ಈಗಾಗಲೇ ಎಲ್ಲ ಲಸಿಕಾ ಕಂಪನಿಗಳು ಲಸಿಕೆ ತಯಾರಿಕೆಯಲ್ಲಿ ಯಾವುದೇ ಬಗೆಯ ಹಂದಿ ಮಾಂಸ(ಪೋರ್ಕ್) ಬಳಸಲಾಗಿಲ್ಲ ಎಂದು ಸ್ಪಷ್ಟಪಡಿಸಿವೆ. ಲಸಿಕೆಯ ಸುರಕ್ಷಿತ ಸಂಗ್ರಹಣೆ ಮತ್ತು ಸಾಗಾಣಿಕೆಗೆ ಹಂದಿ ಮಾಂಸದಿಂದ ತಯಾರಿಸಿದ ಜೆಲಾಟಿನ್ ಅನ್ನು ಸ್ಟೆಬಲೈಸರ್ ಆಗಿ ಬಳಸಲಾಗುತ್ತದಷ್ಟೇ ಎಂದೂ ಹೇಳಿವೆ.
ಈ ಹಿನ್ನೆಲೆಯಲ್ಲಿ, “ಮುಸ್ಲಿಮರು ಹಂದಿ ಮಾಂಸದ ಅಂಶವಿದ್ದರೂ ಕೂಡ ಲಸಿಕೆ ತೆಗೆದುಕೊಳ್ಳಲು ಯಾವುದೇ ರೀತಿ-ರಿವಾಜು ಅಡ್ಡಿ ಮಾಡುವುದಿಲ್ಲ” ಎಂದು ಜಮಾತ್-ಎ-ಇಸ್ಲಾಂ-ಹಿಂದ್ (ಜೆಐಎಚ್) ಮಂಡಳಿ ಹೇಳಿದ್ದು, ಮುಸ್ಲಿಮರಲ್ಲಿ ಮೂಡಿದ್ದ ಲಸಿಕೆಯ ಗೊಂದಲವನ್ನು ತೊಡೆದು ಹಾಕುವ ಪ್ರಯತ್ನ ಮಾಡಿದೆ. ಭಾರತದಲ್ಲಿ ಇಂತಹ ನಿರ್ಣಯ ಪ್ರಕಟಿಸಿದ ಮೊದಲ ಮುಸ್ಲಿಂ ಸಂಸ್ಥೆ ಇದಾಗಿದೆ.
’ಇಸ್ಲಾಂ ಮಾನವ ಜೀವಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತದೆ ಮತ್ತು ಜೀವ ರಕ್ಷಣೆಗೆ ಆದ್ಯತೆ ನೀಡುತ್ತದೆ’ ಎಂದು ಜಮಾತ್ -ಎ-ಇಸ್ಲಾಂ-ಹಿಂದ್ ಪ್ರಕಟಣೆ ಹೊರಡಿಸಿದೆ.
ಇದನ್ನೂ ಓದಿ: ಸ್ಥಾನಮಾನ ಸಿಕ್ಕರೆ ಬಿಜೆಪಿ ಸೇರ್ಪಡೆ ಖಚಿತ: ಶಾಸಕ ಎನ್ ಮಹೇಶ್
’ಅನುಮತಿಸಲಾಗದ ಯಾವುದೇ ವಸ್ತು- ಅದರ ಗುಣಲಕ್ಷಣಗಳಲ್ಲಿ ಸಂಪೂರ್ಣ ಮಾರ್ಪಾಟನ್ನು ಹೊಂದಿದ್ದರೆ ಅದು ಶುದ್ಧವಾದುದು ಮತ್ತು ಅದನ್ನು ದೇಹಕ್ಕೆ ಸೇರಿಸಬಹುದು. ಈ ಆಧಾರದ ಮೇಲೆ, ಹರಾಮ್ ಪ್ರಾಣಿಯ ದೇಹದ ಭಾಗದಿಂದ ಪಡೆದ ಜೆಲಾಟಿನ್ ಬಳಕೆಯನ್ನು ಇಸ್ಲಾಮಿಕ್ ನ್ಯಾಯಶಾಸ್ತ್ರಜ್ಞರು ಅನುಮತಿಸಿದ್ದಾರೆ ಎಂದೂ ಮಂಡಳಿ ವಿವರಿಸಿದೆ.
