“ರಾಜ್ಯಗಳು ವೈರಸ್ ವಿರುದ್ಧ ಹೋರಾಡುತ್ತಿವೆ, ಕೇಂದ್ರವು ಕೆಲವು ರಾಜ್ಯಗಳ ವಿರುದ್ಧ ಹೋರಾಡುತ್ತಿದೆ” ಎಂದು ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದ ಡೆರೆಕ್ ಒ’ಬ್ರಿಯೆನ್ ಗಂಭೀರ ಟೀಕೆ ಮಾಡಿದ್ದಾರೆ.
ಕೊರೊನಾ ವೈರಸ್ ಲಾಕ್‌ಡೌನ್ ಉಲ್ಲಂಘನೆಗಳ ಬಗ್ಗೆ ತನಿಖೆ ನಡೆಸುವ ಕೇಂದ್ರದ ತಂಡಕ್ಕೆ ಪಶ್ಚಿಮ ಬಂಗಾಳ ರಾಜ್ಯಕ್ಕೆ ಪ್ರವೇಶಿಸದಂತೆ ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಡೆದಿದ್ದಾರೆ.
ತನಿಖಾ ತಂಡ ಆರು ಜನರಲ್ಲಿ ರಾಜ್ಯದ ಒಬ್ಬರನ್ನು ಅನುಮತಿಸಿದ ಕಾರಣಕ್ಕೆ ಪಶ್ಚಿಮ ಬಂಗಾಳ ಸರ್ಕಾರವು ಕೇಂದ್ರದ ತಂಡವನ್ನು ಅನುಮತಿಸಲು ನಿರಾಕರಿಸಿದೆ. ಕೇಂದ್ರ ತಂಡಗಳನ್ನು ವಿರೋಧ ಪಕ್ಷಗಳು ಆಳುತ್ತಿರುವ ಮೂರು ರಾಜ್ಯಗಳು ಸೇರಿದಂತೆ ನಾಲ್ಕು ರಾಜ್ಯಗಳಿಗೆ ಕಳುಹಿಸಲಾಗಿದೆ.
ಕೇಂದ್ರವೂ ತಂಡಗಳನ್ನು ಮಹಾರಾಷ್ಟ್ರದ ಪುಣೆ, ರಾಜಸ್ಥಾನದ ಜೈಪುರ, ಕೋಲ್ಕತಾ, ಹೌರಾ, ಮಿಡ್ನಾಪುರ ಪೂರ್ವ, 24 ಪರಗಣಗಳು ಉತ್ತರ, ಡಾರ್ಜಿಲಿಂಗ್, ಕಾಲಿಂಪಾಂಗ್ ಮತ್ತು ಪಶ್ಚಿಮ ಬಂಗಾಳದ ಜಲ್ಪೈಗುರಿ ಮತ್ತು ಮಧ್ಯಪ್ರದೇಶದ ಇಂದೋರ್‌ಗೆ ಕಳುಹಿಸಲಾಗಿದೆ.
ಈ ಬಗ್ಗೆ ಬಂಗಾಳದ ಕೋಲ್ಕತ್ತಾದ ತಂಡದ ಸದಸ್ಯರೊಬ್ಬರು ತಮ್ಮ ಕೆಲಸವನ್ನು ಮಾಡಲು ಅನುಮತಿ ನೀಡಿಲ್ಲ ಎಂದು ಆರೋಪಿಸಿದ್ದಾರೆ. “ಇಂದು ಸ್ಥಳಗಳಿಗೆ ಭೇಟಿ ನೀಡಬಹುದೆಂದು ನಮಗೆ ಭರವಸೆ ನೀಡಲಾಯಿತಾದರೂ, ನಂತರ ಕೆಲವು ಸಮಸ್ಯೆಗಳಿವೆ ಹಾಗು ನಾವು ಹೊರಗೆ ಹೋಗುವಂತಿಲ್ಲ ಎಂದು ನಮಗೆ ತಿಳಿಸಲಾಯಿತು” ಎಂದು ಕೋಲ್ಕತಾ ತಂಡದ ಮುಖ್ಯಸ್ಥ ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿ ಅಪೂರ್ವಾ ಚಂದ್ರ ಹೇಳಿದ್ದಾರೆ.
