Homeಪುಸ್ತಕ ವಿಮರ್ಶೆಪ್ರೊ. ಕಾರ್ಲೋಸರ ‘ಶಂಬಾಲ’ ಎಂಬ ರಾಜಕೀಯ ಕಾದಂಬರಿ

ಪ್ರೊ. ಕಾರ್ಲೋಸರ ‘ಶಂಬಾಲ’ ಎಂಬ ರಾಜಕೀಯ ಕಾದಂಬರಿ

- Advertisement -
- Advertisement -

ಸಮಕಾಲೀನ ವಸ್ತುವನ್ನು ತೆಗೆದುಕೊಂಡು ಕಥೆ ಕಾದಂಬರಿ ಬರೆಯುವುದು ಅತ್ಯಂತ ಪ್ರಯಾಸದ ಕೆಲಸ. ಆದರೆ ಪ್ರೊ.ಕಾರ್ಲೋಸರು ಅಂತಹ ಸಾಹಸಕ್ಕೆ ಕೈಹಾಕಿ ಅದನ್ನು ಅತ್ಯಂತ ಸಮರ್ಪಕವಾಗಿ ನಿರ್ವಹಿಸಿದ್ದಾರೆ ಕೂಡ. ಲೇಖಕರೇ ಹೇಳುವಂತೆ ಶಂಬಾಲ ಒಂದು ರಾಜಕೀಯ ಕಾದಂಬರಿ. ಇಂದಿನ ರಾಜಕೀಯದ ಸ್ಥಿತಿ-ಗತಿಗೆ ಹಿಡಿದ ಕನ್ನಡಿ. ನಾವು ಇರುವುದು ಕೇವಲ ಡೆಮಾಕ್ರಸಿಯ ಮುಖವಾಡ ಧರಿಸಿದ ಸರ್ವಾಧಿಕಾರದ ನೆರಳಲ್ಲಿ. ಡೆಮಾಕ್ರಸಿಯ ಅತ್ಯಂತ ಪ್ರಮುಖ ಲಕ್ಷಣ ಅಭಿವ್ಯಕ್ತಿ ಸ್ವಾತಂತ್ರ್ಯ. ಆದರೆ ಸ್ವಾತಂತ್ರ್ಯ ಬಂದು 75 ಸಂವತ್ಸರ ಕಳೆದು ಅಮೃತವರ್ಷದ ಆಚರಣೆಯ ಸಂದರ್ಭದಲ್ಲಿ ನಮ್ಮ ಅಭಿವ್ಯಕ್ತಿ ಸ್ವಾತಂತ್ಯದ ಗತಿ ಏನಾಗಿದೆ? ಎತ್ತ ಸಾಗಿದೆ? ಅದಕ್ಕೆ ಕಾರಣಗಳೇನು ಎಂಬುದನ್ನು ಶಂಬಾಲ ಅತ್ಯಂತ ಸೂಕ್ಷ್ಮವಾಗಿ ಚಿತ್ರಿಸುತ್ತದೆ.

ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಅಡಾಲ್ಫ್ ಹಿಟ್ಲರ್ (1889-1945) ಎಂಬ ಸರ್ವಾಧಿಕಾರಿ ಇಡೀ ಜಗತ್ತನ್ನು ನಡುಗಿಸಿಬಿಟ್ಟ. ಆದರೆ ಈ ಕಾದಂಬರಿಯಲ್ಲಿ ಚಿತ್ರಿಸಿರುವ ಹಿಟ್ಲರ್‌ಗೂ ಇತಿಹಾಸದಲ್ಲಿ ಬಂದು ಹೋದ ಆ ಹಿಟ್ಲರ್‌ಗೂ ಅರ್ಥಾತ್ ಸಂಬಂಧವಿಲ್ಲ. ಅಷ್ಟೇ ಅಲ್ಲ, ಶಂಬಾಲದ ಹಿಟ್ಲರ್‌ಗೆ ಎರಡನೇ ಮಹಾಯುದ್ಧಕ್ಕೆ ಕಾರಣನಾದ ವ್ಯಕ್ತಿಯೊಬ್ಬನಿಗೆ ತನ್ನದೆ ಹೆಸರಿತ್ತು ಎಂಬಷ್ಟೂ ಇತಿಹಾಸ ಜ್ಞಾನವಿಲ್ಲ. ಇದೊಂದು ರೀತಿಯಲ್ಲಿ ಒಳ್ಳೆಯದೇ ಆಯಿತು ಎಂಬುದು ಅವನ ಹಾರ್ವರ್ಡ್ ಮುಖ್ಯಮಂತ್ರಿಯ ಅಭಿಪ್ರಾಯ. ಯಾಕೆಂದರೆ ‘ಈಗಾಗ್ಲೆ ಒಬ್ಬ ಇರೋದು ಗೊತ್ತಿದ್ರೆ, ಅವರು ಮಾಡಿದ್ದು, ತಾನು ಮಾಡ್ತಿರೋದರ ಬಗ್ಗೆ ಅವನೂ ಹೋಲಿಕೆ ಮಾಡ್ಕೋತಿದ್ದ. ಆ ತರಾ ಮಾಡ್ಕೋತಾ ಹೋದ್ರೆ ಪ್ರತೀ ಬಾರಿಯೂ, ಪ್ರತಿಯೊಂದನ್ನು ತನಗಿಂತ ಮೊದಲೇ ಒಬ್ಬರು ಮಾಡ್ಬಿಟ್ಟಿದ್ದಾರೆ ಅನ್ನೊ ಆಲೋಚನೆ ಬರುತ್ತೆ. ಈ ತಮ್ಮನ್ಗೆ ಆ ರೀತಿಯ ಆಲೋಚ್ನೆ ಯಾವ್ದೂ ತಡೆಯಬಾರ್‍ದು. ತನ್ಗೆ ಸಮಾನ ಯಾರೂ ಇಲ್ಲ ಅನ್ನೋ ಆಲೋಚನೆ ಬರ್‍ಬೇಕು’ ಎನ್ನುತ್ತಾರೆ. ಈ ಕಥೆಯ ಹಿಟ್ಲರ್ ಭಾರತದ ಗ್ರಾಮವೊಂದರಲ್ಲಿ ಜನಿಸಿದವನು. ಹಳ್ಳಿಯಲ್ಲಿಯೇ ವಿದ್ಯಾಭ್ಯಾಸವನ್ನು ನಡೆಸುತ್ತಾನೆ. ಕುಸ್ತಿಯನ್ನು ಕಲಿಯುತ್ತಾನೆ. ದೇಹಬಲವೆಂಬುದು ಇಲ್ಲಿ ಹಲವಾರು ಅರ್ಥಗಳನ್ನು ಪಡೆದುಕೊಳ್ಳುತ್ತದೆ. ನಂತರ ಆತ ದೇಶವೊಂದಕ್ಕೆ ಮಂತ್ರಿಯಾಗುತ್ತಾನೆ.

