ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಉಳ್ಳೇರಹಳ್ಳಿಯಲ್ಲಿ ಗ್ರಾಮದೇವತೆ ಭೂತಮ್ಮನ ಮೆರವಣಿಗೆಯ ವೇಳೆ ದಲಿತ ಬಾಲಕ ದೇವರಿಗೆ ಸಂಬಂಧಿಸಿದ ಗುಜ್ಜಕೋಲನ್ನು ಮುಟ್ಟಿದನೆಂದು ಆರೋಪಿಸಿ ಸವರ್ಣೀಯರು ಸಾಮಾಜಿಕ ಬಹಿಷ್ಕಾರ ಹಾಕಿದ ಘಟನೆ ಚರ್ಚೆಗೆ ಗ್ರಾಸವಾಗಿದೆ. ಇದರ ಬೆನ್ನಲ್ಲೇ ಸಂತ್ರಸ್ತ ಬಾಲಕನ ಕುಟುಂಬವು ತನ್ನ ಮನೆಯಲ್ಲಿದ್ದ ದೇವರ ಫೋಟೋಗಳನ್ನು ತೆರವು ಮಾಡಿದೆ.
ಘಟನೆಯ ಬಳಿಕ ಸ್ಥಳಕ್ಕೆ ಧಾವಿಸಿದ ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ (ಎಎಸ್‌ಎಸ್‌ಕೆ) ಸಂಘಟನೆಯ ಯುವಕರು, ಕುಟುಂಬಕ್ಕೆ ಅರಿವು ಮೂಡಿಸಿದ್ದಾರೆ. “ನಿಮ್ಮ ಮನೆಯಲ್ಲಿ ಇರಬೇಕಾದದ್ದು ಈ ದೇವರ ಫೋಟೋಗಳಲ್ಲ. ನಿಮಗೆ ನ್ಯಾಯ ದೊರಕಿಸಿಕೊಟ್ಟ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಫೋಟೋ” ಎಂದು ಹೇಳಿದ್ದಾರೆ.
ಸಿಮೆಂಟ್ ಕಲ್ಲಿನಿಂದ ನಿರ್ಮಿಸಲಾದ, ಇನ್ನೂ ಕಾಂಕ್ರೀಟ್ ಕಾಣದಿರುವ ಮನೆಯಲ್ಲಿ ಪುಟ್ಟ ಬಾಲಕನೊಂದಿಗೆ ದಂಪತಿ ಶೋಭಾ ಹಾಗೂ ರಮೇಶ್ ವಾಸವಿದ್ದಾರೆ. ಸಂತ್ರಸ್ತ ಬಾಲಕನ ಮನೆಗೆ ತೆರಳಿದ ಸಂಘಟಕರು ಜಾಗೃತಿ ಮೂಡಿಸಿದ್ದಾರೆ.
ಮನೆಯಲ್ಲಿದ್ದ ವೆಂಕಟೇಶ್ವರನ ಫೋಟೋಗಳನ್ನು ತೆಗೆದ ಶೋಭಾ ದಂಪತಿ, ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಭಾವಚಿತ್ರ ಇಟ್ಟಿದ್ದಾರೆ. ಜೊತೆಗೆ ಬುದ್ಧನ ವಿಗ್ರಹವನ್ನು ಪಕ್ಕದಲ್ಲಿ ಇರಿಸಿದ್ದಾರೆ. ಫೋಟೋ ತೆರವಿನ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ಕುಟುಂಬದೊಂದಿಗೆ ಎಎಸ್‌ಎಸ್‌ಕೆಯ ಮುಖಂಡರಾದ ಸಂದೇಶ್ ಮಾತನಾಡಿ, “ರಾಮಕೃಷ್ಣ, ಭೂತಮ್ಮ, ಇನ್ಯಾರೂ ಇಲ್ಲ. ಅಂಬೇಡ್ಕರ್ ಒಬ್ಬರೇ ನಮಗೆ ದೇವರು. ನಿಮಗೆ ನ್ಯಾಯ ಸಿಕ್ಕಿದೆ ಎಂದರೆ ಅಂಬೇಡ್ಕರ್ ಕಾರಣ. ಅವರನ್ನು ಸ್ಮರಿಸಬೇಕು. ಮಕ್ಕಳಿಗೆ ಅವರ ಬಗ್ಗೆ ತಿಳಿಸಿಕೊಡಬೇಕೇ ಹೊರತು ದೇವರುಗಳ ಬಗ್ಗೆ ಅಲ್ಲ” ಎಂದು ತಿಳಿಸಿದ್ದಾರೆ.
