ಆಂಬ್ಯುಲೆನ್ಸ್ ಪಡೆಯಲು ಸಾಧ್ಯವಾಗದ ಕಾರಣ ವ್ಯಕ್ತಿಯೊಬ್ಬರು ತನ್ನ 17 ವರ್ಷದ ಮಗಳ ಶವವನ್ನು ಟ್ರಾಲಿ ರಿಕ್ಷಾದಲ್ಲಿ ಸುಮಾರು 7 ಕಿ.ಮೀ. ದೂರದಿಂದ ಮರಣೋತ್ತರ ಪರೀಕ್ಷೆಗಾಗಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಿದ ಹೃದಯ ವಿದ್ರಾವಕ ಘಟನೆ ಒಡಿಶಾದ ಬಾಲಸೋರ್‌ನ ಬಲಿಯಾಪಾಲ್‌ನಲ್ಲಿ ನಡೆದಿದೆ.
ಬಲಿಯಾಪಾಲ್ ಪೊಲೀಸ್ ಠಾಣಾ ವ್ಯಾಪ್ತಿಯ ಡ್ಯೂಲಾ ಗ್ರಾಮದಲ್ಲಿ ಗುರುವಾರ (ಜು.18) ಮಧ್ಯಾಹ್ನ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಅಪ್ರಾಪ್ತ ಬಾಲಕಿ ಆಶಾ ಬಿಂಧಾನಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ವರದಿಯಾಗಿದೆ. ಈ ಬಗ್ಗೆ ಸ್ಥಳೀಯರು ಕೆಲಸಕ್ಕೆ ಹೋಗಿದ್ದ ಆಕೆಯ ತಂದೆ ಮಧು ಬಿಂಧಾನಿ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದರು.
ದಿನಗೂಲಿ ಕಾರ್ಮಿಕ ಮಧು ಸ್ಥಳಕ್ಕೆ ಧಾವಿಸಿ ನೋಡಿದಾಗ ಅವರ ಮಗಳು ಮೃತಪಟ್ಟಿರುವುದು ಕಂಡುಬಂದಿದೆ. ಸ್ವಲ್ಪ ಸಮಯದ ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಬಲಿಯಾಪಾಲ್ ಸಮುದಾಯ ಆರೋಗ್ಯಕ್ಕೆ ಕೊಂಡೊಯ್ಯಲು ಮಧು ಅವರಿಗೆ ಸೂಚಿಸಿದ್ದರು.
ಹಾಗಾಗಿ, ಮಧು ಆಂಬ್ಯುಲೆನ್ಸ್‌ಗೆ ಕರೆ ಮಾಡಿದ್ದರು. ಆದರೆ, ಚಾಲಕ ‘ಮೃತದೇಹ’ವನ್ನು ಸಾಗಿಸಲು 1,200 ರೂಪಾಯಿ ಕೇಳಿದ್ದಾರೆ ಎನ್ನಲಾಗಿದೆ. ಅಷ್ಟು ಹಣ ಹೊಂದಿಸಲು ಸಾಧ್ಯವಾಗದೆ ಹತಾಶೆಗೊಂಡ ಮಧು, ಸರ್ಕಾರದ ಉಚಿತ ಆಂಬ್ಯುಲೆನ್ಸ್ ಸೇವೆಯಾದ 108ಕ್ಕೆ ಕರೆ ಮಾಡಿ ಸಹಾಯ ಕೋರಿದ್ದರು. ಆದರೆ, 108 ಅಂಬ್ಯುಲೆನ್ಸ್‌ನವರು ನಾವು ಶವ ಸಾಗಿಸುವುದಿಲ್ಲ. ತುರ್ತಾಗಿ ಆಸ್ಪತ್ರೆಗೆ ಸೇರಿಸುವ ಸೇವೆಯನ್ನು ಮಾತ್ರ ಒದಗಿಸುತ್ತೇವೆ ಎಂದಿದ್ದಾರೆ.
