Homeಅಂತರಾಷ್ಟ್ರೀಯಇಂಟರ್‍‍ನ್ಯಾಶನಲ್ ಫೋಕಸ್; ಇಥಿಯೋಪಿಯಾ: ನೊಬೆಲ್ ಶಾಂತಿ ಪ್ರಶಸ್ತಿಯ ಇನ್ನೊಂದು ಯುದ್ಧ

ಇಂಟರ್‍‍ನ್ಯಾಶನಲ್ ಫೋಕಸ್; ಇಥಿಯೋಪಿಯಾ: ನೊಬೆಲ್ ಶಾಂತಿ ಪ್ರಶಸ್ತಿಯ ಇನ್ನೊಂದು ಯುದ್ಧ

- Advertisement -
- Advertisement -

2019ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಇಥಿಯೋಪಿಯಾದ ಪ್ರಧಾನಿ ಆಬಿ ಅಹ್ಮದ್‍ಗೆ ಘೋಷಿಸಿದಾಗ ನೊಬೆಲ್ ಪ್ರಶಸ್ತಿ ಸಮಿತಿಯು “ಶಾಂತಿ ಮತ್ತು ಅಂತರರಾಷ್ಟ್ರೀಯ ಸಹಕಾರವನ್ನು ಸಾಧಿಸುವ ಅವರ  ಪ್ರಯತ್ನಗಳಿಗಾಗಿ ಮತ್ತು ನಿರ್ದಿಷ್ಟವಾಗಿ ನೆರೆಯ ಎರಿಟ್ರಿಯಾದೊಂದಿಗಿನ ಗಡಿ ಸಂಘರ್ಷವನ್ನು ಪರಿಹರಿಸುವ ಅವರ ನಿರ್ಣಾಯಕ ಪಾತ್ರಕ್ಕಾಗಿ  ಮತ್ತು ಪೂರ್ವ ಮತ್ತು ಈಶಾನ್ಯ ಆಫ್ರಿಕಾದ ಪ್ರದೇಶಗಳಲ್ಲಿ ಶಾಂತಿ ಮತ್ತು ಸಾಮರಸ್ಯಕ್ಕಾಗಿ ಕೆಲಸ ಮಾಡುವ ಎಲ್ಲ ಪಾಲುದಾರರನ್ನು ಗುರುತಿಸಲಿ ಈ ಬಹುಮಾನವನ್ನು ನೀಡಲಾಗಿದೆ” ಎಂದು ಪ್ರಕಟಿಸಿತ್ತು. ಆದರೆ ಇಂದು ಅದೇ ಅಬಿ ಅಹ್ಮದ್  ಉತ್ತರದ ಎರಿಟ್ರಿಯಾ ಮತ್ತು ಸೂಡಾನ್ ದೇಶದ  ಗಡಿ  ಪ್ರದೇಶಕ್ಕೆ ಹೊಂದಿಕೊಂಡಿರುವ ತಮ್ಮದೇ ದೇಶದ  ಟಿಗ್ರೆಯ್ ಪ್ರದೇಶದ ಮೇಲೆ ಯುದ್ಧ ಸಾರಿದ್ದಾರೆ. ಅಲ್ಲಿನ ಅಲ್ಪಸಂಖ್ಯಾತ  ಟಿಗ್ರೆಯ್ ಜನತೆಯ ಮೇಲೆ  ಸಾಮೂಹಿಕ ನರಹತ್ಯೆ ಮತ್ತು ಯುದ್ಧಾಪರಾಧದಂತಹ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ. ಆಫ್ರಿಕಾದ ಎರಡನೆ ಅತಿ ದೊಡ್ಡ ಜನಸಂಖ್ಯೆಯುಳ್ಳ ಇಥಿಯೋಪಿಯಾ (ಹನ್ನೊಂದು ಕೋಟಿಗೂ ಮೇಲೆ) ಆಂತರಿಕ ಯುದ್ಧ ಸೇರಿದಂತೆ ತನ್ನ ಸುತ್ತ ಮುತ್ತಲಿನ ದೇಶಗಳ ಪ್ರಾದೇಶಿಕ ಅಸ್ಥಿರತೆಗೆ ದಾರಿಮಾಡಿಕೊಡುತ್ತಿದೆ.