ಶಂಬಾಲ ಕಾದಂಬರಿಯ ಹಿಟ್ಲರ್ ಇತಿಹಾಸದ ಹಿಟ್ಲರ್‌ನ ಹಾಗೆಯೂ ಮತ್ತು ಅವನಂತಲ್ಲದೆಯೂ ತೋರಿಬರುತ್ತಾನೆ. ಎರಡು ರೂಪವೋ ಹಲವು ರೂಪವೋ ಅಂತೂ ಸಂದರ್ಭಾನುಸಾರ ದಶಾವತಾರ! ಹಿಟ್ಲರ್‌ನಂತವರು ಯಾವ ದೇಶದಲ್ಲಾದರೂ ಯಾವ ಕಾಲದಲ್ಲಾದರೂ ಕಾಣಿಸಿಕೊಳ್ಳಬಹುದು. ಹಾಗಾಗಿ ನಮ್ಮ ಸಮಾಜ ಕಾಮುಕನನ್ನು ಕೀಚಕ ಎಂದಂತೆ ಸರ್ವಾಧಿಕಾರಿ ಲಕ್ಷಣವುಳ್ಳ ಪ್ರಜಾಪ್ರತಿನಿಧಿ ನಾಯಕನನ್ನು ಹಿಟ್ಲರ್ ಎಂದು ಕರೆಯುವುದು ಸ್ವಾಭಾವಿಕ. ಅದೇ ರೀತಿ ಈ ಕಾದಂಬರಿಯಲ್ಲೂ ಹಳ್ಳಿಯೊಂದರಲ್ಲಿ ‘ಹಿಟ್ಲರ್’ ಎಂಬ ಹೆಸರಿನ ಬಾಲಕ ಕಾಣಿಸಿಕೊಳ್ಳುತ್ತಾನೆ.

ಜರ್ಮನಿಯ ಹಿಟ್ಲರ್‌ಗೆ ಕಲಾವಿದನಾಗಬೇಕೆನ್ನುವ ಆಸೆ ಇತ್ತು. ಚಿಕ್ಕ ವಯಸ್ಸಿನಲ್ಲೇ ತಂದೆ-ತಾಯಿಗಳನ್ನು ಕಳೆದುಕೊಂಡಿದ್ದ ಆತ ಚಿತ್ರಗಳನ್ನು ಬರೆದು ಜೀವನ ಸಾಗಿಸಬೇಕಿತ್ತು. ಅದೆಲ್ಲವನ್ನೂ ತನ್ನ ‘ಮೈನ್ ಕೆಂಫ್’ (ನನ್ನ ಹೋರಾಟ) ಎಂಬ ಪುಸ್ತಕದಲ್ಲಿ ಬರೆದುಕೊಂಡಿದ್ದಾನೆ. ಅದು ನಾಝೀ ಪಂಥದ ಕೈಪಿಡಿ ಎಂಬಂತಾಯಿತು. ಆಮೇಲೆ ಹಿಟ್ಲರ್ ಜರ್ಮನ್ ಸೈನ್ಯ ಸೇರಿ ಯುದ್ಧದಲ್ಲಿ ಹೋರಾಡಿದ ಕೂಡ. ಅವನಿಗೆ ಜೋಸೆಫ್ ಗೊಬೆಲ್ಸ್ ಎಂಬೊಬ್ಬ ಆಪ್ತ ಒಡನಾಡಿಯಿದ್ದ. ಇವನ ದುಷ್ಕಾರ್ಯಗಳನ್ನೆಲ್ಲಾ ಅವನು ಸಮರ್ಥಿಸುತ್ತಿದ್ದ. ಸುಳ್ಳುಗಳನ್ನು ಸೃಷ್ಟಿಸಿ ಮತ್ತೆಮತ್ತೆ ಹೇಳುವ ಮೂಲಕ ಅವನ್ನು ನಿಜವೆಂದು ನಂಬುವಂತೆ ಮಾಡುತ್ತಿದ್ದ. ಅದು ‘ಗೊಬೆಲ್ಸ್ ಲೈಸ್’ ಎಂದೇ ಕುಖ್ಯಾತಿ ಪಡೆದಿದೆ.

