ಕೃತಿಯನ್ನು ಅಧ್ಯಯನ ಮಾಡಿ ಹೊಸ ಹೊಳಹುಗಳನ್ನು ನೀಡುವ ವಿವಿ ಇದು. ಮುಂದಿನ ಪೀಳಿಗೆಗೆ ಇದನ್ನು ತಲುಪಿಸಲು ಈ ವಿವಿ ಉಳಿಯಬೇಕು. ಆದರೆ ಒಂದು ದೇಶ, ಒಂದು ಸಂಸ್ಕೃತಿಯನ್ನು ಮೆರೆಸಲು ಹೊರಟಿರುವ ಬಿಜೆಪಿ ಸ್ಥಳೀಯ ಅಸ್ಮಿತೆಗಳ ಉಳಿವಿಗೆ ಅನುವು ಮಾಡಿಕೊಡುತ್ತಿಲ್ಲ. ಹಾಗಾಗಿ ಈ ವಿನಾಶದ ಪ್ರಕ್ರಿಯೆಯನ್ನು ವಿರೋಧಿಸಿ, ಕನ್ನಡ ವಿವಿಯನ್ನು ಉಳಿಸುವ ಸಲುವಾಗಿ ನಮ್ಮ ಸಂಘಟನೆಯ ವತಿಯಿಂದ ವಿವಿಧ ಸ್ವರೂಪದ ಹೋರಾಟಗಳನ್ನು ಹಮ್ಮಿಕೊಂಡಿದ್ದೆವು” ಎಂದು ಹೇಳಿದರು.

ಈ ಕುರಿತು ಪ್ರತಿಕ್ರಿಯಿಸಿದ ಭಾಷಾತಜ್ಞರು ಮತ್ತು ವಿವಿಯ ಮಾಜಿ ಕುಲಸಚಿವರಾದ ಕೆ.ವಿ ನಾರಾಯಣ, “ಇಲ್ಲಿ ಎರಡೂ ಕಡೆಯಿಂದಲೂ ಸಮಸ್ಯೆಗಳಿವೆ. ವಿಶ್ವವಿದ್ಯಾನಿಲಯಗಳಿಗೆ ಸರ್ಕಾರಗಳು ಎರಡು ರೀತಿಯ ಅನುದಾನವನ್ನು ಕೊಡುತ್ತವೆ. ಅದರಲ್ಲಿ ಮೊದಲನೆಯದು ಅಭಿವೃದ್ಧಿ ಅನುದಾನ. ಈ ಅನುದಾನವನ್ನು ಹಲವು ವರ್ಷಗಳಿಂದ ಯಾವುದೇ ಸರ್ಕಾರಗಳು ಸಮರ್ಪಕವಾಗಿ ಕೊಡುತ್ತಿಲ್ಲ. ಎಲ್ಲಾ ವಿವಿಗಳಿಗೂ ಅಭಿವೃದ್ಧಿ ಅನುದಾನವನ್ನು ವರ್ಷದಿಂದ ವರ್ಷಕ್ಕೆ ಕಡಿತಗೊಳಿಸುತ್ತಲೆ ಬಂದಿವೆ. ಇನ್ನೊಂದು ಆವರ್ತ ಅನುದಾನ.

ವಿವಿಯಲ್ಲಿನ ಉದ್ಯೋಗಿಗಳಿಗೆ ಸಂಬಳ ನೀಡುವ ಸಲುವಾಗಿ ಈ ಅನುದಾನವನ್ನು ನೀಡಲಾಗುತ್ತದೆ.
ಇದನ್ನು ಕಳೆದ ಮೂರು ತಿಂಗಳಿನಿಂದ ಸರ್ಕಾರ ಬಿಡುಗಡೆ ಮಾಡಿಲ್ಲ. ಇದರ ಹಿಂದೆ ಸರ್ಕಾರದ ಎರಡು ಸಂಚು ಅಡಗಿದೆ. ಒಂದು ಈ ಕನ್ನಡ ವಿವಿಯ ಸ್ವಾಯತ್ತತೆಯನ್ನು ಕಸಿದುಕೊಂಡು, ಅದನ್ನು ಅಫಿಲಿಯೇಟೆಡ್ ವಿವಿಯನ್ನಾಗಿಸಬೇಕೆನ್ನುವುದು. ಮತ್ತೊಂದು ಈಗ ನಮ್ಮ ಸರ್ಕಾರಗಳ ಧೋರಣೆಯ ಏಕ ರಾಷ್ಟ್ರ ಏಕ ಸಂಸ್ಕೃತಿಯ ಸಂಚು. ಹಾಗಾಗಿ ಈ ಮೂಲಕ ಇಂದು ಕನ್ನಡ ಭಾಷೆಗಿರುವ ಏಕೈಕ ವಿವಿಯನ್ನು ಮುಚ್ಚಲು ಪ್ರಯತ್ನಿಸುತ್ತಿದೆ” ಎಂದು ಹೇಳಿದರು.

