ವಿದ್ಯಾರ್ಥಿ ಸಂಘಟನೆಗಳು ಇನ್ನು ಮುಂದೆ ಶಾಲಾ-ಕಾಲೇಜು ಆವರಣದಲ್ಲಿ ಪ್ರತಿಭಟನೆ, ಮುಷ್ಕರ, ಘೇರಾವ್ ಮತ್ತು ಮೆರವಣಿಗೆ ನಡೆಸುವ ಹಕ್ಕಿಲ್ಲ ಎಂದು ಕೇರಳ ಹೈಕೋರ್ಟ್ ಆದೇಶಿಸಿದೆ ಎಂದು ಲೈವ್ ಲಾ ವೆಬ್ ಸೈಟ್ ವರದಿ ಮಾಡಿದೆ.
ವಿದ್ಯಾರ್ಥಿ ಸಂಘಟನೆಗಳು ತಮ್ಮ ಪ್ರತಿಭಟನೆ ಮತ್ತು ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಲು, ರಾಜಕೀಯ ಅಥವಾ ಇತರೆ ಹಕ್ಕುಗಳನ್ನು ಅನುಷ್ಠಾನಗೊಳಿಸಲು ಶಾಲಾ-ಕಾಲೇಜುಗಳ ಆವರಣವನ್ನು ಬಳಸಿಕೊಳ್ಳುವಂತಿಲ್ಲ ಎಂದು ನ್ಯಾಯಮೂರ್ತಿ ಪಿ.ಬಿ.ಸುರೇಶ್ ಕುಮಾರ್ ಆದೇಶದಲ್ಲಿ ತಿಳಿಸಿದ್ದಾರೆ.

ಶಾಲಾ-ಕಾಲೇಜುಗಳಲ್ಲಿ ಕೆಲವೊಂದು ಸಂಘಟನೆಗಳ ಚಟುವಟಿಕೆಗಳು ನೇರವಾಗಿ ಮತ್ತು ಪರೋಕ್ಷವಾಗಿ
ಇತರೆ ವಿದ್ಯಾರ್ಥಿಗಳ ಶಿಕ್ಷಣ ಮತ್ತು ಇತರೆ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ. ಸಂಘಟನೆಗಳ ವಿದ್ಯಾರ್ಥಿಗಳು ನಡೆಸುವ ಮುಷ್ಕರದಿಂದ ಇತರೆ ವಿದ್ಯಾರ್ಥಿಗಳ ಶಿಕ್ಷಣದ ಹಕ್ಕು ಉಲ್ಲಂಘಿಸಿದಂತಾಗುತ್ತದೆ ಎಂದು ಆದೇಶದ ಪ್ರತಿಯನ್ನು ಉಲ್ಲೇಖಿಸಿ ಲೈವ್ ಲಾ ವರದಿ ಮಾಡಿದೆ.
ಇತರೆ ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಇತರೆ ಚಟುವಟಿಕೆಗಳಿಗೆ ಅಡ್ಡಿಪಡಿಸುವುದು ಅಥವಾ ತೊಂದರೆ ಪಡಿಸುವ ಹಕ್ಕು ಯಾವುದೇ ವಿದ್ಯಾರ್ಥಿ ಸಂಘಟನೆಗಳಿಗೂ ಇಲ್ಲ. ಕ್ಯಾಂಪಸ್ ನಲ್ಲಿ ಇಂತಹ ಚಟುವಟಿಕೆಗಳನ್ನು ಮಾಡಬಾರದು ಎಂದು ತಿಳಿಸಿದೆ.

ಸಂಘಟನೆಗಳ ವಿದ್ಯಾರ್ಥಿಗಳು ಶಾಲಾ-ಕಾಲೇಜು ಆವರಣಗಳಲ್ಲಿ ಮುಷ್ಕರ, ಧರಣಿ, ಘೇರಾವ್ ಮತ್ತು ಮೆರವಣಿಗೆ ನಡೆಸಲು ಸಭೆಗಳನ್ನು ಮಾಡುವಂತಿಲ್ಲ. ರಾಜಕೀಯ ಅಥವಾ ಯಾವುದೇ ವಿಷಯಗಳನ್ನು ಅನುಷ್ಠಾನಗೊಳಿಸುವ ಹಕ್ಕು ಇಲ್ಲ. ಶಿಕ್ಷಣ ಮಾನವನ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೈಕೋರ್ಟ್ ತಿಳಿಸಿದೆ.


