ಸ್ವಿಡೀಶ್ ನ ಗ್ರೇಟಾ ಥನ್ಬರ್ಗ್ ಅವರಿಗೆ ಪರಿಸರ ಮತ್ತು ಜಾಗತಿಕ ಹವಾಮಾನ ವೈಪರೀತ್ಯ ವಿರುದ್ಧದ ಹೋರಾಟಕ್ಕಾಗಿ ನಾರ್ಡಿಕ್ ಕೌನ್ಸಿಲ್ ಪರಿಸರ ಪ್ರಶಸ್ತಿ ಘೋಷಣೆ ಮಾಡಿದೆ. ಆದರೆ ಪ್ರಶಸ್ತಿಯನ್ನು 16 ಪೋರಿ, ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್ ನಿರಾಕರಿಸಿದ್ದಾರೆ. ಸ್ವೀಡನ್ ಮತ್ತು ನಾರ್ವೆಯಲ್ಲಿ ನಡೆಸಿದ ಹೋರಾಟ ಮತ್ತು ಹವಾಮಾನ ಬದಲಾವಣೆ ಪ್ರಯತ್ನಕ್ಕಾಗಿ ವಾರ್ಷಿಕವಾಗಿ ನೀಡಲಾಗುವ ಪರಿಸರ ಪ್ರಶಸ್ತಿಗೆ ಗ್ರೇಟಾ ಥನ್ಬರ್ಗ್ ನಾಮನಿರ್ದೇಶನಗೊಂಡಿದ್ದಾರೆ.
ಭವಿಷ್ಯದಲ್ಲಿ ಹವಾಮಾನ ಅತಿಮುಖ್ಯವೆಂದು ಇದಕ್ಕಾಗಿ ಲಕ್ಷಾಂತರ ಜನರನ್ನು ಒಟ್ಟುಗೂಡಿಸಿ, ಹೋರಾಟ ನಡೆಸಿದ ಗ್ರೇಟಾ ಥನ್ಬರ್ಗ್ ಅವರನ್ನು ನಾರ್ಡಿಕ್ ಕೌನ್ಸಿಲ್, ಪರಿಸರ ಪ್ರಶಸ್ತಿ ನೀಡಿ ಗೌರವಿಸುವುದಾಗಿ ಘೋಷಿಸಿದೆ. ಸ್ಟಾಕ್ ಹೋಂನ ಸಮಾರಂಭದಲ್ಲಿ ಗ್ರೇಟಾ ಅವರನ್ನು ಸನ್ಮಾನಿಸುವುದಾಗಿ ಹೇಳಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಗ್ರೇಟಾ, ನಾರ್ಡಿಕ್ ಕೌನ್ಸಿಲ್ ಗೆ ಧನ್ಯವಾದ ತಿಳಿಸಿದ್ದಾರೆ. ನಾರ್ಡಿಕ್ ದೇಶಗಳು ಹವಾಮಾನ ವಿಷಯದ ಬಗ್ಗೆ ದೊಡ್ಡ ದೊಡ್ಡ ಭಾಷಣ ಮಾಡುತ್ತವೆ. ಆದರೆ ಅದರಂತೆ ಮತ್ತು ಅದರ ಖ್ಯಾತಿಗೆ ತಕ್ಕಂತೆ ನಡೆದುಕೊಳ್ಳುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
‘ಹವಾಮಾನ ಚಳವಳಿಗೆ ಎಲ್ಲರೂ ಒಟ್ಟಾಗಿ ದುಡಿಯಬೇಕು. ಅಧಿಕಾರದಲ್ಲಿರುವ ಜನತೆ ಹೋರಾಟದ ಕೂಗನ್ನು ಕೇಳಿಸಿಕೊಳ್ಳಬೇಕು ಮತ್ತು ವೈಜ್ಞಾನಿಕವಾಗಿ ಅದಕ್ಕೆ ಸರಿಯಾದ ಮಾರ್ಗೋಪಾಯ ಕಂಡುಕೊಳ್ಳಬೇಕೇ ಹೊರತು ಪ್ರಶಸ್ತಿಗಳನ್ನು ಕೊಡುವುದು ಅಲ್ಲ’ ಎಂದು ಹೇಳಿದ್ದಾರೆ. ತಾವು ಪರಿಸರ ಪ್ರಶಸ್ತಿ ಹಾಗೂ ಮೊತ್ತ 350,000 ಡ್ಯಾನಿಶ್ ಕ್ರೋನರ್ ನ್ನು ತೆಗೆದುಕೊಳ್ಳುವುದಿಲ್ಲ. ಹವಾಮಾನ ಬದಲಾವಣೆ ಹೋರಾಟ ಯಾವುದೇ ಪ್ರಶಸ್ತಿಗಾಗಿ ಅಲ್ಲ ಎಂದು ಇನ್ ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ಹವಾಮಾನ ಕುರಿತು ವಿಶೇಷ ಪದಗಳಿಂದ ವರ್ಣಿಸುವುದು, ಹವಾಮಾನ ಬದಲಾವಣೆ ಹೆಸರಲ್ಲಿ ಬಡಿವಾರ ಮಾಡುವ ಅಗತ್ಯವಿಲ್ಲ. ಯಾವಾಗ ಇದು ನಿಜವಾದ ಮನಸ್ಸಿನಿಂದ ಮತ್ತು ಹೆಜ್ಜೆಗುರುತುಗಳೊಂದಿಗೆ ಆರಂಭವಾಗುತ್ತದೋ ಅಲ್ಲಿಂದ ಹೊಸ ಕಥೆಯೇ ಹುಟ್ಟಿಕೊಳ್ಳುತ್ತದೆ ಎಂದು ಹೇಳಿದ್ದಾರೆ.