ಪ್ರಸ್ತುತ ಕಾದಂಬರಿಯ ಹಿಟ್ಲರ್ ಬಾಲಕನಾಗಿದ್ದಾಗ ಶಾಲೆಗೆ ಒಂದು ವಾರ ಗೈರು ಹಾಜರಾಗಿದ್ದ. ಹೆಡ್ ಮಾಸ್ಟರ್ ಬಿದಿರಿನ ಬೆತ್ತದಿಂದ ಕೈಮೇಲೆ ಹೊಡೆದರು. ಆಮೇಲೆ ಕಾರಣ ಕೇಳಿದರೆ ‘ಅಮ್ಮ ಸತ್ತು ಹೋದರು’ ಎಂದುಬಿಟ್ಟ. ಹೆಡ್‌ಮಾಸ್ಟರ್ ಕೇಳಿ ದಿಗ್ಮೂಢರಾದರು. ಬಾಲಕ ಹಿಟ್ಲರ್‌ಗೆ ಶಾಲಾದಿನಗಳಿಂದಲೂ ಎ.ಪಿ.ಸಿಂಗ್ ಎಂಬ ಗೆಳೆಯನಿದ್ದ-ಅವನ ನೆರಳಿನಂತೆ. ಚಿತ್ರಕಲಾ ಕಾಲೇಜಿನ ಟೀಚರ್ ಮಗಳ ಜೊತೆಗಿನ ಪ್ರೀತಿಗಾಗಿ ಹಿಟ್ಲರ್ ಏನು ಬೇಕಾದರೂ ಮಾಡಬಲ್ಲ. ಒಮ್ಮೆ ಅವಳು ಎಳೆನೀರು ನೋಡಿ ಬೇಕೆಂದಾಗ ಮರಹತ್ತಲು ಬಾರದಿದ್ದರೂ ತೆಂಗಿನ ಮರಹತ್ತಿ ಎಳೆನೀರು ಕಿತ್ತುಕೊಟ್ಟ. ಆದರೆ ಒಮ್ಮೆ ಪೊಲೀಸನೊಬ್ಬ ಚಾಡಿಮಾತು ಕೇಳಿ ಇವನನ್ನು ಠಾಣೆಗೆ ಕರೆದು ‘ಏರೋಪ್ಲೇನ್’ ಹತ್ತಿಸಿ ಮುಂಗಾಲು ಮೂಳೆ ಮುರಿಯುವಂತೆ ಹೊಡೆದುಬಿಟ್ಟ. ಅದೇ ವೇಳೆ ಪ್ರೀತಿ ಮತ್ತೊಮ್ಮೆ ‘ಎಳೆನೀರು ಕಿತ್ತು ಕೊಡುತ್ತೀಯಾ’ ಎಂದಾಗ ಅಸಹಾಯಕನಾದ. ಆ ಸೇಡಿಗೆ ಎ.ಪಿ.ಸಿಂಗ್‌ನ ತಂತ್ರದಿಂದ ಆ ಪೊಲೀಸನನ್ನು ಒಂದು ಸಾಮಿಲ್ಲಿಗೆ ಎಳೆದು ತಂದು ಅವನ ಎಡಗೈಯನ್ನು ಗರಗಸದಿಂದ ತುಂಡರಿಸಿ, ಅವನ ಅಂಗವಿಕಲ ತಂಗಿಯನ್ನೇ ಮದುವೆಯಾಗಿಬಿಟ್ಟ. ಇಂಥ ವಿಕ್ಷಿಪ್ತ ಮನಸ್ಥಿತಿ ಹಿಟ್ಲರ್‌ನದು. ಇವನು ಹೀಗಾಗಲು ಅವನ ಪೋಷಕರು, ಶಾಲೆ, ಬೆಳೆದ ವಾತಾವರಣ, ದೊರೆತ ಸ್ನೇಹಿತರು ಎಲ್ಲಾ ಕಾರಣ ಇರಬಹುದು.