“ಇನ್ನು ಎರಡನೆಯದು ವಿವಿಯೊಳಗಿನ ಸಮಸ್ಯೆ. ನಾನು ಈ ವಿವಿಯಲ್ಲಿ ಕೆಲಸ ಮಾಡಿದ್ದೇನೆ. ಹಾಗಾಗಿ ಇದರ ಬಗ್ಗೆ ಸಕಾರಾತ್ಮಕ ಭಾವನೆ ನನಗೂ ಇದೆ. ಒಂದು ಪ್ರಮುಖ ವಿಷಯ ಎಂದರೆ, ವಿವಿಯಲ್ಲಿರುವ ಗುತ್ತಿಗೆ ನೌಕರರು ಮತ್ತು ಇತರೆ ಬೋಧಕೇತರ ನೌಕರರಿಗೆ ಸರ್ಕಾರ ಸಂಬಳ ಕೊಡುವುದಿಲ್ಲ. ಬದಲಿಗೆ ವಿವಿಯೆ ಸಂಬಳ ಕೊಡಬೇಕು ಎಂದು ಸ್ಪಷ್ಟವಾಗಿ ಹೇಳಿ ನಿಯಮ ಹಾಕಿ ನೌಕರರ ಭರ್ತಿಗೆ ಅನುಮತಿ ನೀಡಿರುತ್ತದೆ. ಹಾಗಾಗಿ ಗುತ್ತಿಗೆ ನೌಕರರಿಗೆ ಸಂಬಳ ನೀಡಿಲ್ಲ ಎನ್ನುವುದನ್ನ ಸರ್ಕಾರದ ಮೇಲೆ ಹಾಕಲು ಸಾಧ್ಯವಿಲ್ಲ. ಇನ್ನೊಂದು, ವಿವಿಗೆ ನೇರವಾಗಿ ಸರ್ಕಾರದಿಂದ ಅಲ್ಲದಿದ್ದರೂ ಸರ್ಕಾರದ ವಿವಿಧ ಇಲಾಖೆಗಳಿಂದ ಪ್ರಾಜೆಕ್ಟ್‌ಗಳ ರೂಪದಲ್ಲಿ ಹಣ ಬರುತ್ತಲೇ ಇರುತ್ತದೆ. ಇವುಗಳ ಉಪಯೋಗವನ್ನು ವಿವಿ ಸಮರ್ಪಕವಾಗಿ ಮಾಡಿಕೊಳ್ಳಬೇಕು. ಆದರೆ ಇದು ಆಗಿಲ್ಲ. ಇನ್ನು ಸರ್ಕಾರದಿಂದ ಸಂಬಳ ಬಂದಿಲ್ಲ ಎನ್ನುವುದಾದರೆ, ವಿವಿಯಲ್ಲಿ ಸರ್ಕಾರವೇ ನೇಮಿಸಿರುವ ಸಿಂಡಿಕೇಟ್ ಸದಸ್ಯರ ಮೂಲಕ ಸರ್ಕಾರದ ಮೇಲೆ ಒತ್ತಡ ತರಬಹುದು. ಇಲ್ಲವಾದರೆ ವಿವಿಧ ಅಧಿಕಾರಿಗಳ ಮೂಲಕ ಒತ್ತಡ ತರಬಹುದು. ಆದರೆ ಇದುವರೆಗೂ ಯಾವುದೇ ಸಿಂಡಿಕೇಟ್ ಸದಸ್ಯರೂ ಸಹ ಬಹಿರಂಗವಾಗಿ ಈ ಸಮಸ್ಯೆಯ ಬಗ್ಗೆ ಮಾತನಾಡಿಲ್ಲ. ಇದರಿಂದ ಗುತ್ತಿಗೆ ನೌಕರರು ಮತ್ತು ಇತರೆ ಬೋಧಕೇತರ ನೌಕರರು ಕಷ್ಟಪಡುವ ಸ್ಥಿತಿಗೆ ತಲುಪಿದ್ದಾರೆ. ಅಷ್ಟೇ ಅಲ್ಲದೇ ಒಂದು ಕನ್ನಡ ವಿವಿಯನ್ನು ಕತ್ತುಹಿಸುಕಿ ಉಸಿರುಗಟ್ಟುವಂತೆ ಮಾಡಲಾಗುತ್ತಿದೆ. ಇದಕ್ಕೆ ಸರ್ಕಾರವೂ ಎಷ್ಟು ಕಾರಣವೋ ವಿವಿಯೂ ಅಷ್ಟೇ ಕಾರಣ” ಎನ್ನುತ್ತಾರೆ.

ಒಟ್ಟಿನಲ್ಲಿ ಸರ್ಕಾರವೋ ವಿವಿಯೋ, ಯಾರಾದರೇನು; ನೌಕರರನ್ನು ದುಡಿಸಿಕೊಂಡ ಮೇಲೆ ಅವರಿಗೆ ನ್ಯಾಯಯುತವಾಗಿ ಸಲ್ಲಬೇಕಾದ ಸಂಬಳ ಸಲ್ಲಬೇಕು. ಆದರೆ ಇಲ್ಲಿ ಹಾಗಾಗುತ್ತಿಲ್ಲ. ಕೇವಲ ಈ ವಿವಿಯಲ್ಲಿ ಮಾತ್ರವಲ್ಲ, ಸಾರಿಗೆ ನೌಕರರೂ ಸೇರಿದಂತೆ ಸರ್ಕಾರದ ಅಡಿಯಲ್ಲಿ ಕೆಲಸ ಮಾಡುವ ಅತಿಥಿ ಉಪನ್ಯಾಸಕರು, ವಿವಿಧ ಇಲಾಖೆಗಳ ನೌಕರರಿಗೆ ನ್ಯಾಯಯುತವಾದ ಸಂಬಳ ಸರಿಯಾದ ಸಮಯಕ್ಕೆ ನೀಡಿಲ್ಲ. ಬದಲಾಗಿ, ಕೊರೊನಾ, ಆರ್ಥಿಕ ಕುಸಿತ, ಕೇಂದ್ರ ಅನುದಾನ ನೀಡಿಲ್ಲ ಎನ್ನುವ ಕಾರಣಗಳನ್ನು ನೀಡಿ ಸರ್ಕಾರ ಕೈತೊಳೆದುಕೊಳ್ಳುತ್ತಿದೆ. ಸರ್ಕಾರಗಳು ಯಾವಾಗಲೂ ದುಡಿಯುವ ವರ್ಗದ ಪರವಿರುವುದಿಲ್ಲ ಎನ್ನುವುದಕ್ಕೆ ಇದು ಸ್ಪಷ್ಟ ಉದಾಹರಣೆ.