ಇಥಿಯೋಪಿಯಾ ಆಫ್ರಿಕಾ ಖಂಡದ ಎರಡನೆ ಅತಿ ದೊಡ್ಡ ಜನಸಂಖ್ಯೆಯುಳ್ಳ ರಾಷ್ಟ್ರ. ಇದು ಜಾಗತಿಕ ರಾಜಕೀಯದಲ್ಲಿ ವ್ಯಾಪಾರ ವಹಿವಾಟುಗಳಿಗೆ ‘ಹಾರ್ನ್ ಆ ಆಫ್ರಿಕಾ’ ಎಂದು ಕರೆಯಲ್ಪಡುವ ಪ್ರದೇಶ. ಆಫ್ರಿಕಾ ಖಂಡದ ಮುಖ್ಯದ್ವಾರ ಎಂದು ಪರಿಗಣಿಸಲ್ಪಡುತ್ತದೆ. ಜನಸಂಖ್ಯೆ 80ಕ್ಕಿಂತಲೂ ಹೆಚ್ಚು ಬುಡಕಟ್ಟು ಗುಂಪುಗಳಿಂದ ಕೂಡಿದೆ. ಎಲ್ಲ ಗುಂಪುಗಳೂ ತಮ್ಮದೇ ಆದ ಸಂಸ್ಕೃತಿ, ಭಾಷೆ ಅಥವಾ ಉಪಭಾಷೆಗಳ ವೈವಿಧ್ಯತೆಯನ್ನು ಹೊಂದಿದೆ. ಇವುಗಳಲ್ಲಿ ಮೂರು ಗುಂಪುಗಳು ಪ್ರಾಬಲ್ಯ ಹೊಂದಿವೆ: ಒರೊಮೊ (ಜನಸಂಖ್ಯೆ 35%), ಅಮ್ಹರಾ (27%) ಮತ್ತು ಟಿಗ್ರೆಯನ್ (6%). ಈ ಪ್ರಬಲ ಗುಂಪುಗಳ ನಡುವೆ ಭೂಮಿ ಒಡೆತನ ಮತ್ತು ಬಲ ಪ್ರದರ್ಶದ ಬಗ್ಗೆ ಐತಿಹಾಸಿಕ ವಿವಾದಗಳಿವೆ.

ಇಥಿಯೋಪಿಯಾದ  ರಾಜಕೀಯದಲ್ಲಿ ಬಹುವರ್ಷ ಅಗೋಚರವಾಗಿದ್ದವರು  ಆಬಿ ಅಹ್ಮದ್.  ಯಾವುದೇ ರಾಜಕೀಯ ಹಿನ್ನೆಲೆಯಿಲ್ಲದೆ, ಯಾವುದೇ ಚುನಾವಣೆ ಗೆಲ್ಲದೇ ದೇಶದ ಅತ್ತ್ಯುನ್ನತ ಸ್ಥಾನವಾದ ಪ್ರಧಾನಿ ಹುದ್ದೆಗೆ 2018ರಲ್ಲಿ ಏರಿದರು. ದೇಶದ ಬೇಹುಗಾರಿಕೆ ಸಂಸ್ಥೆಯಲ್ಲಿ ಉನ್ನತದ ಸ್ಥಾನದಲ್ಲಿ ಕೆಲಸ ಮಾಡಿದ ಹಿನ್ನೆಲೆಯಿರುವ ಆಬಿ ಅಹ್ಮದ್ ಪ್ರಧಾನಿಯಾಗಿದ್ದ ಅವಧಿಯ ಒಂದು ವರ್ಷದಲ್ಲಿಯೇ  ದಶಕಗಳ ಎರಿಟ್ರಿಯಾ ಗಡಿಯ ಸಂಘರ್ಷವನ್ನು ಕೊನೆಗಳಿಸಿದ್ದೇವೆ ಎಂದು ಘೋಷಿಸಿಕೊಂಡಿದ್ದರು. ಎರಿಟ್ರಿಯ ಪ್ರಧಾನಿ ಇಸಾಯಾಸ್ ಅಫ್ವೆರ್ಕಿಯನ್ನು  ಇಥಿಯೋಪಿಯದ ರಾಜಧಾನಿ  ಅಡಿಸ್ ಅಬಾಬಾಗೆ ಕರೆಸಿ ಶಾಂತಿ ಒಪ್ಪಂದವನ್ನು ಮಾಡಿಕೊಂಡಿದ್ದರು. ಅದಕ್ಕಾಗಿ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ 2019ರಲ್ಲಿ ಲಭಿಸಿತ್ತು. ಆದರೆ ಗಡಿಯಲ್ಲಿ ನಡೆದ ದಶಕಗಳ ಕಾಲದ ಯುದ್ಧದಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ಜನರನ್ನು ಕಳೆದುಕೊಂಡಿದ್ದ ಟಿಗ್ರೇಯ್ ಅಲ್ಪಸಂಖ್ಯಾತ ಸಮುದಾಯದ “ಟಿಗ್ರೇಯ್ ಪೀಪಲ್ಸ್ ಲಿಬರೇಶನ್ ಫ್ರಂಟ್” (ಟಿಪಿಎಲ್ಎಫ್) ಇದನ್ನು ವಿರೋಧಿಸಿತ್ತು ಮತ್ತು ಈ ಒಪ್ಪಂದದಲ್ಲಿ ತಮ್ಮನ್ನು ಗಣನೆಗೆ ತೆಗೆದುಕೊಂಡಿಲ್ಲವೆಂದು ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿತ್ತು. ಶಾಂತಿ ಒಪ್ಪಂದದ ಪ್ರಕಾರ ಆದ ಇತ್ಯರ್ಥದ ಯಾವುದೇ ವಿವರಗಳನ್ನು ಇದುವರೆಗೆ ಪ್ರಕಟಿಸಲಾಗಿಲ್ಲ. ವಾಸ್ತವವಾಗಿ ಹೇಳುವುದಾದರೆ, ಟಿಗ್ರೇಯ್ ಮತ್ತು ಎರಿಟ್ರಿಯಾದ ಜನರು (ಇಬ್ಬರದ್ದು ಮೂಲ ಟಿಗ್ರೇಯ್ ಜನಾಂಗ ಮತ್ತು ಸಾಮಾನ್ಯ ಕುಟುಂಬ ಸಂತತಿಯನ್ನು ಹಂಚಿಕೊಳ್ಳುತ್ತಾರೆ) ಸಂಬಂಧಗಳಲ್ಲಿ ಯಾವುದೇ ಸಾಮಾನ್ಯೀಕರಣವನ್ನು ಕಂಡುಕೊಂಡಿಲ್ಲ. ಗಡಿ ಈಗಲೂ ಮುಚ್ಚಲ್ಪಟ್ಟಿದೆ ಮತ್ತು ಕುಟುಂಬಗಳು ಪರಸ್ಪರ ಭೇಟಿ ಮಾಡಲು ಸಾಧ್ಯವಾಗದಂತೆ ಪ್ರಯಾಣವನ್ನು ನಿರ್ಬಂಧಿಸಲಾಗಿದೆ.

ವಿವಿಧ ಬುಡಕಟ್ಟುಗಳು ಮತ್ತು ಪಕ್ಷಗಳ ಮೈತ್ರಿಯಿಂದ  ಸಮಿಶ್ರ ಸರ್ಕಾರ ನಿರ್ಮಾಣವಾಗಿತ್ತು. ಇದರಿಂದ ಪ್ರಧಾನಿಯಾದ ಆಬಿ  ಕಳೆದ ವರ್ಷ ಇಥಿಯೋಪಿಯನ್ ಪೀಪಲ್ಸ್ ರೆವಲ್ಯೂಷನರಿ ಡೆಮಾಕ್ರಟಿಕ್ ಫ್ರಂಟ್ (ಇಪಿಆರ್ಡಿಎಫ್) ಎಂದು ಕರೆಯಲ್ಪಡುವ ಒಕ್ಕೂಟವನ್ನು ವಿಸರ್ಜಿಸಿ ತಮ್ಮ ನಾಯಕತ್ವದಲ್ಲಿ “ಸಮೃದ್ಧಿ ಪಕ್ಷ”ವನ್ನು ರಚಿಸಿದರು. ಟಿಗ್ರೇಯ್ ಬಣವು ಈ  ಹೊಸ ಏಕೀಕೃತ ಪಕ್ಷಕ್ಕೆ ಸೇರಲು ನಿರಾಕರಿಸಿತು. ನಂತರ ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಆಬಿ ಈ ವರ್ಷದ ಚುನಾವಣೆಯನ್ನು ರದ್ದುಗೊಳಿಸಿದರು. ಟಿಪಿಎಲ್ಎಫ್ ಇದು ಸರ್ವಾಧಿಕಾರ ಎಂದು ದೂರಿ ಕಳೆದ ಸೆಪ್ಟೆಂಬರ್ನಲ್ಲಿ ತನ್ನ ಯೋಜಿತ ಪ್ರಾದೇಶಿಕ ಚುನಾವಣೆಗಳನ್ನು ನೆಡೆಸಿತು..