ಈ ಕಾದಂಬರಿಯಲ್ಲಿ ಇನ್ನಷ್ಟು ವಿಶೇಷಗಳಿವೆ. ಮೊದಲಿಗೆ ಶೀರ್ಷಿಕೆಯನ್ನು ಗಮನಿಸೋಣ. ಶಂಬಾಲ ಎಂಬ ಪದವು ವಿಷ್ಣು ಪುರಾಣದಲ್ಲಿ ಕಾಣಿಸುತ್ತದೆ. ಅದರಂತೆ ಶಂಬಾಲ ಎಂಬ ಸ್ಥಳವು ಹಿಮಾಲಯದಲ್ಲಿ ಇದೆ ಎಂತಲೂ ನಂಬುತ್ತಾರೆ. ಇದು ಅತ್ಯಂತ ಎತ್ತರದ ಸ್ಥಳವೆಂತಲೂ ಹಲವರು ಭಾವಿಸುತ್ತಾರೆ. ಆ ಸ್ಥಳದಲ್ಲಿರುವ ಅಲೌಕಿಕ ಶಕ್ತಿಯಿಂದ ಜಗತ್ತನ್ನು ನಾಶಗೊಳಿಸಬಹುದು ಅಥವಾ ಸೃಷ್ಟಿಸಲೂಬಹುದು ಎಂತಲೂ ಹೇಳುತ್ತಾರೆ. ಪ್ರಾಚೀನ ಟಿಬೆಟಿಯನ್ ಬೌದ್ಧ ಮತ್ತು ಹಿಂದೂ ಸಂಪ್ರದಾಯಗಳಲ್ಲಿ ವರ್ಣಿಸಲಾದ ಪೌರಾಣಿಕ ಸ್ವರ್ಗವಿದು. ಇದಕ್ಕೆ ಸಂಬಂಧಿಸಿದಂತೆ ಅನೇಕ ದಂತಕಥೆಗಳಿವೆ. ‘ಹಿಡನ್ ಸಿಟಿ’ ಎಂತಲೂ ಕರೆಯಲಾಗುವ ಈ ನಗರವನ್ನು ತಲುಪಲು ಸಾಮಾನ್ಯರಿಂದ ಸಾಧ್ಯವಿಲ್ಲವಂತೆ. ಶಂಬಾಲದ ಇಪ್ಪತ್ತೈದನೇ ರಾಜ ಕಲ್ಕಿ ಇಲ್ಲಿ ಅವತರಿಸುತ್ತಾನಂತೆ. ಭೂಲೋಕದಲ್ಲಿ ಅಧರ್ಮ ಹೆಚ್ಚಾದಾಗ ಆತ ಶಂಬಾಲದಿಂದ ಬಿಳಿಯ ಕುದುರೆಯನ್ನೇರಿ ಬಂದು ಕಲಿಯುಗವನ್ನು ಕೊನೆಗಾಣಿಸಿ ಸತ್ಯಯುಗವನ್ನು ಆರಂಭಿಸುತ್ತಾನಂತೆ. ಇದೇ ರೀತಿ ಶಂಬಾಲದ ಸುತ್ತಲೂ ಅನೇಕ ಕಾಲ್ಪನಿಕ ಕಥೆಗಳು ಹೆಣೆದುಕೊಂಡಿವೆ. (ಅನುವಾದಕರ ಮಾತು-XII)

ಇದನ್ನೂ ಓದಿ: ಪುಸ್ತಕ ಪರಿಚಯ; ಬ್ಯಾಪಾರಿ ಮನೋರಂಜನ್ ಅವರ ’ಚಾಂಡಾಳನೊಬ್ಬನ ಆತ್ಮ ವಿಮರ್ಶೆ’- ಇಂಟರೋಗೇಟಿಂಗ್ ಮೈ ಚಾಂಡಾಲ ಲೈಫ್

ಇತಿಹಾಸದ ಹಿಟ್ಲರ್ ಈ ಶಂಬಾಲದಲ್ಲಿನ ಪರಮಾಧಿಕಾರಕ್ಕೂ ಮಿಗಿಲಾದ ಅಧಿಕಾರವಿದೆ ಎಂದೇ ನಂಬಿದ್ದವನು. ಆತ ತಾನೊಬ್ಬ ಆರ್‍ಯನೆಂದು ಹೇಳಿಕೊಂಡನು. ನಾಝಿ ಜನಾಂಗ ಸರ್ವಶ್ರೇಷ್ಠವೆಂದೂ ಭಾವಿಸಿದ. ಜರ್ಮನಿಗೆ ಯಹೂದಿಗಳು ವಲಸಿಗರು. ಇವರಿಂದಲೇ ಇಲ್ಲಿ ಬಡತನ, ಹಣದುಬ್ಬರ ಕಷ್ಟಕೋಟಲೆ ಎಂದು ಸುಳ್ಳುಸುಳ್ಳೇ ಜರ್ಮನ್ನರನ್ನು ನಂಬಿಸಿದ. ಅವನ ಜನಾಂಗದ್ವೇಷ ಮಿಲಿಯಗಟ್ಟಲೆ ಯಹೂದಿಗಳ ಮಾರಣಹೋಮ ನಡೆಯಿಸಿತು. ಈ ಪರಿಮಿತ ಮನುಷ್ಯ ತನ್ನ ಜನ್ಮದಲ್ಲಿ ಶಂಬಾಲದ ಅಪರಿಮಿತ ಅಧಿಕಾರವನ್ನು ಹೊಂದಲು ಹವಣಿಸಿದ. ಆದರೆ ಎರಡನೇ ಮಹಾಯುದ್ಧದಲ್ಲಿ ಸೋತ. ಅವಮಾನ ತಾಳಿಕೊಳ್ಳಲಾರದೆ ತಾನೇ ಗುಂಡಿಕ್ಕಿಕೊಂಡು ಸತ್ತ.