ಹಲವು ದಿನಗಳಿಂದ, ’ಲಸಿಕೆಯಲ್ಲಿ ಹಂದಿ ಮಾಂಸದ ಅಂಶವಿದ್ದು, ಮುಸ್ಲಿಮರು ಲಸಿಕೆ ಪಡೆಯಬಾರದು’ ಎಂಬ ಆಧಾರರಹಿತ ಸುದ್ದಿಯೊಂದು ಜಗತ್ತಿನಾದ್ಯಂತ ಪ್ರಚಲಿತದಲ್ಲಿದೆ.
’ಯಾವುದೇ ಬೇರೆ ಆಯ್ಕೆ ಇಲ್ಲದಿರುವಾಗ, ಪೋರ್ಕ್ ಹೊಂದಿದ ಲಸಿಕೆ ಪಡೆಯುವುದರಲ್ಲೂ ತಪ್ಪಿಲ್ಲ’ ಎಂದು ಜೆಐಎಚ್ ಉಪಾಧ್ಯಕ್ಷ ಸಲೀಂ ಇಂಜಿನಿಯರ್ ಹೇಳಿದ್ದಾರೆ. ’ಬೇರೆ ಆಯ್ಕೆಗಳಿದ್ದರೆ ಅದು ಒಳ್ಳೆಯದೇ. ಆದರೆ ಆಯ್ಕೆಯೇ ಇಲ್ಲದಿರುವಾಗ ಯಾವುದೇ ಪಾಪಪ್ರಜ್ಞೆ ಅನುಭವಿಸದೇ ಲಸಿಕೆ ಪಡೆದುಕೊಳ್ಳುವುದು ಸರಿಯಾದ ಮಾರ್ಗ. ಇದು ಜೀವನ್ಮರಣದ ಪ್ರಶ್ನೆಯಾಗಿದೆ’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ರೈತರ ವಿರುದ್ಧ ‘NAGA – ನರೇಂದ್ರ, ಅಮಿತ್, ಗೌತಮ್, ಅಂಬಾನಿ’ ಕಂಪನಿ ನಿಂತಿದೆ: ಶ್ರೀ…
ಪಿಝರ್, ಮಾಡೆರ್ನಾ ಮತ್ತು ಅಸ್ಟ್ರಾಜೆನಿಕಾ ವಕ್ತಾರರು, ಲಸಿಕೆಯಲ್ಲಿ ಯಾವುದೇ ಬಗೆಯ ಪೋರ್ಕ್ ಅಂಶವಿಲ್ಲ. ಲಸಿಕೆಯ ಸುರಕ್ಷಿತ ಸಂಗ್ರಹಣೆ ಮತ್ತು ಸಾಗಾಣಿಕೆಗೆ ಹಂದಿ ಮಾಂಸದಿಂದ ತಯಾರಿಸಿದ ಜೆಲಾಟಿನ್ ಅನ್ನು ಸ್ಟೆಬಲೈಸರ್ ಆಗಿ ಬಳಸಲಾಗುತ್ತದಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ.
ಕಳೆದ ವಾರ ಮುಂಬೈನ ರಾಝಾ ಅಕಾಡೆಮಿ ವಿಶ್ವ ಆರೋಗ್ಯ ಸಂಸ್ಥೆಗೆ ಪತ್ರ ಬರೆದು, ಲಸಿಕೆಗಳ ವಿವರಗಳು ಮತ್ತು ಅವು ಪೋರ್ಕ್ ಒಳಗೊಂಡಿವೆಯೇ ಎಂಬುದನ್ನು ತಿಳಿಸಬೇಕು ಎಂದು ಕೋರಿತ್ತು.