“ತಂಡಗಳು ಇತರ ರಾಜ್ಯಗಳಿಗೆ ಹೋಗಿವೆ, ಅಲ್ಲಿ ಅವರಿಗೆ ಸಂಪೂರ್ಣ ಬೆಂಬಲ ಸಿಗುತ್ತಿದೆ. ಅವರಿಗೆ ಪಶ್ಚಿಮ ಬಂಗಾಳದಂತೆಯೇ ನೋಟಿಸ್ ನೀಡಲಾಗಿದೆ ಆದರೆ ನಿನ್ನೆಯಿಂದ ಅವರಿಗೆ ಯಾವುದೇ ಸಮಸ್ಯೆಗಳಿಲ್ಲ” ಎಂದು ಚಂದ್ರ ಹೇಳಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.
ನಿನ್ನೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಕೋಲ್ಕತ್ತಾಗೆ ತನಿಖಾ ತಂಡ ಆಗಮಿಸುವ ಬಗ್ಗೆ ಪತ್ರ ಬರೆದಿದ್ದರು. ಗೃಹ ಸಚಿವ ಅಮಿತ್ ಶಾ ಅವರು ಔಪಚಾರಿಕವಾಗಿ ಫೋನ್‌ನಲ್ಲಿ ತಿಳಿಸುವ ಮುನ್ನವೆ “ಜಿಲ್ಲೆಗಳ ಆಯ್ಕೆ ಮತ್ತು ಏಕಪಕ್ಷೀಯವಾಗಿ ತಂಡದ ಆಯ್ಕೆ ಮಾಡಿರುವುದು ದುರದೃಷ್ಟಕರವಾಗಿದೆ” ಎಂದು ಅವರು ಕೆರಳಿದ್ದಾರೆ. ಹಾಗಾಗಿ ತಂಡದ ಆಗಮನ ಪ್ರೋಟೋಕಾಲ್ ಉಲ್ಲಂಘನೆ ಎಂದು ಅವರು ಹೇಳಿದ್ದಾರೆ.
ತಂಡದ ವೀಕ್ಷಣಾ ಪಟ್ಟಿಯಲ್ಲಿ ಬಂಗಾಳದ ಏಳು ಜಿಲ್ಲೆಗಳನ್ನು ಹೊಂದಿದೆ. ನಾಲ್ಕು ಜಿಲ್ಲೆಗಳಲ್ಲಿ ಮೂರು ಜಿಲ್ಲೆಗಳು 14 ದಿನದಿಂದ ಒಂದೇ ವೈರಸ್ ಪ್ರಕರಣ ವರದಿ ಮಾಡಿಲ್ಲ ಎಂದು ರಾಜ್ಯ ಸರ್ಕಾರ ಹೇಳಿಕೊಂಡಿದೆ.
ಗುಜರಾತ್, ತಮಿಳುನಾಡು, ಉತ್ತರ ಪ್ರದೇಶ, ತೆಲಂಗಾಣ ಮತ್ತು ದೆಹಲಿಗೆ ಕೇಂದ್ರದ ಯಾವುದೇ ತಂಡಗಳನ್ನು ಯಾಕೆ ಕಳುಹಿಸಲಿಲ್ಲ ಎಂದು ರಾಜ್ಯದ ಆಡಳಿತಪಕ್ಷ ತೃಣಮೂಲ ಕಾಂಗ್ರೆಸ್ ಪ್ರಶ್ನಿಸಿದೆ.
“ರಾಜ್ಯಗಳು ವೈರಸ್ ವಿರುದ್ಧ ಹೋರಾಡುತ್ತಿವೆ, ಕೇಂದ್ರವು ಕೆಲವು ರಾಜ್ಯಗಳ ವಿರುದ್ಧ ಹೋರಾಡುತ್ತಿದೆ” ಎಂದು ಆರೋಪಿಸಿ ತೃಣಮೂಲ ಸಂಸದ ಡೆರೆಕ್ ಒ’ಬ್ರಿಯೆನ್ ಟ್ವೀಟ್ ಮಾಡಿದ್ದಾರೆ.
States, incl Bengal, going all out-fighting Corona.
Unfortunately, central govt is going all out-fighting the States!Is this the spirit of federalism ?
Is this what our Constitution says ?Let’s make handling health emergency our priority. Politics can wait till winter
— Citizen Derek | নাগরিক ডেরেক (@derekobrienmp) April 21, 2020
ಬಿಜೆಪಿ ಆಡಳಿತದಲ್ಲಿರುವ ಒಂದು ರಾಜ್ಯಕ್ಕೆ ಮಾತ್ರ ಕೇಂದ್ರವು ತಂಡವನ್ನು ಕಳುಹಿಸಿದೆ. ಅದು ಮಧ್ಯಪ್ರದೇಶವಾಗಿದೆ. ಕಳೆದ ಕೆಲವು ವಾರಗಳಲ್ಲಿ ಬಿಜೆಪಿ ಆಳ್ವಿಕೆ ನಡೆಸುತ್ತಿರುವ ಗುಜರಾತ್‌ನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿದೆ ಎಂದು ತೃಣಮೂಲ ಕಾಂಗ್ರೆಸ್ ಹೇಳಿದೆ. ಅಲ್ಲಿ 1939 ಪ್ರಕರಣಗಳು ಹಾಗೂ 71 ಸಾವುಗಳು ಸೇರಿದಂತೆ ದೇಶದಲ್ಲಿ ಮೂರನೇ ಅತಿ ಹೆಚ್ಚು ಕೊರೊನಾ ವೈರಸ್ ಪ್ರಕರಣಗಳಿವೆ.