ಪ್ರಸ್ತುತ ಕಾದಂಬರಿಯ ಜೂನಿಯರ್ ಮಂತ್ರಿ ಹಿಟ್ಲರ್ ಸಹಾ ಅಧಿಕಾರದ ಬಗ್ಗೆ ಅಪಾರ ವ್ಯಾಮೋಹಿ. ಸ್ವಾಮೀಜಿಗಳ ಜೊತೆ ಹಿಮವತ್ ಪರ್ವತದ ಮೇಲಿನ ಶಂಬಾಲ ಸ್ಥಳಕ್ಕೆ ಹೋಗಲು ಮುಂದಾಗುತ್ತಾನೆ. ಆ ಸ್ವಾಮೀಜಿಯನ್ನು ಹಾರ್ವರ್ಡ್ ಮುಖ್ಯಮಂತ್ರಿ ಔತಣಕೂಟಕ್ಕೆ ಆಹ್ವಾನಿಸಿರುತ್ತಾನೆ. ಆಗ ಆ ಸ್ವಾಮೀಜಿ ಯಾರು ‘ಕೊಲ್ಲುವುದಕ್ಕೂ ಕೊಲ್ಲಿಸಿಕೊಳ್ಳುವುದಕ್ಕೂ’ ಸಿದ್ಧನಾಗಿರುತ್ತಾನೋ ಅಂಥ ವ್ಯಕ್ತಿಯನ್ನು ನನ್ನ ಬಳಿ ಕಳುಹಿಸುವಂತೆ ಕೇಳಿಕೊಳ್ಳುತ್ತಾನೆ. ಮುಖ್ಯಮಂತ್ರಿ ಜೂನಿಯರ್ ಮಂತ್ರಿ ಹಿಟ್ಲರ್‌ನನ್ನು ಕಳುಹಿಸಿಕೊಡುತ್ತಾನೆ. ಶಂಬಾಲ ಎಂದರೆ ಅಪರಿಮಿತ ಅಧಿಕಾರವಿರುವ ಸಂಕೇತ. ಭವಿಷ್ಯತ್ತಿನಲ್ಲಿ ಅಧಿಕಾರದ ಬಯಕೆಯುಳ್ಳವರ ಅಂಗೈಯಲ್ಲಿ ದೇಶವು ಅಡಗುವುದೆಂಬುದನ್ನು ಇಲ್ಲಿ ಚಿತ್ರಿಸಲಾಗಿದೆ. ಇದು ಇವತ್ತಿನ ಪರಿಸ್ಥಿತಿಗೆ ಒಡ್ಡಿದ ಅದ್ಭುತ ಪ್ರತಿಮೆ.

ಈ ಕಾದಂಬರಿಯನ್ನು ಇನ್ನೂ ಹಲವಾರು ದೃಷ್ಟಿಕೋನಗಳಿಂದ ವಿಶ್ಲೇಷಿಸಬಹುದು. ಇಲ್ಲಿ ಮುಖ್ಯಪಾತ್ರ ಅಮರ್‌ನಾಥ್ ಎಂಬ ಲೇಖಕರದು. ಥಾಟ್ ಪೊಲೀಸರು ಅವರ ಮನೆಗೆ ದಾಳಿ ಇಡುವ ದೃಶ್ಯದಿಂದ ಕಾದಂಬರಿ ಆರಂಭವಾಗುತ್ತದೆ. ಇವರು ಅಮರ್‌ನಾಥ್ ಅವರನ್ನು ಹುಡುಕುತ್ತ ಆಗಾಗ ಅವರ ಮನೆಗೆ ಬರುತ್ತಾರೆ. ತಾನು ಮಾಡಿರುವ ಯಾವ ತಪ್ಪಿಗಾಗಿ ಇವರ ಬೇಹುಗಾರಿಕೆ ಎಂಬುದೇ ಅವರಿಗೆ ತಿಳಿಯದು. ಥಾಟ್ ಪೊಲೀಸರೆಂದರೆ ವ್ಯಕ್ತಿಯ ಬರವಣಿಗೆಯಲ್ಲಿರುವ ಪದಗಳೊಳಗೆ ನುಗ್ಗಬಲ್ಲವರು. ತನ್ಮೂಲಕ ಅವರ ಬರವಣಿಗೆಯನ್ನು ಜಾಲಾಡಿ ಈ ವ್ಯಕ್ತಿ ದೇಶಕ್ಕೆ ಅಪಾಯಕಾರಿ ಹೌದೋ ಅಲ್ಲವೋ ಎಂದು ನಿರ್ಣಯಿಸಬಲ್ಲವರು. ಆದರೆ ಛೂಬಿಟ್ಟ ನಾಯಿಗೇನು ಗೊತ್ತು ಒಡೆಯನ ಕರಾಮತ್ತು? ಎಂದು ಅರ್ಥೈಸಬಹುದು. ಆಳುವ ಎಲ್ಲ ಫ್ಯಾಸಿಸ್ಟ್ ಪ್ರಭುಗಳ ಲಕ್ಷಣವಿದು.

