ಸಂಘ ಪರಿವಾರದ ಗರ್ಭಗುಡಿಯ ಪೂಜಾರಿ-ಭಟ್ಟರನ್ನು ಮೆಚ್ಚಿಸುವ ಏಕೈಕ ಉದ್ದೇಶದೊಂದಿಗೆ ಕೆಲಸ ಮಾಡುತ್ತಿರುವ ಬಸವರಾಜ ಬೊಮ್ಮಾಯಿ ಸದ್ಯ ‘ಓಂ’ ಮಿನಿಸ್ಟರ್ ಮಾತ್ರ. ಪೊಲೀಸ್ ಇಲಾಖೆಯಲ್ಲಿ ಮೊದಲಿಂದಲೂ ಬೇರು ಬಿಟ್ಟಿರುವ ಕೆಲವು ಅಧಿಕಾರಿಗಳು ಇದೇ ಸುಸಂದರ್ಭ ಎಂದು ತಮ್ಮ ಹಳೆಯ ಖಾಕಿ ಚೆಡ್ಡಿಗಳನ್ನು ಇಸ್ತ್ರಿ ಮಾಡಿಕೊಂಡು ಧರಿಸುತ್ತಿವೆ. ಮೇಲುಗಡೆ ಇಲಾಖೆಯ ಖಾಕಿ ಪ್ಯಾಂಟು ಅಷ್ಟೇ.
ಇದೆಲ್ಲದರ ಜೊತೆಗೆ ರಾಜ್ಯದಲ್ಲಿ ಹೆಚ್ಚುತ್ತಿರುವ ಸಿಎಎ-ಎನ್‌ಪಿಆರ್ ವಿರುದ್ಧದ ಪ್ರತಿಭಟನೆಗಳನ್ನು ಹತ್ತಿಕ್ಕಲು ಸಂಘ ಪರಿವಾರ ಪೊಲೀಸ್ ಇಲಾಖೆಯ ಮೇಲೆ ಹಿಡಿತ ಸಾಧಿಸುತ್ತಿರುವುದನ್ನು ಕಾಣಬಹುದು. ಹಿಂದೆ ಜಲ ಸಂಪನ್ಮೂಲ ಸಚಿವರಾಗಿ ಸ್ವಂತ ವ್ಯಕ್ತಿತ್ವವನ್ನು ಬಲಿಕೊಡದೇ, ಹಲವು ನೀರಾವರಿ ಯೋಜನೆಗಳನ್ನು ಜಾರಿ ಮಾಡಿದ್ದ ಬಸವರಾಜ ಬೊಮ್ಮಾಯಿ ಈಗ ಸಂಘ ಮತ್ತು ಇಲಾಖೆಯಲ್ಲಿರುವ ಕೆಲವು ಚೆಡ್ಡಿ ವೈರಸ್‌ಗಳ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ.
ಇವತ್ತು ಭಾನುವಾರ ಪ್ರತಿಭಟನಾಕಾರರನ್ನು ಗುರಿಯಾಗಿಸಿಕೊಂಡೇ ಒಂದು ಹೈಲೆವೆಲ್ ಮೀಟಿಂಗ್ ಕರೆದಿದ್ದಾರೆ ಬೊಮ್ಮಾಯಿ ಬಸು. ಹೀಗಾಗಿ ಅವರೀಗ, ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು ‘ದೇಶದ್ರೋಹ’ – ಸೆಡಿಷನ್ ಕಾಯ್ದೆ ಎಂಬ ಜಂಗು ಹಿಡಿದ ಅಸ್ತ್ರದ ಮೊರೆ ಹೋಗಿದ್ದಾರೆ. ಈ ಎಲ್ಲ ಗದ್ದಲದಲ್ಲಿ ತನ್ನ ಸ್ವಂತಿಕೆ ಕಳೆದುಕೊಂಡ ಬೊಮ್ಮಾಯಿ, ಕೆಲವು ಅಂಧ ಭಕ್ತರು ಹಾಕುವ ತಲೆಬುಡವಿಲ್ಲದ ಪೋಸ್ಟ್‌ಗಳ ಸಾರಾಂಶವನ್ನು ಸದನದಲ್ಲೇ ಉದ್ಘರಿಸಿ ಹಾಸ್ಯಾಸ್ಪದರಾಗುತ್ತಿದ್ದಾರೆ.