ಕರ್ನಾಟಕದ ಹೆಮ್ಮೆಯ ವಿಶ್ವವಿದ್ಯಾಲಯ ಕನ್ನಡ ವಿವಿ

1991ರಲ್ಲಿ ಆರಂಭವಾದ ಹಂಪಿ ಕನ್ನಡ ವಿವಿ, ಕನ್ನಡ ಭಾಷೆಯ ಬಗೆಗಿನ ಸಂಶೋಧನೆ ಮತ್ತು ಅಧ್ಯಯನಕ್ಕಾಗಿ ಇರುವ ವಿಶ್ವವಿದ್ಯಾಲಯವಾಗಿದೆ. ಇದು ಕನ್ನಡಿಗರ ಹೆಮ್ಮೆಯ ಸಂಸ್ಥೆಯಾಗಿಯೇ ಗುರುತಾಗಿದೆ. ಸಾಹಿತಿ ಡಾ.ಚಂದ್ರಶೇಖರ ಕಂಬಾರ ಮೊದಲ ಕುಲಪತಿಗಳಾಗಿ ವಿಶ್ವವಿದ್ಯಾಲಯವನ್ನು ಕಟ್ಟಿದ ಕೆಲಸವನ್ನು ದಿವಂಗತ ಪ್ರೊ.ಎಂ.ಎಂ.ಕಲಬುರ್ಗಿಯವರು ನಂತರ ಮುಂದುವರೆಸಿದರು. ನಂತರ ಡಾ.ಎಚ್.ಜೆ.ಲಕ್ಕಪ್ಪಗೌಡ, ಡಾ.ಬಿ.ಎ. ವಿವೇಕ ರೈ, ಡಾ.ಎ. ಮುರಿಗೆಪ್ಪ, ಡಾ.ಹಿ.ಚಿ. ಬೋರಲಿಂಗಯ್ಯ ಇವರೆಲ್ಲರೂ ಕುಲಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಎಲ್ಲರೂ ಕೂಡಿ ದುಡಿದ ಫಲವಾಗಿ ಕನ್ನಡ ವಿವಿ ಕನ್ನಡಿಗರ ಅಭಿಮಾನಕ್ಕೆ ಮತ್ತು ಹೆಮ್ಮೆಗೆ ಪಾತ್ರವಾಗಿದೆ. ಕನ್ನಡ-ಕರ್ನಾಟಕದ-ಕರ್ನಾಟಕ ಸಂಸ್ಕೃತಿಯ ಕಲ್ಪನೆಯೊಂದಿಗೆ ಮೈದಳೆದ ಕನ್ನಡ ವಿವಿ ಕನ್ನಡ ಸಂಸ್ಕೃತಿಯ ಬಹುತ್ವದ ನೆಲೆಗಳನ್ನು ಅಧ್ಯಯನ ಮಾಡಿರುವುದರ ಜೊತೆಗೆ ಸಮಾಜಮುಖಿ ಚಿಂತನೆಗಳಿಗೆ ಬದ್ಧವಾಗಿ ಕಾರ್ಯ ನಿರ್ವಹಿಸುತ್ತಿದೆ. ಕನ್ನಡ ಭಾಷೆಯ ಅಧ್ಯಯನ, ಸಂಶೋಧನೆ ಮತ್ತು ವಿಸ್ತರಣೆಗೆ ಸಂಬಂಧಿಸಿದಂತೆ ಕೆಲಸ ಮಾಡುವ ವಿವಿ ಈ ನಿಟ್ಟಿನಲ್ಲಿ ಇದುವರೆಗೂ ನೂರಾರು ಪುಸ್ತಕಗಳನ್ನು ಹೊರತಂದಿದೆ. ಕನ್ನಡ ವಿವಿಯಷ್ಟೇ ಅದರ ಪ್ರಕಾಶನ ಅಂಗವಾದ ಪ್ರಸಾರಾಂಗ ಕೂಡ ತನ್ನ ಬಹುಶ್ರುತ ಪ್ರಕಟಣೆಗಳಿಗಾಗಿ ವಿದ್ಯಾರ್ಥಿಗಳು ಮತ್ತು ಜನಸಾಮಾನ್ಯರ ನಡುವೆ ಪ್ರಖ್ಯಾತವಾಗಿದೆ. ಪ್ರಸಾರಾಂಗ ಕನ್ನಡ ವಿವಿಗೆ ಒಂದು ಆದಾಯದ ಮೂಲವೂ ಆಗಿದೆ. ಕನ್ನಡ ಸಂಸ್ಕೃತಿ, ಜನಪದ, ಶಾಸನ, ಸಾಹಿತ್ಯ, ಕಲೆ, ಬದುಕು, ಅನುವಾದ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ನಡೆದ ಅಧ್ಯಯನಗಳನ್ನು ಪ್ರಸಾರಾಂಗ ಪುಸ್ತಕ ರೂಪದಲ್ಲಿ ಪ್ರಕಟಿಸಿದೆ.


ಇದನ್ನೂ ಓದಿ: ಕನ್ನಡ ವಿವಿ ಮೇಲೆ ಪುರೋಹಿತಶಾಹಿ ಆಕ್ರಮಣ: ಪ್ರೊ. ಟಿ ಆರ್ ಸಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...