ನಂತರ ಆಬಿ ವಿರುದ್ಧ ತನ್ನ ಕಾರ್ಯಾಚರಣೆಯನ್ನು ಟಿಪಿಎಲ್ಎಫ್ ಆರಂಭಿಸುತ್ತದೆ. ಇದರ ಮುಂದುವರೆದ ಭಾಗವಾಗಿ ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿ ಶಸ್ತ್ರಸಜ್ಜಿತ ಟಿಪಿಎಲ್ಎಫ್ ಮತ್ತು ಸರ್ಕಾರದ ಭದ್ರತಾ ಪಡೆಗಳ ಮಧ್ಯೆ ಎರಡು ವಾರಗಳ ಕಾಲ ಅಂತರ್ಯುದ್ಧ ನೆಡೆದು ಸರ್ಕಾರಿ ಪಡೆಗಳು ವಿಜಯ ಘೋಷಿಸಿಕೊಂಡಿದ್ದವು.  ಆದರೆ ನಂತರದ ಬೆಳೆವಣಿಗೆಗಳು ಕಳವಳಕಾರಿಯಾಗಿದೆ. ಸರ್ಕಾರಿ ಪಡೆಗಳ ಕ್ರೌರ್ಯದ ಹಿನ್ನೆಲೆಯಲ್ಲಿ ಅಲ್ಲಿನ ವಿವಿಧ ಸ್ಥಳೀಯ ಬುಡಕಟ್ಟು ಸಮುದಾಯಗಳು ಪರಸ್ಪರವಾಗಿ ಮತ್ತು ಸರ್ಕಾರೀ ಪಡೆಗಳ ವಿರುದ್ಧ ಯುದ್ಧ ಘೋಷಿಸಿವೆ. ಅಚ್ಚರಿಯ ಸಂಗತಿಯಲ್ಲಿ ಇಥಿಯೋಪಿಯನ್ ಸರ್ಕಾರವು ಈಗ ಉತ್ತರ ಟಿಗ್ರೇಯ್ ಪ್ರದೇಶದಲ್ಲಿ ತನ್ನದೇ ಜನರ ವಿರುದ್ಧ ಯುದ್ಧ ಮಾಡಲು ಎರಿಟ್ರಿಯಾದೊಂದಿಗೆ ಕೈ ಜೋಡಿಸಿದೆ.  ಟಿಪಿಎಲ್ಎಫ್ ಮತ್ತು ಬೆಂಬಲಿತ ಸಂಘಟನೆಗಳು ಇಥಿಯೋಪಿಯನ್ ಸರ್ಕಾರ ತಮ್ಮ ವಿರುದ್ಧ ಜನಾಂಗೀಯ ನಿರ್ನಾಮ ಕಾರ್ಯತಂತ್ರಗಳನ್ನು ಅನುಸರಿಸುತ್ತಿದೆ ಎಂದು ಆರೋಪಿಸುತ್ತಿವೆ. ಜೊತೆಗೆ ಸಿ.ಎನ್.ಎನೆನ್ ಮತ್ತು ಬಿ.ಬಿ.ಸಿ ಸುದ್ದಿವಾಹಿನಿಗಳು, ೩೦ ಮಂದಿ ಟಿಗ್ರೇಯ್  ಯುವಕರನ್ನು ಸರ್ಕಾರಿ ಪಡೆಗಳು  ಗುಂಡಿಟ್ಟು ಕೊಲ್ಲುವ ತನಿಖಾ ವರದಿಯನ್ನು ಬಿತ್ತರಿಸುತ್ತಿವೆ. ಸರ್ಕಾರಿ ವಾಯುಪಡೆಗಳು ತನ್ನದೇ ದೇಶದ ಪ್ರಜೆಗಳ ವಿರುದ್ಧ ನಿರಂತರ ವಾಯುದಾಳಿ ನಡೆಸುತ್ತಿದೆ. ಸರ್ಕಾರಿ ಸೇನಾ ಪಡೆಗಳಿಂದ ನಿರಂತರ ದಾಳಿ, ಆಸ್ತಿ-ಪಾಸ್ತಿ ಹಾನಿ,  ಮಹಿಳೆ ಮತ್ತು ಮಕ್ಕಳ ಮೇಲೆ ಅತ್ಯಾಚಾರಗಳ ಬಗ್ಗೆ ಅಂತಾರಾಷ್ಟ್ರೀಯ ಸುದ್ದಿವಾಹಿನಿಗಳು ವರದಿ ಮಾಡುತ್ತಿವೆ.