ಪರಿಸ್ಥಿತಿ ಗಂಭೀರವಾಗಿದೆ ಹಾಗೂ ಲಾಕ್‌ಡೌನ್ ಮಾರ್ಗಸೂಚಿಗಳನ್ನು ಉಲ್ಲಂಘಿಸಲಾಗುತ್ತಿರುವ ಜಿಲ್ಲೆಗಳಿಗೆ ತಂಡಗಳನ್ನು ಕಳುಹಿಸಿದೆ ಎಂದು ಕೇಂದ್ರ ಹೇಳಿಕೊಂಡಿದೆ. ರಾಜ್ಯ ಆಡಳಿತವು ಕೊರೊನಾ ವೈರಸ್ ಪ್ರಕರಣಗಳನ್ನು ಕಡಿಮೆ ವರದಿ ಮಾಡಿದ ಉದಾಹರಣೆಗಳಿವೆ ಎಂದು ಕೇಂದ್ರ ಸರ್ಕಾರ ಆರೋಪಿಸಿ, ನಿರ್ದಿಷ್ಟವಾಗಿ ಬಂಗಾಳವನ್ನು ಉಲ್ಲೇಖಿಸದೆ ನಿಜವಾದ ಸಂಖ್ಯೆಯ ಕೊರೊನಾ ವೈರಸ್ ರೋಗಿಗಳನ್ನು ಮರೆಮಾಡಿದೆ ಎಂದು ಆರೋಪಿಸಲಾಗಿದೆ.
ಗೃಹ ಸಚಿವಾಲಯದ ಆಂತರಿಕ ಮೌಲ್ಯಮಾಪನವು ಬಂಗಾಳದಲ್ಲಿ ಕೊರೊನಾ ವೈರಸ್ ಸಾವಿನ ಸಂಖ್ಯೆ ವರದಿಯಾಗುವುದಕ್ಕಿಂತ ಹೆಚ್ಚಾಗಿದೆ ಎಂದು ಪರಿಗಣಿಸುತ್ತದೆ; ಸಾವಿನ ಕಾರಣವನ್ನು ತಪ್ಪಾಗಿ ವರದಿ ಮಾಡಲಾಗಿದೆಯೆಂದು ಅದು ಹೇಳಿದೆ.
ಲಾಕ್‌ಡೌನ್ ಕ್ರಮಗಳ ಅನುಷ್ಠಾನ, ಅಗತ್ಯ ಸರಕುಗಳ ಪೂರೈಕೆ, ಸಾಮಾಜಿಕ ದೂರ, ಆರೋಗ್ಯ ಮೂಲಸೌಕರ್ಯ, ಆರೋಗ್ಯ ವೃತ್ತಿಪರರ ಸುರಕ್ಷತೆ ಮತ್ತು ಕಾರ್ಮಿಕರು ಮತ್ತು ಬಡ ಕುಟುಂಬಗಳಿಗೆ ಪರಿಹಾರ ಶಿಬಿರಗಳ ಪರಿಸ್ಥಿತಿಗಳ ಕುರಿತು ದೂರುಗಳ ಬಗ್ಗೆ ಅಂತರ್-ಸಚಿವಾಲಯದ ತಂಡಗಳು ಗಮನ ಹರಿಸಲಿವೆ ಎಂದು ಕೇಂದ್ರ ತಿಳಿಸಿದೆ.
ಇದನ್ನೂ ಓದಿ: ಒಡೆದು ಆಳುವವರಿಗೆ ನಮ್ಮ ಬೆಂಬಲ ಇಲ್ಲ: ಪಶ್ಚಿಮ ಬಂಗಾಳ



ಇಂತಹ ವಿಶಮ ಪರಿಸ್ಥಿತಿಯಲ್ಲಿ ರಾಜಕೀಯ ಮಾಡುತ್ತಿರುವ ಕೇಂದ್ರ ಸರ್ಕಾರದ ಕ್ರಮ ಸರಿಯಲ್ಲ.