ಇತ್ತ ಹಣ ಹೊಂದಿಸಲಾಗದೆ, ಅತ್ತ ಬೇರೆ ಆಯ್ಕೆ ಇಲ್ಲದ ಕಾರಣ ಮಧು ಅವರು ಸ್ಥಳೀಯರಲ್ಲಿ ಆರ್ಥಿಕ ಸಹಾಯಕ್ಕಾಗಿ ಮನವಿ ಮಾಡಿದ್ದರು. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಕೊನೆಗೆ, ಸ್ಥಳೀಯ ರಿಕ್ಷಾ ಚಾಲಕರೊಬ್ಬರು ಮಧ್ಯಪ್ರವೇಶಿಸಿ ಶವವನ್ನು ಸಾಗಿಸಲು ತನ್ನ ಮೂರು ಚಕ್ರದ ವಾಹನವನ್ನು ನೀಡಿದ್ದಾರೆ.
ಮಧು ತನ್ನ ಮಗಳ ಶವವನ್ನು ಟ್ರಾಲಿ ರಿಕ್ಷಾದಲ್ಲಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ದರು, ಅಲ್ಲಿ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದರು. ನಂತರ ಅದೇ ರಿಕ್ಷಾದಲ್ಲಿಅಂತಿಮ ವಿಧಿವಿಧಾನಗಳಿಗಾಗಿ ಶವವನ್ನು ಡ್ಯೂಲಾ ಗ್ರಾಮಕ್ಕೆ ತರಲಾಗಿದೆ.
“ನಾನು ಬಡ ದಿನಗೂಲಿ ಕಾರ್ಮಿಕ. ನನ್ನ ಮಗಳ ಶವವನ್ನು ಆಸ್ಪತ್ರೆಗೆ ಕೊಂಡೊಯ್ಯಲು ಆಂಬ್ಯುಲೆನ್ಸ್‌ಗೆ 1,200 ರೂಪಾಯಿ ವ್ಯವಸ್ಥೆ ಮಾಡಲು ನನ್ನಿಂದ ಸಾಧ್ಯವಾಗಲಿಲ್ಲ. ಒಬ್ಬ ದಯಾಳು ವ್ಯಕ್ತಿ ತನ್ನ ಟ್ರಾಲಿ ರಿಕ್ಷಾವನ್ನು ನನಗೆ ಕೊಟ್ಟರು. ನನ್ನ ಮಗಳ ಶವವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ದು, ನಂತರ ಅಂತಿಮ ವಿಧಿವಿಧಾನಗಳಿಗಾಗಿ ಮನೆಗೆ ತೆಗೆದುಕೊಂಡು ಬರಲು ಅದೊಂದೇ ಮಾರ್ಗವಾಗಿತ್ತು” ಎಂದು ಮಧು ಹೇಳಿದ್ದಾಗಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಶುಕ್ರವಾರ, ಮಧು ತನ್ನ ಮಗಳ ಶವವನ್ನು ಟ್ರಾಲಿ ರಿಕ್ಷಾದ ಮೇಲೆ ಇಟ್ಟು ಕೊಂಡೊಯ್ದ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ನಾವು ಸ್ಥಳೀಯ ಪೊಲೀಸರು ಮತ್ತು ಆರೋಗ್ಯ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದೆವು. ಆದರೆ, ಅದು ಸಾಧ್ಯವಾಗಿಲ್ಲ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಹೇಳಿದೆ.
ಅಸ್ಸಾಂ ಸೌರ ಯೋಜನೆ: ಭೂಕಬಳಿಕೆ ಆರೋಪ, ಬಲವಂತದಿಂದ 20,000 ಜನರ ಸ್ಥಳಾಂತರ – ಕೇಂದ್ರದ ಮಧ್ಯಪ್ರವೇಶಕ್ಕೆ ಜಮಿಯತ್ ಕರೆ


