ಮುಸ್ಲಿಮರನ್ನು ಎರಡನೇ ದರ್ಜೆ ಪ್ರಜೆಗಳಂತೆ ನಡೆಸಿಕೊಳ್ಳಬೇಕು ಎಂದ ಬಿಹಾರದ ಬಿಜೆಪಿ ಶಾಸಕ ಹರಿಭೂಷಣ್ ಠಾಕೂರ್ ವಿರುದ್ಧ ಆರ್‌ಜೆಡಿ ಮುಖಂಡ ಮತ್ತು ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಕಿಡಿಕಾರಿದ್ದಾರೆ. ಮಸ್ಲಿಮರ ಮತಾದಾನದ ಹಕ್ಕು ಕಿತ್ತುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದಿರುವ ತೇಜಸ್ವಿ ಯಾದವ್, ಬಿಜೆಪಿ ಶಾಸಕನ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ನಿತೀಶ್‌ಕುಮಾರ್‌ರವರನ್ನು ಒತ್ತಾಯಿಸಿದ್ದಾರೆ.
ಮಸ್ಲಿಮರ ಮತಾದಾನದ ಹಕ್ಕು ಕಿತ್ತುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಬಿಜೆಪಿ ಶಾಸಕ ಮುಸ್ಲಿಮರ ವಿರುದ್ಧ ಹೇಳಿಕೆ ನೀಡುತ್ತಿದ್ದರೂ ಸಿಎಂ ನಿತೀಶ್ ಕುಮಾರ್ ಕ್ರಮ ತೆಗೆದುಕೊಳ್ಳದಿರುವುದು ಆಶ್ಚರ್ಯಕರವಾಗಿದೆ. ಮುಖ್ಯಮಂತ್ರಿ ನಮ್ಮ ಪರವಾಗಿದ್ದರೆ ಈ ಕೂಡಲೇ ಬಿಜೆಪಿ ಶಾಸಕನಿಗೆ ಎಚ್ಚರಿಕೆ ನೀಡಲಿ ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ.
ಕಳೆದ ವಾರ ಬಿಹಾರದ ಬಿಸ್ಫಿ ಕ್ಷೇತ್ರದ ಶಾಸಕ ಹರಿಭೂಷಣ್ ಠಾಕೂರ್ “1947 ರಲ್ಲಿ ವಿಭಜನೆಯ ಸಮಯದಲ್ಲಿ ಮುಸ್ಲಿಮರಿಗೆ ಪ್ರತ್ಯೇಕ ದೇಶವನ್ನು ನೀಡಲಾಯಿತು, ಅವರು ಪಾಕಿಸ್ತಾನಕ್ಕೆ ಹೋಗಬೇಕು. ಭಾರತದಲ್ಲಿ ವಾಸಿಸುತ್ತಿದ್ದರೆ, ಅವರು ಎರಡನೇ ದರ್ಜೆಯ ನಾಗರಿಕರಂತೆ ಬದುಕಬೇಕು. ಮುಸ್ಲಿಮರ ಮತದಾನದ ಹಕ್ಕನ್ನು ಕಸಿದುಕೊಳ್ಳುವಂತೆ ನಾವು ಸರ್ಕಾರವನ್ನು ಒತ್ತಾಯಿಸುತ್ತೇವೆ” ಎಂದು ಹೇಳಿಕೆ ನೀಡಿದ್ದರು.
ಈ ಕುರಿತು ಬಿಹಾರ ವಿಧಾನಸಭೆಯಲ್ಲಿ ಪ್ರತಿಕ್ರಿಯಿಸಿರುವ ತೇಜಸ್ವಿ ಯಾದವ್, “ರಾಜ್ಯದ ಸಚಿವರಾದ ಸೈಯದ್ ಶಹನವಾಜ್ ಹುಸೇನ್ ಸರ್ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿ ಅಮೀರ್ ಸುಭಾನಿ ಸರ್, ನಿಮ್ಮ ಮತದಾನದ ಹಕ್ಕು ಕಿತ್ತುಕೊಳ್ಳಬೇಕೆಂದು ಬಿಜೆಪಿ ಶಾಸಕ ಹರಿಭೂಷಣ್ ಠಾಕೂರ್ ಹೇಳುತ್ತಿದ್ದಾರೆ. ನಿಮ್ಮ ಪೌರತ್ವ ಅಪಾಯದಲ್ಲಿದೆ, ನಿಮ್ಮ ಮತ ಹಾಕುವ ಹಕ್ಕು ಕಸಿದುಕೊಳ್ಳಲು ಮುಂದಾಗುತ್ತಿದ್ದಾರೆ. ಏನು ಮಾಡುತ್ತೀರಿ” ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಶಹನವಾಜ್ ಹುಸೇನ್, “ಸಂವಿಧಾನವು ನಮಗೆ ಪೌರತ್ವದ ಹಕ್ಕನ್ನು ನೀಡಿದೆ. ಆದರೆ ಅದನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ” ಎಂದಿದ್ದಾರೆ.
ಬಿಜೆಪಿಯ ಬಿಹಾರ ಘಟಕವು ಹರಿಭೂಷಣ್ ಠಾಕೂರ್ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, ಅವರ ಹೇಳಿಕೆಗಳಿಗೆ ವಿವರಣೆ ನೀಡುವಂತೆ ಕೇಳಿದೆ. ಅವರ ಹೇಳಿಕೆಗಳು “ಅಪಾಯಕಾರಿ ಮತ್ತು ಪ್ರಚೋದಕವಾಗಿವೆ” ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪಕ್ಷ ಜೆಡಿಯು ಹೇಳಿದೆ.
ಇದನ್ನೂ ಓದಿ: ನವೀನ್ ಮೃತದೇಹ ತರುವ ಜಾಗದಲ್ಲಿ 8 ಜನರನ್ನು ಕರೆತರಬಹುದು: ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ವಿವಾದಾತ್ಮಕ ಹೇಳಿಕೆ


