ಮಹಾರಾಷ್ಟ್ರ ಬಿಜೆಪಿಯ ಮಾಜಿ ಹಿರಿಯ ನಾಯಕ ಏಕನಾಥ್ ಖಡ್ಸೆ ಅವರು ಮತ್ತೆ ಪಕ್ಷಕ್ಕೆ ಮರಳುವ ಊಹಾಪೋಹಗಳಿಗೆ ತೆರೆ ಬಿದ್ದಿದ್ದು, ಈ ಬಗ್ಗೆ ಸ್ವತಃ ಏಕನಾಥ್ ಅವರೇ ಪ್ರತಿಕ್ರಿಯಿಸಿದ್ದಾರೆ. “ತಾನು ಮತ್ತೆ ಪಕ್ಷಕ್ಕೆ ಸೇರಲು ಎಂದಿಗೂ ಉತ್ಸುಕನಾಗಿಲ್ಲ ಮತ್ತು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ತಮ್ಮ ಮರು ಸೇರ್ಪಡೆಗೆ ಅಡ್ಡಿಪಡಿಸಲಿದ್ದಾರೆ” ಎಂದು ಹೇಳಿದ್ದಾರೆ.
ಪ್ರಸ್ತುತ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಜೊತೆಗೆ ಇರುವ ಏಕನಾಥ್ ಖಡ್ಸೆ ಮತ್ತೆ ಬಿಜೆಪಿಗೆ ಮರಳುತ್ತಾರೆ ಎಂಬ ಊಹಾಪೋಹಗಳು ತೀವ್ರಗೊಂಡಿದ್ದವು. ಅವರ ಸೊಸೆ ರಕ್ಷಾ ಖಡ್ಸೆ ಅವರನ್ನು 2024 ರ ಲೋಕಸಭೆ ಚುನಾವಣೆ ಅಭ್ಯರ್ಥಿಯಾಗಿ ಮರುನಾಮಕರಣ ಮಾಡಿ, ಅವರು ಗೆದ್ದ ನಂತರ ಅವರನ್ನು ಕೇಂದ್ರದ ರಾಜ್ಯ ಸಚಿವರನ್ನಾಗಿ ಮಾಡಿದ ನಂತರ ಈ ಬಗ್ಗೆ ಬಿರುಸಿನ ಚರ್ಚೆ ನಡೆದಿದ್ದವು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಅದಾಗ್ಯೂ, ಈ ವರ್ಷದ ಆರಂಭದಲ್ಲಿ ಏಕನಾಥ್ ಖಾಡ್ಸೆ ಅವರು ಬಿಜೆಪಿಗೆ ಸೇರುವ ಇಚ್ಛೆ ವ್ಯಕ್ತಪಡಿಸಿದ್ದರೂ ಅವರ ಮರುಸೇರ್ಪಡೆ ಕುರಿತು ಬಿಜೆಪಿಯಿಂದ ಇನ್ನೂ ಯಾವುದೇ ಘೋಷಣೆಯಾಗಿಲ್ಲ. ಮಂಗಳವಾರ ಪ್ರಾದೇಶಿಕ ಸುದ್ದಿವಾಹಿನಿಯೊಂದರ ಜೊತೆ ಮಾತನಾಡಿದ ಅವರು, ”ನಾನು ಬಿಜೆಪಿ ತೆಕ್ಕೆಗೆ ಮರಳಲು ಉತ್ಸುಕನಾಗಿರಲಿಲ್ಲ, ಆದರೆ ಪಕ್ಷದ ಹಿರಿಯ ನಾಯಕರು ನನ್ನನ್ನು ಒತ್ತಾಯಿಸಿದ್ದರು” ಎಂದು ಹೇಳಿದ್ದಾರೆ.
ಬಿಜೆಪಿ ಸೇರಲು ಯಾರು ಅಡ್ಡಿಯಾಗಬಹುದು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ದೇವೇಂದ್ರ ಫಡ್ನವೀಸ್ ಮತ್ತು ಗಿರೀಶ್ ಮಹಾಜನ್ ತಾನು ಬಿಜೆಪಿಗೆ ಸೇರುವುದಕ್ಕೆ ಅಡ್ಡಿಯಾಗಲಿದ್ದಾರೆ ಎಂದು ಹೇಳಿದ್ದಾರೆ.
2023 ರ ಅಕ್ಟೋಬರ್‌ನಲ್ಲಿ ಬಿಜೆಪಿ ತೊರೆದಿದ್ದ ಏಕನಾಥ್ ಖಾಡ್ಸೆ ಅವರು ಆಗಿನ ಅವಿಭಜಿತ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷಕ್ಕೆ (ಎನ್‌ಸಿಪಿ) ಸೇರಿದ್ದರು. ಈ ವೇಳೆ ಅವರು ಫಡ್ನವೀಸ್ ತಮ್ಮ ರಾಜಕೀಯ ಜೀವನವನ್ನು ನಾಶಪಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.
ಇದನ್ನೂ ಓದಿ: ಅರುಣಾಚಲ ಪ್ರದೇಶ: ಅಂಜಾವ್‌ನಲ್ಲಿ ಭಾರತದ ಭೂಪ್ರದೇಶದೊಳಗೆ ಪ್ರವೇಶಿಸಿದ ಚೀನಾ ಸೈನಿಕರು
ಈ ಬಗ್ಗೆ ಪ್ರತಿಕ್ರಿಯಿಸಿರುವ ಫಡ್ನವಿಸ್ ಅವರ ನಿಕಟವರ್ತಿ ಮಹಾಜನ್ ಅವರು, “ಏಕನಾಥ್ ಖಾಡ್ಸೆ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಎಲ್ಲಾ ಪಕ್ಷಗಳು ಮತ್ತು ಪೋಸ್ಟ್‌ಗಳನ್ನು ಹಂಚಿಕೊಳ್ಳಲು ಬಯಸುತ್ತಾರೆ. ಅವರ ಸೊಸೆ ಕೇಂದ್ರ ಸಚಿವರಾಗಿದ್ದಾರೆ. ಆದರೆ ತಮ್ಮ ಮಗಳನ್ನು ವಿಧಾನಸಭಾ ಚುನಾವಣೆಯಲ್ಲಿ ಎನ್‌ಸಿಪಿ (ಎಸ್‌ಪಿ) ನಿಂದ ಕಣಕ್ಕಿಳಿಸಲು ಉದ್ದೇಶಿಸಿದ್ದಾರೆ. ವಿರೋಧ ಪಕ್ಷ ಎಂವಿಎ ಸರ್ಕಾರ ರಚಿಸಿದರೆ, ಖಡ್ಸೆ ಅವರನ್ನು ಸಚಿವರನ್ನಾಗಿ ಮಾಡಬೇಕೆಂದು ಬಯಸುತ್ತಿದ್ದಾರೆ” ಎಂದು ಹೇಳಿದ್ದಾರೆ.