ಪ್ರೊ. ಕಾರ್ಲೋಸ್

ಶಂಬಾಲ ಕಾದಂಬರಿ ಎಷ್ಟು ಪರಿಣಾಮಕಾರಿ ಎಂದರೆ ಇದನ್ನು ಓದುತ್ತಿದ್ದರೆ ನಮ್ಮ ಬೆನ್ನಿಗೂ ಬೇಹುಗಾರಿಕೆ ನಡೆಯುತ್ತಿದೆಯಾ ಎಂಬ ಗುಮಾನಿ ಹುಟ್ಟುವಂತಿದೆ. ಇತ್ತೀಚಿಗೆ ಸರ್ವಜನಾಂಗದ ಶಾಂತಿಯ ತೋಟದಲ್ಲಿ ಭಯದ ವಾತಾವರಣ ಹಬ್ಬುತ್ತಿದೆ. ಅನ್ಯಾಯಗಳ ಬಗ್ಗೆ ಧ್ವನಿ ಎತ್ತಿದ ಬುದ್ಧಿಜೀವಿ, ಪ್ರಗತಿಪರರು ಜೈಲುಪಾಲಾಗುತ್ತಿದ್ದಾರೆ. ಬೇಹುಗಾರಿಕೆಯ ಥಾಟ್ ಪೊಲೀಸರ ತಿರುಗಾಟ ಹೆಚ್ಚಾಗುತ್ತಿದೆ. ಕೋಮು ಸಾಮರಸ್ಯ ಹದಗೆಡುತ್ತಿದೆ. ಇಂಥ ಅನ್ಯಾಯಗಳನ್ನು ಕುರಿತು ಮಾತನಾಡಿದರೆ, ಬರೆದರೆ ಅವನು ರಾಷ್ಟ್ರದ್ರೋಹಿ, ಧರ್ಮದ್ರೋಹಿ ಎಂದು ಹಣೆಪಟ್ಟಿ ಹಚ್ಚುವುದು, ’ನಗರನಕ್ಸಲ್’ ಎಂದು ಅಭಿಪ್ರಾಯ ರೂಪಿಸುವುದು, ಮಾಧ್ಯಮಗಳು ಅದನ್ನೇ ಮತ್ತೆಮತ್ತೆ ಬಿತ್ತರಿಸುವುದು, ಸುಳ್ಳನ್ನು ನಿಜಗೊಳಿಸುವುದು ನಡೆಯುತ್ತದೆ. ಒಟ್ಟಾರೆ ಪ್ರಗತಿಪರ ವ್ಯಕ್ತಿಯ ತೇಜೋವಧೆ, ಚಾರಿತ್ರ್ಯಹರಣ, ಉಸಿರು ಕಟ್ಟಿದ ವಾತಾವರಣ!

ಇನ್ನೊಂದು ನಿದರ್ಶನ ಪೊಲೀಸ್ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿರುವ ಲಕ್ಷ್ಮಣ್ ಎಂಬಾತನ ಕರುಣಾಜನಕ ಸ್ಥಿತಿ. ಈತ ದಲಿತನೆಂಬ ಕಾರಣಕ್ಕೆ ಇಲಾಖೆಯಲ್ಲಿ ಸದಾ ಕೀಳರಿಮೆಯನ್ನು ಅನುಭವಿಸುತ್ತಿದ್ದಾನೆ. ಜಾತಿಭಾರತದಲ್ಲಿ ದಲಿತರಿಗೆ ಇನ್ನೂ ಸಾಂವಿಧಾನಿಕ ಸ್ವಾತಂತ್ರ್ಯ ದೂರವೇ ಉಳಿದಿದೆ ಎಂಬುದರ ವಾಸ್ತವ ಚಿತ್ರ ಇದು. ಈ ಸಂದರ್ಭದಲ್ಲಿ ಇವತ್ತಿನ ಭವ್ಯ ಹಿಂದೂ ಭೂತಕಾಲದ ಆವಾಹನೆ ಮತ್ತು ಅಂಬೇಡ್ಕರ್ ಅದನ್ನು ಹೇಗೆ ನೋಡಿರಬಹುದು ಎಂಬುದರ ಕುರಿತು ಚಿಂತಕ ಪ್ರೊ. ಸಯೀದ್ ಬರೆಯುತ್ತಾರೆ: ’ದಬ್ಬಾಳಿಕೆ, ದಾಸ್ಯ ಮತ್ತು ತಮ್ಮವರೇ ಆದ ದೊಡ್ಡ ವರ್ಗವನ್ನು ಮೇಲ್ಜಾತಿ ಹಿಂದೂಗಳು ಅಮಾನುಷವಾಗಿ ಕೀಳಾಗಿ ನಡೆಸಿಕೊಳ್ಳುವುದು ಅದರ ತಳಹದಿಯಾಗಿರುವಾಗ ಕಲೆ ಮತ್ತು ಸಂಸ್ಕೃತಿಯ ಶ್ರೇಷ್ಠ ನಾಗರಿಕ ಪರಂಪರೆಯಿಂದ ಏನು ಪ್ರಯೋಜನ?’; ಶಂಬಾಲ ಕಾದಂಬರಿ ಶಯೀದ್ ಅವರ ಬರವಣಿಗೆಗೆ ಬಿಡಿಸಿದ ಸಾಹಿತ್ಯ ರೂಪವೊ ಎಂಬಂತಿದೆಯಲ್ಲವೇ? ಅಂತೂ ಡೆಮಾಕ್ರಸಿ ದುರ್ಬಲವಾಗುತ್ತಿದೆ. ಆಡಳಿತದ ನ್ಯೂನತೆಗಳನ್ನು ಪ್ರಶ್ನಿಸಿದರೆ ಜೈಲಿಗೆ ಕಳುಹಿಸಲಾಗುತ್ತಿದೆ. ಒಟ್ಟಾರೆ ಬಹು ಜನಾದೇಶದ ಬೆನ್ನೇರಿ ಅಧಿಕಾರ ಹಿಡಿದ ಪಕ್ಷ/ವ್ಯಕ್ತಿ ಹೇಗೆ ಸರ್ವಾಧಿಕಾರಿಯಾಗಿ ಒಡಮೂಡುತ್ತಾನೆ ಎಂಬುದನ್ನು ಈ ಕೃತಿ ಧ್ವನಿಸುತ್ತಾ ಹೋಗುತ್ತದೆ.