’ಯಾವ ಲಸಿಕೆ ಏನನ್ನು ಒಳಗೊಂಡಿದೆ ಎಂಬುದನ್ನು ನಾವು ತಿಳಿಯಲು ಬಯಸಿದ್ದೆವು. ಪೋರ್ಕ್ ಇಲ್ಲದ ಲಸಿಕೆಯಿದ್ದರೆ ಅದನ್ನೇ ಪಡೆದುಕೊಳ್ಳಲು ಸೂಚಿಸಲು ಈ ಕ್ರಮ ಕೈಗೊಂಡಿದ್ದೆವು. ಇದೇನೂ ಸಲಹೆಯಲ್ಲ, ಆದರೆ ಪಾರದರ್ಶಕತೆಗಾಗಿ ಒಂದು ಮನವಿ ಅಷ್ಟೇ’ ಎಂದು ರಾಝಾ ಅಕಾಡೆಮಿಯ ಜನರಲ್ ಸೆಕ್ರೆಟರಿ ಸಯೀದ್ ನೂರಿ ವಿವರಣೆ ನೀಡಿದ್ದಾರೆ.
ಇದನ್ನೂ ಓದಿ: ಮಲೆಂಗಾವ್ ಸ್ಪೋಟ ಪ್ರಕರಣ: ನ್ಯಾಯಾಲಯಕ್ಕೆ ಹಾಜರಾಗುವುದರಿಂದ ವಿನಾಯಿತಿ ಪಡೆದ ಬಿಜೆಪಿ ಸಂಸದೆ ಪ್ರಗ್ಯಾ ಠಾಕೂರ್
ಭಾರತದ ಹಿಂದೂ ಮಹಾಸಭಾ ಸೇರಿ ಹಲವು ಗುಂಪುಗಳು ಕೂಡ ಇಂತಹ ಮನವಿ ಸಲ್ಲಿಸಿವೆ ಎಂದು ಅವರು ಹೇಳಿದ್ದಾರೆ.
ಹಿಂದೂ ಮಹಾಸಭಾದ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ರಾಷ್ಟ್ರಪತಿಗೆ ಪತ್ರ ಬರೆದು, ಯಾವುದಾದರೂ ಲಸಿಕೆಯಲ್ಲಿ ಗೋವಿನ ರಕ್ತದ ಅಂಶವಿದೆಯೇ ಎಂಬುದನ್ನು ತಿಳಿಸಬೇಕು ಎಂದು ಆಗ್ರಹಿಸಿದ್ದರು.
ಡಿಸೆಂಬರ್‌ನಲ್ಲಿ ಐಎಎಸ್ ಅಧಿಕಾರಿ ಸಂಜಯ್ ದಿಕ್ಷಿತ್ ಮಾತನಾಡಿ, ‘ಮುಸ್ಲಿಮರು ಲಸಿಕೆಯನ್ನು ಬಾಯ್ಕಾಟ್ ಮಾಡಬೇಕು’ ಎಂದು ಕರೆ ನೀಡಿದ್ದರು. ಈ ಕುರಿತಂತೆ ’ದಿ ಪ್ರಿಂಟ್’ ಹಲವಾರು ಮುಸ್ಲಿಂ ಧರ್ಮಗುರುಗಳು, ಚಿಂತಕರನ್ನು ಮಾತಾಡಿಸಿದಾಗ ಅವರು ಲಸಿಕೆ ತೆಗೆದುಕೊಳ್ಳುವುದರ ಪರವೇ ಮಾತನಾಡಿದ್ದಾರೆ.
ಶಿಯಾ ಧರ್ಮಗುರು ಮತ್ತು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಮಂಡಳಿಯ ಕಲ್ಬೆ ಜಾವೇದ್, ’ಲಸಿಕೆ ಪಡೆಯುವುದಕ್ಕೆ ಅನುಮತಿಯಿದೆ. ಯಾರಾದರೂ ಬೇಡ ಎಂದರೆ ಅವರು ಮುಸ್ಲಿಮರ ವಿರೋಧಿಗಳೆಂದೇ ಅರ್ಥ’ ಎಂದಿದ್ದಾರೆ.