“ನಿಮಗೆ ಎಲ್ಲರೂ ಸಹಾಯ ಮಾಡುತ್ತಾರೆ. ಹಾಗೆಂದು ಕಾನೂನು ಮೀರುವ ಕೆಲಸವನ್ನು ನಾವು ಮಾಡಬಾರದು” ಎಂದಿದ್ದಾರೆ.
ದೇವರಿಗೆ ಅಪವಿತ್ರವಾಗಿತೆಂದು ಆರೋಪಿಸಿ ಆ ಬಾಲಕನ ಕುಟುಂಬವನ್ನು ಊರಿನ ಸವರ್ಣೀಯರು ಬಹಿಷ್ಕಾರ ಹಾಕಿದ್ದರು. ಈ ಬಡ ಕುಟುಂಬಕ್ಕೆ ಅರವತ್ತು ಸಾವಿರ ರೂ. ದಂಡವನ್ನೂ ವಿಧಿಸಿದ್ದರು. ಗ್ರಾಮದ ದಲಿತ ಬಾಲಕ ದೇವರ ಮೆರವಣಿಗೆಯ ವೇಳೆ ದೇವರ ಕೋಲನ್ನು ಮುಟ್ಟಿ ಮೈಲಿಗೆ ಮಾಡಿದ್ದಾನೆ ಎಂದು ಆರೋಪಿಸಿ ಹೊಡೆಯಲು ಮುಂದಾಗಿದ್ದರು.
ಅಟ್ರಾಸಿಟಿ ಪ್ರಕರಣ ದಾಖಲು
ಸಾಮಾಜಿಕ ಬಹಿಷ್ಕಾರದ ಸುದ್ದಿ ವೈರಲ್ ಆದ ಬೆನ್ನಲ್ಲೇ ಸ್ಥಳಕ್ಕೆ ಪೊಲೀಸರು ಧಾವಿಸಿದ್ದಾರೆ. ಗ್ರಾಮದ ಸವರ್ಣೀಯ ಸಮುದಾಯಕ್ಕೆ ಸೇರಿದ ಜಿ.ನಾರಾಯಣಸ್ವಾಮಿ ಬಿನ್ ಗೋಪಾಲಪ್ಪ, ಜಿ.ರಮೇಶ್, ಗೋಪಾಲಪ್ಪ, ವೆಂಕಟೇಶಪ್ಪ, ಕೋಟೆಪ್ಪ, ನಾರಾಯಣಸ್ವಾಮಿ, ಚಲಪತಿ, ಮೋಹನ್ ರಾವ್, ಚಿನ್ನಯ್ಯ ವಿರುದ್ಧ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ದೌರ್ಜನ್ಯ ತಡೆಯ ಕಾಯ್ದೆ 1989 ಅಡಿ ಹಾಗೂ ಐಪಿಸಿ ಕಲಂ 143, 147, 148, 149 504, 506 ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.



ಒಳ್ಳೆಯ ಮಾಹಿತಿ ಅಸ್ಪೃಶ್ಯತೆ ಆಚರಣೆ ಮಾಡುವವರಿಗೆ ಕಾನೂನು ರೀತಿಯಲ್ಲೇ ಶಿಕ್ಷೆ ವಿಧಿಸಿದೆ.ಜೈ ಭೀಮ್
But Ambedkar is NOT GOD. So silly
very good message to our society.
congratulations.