ಇಥಿಯೋಪಿಯಾದ ಪ್ರಧಾನಿ ಆಬಿ ಅಹ್ಮದ್ ಶಾಂತಿ ಮಾತುಕತೆಗಾಗಿ ವಿಶ್ವಸಂಸ್ಥೆ ಸಲ್ಲಿಸಿದ ಮನವಿಯನ್ನು ನಿರಾಕರಿಸಿದ್ದಾರೆ. ಟಿಪಿಎಲ್ಎಫ್ ದೇಶದ್ರೋಹ ಮತ್ತು ಭಯೋತ್ಪಾದನೆ ನೆಡೆಸುತ್ತಿದೆ ಎಂದು  ಆರೋಪಿಸಿದ್ದಾರೆ ಮತ್ತು 50  ಲಕ್ಷ ಜನಬಿಡಿತ ಪ್ರದೇಶದ ಮೇಲೆ ಅವರು ನೆಡೆಸುತ್ತಿರುವ  ಆಕ್ರಮಣವನ್ನು “ಕಾನೂನು ಮತ್ತು ಸುವ್ಯವಸ್ಥೆ ಕಾರ್ಯಾಚರಣೆ” ಎಂದು ಕರೆಯುತ್ತಿದ್ದಾರೆ. ಆಬಿ ಅಧಿಕಾರಕ್ಕೆ ಬಂದಾಗಿನಿಂದ, ಇಥಿಯೋಪಿಯಾದಲ್ಲಿ ಅನೇಕ ಜನಾಂಗೀಯ ಗುಂಪುಗಳ ನಡುವೆ ಪ್ರಕ್ಷುಬ್ಧ ಮತ್ತು ಹಿಂಸಾತ್ಮಕ ಘರ್ಷಣೆ ಹೆಚ್ಚಾಗಿದೆ. ಪಾಶ್ಚಾತ್ಯ ಮಾಧ್ಯಮಗಳು “ಸುಧಾರಣೆಗಳ” ವ್ಯಕ್ತಿವಾದದ ನೆರಳಿನಲ್ಲಿ ಪ್ರಧಾನಿ ಆಬಿಯನ್ನು  ಕೊಂಡಾಡುತ್ತವೆ. ಆಂತರಿಕ ಬಿಕ್ಕಟನ್ನು ನಿವಾರಿಸುವ ಈ “ಸುಧಾರಣೆಗಳ” ಕ್ರಮಗಳು ಏಕೆ ಅಲ್ಲಿನ ಬಿಕ್ಕಟ್ಟನ್ನು ಇನ್ನೂ ತೀವ್ರಗೊಳಿಸುತ್ತಿವೆ ಎಂದು ವಿವರಿಸಲು ಅವು ಹೋಗುವುದಿಲ್ಲ. ಈವರೆಗೂ ಸರ್ಕಾರಿ ಪಡೆಗಳ ಮೇಲಿನ ದಾಳಿಯನ್ನು “ಸಮರ್ಥನೀಯವಲ್ಲ” ಎಂದು ಅಮೆರಿಕ  ಖಂಡಿಸಿದ್ದರೂ ಟಿಗ್ರೇಯ್ ಮೇಲಿನ ಸರ್ಕಾರಿ ನಿಯೋಜಿತ ಕ್ರೌರ್ಯವನ್ನು ಈವರೆಗೂ ಖಂಡಿಸಿಲ್ಲ. ಯೆಮೆನ್ ಯುದ್ಧದಲ್ಲಿ ಭಾಗಿಯಾಗಿರುವ ಯುನೈಟೆಡ್ ಅರಬ್ ಎಮಿರೇಟ್ಸ್ ಡ್ರೋನ್‍ಗಳನ್ನು ಈಗ ಟಿಗ್ರೇಯ್ ವಿರುದ್ಧದ ಯುದ್ಧದಲ್ಲಿ ಬಳಸಲಾಗುತ್ತಿದೆ. ಜಾನಾಂಗಿಯ ನರಹತ್ಯೆಯನ್ನು ಗ್ರಹಿಸಿ ಎಚ್ಚರಿಸುವ ಜಿನೊಸೈಡ್ ವಾಚ್  ಎಂಬ ಸಂಸ್ಥೆ ಇದನ್ನು ದೃಢಪಡಿಸಿದ್ದು, “ಓರೊಮೊ, ಅಮ್ಹರಾ, ಟಿಗ್ರೇಯಾನ್ ಮತ್ತು ಗೆಡಿಯೊ ಜನರ ನಡುವಿನ ಜನಾಂಗೀಯ ಪ್ರೇರಿತ ಹಿಂಸಾಚಾರಕ್ಕೆ ಸರ್ಕಾರದ ನಿಷ್ಕ್ರಿಯತೆಯೇ ಕಾರಣ” ಎಂದು ಹೇಳಿಕೆ ನೀಡಿದೆ.