ಮಂಗಳೂರು ಗಲಭೆಯ ಬಗ್ಗೆ ಸ್ಪಷ್ಟ ನಿಲುವಿಲ್ಲ, ಬಾಂಬ್ ಇಡಲು ಹೋದವನಿಗೆ ಸೆಡಿಷನ್ ಕಾಯ್ದೆ ಅನ್ವಯ ಆಗುವುದಿಲ್ಲ, ಸಾಹಿತ್ಯ ಸಮ್ಮೇಳನಕ್ಕೆ ಪೆಟ್ರೋಲ್ ಬಾಂಬ್ ಹಾಕ್ತೀವಿ ಅಂದವರ ಪತ್ತೆಯಿಲ್ಲ, ಬೀದರ್ ಶಾಲೆಯ ಕೇಸಿನಲ್ಲಿ ಹೈಕೋರ್ಟ್ ಉಗಿದರೂ ಇನ್ನೂ ಬುದ್ಧಿ ಬಂದಿಲ್ಲ. ಸದನದಲ್ಲಿ ಕುಮಾರಸ್ವಾಮಿ ಸಿರಾಜ್ ಕವನ ಓದಿದಾಗ ಬಾಯಿ ಬಿಡಲಿಲ್ಲ. ಈಗ ಅಮೂಲ್ಯ ಎಂಬ ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ!
ತಿರಬೋಕಿಯಂತೆ ಎಲ್ಲೆಲ್ಲೋ ತಿರುಗುತ್ತ ಮುಸ್ಲಿಮರ ವಿರುದ್ಧ ಅಸಹ್ಯಕರ ಪೋಸ್ಟ್ ಹಾಕುತ್ತಿರುವ ಮಧುಗಿರಿ ಮೋದಿ ಎಂಬುವನನ್ನು ಪತ್ತೆ ಮಾಡಲಾಗುತ್ತಿಲ್ಲ. ನಾಲಿಗೆ ಕತ್ತರಿಸ್ತೀವಿ, ಗೌರಿ ಜಾಗಕ್ಕೆ ಕಳಿಸುತ್ತೇವೆ ಎಂದು ಸಾರ್ವಜನಿಕವಾಗಿ ಕೊಲೆ ಬೆದರಿಕೆ ಹಾಕುವವನ ವಿರುದ್ಧ ಪೊಲೀಸ್ ಕ್ರಮವಿಲ್ಲ. ಇದರ ಪರಿಣಾಮವೇ ಗೋಡ್ಸೆ ಆರಾಧಿಸಿದ ವಿಡಿಯೋ ವೈರಲ್ ಮಾಡುವ ಕೆಲವು ಪುಂಡರು, ಸಿಎಎ ವಿರೋಧ ಮಾಡುವವರನ್ನು ಮುಗಿಸ್ತೀವಿ ಎನ್ನುತ್ತಾರೆ, ಹೊಸಪೇಟೆಯಲ್ಲೊಬ್ಬ ಎನ್‌ಕೌಂಟರ್ ಮಾಡ್ತೀನಿ ಎಂದು ಬೊಗಳುತ್ತಾನೆ.
ವೆರ್ ಇಸ್ ಬೊಮ್ಮಾಯಿ? ಇದೆಲ್ಲದರ ತಾತ್ಪರ್ಯವಿಷ್ಟೇ, ‘ಓಂ’ ಮಿನಿಸ್ಟರ್ ಬೊಮ್ಮಾಯಿ ದೇಶದ್ರೋಹ ಕಾಯ್ದೆಯಷ್ಟೇ ಔಟ್‌ಡೇಟೆಡ್! ಬೊಮ್ಮಾಯಿ ಮತ್ತು ಈ ಕಾಯ್ದೆಯನ್ನು ಮಿಸ್‌ಯೂಸ್ ಮಾಡಲಾಗುತ್ತಿದೆ. ಎಂ.ಎನ್. ರಾಯ್ ಅವರ ತತ್ವಗಳನ್ನು ತಕ್ಕ ಮಟ್ಟಿಗೆ ಪಾಲಿಸುತ್ತಿದ್ದ ಎಸ್.ಆರ್ ಬೊಮ್ಮಾಯಿಯವರ ಆತ್ಮ, ಸ್ವಂತಿಕೆ ಅಡಕ್ಕಿಟ್ಟು ಗುಲಾಮಗಿರಿ ಮಾಡುತ್ತಿರುವ ಮಗನ ಪರಿಸ್ಥಿತಿ ನೋಡಿ ವಿಷಾಧಿಸುತ್ತಿರಬೇಕು.