ಪ್ರಸ್ತುತ ಕಾದಂಬರಿಯ ಥಾಟ್ ಪೊಲೀಸರು ಅಮರ್‌ನಾಥ್‌ರ ಆಲೋಚನೆಗಳನ್ನು ನಡೆನುಡಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ಅವರ ಮೂತ್ರವನ್ನು ಮೂಸಿ, ಪರೀಕ್ಷಿಸಿ ನಿನ್ನೆ ಏನು ತಿಂದಿದ್ದಾರೆ, ಎಷ್ಟು ನೀರು ಕುಡಿದಿದ್ದಾರೆ, ದೇಹದ ಉಷ್ಣಾಂಶ ಎಷ್ಟು ಎನ್ನುವುದನ್ನೆಲ್ಲಾ ಕಂಡುಹಿಡಿದು ಸುದ್ದಿ ಸಂಗ್ರಹಣಾ ನಿಲಯಕ್ಕೆ ಕಳಿಸುವುದೂ ಸಹ ಅವರ ಕೆಲಸ. ಅಮರ್‌ನಾಥ್ ಮೂತ್ರ ಮಾಡಿ ಬಂದಾಗ ಒಬ್ಬ ಪೊಲೀಸ್ ನೀರು ಹಾಕದಂತೆ ಹೇಳಿ ಅದನ್ನು ಮೂಸಿ, ಮೂತ್ರಾಲಯವನ್ನೆಲ್ಲಾ ಪರೀಕ್ಷಿಸಿ ಡೈರಿಯಲ್ಲಿ ಏನನ್ನೋ ಗುರುತು ಮಾಡಿಕೊಳ್ಳುವುದು ಮೇಲ್ನೋಟಕ್ಕೆ ಹಾಸ್ಯದಂತೆ ತೋರಿದರೂ ವ್ಯಕ್ತಿ ಸ್ವಾತಂತ್ರ್ಯದ ಹರಣವೆಂಬುದು ಯಾವ ಮಟ್ಟಕ್ಕೆ ಬೆಳೆದಿದೆ ಎಂದು ಇಲ್ಲಿ ಬಿಂಬಿತವಾಗಿದೆ. ನಾಗರಿಕರ ಮೇಲೆ ಬೇಹುಗಾರಿಕೆ ನಡೆಸುವ ಮೂಲಕ ಆತನ ವ್ಯಕ್ತಿ ಸ್ವಾತಂತ್ರ್ಯ, ವಿವೇಚನಾ ಶಕ್ತಿಯನ್ನು ಪ್ರಭುತ್ವ ಕಸಿದುಕೊಳ್ಳುತ್ತದೆ. ಇಂದಿನ ಸಂವಹನದ ಮುಖ್ಯ ಸಾಧನಗಳಾಗಿರುವ ಫೋನ್, ಫೇಸ್‌ಬುಕ್ ಮತ್ತು ಟ್ವಟರ್‌ಗಳನ್ನು ಸರ್ಕಾರ ನಿಯಂತ್ರಿಸುತ್ತಿದೆ ಎಂಬ ವಿಚಾರವೇ ಅಮರ್‌ನಾಥ್‌ಗೆ ಇಷ್ಟವಾಗುವುದಿಲ್ಲ.

ಅಮರ್‌ಮಾಥ್ ದಂಪತಿಗಳಿಗೆ ಅಮರಿ ಎಂಬ ಶಾಲೆಗೆ ಹೋಗುವ ಮಗಳಿದ್ದಾಳೆ. ಪ್ರತಿದಿನ ಇವರು ಅವಳನ್ನು ನೋಡುತ್ತಲೇ ಇದ್ದಾರೆ. ಆದರೆ ಅವಳ ಪೋಷಕರ ಮೊಬೈಲ್‌ಗೆ ’ನಿಮ್ಮ ಮಗಳು ಕಾಣೆಯಾಗಿದ್ದಾಳೆ’ ಎಂಬ ಮೆಸೇಜ್ ಬರುತ್ತಿರುತ್ತದೆ. ಇವರುಗಳಿಗೆ ಸದಾ ಭಯ ಆತಂಕ ಕಾಡುತ್ತದೆ. ಆದರೆ ಅವರ ಮಗಳಿಗೆ ಮಾತ್ರ ಇವರ ಚಿಂತೆ ಏನೆಂದು ಅರ್ಥವಾಗುವುದಿಲ್ಲ. ಹೀಗೆ ಕಾಣದ ಕೈ ಒಂದು ಭಯವನ್ನು ಬಿತ್ತುತ್ತದೆ.