ಈ ಘರ್ಷಣೆ/ಯುದ್ಧ ಸೂಡಾನ್ ದೇಶಕ್ಕೂ ವಿಸ್ತರಿಸಲಿದೆ. ಜಾಗತಿಕ ಆರ್ಥಿಕತೆಗೆ ಗಣಿಯಾಗಿರುವ ಆಫ್ರಿಕಾ ಖಂಡದ ಹೆಬ್ಬಾಗಿಲು ಎಂದು ಕರೆಯೆಲ್ಪಡುವ ಇಥಿಯೋಪಿಯ ಇಂದು ಭೌಗೋಳಿಕ ಆರ್ಥಿಕ ಹಿಡಿತಕ್ಕಾಗಿ ಯುದ್ಧದಲ್ಲಿ ಮುಳುಗುತ್ತಿದೆ. ಇಷ್ಟೆಲ್ಲ ದೌರ್ಜನ್ಯ-ನರಮೇಧದ ಆರೋಪಗಳ ನಡುವೆಯೂ ಶಾಂತಿ ನೊಬೆಲ್ ಪುರಸ್ಕೃತ ಪ್ರಧಾನಿಯ ಮೌನ ಮತ್ತು ಆ ಶಾಂತಿ ಪ್ರಶಸ್ತಿಯನ್ನು ಕೊಟ್ಟ ನೊಬೆಲ್ ಸಂಸ್ಥೆಗೆ ಮೌನವಾಗಿದ್ದಾರೆ. ಹಾಗೆ ನೋಡಿದರೆ ಇವರಿಗೂ ಮುಂಚೆ ನೊಬೆಲ್ ಶಾಂತಿ ಪ್ರಶಸ್ತಿ ಇಬ್ಬರು ಯುದ್ಧಕೋರರಿಗೆ ನೀಡಲಾಗಿದೆ. ಲಾವೋಸ್, ಕಾಂಬೋಡಿಯಾ, ವಿಯೆಟ್ನಾಂ ಮೇಲೆ ದಾಖಲೆ ಪ್ರಮಾಣದಲ್ಲಿ ಬಾಂಬುಗಳನ್ನು ಸುರಿಸಿದ ಹೆನ್ರಿ ಕಿಸ್ಸಿಂಗರ್ ಮತ್ತು ಏಳು ರಾಷ್ಟ್ರಗಳ ಮೇಲೆ ಬಾಂಬ್‍ಗಳ ಸುರಿಮಳೆಗೈದ ಬರಾಕ್ ಒಬಾಮ ಅವರಿಗೆ. ಬಿಳಿಯರಿಗೆ ಮೀಸಲಿದ್ದ ಕೆಲವು ಕುಖ್ಯಾತ ನೊಬೆಲ್‍ಗಳು ಇಂದು  ವಸಾಹುತು ವಿಸ್ತರಣವಾದದಿಂದ ಬಡ ರಾಷ್ಟ್ರಗಳ ನಾಯಕರುಗಳಿಗೂ ವಿಸ್ತರಿಸುತ್ತಿದೆ.

– ಭರತ್ ಹೆಬ್ಬಾಳ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...