ದೇಶದ್ರೋಹವೆಂಬ ಸಮೂಹಸನ್ನಿ
ಈಗ ದೇಶದಲ್ಲಿ ನಿತ್ಯ ಒಂದಿಲ್ಲೊಂದು ಕಡೆ ದೇಶದ್ರೋಹ ಪ್ರಕರಣಗಳನ್ನು ಪೊಲೀಸರು ದಾಖಲಿಸುತ್ತಿದ್ದಾರೆ. ಈ ಒಂದೂವರೆ ತಿಂಗಳಲ್ಲಿ ಕರ್ನಾಟಕದಲ್ಲೇ ಐದು ದೇಶದ್ರೋಹ ಪ್ರಕರಣಗಳು ದಾಖಲಾಗಿವೆ. ವಿಚಿತ್ರವೆಂದರೆ ಈ ಎಲ್ಲ ಪ್ರಕರಣಗಳ ಆರೋಪಿತರು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಚಳುವಳಿಯಲ್ಲಿ ಭಾಗಿಯಾದವರು ಅಥವಾ ತಮ್ಮ ನೆಲೆಯಲ್ಲಿ ಅದರ ವಿರುದ್ಧ ಧ್ವನಿ ಎತ್ತಿದವರು!
ಈ ದೇಶದ್ರೋಹದ ಸಮೂಹಸನ್ನಿ ಹೀಗೆ ಹರಡುವುದಕ್ಕೂ, ಸಿಎಎ-ಎನ್‌ಆರ್‌ಸಿ-ಎನ್‌ಪಿಆರ್ ವಿರುದ್ಧದ ಚಳುವಳಿಗಳ ವಿರುದ್ಧ ಕೇಂದ್ರ ಮತ್ತು ರಾಜ್ಯ ಸರ್ಕಾರ ಬಿಗಿ ನಿಲುವು ತಾಳಿರುವುದಕ್ಕೂ ಸಂಬಂಧವಿದೆ. ಹೀಗಾಗಿ, ಕೇಂದ್ರ ಸರ್ಕಾರ ಮತ್ತು ಪ್ರಧಾನಿ ವಿರುದ್ಧ ಮಾತಾಡಿದರೆ ಅಥವಾ ಕವನ ಬರೆದರೂ ದೇಶದ್ರೋಹದ ಪ್ರಕರಣ ದಾಖಲಾಗಿವೆ. ಫ್ರೀ ಕಾಶ್ಮೀರ್, ಅಸ್ಪೃಶ್ಯತಾ ಮುಕ್ತಿ ಎಂಬ ಭಿತ್ತಿಪತ್ರ ಹಿಡಿದವರ ವಿರುದ್ಧವೂ ದೇಶದ್ರೋಹ ಪ್ರಕರಣ ದಾಖಲು ಮಾಡಲಾಗಿದೆ. ಇದೆಲ್ಲಕ್ಕಿಂತ ಹೆಚ್ಚು ಸುದ್ದಿಯಾಗಿರುವುದು ಅಮೂಲ್ಯ ಎಂಬ ಯುವತಿ ಪಾಕಿಸ್ತಾನ್ ಜಿಂದಾಬಾದ್ ಎಂದಳು ಎಂಬುದು.
ದೇಶದ್ರೋಹ ಕಾನೂನು ಬ್ರಿಟಿಷ್ ಕಾಲದ ವಸಾಹತುಶಾಹಿ ಕಾನೂನು. ಪ್ರಜಾಪ್ರಭುತ್ವದಲ್ಲಿ ಅದು ಅಪ್ರಸ್ತುತ ಎಂದು ಸುಪ್ರೀಂಕೋರ್ಟ್, ಕನ್ನಯ್ಯ ಕುಮಾರ ಪ್ರಕರಣದಿಂದ ಇಲ್ಲಿವರೆಗೆ ಹಲವು ಸಲ ಹೇಳಿದೆ. ಸಂಸತ್ತು ಇಂತಹ ವಸಾಹತುಶಾಹಿ ಕಾನೂನುಗಳನ್ನೆಲ್ಲ ರದ್ದು ಮಾಡಬೇಕೆಂದು ಹಲವು ಸಲ ಸೂಚಿಸಿದೆ. ಆದರೆ ಯಾವ ಸರ್ಕಾರವೂ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.
ಪ್ರಶ್ನೆ ಮಾಡುವುದು, ಟೀಕಿಸುವುದು, ಅಧಿಕಾರಸ್ಥರ ತಪ್ಪನ್ನು ಎತ್ತಿ ತೋರಿಸುವುದು ಆರೋಗ್ಯಕರ ಪ್ರಜಾಪ್ರಭುತ್ವದ ಲಕ್ಷಣಗಳು. ದೇಶದ್ರೋಹ ಕಾನೂನನ್ನು ಈಗಿನ ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇಲ್ಲಿವರೆಗೆ, ಅದು ಭಯೋತ್ಪಾದಕರನ್ನು ಹೊರತುಪಡಿಸಿ ಬೇರೆಯವರ ಮೇಲೆ ಹೂಡಿದ ದೇಶದ್ರೋಹ ಪ್ರಕರಣಗಳಲ್ಲಿ ಒಬ್ಬರಿಗೂ ಶಿಕ್ಷೆ ಆಗಿಲ್ಲ.