ಇದರೊಂದಿಗೆ ಜಾತಿಮತ, ಧರ್ಮ ದ್ವೇಷದ ರಾಜಕಾರಣ, ಹುಸಿ ರಾಷ್ಟ್ರೀಯತೆ ಇತ್ಯಾದಿ ಬಿತ್ತುವ ರಾಜಕಾರಣಿಗಳು, ಮಠಾಧೀಶರು ಮುಂತಾದವರಿಂದ ಕಾದಂಬರಿ ಇಡಿಕಿರಿದಿದೆ. ಪುರಾಣ, ಇತಿಹಾಸ ಹಾಗೂ ವಾಸ್ತವಗಳ ತ್ರಿವೇಣಿ ಸಂಗಮವಾಗಿದೆ ಇಲ್ಲಿ. ತುರ್ತುಪರಿಸ್ಥಿತಿ ಉಲ್ಲೇಖ, ಫೋನ್, ವಾಟ್ಸಪ್ ಮುಂತಾದ ವಿಷಯಗಳನ್ನೊಳಗೊಂಡಂತಹ ಈ ಕಾದಂಬರಿ ವಾಸ್ತವದ ನೆಲೆಯಲ್ಲಿಯೆ ಸಾಗುತ್ತದೆ. ಅದರೆ ಈ ರೀತಿಯ ಉಸಿರು ಕಟ್ಟುವ ವಾತಾವರಣದಲ್ಲೂ ಚಿಗುರು ಮೂಡುತ್ತದೆ. ’ಅಮರಿ’ಯು ಹಕ್ಕಿಯ ರೂಪವನ್ನು ತಳೆದು ಕೊಕ್ಕಿನಲ್ಲೊಂದು ಹೂವನ್ನು ಕಚ್ಚಿ ಹಾರುತ್ತಾಳೆ-ಎಂಬ ಈ ಕಲ್ಪನೆ ಆಶಾದಾಯಕ ಬೆಳವಣಿಗೆ.

ಕೊರೊನಾದ ದುರಿತ ಕಾಲದಲ್ಲಿ ‘ತಮಿಳವನ್’ ಪ್ರೊ. ಕಾರ್ಲೋಸರು ತಮಿಳಿನಲ್ಲಿ ಬರೆದ ಇಂಥ ಅನನ್ಯ ರಾಜಕೀಯ ಕಾದಂಬರಿಯನ್ನು ಡಾ. ಜಯಲಲಿತ ಅವರು ಕನ್ನಡಕ್ಕೆ ತಂದಿದ್ದಾರೆ. ಇಂಥ ಕಾದಂಬರಿಯ ತಂತ್ರವನ್ನು ಕನ್ನಡದಿಂದ ಕಲಿತದ್ದು ಎಂದು ಕಾರ್ಲೋಸ್ ಹೇಳಿದ್ದಾರೆ. ಆದ್ದರಿಂದ ಅವರು ಕನ್ನಡದಲ್ಲಿಯೇ ಬರೆದರೆಂಬಂತೆಯೂ ತಮಿಳು ಭಾಷಾ ಸಾಹಿತ್ಯಕ್ಕೆ ಹೊಸತೆಂಬಂತೆಯೂ ಕಾಣಿಸುತ್ತದೆ ಶಂಬಾಲ. ಆದ್ದರಿಂದ ಪ್ರೊ.ಕಾರ್ಲೋಸ್. ಡಾ. ಜಯಲಲಿತ ಹಾಗೂ ಪ್ರಕಟಿಸಿದ ನಾಗೇಶ್- ಈ ಎಲ್ಲರಿಗೂ ಕನ್ನಡ ಓದುಗರ ಪರವಾದ ಹೃತ್ಪೂರ್ವಕ ಕೃತಜ್ಞತೆಗಳು ಸಲ್ಲುತ್ತವೆ.

ಪ್ರೊ. ಶಿವರಾಮಯ್ಯ

ಪ್ರೊ. ಶಿವರಾಮಯ್ಯ
ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಶಿವರಾಮಯ್ಯನವರು ತಮ್ಮ ಅಧ್ಯಾಪನ ಮತ್ತು ಸಂಶೋಧನಾ ಕಾರ್ಯಗಳ ಜೊತೆಗೆ ಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡವರು. ಸ್ವಪ್ನ ಸಂಚಯ (ಕವನ ಸಂಕಲನ), ಉರಿಯ ಉಯ್ಯಾಲೆ (ವಿಮರ್ಶಾ ಬರಹಗಳ ಸಂಕಲನ), ದನಿ ಇಲ್ಲದವರ ದನಿ, ಪಂಪಭಾರತ ಭಾಗ-1 &2 (ಸಂಪಾದನೆ ಮತ್ತು ಗದ್ಯಾನುವಾದ) ಅವರ ಪುಸ್ತಕಗಳಲ್ಲಿ ಕೆಲವು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್‌ನ್ನು ಚುನಾವಣೆಗೆ ಮುನ್ನ ಬಂಧಿಸಿದ್ದು ಏಕೆ? EDಗೆ ಉತ್ತರಿಸುವಂತೆ ಸೂಚಿಸಿದ ಸುಪ್ರೀಂ ಕೋರ್ಟ್‌

0
ಸಾರ್ವತ್ರಿಕ ಚುನಾವಣೆಗೆ ಮುನ್ನ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಂಧನಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸುವಂತೆ ಸುಪ್ರೀಂಕೋರ್ಟ್ ಜಾರಿ ನಿರ್ದೇಶನಾಲಯಕ್ಕೆ ಸೂಚಿಸಿದ್ದು, ಅರವಿಂದ್ ಕೇಜ್ರಿವಾಲ್ ಅವರನ್ನು ಚುನಾವಣೆಗೂ ಮುನ್ನ ಬಂಧಿಸಿದ್ದು ಏಕೆ? ಎಂದು...