ದೆಹಲಿಯ ಸಿಂಘು, ಟಿಕ್ರಿ ಮತ್ತು ಗಾಜಿಪುರ್ ಗಡಿಗಳಲ್ಲಿ ರೈತರ ದಿಟ್ಟ ಹೋರಾಟ ಶಾಂತಿಯುತವಾಗಿ ಮುಂದುವರಿದಿದೆ. ಯಾವುದೇ ಆತಂಕವಿಲ್ಲ ಎಂದು ಹೋರಾಟನಿರತ ರೈತ ಮುಖಂಡರು ಸ್ಪಷ್ಟಪಡಿಸಿದ್ದಾರೆ.
ಸಿಂಘು ಗಡಿಯಲ್ಲಿ ಸದ್ಭಾವನಾ ಮಾರ್ಚ್ ನಡೆಸಲಾಗುತ್ತಿದೆ. ಮೋರ್ಚಾ ಕೆಎಫ್‌ಸಿಯನ್ನು ದಾಟಿ ಸೋನಿಪತ್ ಕಡೆಗೆ ಸಾಗಿದೆ. ಎಲ್ಲಾ ರೈತ ನಾಯಕರು ರ್ಯಾಲಿಯಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ತಿಳಿದುಬಂದಿದೆ.
ಸಿಂಘು ಗಡಿಯಲ್ಲಿ ಹೋರಾಟನಿರತ ರೈತರನ್ನು ಅಲ್ಲಿಂದ ತೆರವುಗೊಳಿಸಬೇಕೆಂದು ಸ್ಥಳೀಯರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿತ್ತು. ಇದಕ್ಕೆ ಸ್ಪಷ್ಟನೆ ನೀಡಿರುವ ರೈತ ಮುಖಂಡರು, “ಸಿಂಘು ಗಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ದೂರದಲ್ಲಿದ್ದ ಪೊಲೀಸ್ ತುಕಡಿಗಳು ಸ್ವಲ್ಪ ಹತ್ತಿರಬಂದಿವೆ. ಆದರೆ ರೈತರು ನಿರಾಂತಕವಾಗಿ ಹೋರಾಟ ಮುಂದುವರೆಸಿದ್ದಾರೆ. ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ” ಎಂದಿದ್ದಾರೆ.
ಎಂದಿನಂತೆ ಹಲವಾರು ರೈತರ ಗುಂಪುಗಳು ಸಿಂಘು ಗಡಿಯಲ್ಲಿ ಮೆರವಣಿಗೆ ನಡೆಸುತ್ತಿವೆ. ಆದರೆ ಇಲ್ಲಿನ ಸ್ಥಳೀಯರನ್ನು ಹೋರಾಟನಿರತ ರೈತರ ವಿರುದ್ಧ ಎತ್ತಿಕಟ್ಟಲು ಹುನ್ನಾರಗಳು ನಡೆಯುತ್ತಿವೆ. ಗೋದಿ ಮಾಧ್ಯಮಗಳು ಅದನ್ನೆ ದೊಡ್ಡದು ಮಾಡಿ ತೋರಿಸುತ್ತಿವೆ. ಆದರೆ ಆ ಸ್ಥಳೀಯರು ಈ ನಮ್ಮ ನ್ಯಾಯಯುತ ಹೋರಾಟವನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದು ಭಾವಿಸುತ್ತೇವೆ. ಆತಂಕಪಡುವ ಅಗತ್ಯವಿಲ್ಲ ಎಂದು ರೈತ ಮುಖಂಡರು ತಿಳಿಸಿದ್ದಾರೆ.
ಟಿಕ್ರಿ ಗಡಿಯಲ್ಲಿ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ನೆರೆದಿದ್ದು ಹೋರಾಟ ಮುಂದುವರೆದಿದೆ. ಕರ್ನಾಟಕದ ರೈತ ಮಹಿಳೆಯರು ತಾವು ಕೈಯಾರೆ ನೇಯ್ದ ಭಾರತದ ತ್ರಿವರ್ಣ ಧ್ವಜವನ್ನು ಅಲ್ಲಿನ ಹೋರಾಟನಿರತ ರೈತ ಮಹಿಳೆಯರಿಗೆ ಹಸ್ತಾಂತರಿಸಿದರು.
“ಜನವರಿ 26 ರಂದು ನಡೆದದ್ದು ದುರದೃಷ್ಟಕರ. ನಿಜವಾದ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಆದರೆ ಆ ಘಟನೆಯಿಂದ ಪ್ರತಿಭಟನೆ ಕೊನೆಗೊಳ್ಳುವುದಿಲ್ಲ. ಆತಂಕಗಳು ಇನ್ನೂ ಅಸ್ತಿತ್ವದಲ್ಲಿವೆ, ಆದ್ದರಿಂದ ನಾವೆಲ್ಲರೂ ರೈತರನ್ನು ಶಾಂತಿಯುತವಾಗಿ ಬೆಂಬಲಿಸಬೇಕು” ಎಂದು ದೆಹಲಿಯಲ್ಲಿ ನಡೆದ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಇದನ್ನೂ ಓದಿ: ಘಟನೆ ದುರದೃಷ್ಟಕರ ಆದರೆ ರೈತ ಹೋರಾಟ ಕೊನೆಗೊಳ್ಳುವುದಿಲ್ಲ: ಕೇಜ್ರಿವಾಲ್



???