ಇದನ್ನೂ ಓದಿ: ಪ್ರಜಾಪೀಡನೆಗೆ ಕಾನೂನಿನ ಬಳಕೆಯೆ?
ಇತ್ತೀಚೆಗಷ್ಟೇ ಕರ್ನಾಟಕ ಸರ್ಕಾರ ಬೀದರ್‌ನ ಶಾಲೆಯೊಂದರ ಮಕ್ಕಳ ನಾಟಕದ ಸಂಭಾಷಣೆ ಆಧರಿಸಿ ಶಾಲೆಯ ಶಿಕ್ಷಕಿ ಮತ್ತು ಪಾತ್ರಧಾರಿ ವಿದ್ಯಾರ್ಥಿನಿಯ ತಾಯಿಯನ್ನು 20 ದಿನ ಜೈಲಿಗೆ ದೂಡಿತ್ತು. ಅವರಿಗೆ ಜಾಮೀನು ನೀಡಿದ ಹೈಕೋರ್ಟ್, ಸರ್ಕಾರದ ಈ ಹುಚ್ಚು ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ. ಫ್ರೀ ಕಾಶ್ಮೀರ್ ಭಿತ್ತಿಪತ್ರ ಹಿಡಿದ, ಸಿಎಎಎ ವಿರೋಧಿ ಕವನ ಬರೆದ ವ್ಯಕ್ತಿಗಳಿಗೆ ಕೋರ್ಟುಗಳು ಯಾವುದೇ ತಕರಾರು ಇಲ್ಲದೇ ಜಾಮೀನು ನೀಡಿವೆ.
ಈಗ ಅಮೂಲ್ಯ ಮುಂದೆ ಏನು ಹೇಳಲಿದ್ದಳು ಎಂಬುದರ ಬಗ್ಗೆ ಯೋಚಿಸದೇ ದೇಶದ್ರೋಹ ಕೇಸು ಹಾಕಲಾಗಿದೆ. ಈ ಪ್ರಕರಣದಲ್ಲೂ ಸರ್ಕಾರಕ್ಕೆ ಮುಖಭಂಗವಾಗುವ ಎಲ್ಲ ಲಕ್ಷಣಗಳಿವೆ. ಯಾವುದೋ ಒಂದು ದೇಶದ ಪರ ಜೈಕಾರ ಹಾಕಿದರೆ, ಭಾರತದ ವಿರುದ್ಧ ಎಂದರ್ಥವಲ್ಲ. ಅಷ್ಟಕ್ಕೂ ಪಾಕಿಸ್ತಾನವನ್ನು ಶತ್ರುರಾಷ್ಟ್ರ ಎಂದು ಅಧಿಕೃತವಾಗಿ ಘೋಷಿಸಿಲ್ಲ, ಘೋಷಿಸಲು ಬರುವುದೂ ಇಲ್ಲ. ನಿತ್ಯ ಆ ದೇಶದೊಂದಿಗೆ ಸಾವಿರಾರು ಕೋಟಿಗಳ ವಾಣಿಜ್ಯ ವ್ಯವಹಾರ ನಡೆಯುತ್ತಿದೆ.
ದೇಶದ ವಿರುದ್ಧ ಸಂಚು ರೂಪಿಸಿ, ಆ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿದ್ದರೆ ಮಾತ್ರ ಅದು ದೇಶದ್ರೋಹ ಆಗುತ್ತದೆ ಎಂದು ಸುಪ್ರೀಂಕೋರ್ಟ್ ಹೇಳಿರುವುದನ್ನು ನಮ್ಮ ಸರ್ಕಾರಗಳು ಅರ್ಥ ಮಾಡಿಕೊಂಡರಷ್ಟೇ ಈ ಸಮೂಹ ಸನ್ನಿಯಿಂದ ಹೊರಬರಬಹುದು. ಆದರೆ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಮತ್ತು ತಮ್ಮ ವಿರುದ್ಧದ ಧ್ವನಿಗಳನ್ನು ಹತ್ತಿಕ್ಕಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಈ ದೇಶದ್ರೋಹ ಎನ್ನವುದು ತಾತ್ಕಾಲಿಕ ಅಸ್ತ್ರವಾಗಿರುವುದು ಇವತ್ತಿನ ದೊಡ್ಡ ದುರಂತ.
(ಲೇಖಕರು ಪತ್ರಕರ್ತರು, ಇದರಲ್ಲಿನ ಅಭಿಪ್ರಾಯಗಳು ಅವರ ವೈಯಕ್ತಿಕವಾದವು)