ಇದನ್ನೂ ಓದಿ: ಗಣರಾಜ್ಯೋತ್ಸವದ ಟ್ರ್ಯಾಕ್ಟರ್ ರ್‍ಯಾಲಿಯ ಟ್ರೈಲರ್ ಜನವರಿ 7 ರಂದು ತೋರಿಸುತ್ತೇವೆ: ರೈತ ಒಕ್ಕೂಟ
’ಲಸಿಕೆಯಲ್ಲಿ ಏನಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಒಂದೇ ಒಂದು ಲಸಿಕೆಯಿದ್ದು ಅದು ಪೋರ್ಕ್ ಅಂಶ ಹೊಂದಿದ್ದರೆ, ಆಗ ಆ ಲಸಿಕೆ ಪಡೆಯುವುದು ಅನಿವಾರ್ಯ’ ಎಂದು ಜಮೈತ್-ಉಲೈಮಾ-ಎ-ಹಿಂದ್‌ನ ಜನರಲ್ ಸೆಕ್ರೆಟರಿ ಮಹಮೂದ್ ಮದಾನಿ ಹೇಳಿದ್ದಾರೆ.
’ದ್ವೇಷ ಪ್ರಚಾರದ ಭಾಗ’
’ಮಾನವ ಜೀವವೇ ಇಸ್ಲಾಂನ ಆದ್ಯತೆ. ಇದರಲ್ಲಿ ಚರ್ಚೆಯ ಅಗತ್ಯವೇ ಇಲ್ಲ. ಇಸ್ಲಾಂ ಪೋರ್ಕ್ ಮತ್ತು ಹೆಂಡವನ್ನು ನಿಷೇಧಿಸಿದೆ. ಆದರೆ ತಿನ್ನುವುದಕ್ಕೆ ಮತ್ತು ಕುಡಿಯುವುದಕ್ಕಷ್ಟೇ ಇದು ಅನ್ವಯಿಸುತ್ತದೆ. ಇವುಗಳಿಂದ ತಯಾರಾದ ಔಷಧಿಗಳ ಬಳಕೆಗೆ ಮತ್ತು ಜೀವ ರಕ್ಷಿಸುವ ಕ್ರಮಗಳಿಗೆ ಇದು ಅನ್ವಯಿಸುವುದಿಲ್ಲ’ ಎಂದು ದೆಹಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದ ಪ್ರೊ. ಅಖ್ತಾನಿ ವಾಸೆ ತಿಳಿಸಿದ್ದಾರೆ.
ಮುಸ್ಲಿಮರು ಲಸಿಕೆ ಪಡೆಯಬಾರದು ಎನ್ನುವುದು ದ್ವೇಷದ ಪ್ರಚಾರ (ಹೇಟ್‌ಫುಲ್ ಪ್ರೊಪಗಂಡಾ) ಎಂದು ಅವರು ಹೇಳಿದ್ದಾರೆ.
’ಕೆಲವರು ಮುಸ್ಲಿಮರನ್ನು ಅವಮಾನಿಸಿ ನಿರಾಶೆಗೊಳಿಸಲು ನೋಡುತ್ತಾರೆ. ಈ ಪ್ರೊಪಗಂಡಾವೇ ಪೊಲೀಯೋ ಲಸಿಕೆ ಕಾರ್ಯಕ್ರಮದ ಸಂದರ್ಭದಲ್ಲೂ ಚಾಲ್ತಿಗೆ ಬಂದಿತ್ತು. ಆಗ ಮುಸ್ಲಿಂ ವಿದ್ವಾಂಸರು ಮಧ್ಯ ಪ್ರವೇಶಿಸಿ ಲಸಿಕೆ ವಿಷಯದಲ್ಲಿ ಯಾವುದೇ ಪೂರ್ವಗ್ರಹ ಬೇಡ ಎಂದು ಹೇಳಿದ್ದರು. ಈಗಲೂ ಅವರು ಆ ಕೆಲಸವನ್ನು ಮಾಡಬೇಕಿದೆ’ ಎಂದು ವಾಸೆ ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ: ಪುರಸಭೆ ಸದಸ್ಯೆಯನ್ನು ಎಳೆದಾಡಿದ್ದ ಬಿಜೆಪಿ ಶಾಸಕ ಸಿದ್ದು ಸವದಿ: 31 ಜನರ ವಿರುದ್ಧ FIR


